Link to home pageLanguagesLink to all Bible versions on this site
35
ಎದೋಮಿಗೆ ವಿರೋಧವಾದ ಪ್ರವಾದನೆ
1 ಯೆಹೋವ ದೇವರ ವಾಕ್ಯವು ನನಗೆ ಬಂದಿತು, 2 “ಮನುಷ್ಯಪುತ್ರನೇ, ನೀನು ಸೇಯೀರ್ ಪರ್ವತಕ್ಕೆ ಅಭಿಮುಖನಾಗಿ ಅದಕ್ಕೆ ವಿರೋಧವಾಗಿ ಪ್ರವಾದಿಸಿ, 3 ಅದಕ್ಕೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ಸೇಯೀರ್ ಪರ್ವತವೇ, ನಾನು ನಿನಗೆ ವಿರುದ್ಧವಾಗಿದ್ದೇನೆ. ನಾನು ನನ್ನ ಕೈಯನ್ನು ನಿನಗೆ ವಿರುದ್ಧವಾಗಿ ಚಾಚುತ್ತೇನೆ. ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. 4 ನಾನು ನಿನ್ನ ಪಟ್ಟಣಗಳನ್ನು ನಾಶಮಾಡಲು ನೀನು ಹಾಳಾಗುವೆ; ಆಗ ನಾನೇ ಯೆಹೋವ ದೇವರೆಂದು ನೀನು ತಿಳಿದುಕೊಳ್ಳುವೆ.

5 “ ‘ನೀನು ಇಸ್ರಾಯೇಲರ ಮೇಲೆ ದೀರ್ಘ ದ್ವೇಷವಿಟ್ಟು ಅವರ ಅಪರಾಧದ ಕಾಲದಲ್ಲಿ ಅವರನ್ನು ಖಡ್ಗದ ಬಾಯಿಗೆ ಗುರಿಮಾಡಿದ ಕಾರಣ ಅವರ ಶಿಕ್ಷೆಯು ತಪ್ಪದು. 6 ಆದುದರಿಂದ ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ: ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು. ರಕ್ತಪಾತವು ನಿನ್ನನ್ನು ಬೆನ್ನಟ್ಟುವುದು. ನೀನು ರಕ್ತಪಾತಕ್ಕೆ ಹೇಸದೆ ಹೋದಕಾರಣ ರಕ್ತ ಪ್ರವಾಹವೇ ನಿನ್ನ ಬೆನ್ನು ಹತ್ತುವುದು. 7 ಹೀಗೆ ನಾನು ಸೇಯೀರ್ ಪರ್ವತವನ್ನು ಸಂಪೂರ್ಣ ಹಾಳುಮಾಡುವೆನು. ಅದರೊಳಗೆ ಹಾದುಹೋಗುವವನನ್ನೂ ಹಿಂತಿರುಗುವವನನ್ನೂ ಕಡಿದುಹಾಕುವೆನು. 8 ಅದರ ಪರ್ವತಗಳನ್ನು ನಿನ್ನವರ ಹೆಣಗಳಿಂದ ತುಂಬಿಸುವರು. ನಿನ್ನ ಖಡ್ಗದಿಂದ ಹತರಾದವರು ನಿನ್ನ ಹಳ್ಳಕೊಳ್ಳಗಳಲ್ಲಿಯೂ ಪರ್ವತಗಳ ಮೇಲೆಯೂ ಬೀಳುವರು. 9 ನಾನು ನಿನ್ನನ್ನು ನಿತ್ಯನಾಶನಕ್ಕೆ ಗುರಿಮಾಡುವೆನು. ನಿನ್ನ ನಗರಗಳು ನಿರ್ಜನವಾಗುವುವು, ಆಗ ನಾನೇ ಯೆಹೋವ ದೇವರೆಂದು ನೀನು ತಿಳಿದುಕೊಳ್ಳುವೆ.

10 “ ‘ಯೆಹೋವ ದೇವರು ಅವುಗಳಲ್ಲಿದ್ದರೂ ಈ ಎರಡು ಜನಾಂಗಗಳೂ ಈ ಎರಡು ರಾಜ್ಯಗಳೂ ನನ್ನ ವಶವಾಗುವುವು. ಎಂದೂ ನೀನು ಹೇಳಿದ್ದರಿಂದ ನಾವು ಅವುಗಳನ್ನು ವಶಮಾಡಿಕೊಳ್ಳುತ್ತೇವೆ. 11 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ: ನನ್ನ ಜೀವದಾಣೆ, ನಾನು ನಿನ್ನ ಕೋಪದ ಪ್ರಕಾರವೂ ನೀನು ದ್ವೇಷದಿಂದ ಅವರಿಗೆ ವಿರುದ್ಧವಾಗಿ ನಡೆಸಿದ ಹೊಟ್ಟೆಕಿಚ್ಚಿನ ಪ್ರಕಾರವೂ ನಿನಗೆ ನ್ಯಾಯತೀರಿಸಿದಾಗ ನಾನು ಅವರ ಮಧ್ಯದಲ್ಲಿ ನನ್ನನ್ನು ತಿಳಿಯಪಡಿಸುತ್ತೇನೆ. 12 ಆಗ ನಾನೇ ಯೆಹೋವನೆಂದು ನೀನು ತಿಳಿಯುವೆ ಮತ್ತು ಇಸ್ರಾಯೇಲಿನ ಪರ್ವತಗಳ ವಿಷಯವಾಗಿ, “ಅವು ಹಾಳಾಗಿವೆ ನಮಗೆ ನುಂಗುವುದಕ್ಕೆ ಕೊಡಲಾಗಿವೆ,” ಎಂದು ಹೇಳಿ ಮಾತನಾಡಿದ ನಿನ್ನ ಎಲ್ಲಾ ದೂಷಣೆಗಳನ್ನು ಯೆಹೋವ ದೇವರೆಂಬ ನಾನೇ ಕೇಳಿರುವೆನೆಂದು ತಿಳಿಯುವೆ. 13 ಹೀಗೆ ನಿಮ್ಮ ಬಾಯಿಂದ ನೀವು ನನಗೆ ವಿರೋಧವಾಗಿ ನಿಮ್ಮ ಮಾತುಗಳಿಂದ ಹೆಚ್ಚಿಸಿದ್ದನ್ನೂ ನಾನು ಕೇಳಿದ್ದೇನೆ. 14 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಯಾವಾಗ ಸಂಪೂರ್ಣ ಭೂಮಿಯು ಸಂತೋಷಪಡುತ್ತದೋ ಆಗ ನಾನು ನಿನ್ನನ್ನು ಹಾಳುಮಾಡುವೆನು. 15 ಹೇಗೆ ನೀನು ಇಸ್ರಾಯೇಲರ ಸ್ವಾಸ್ತ್ಯದ ನಾಶನಕ್ಕೆ ಹೇಗೆ ಸಂತೋಷಪಟ್ಟೆಯೋ ಹಾಗೆಯೇ ನಿನ್ನ ನಾಶನಕ್ಕೆ ಸಂತೋಷಪಡುವ ಹಾಗೆ ಮಾಡುವೆನು. ಸೇಯೀರ್ ಪರ್ವತವೇ ಮತ್ತು ಸಮಸ್ತ ಎದೋಮೇ ಸಂಪೂರ್ಣವಾಗಿ ಹಾಳಾಗುವೆ. ಆಗ ನಾನೇ ಯೆಹೋವ ದೇವರೆಂದು ನಿಮಗೆ ತಿಳಿಯುವುದು.’ ”

<- ಯೆಹೆಜ್ಕೇಲನು 34ಯೆಹೆಜ್ಕೇಲನು 36 ->