Link to home pageLanguagesLink to all Bible versions on this site
34
ಯೆಹೋವ ದೇವರು ಇಸ್ರಾಯೇಲಿನ ಕುರುಬ
1 ಯೆಹೋವ ದೇವರ ವಾಕ್ಯವು ನನಗೆ ಬಂದಿತು: 2 “ಮನುಷ್ಯಪುತ್ರನೇ, ಇಸ್ರಾಯೇಲಿನ ಕುರುಬರಿಗೆ ವಿರುದ್ಧವಾಗಿ ಪ್ರವಾದಿಸಿ ಅವರಿಗೆ ಹೇಳು: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ತಮ್ಮನ್ನು ತಾವೇ ಮೇಯಿಸಿಕೊಳ್ಳುವ ಇಸ್ರಾಯೇಲಿನ ಕುರುಬರಿಗೆ ಕಷ್ಟ! ಕುರುಬರು ಮಂದೆಗಳನ್ನು ಮೇಯಿಸಬಾರದೋ? 3 ನೀವು ಮೊಸರನ್ನು ತಿನ್ನುತ್ತೀರಿ, ಉಣ್ಣೆಯ ಬಟ್ಟೆಯನ್ನು ಹಾಕುತ್ತೀರಿ, ನೀವು ಅವುಗಳಲ್ಲಿ ಕೊಬ್ಬಿದ್ದನ್ನು ಕೊಲ್ಲುತ್ತೀರಿ, ಆದರೆ ಮಂದೆಯನ್ನು ನೀವು ಮೇಯಿಸುವುದಿಲ್ಲ. 4 ನೀವು ದುರ್ಬಲರನ್ನು ಬಲಪಡಿಸಲಿಲ್ಲ ಅಥವಾ ರೋಗಿಗಳನ್ನು ಗುಣಪಡಿಸಲಿಲ್ಲ ಅಥವಾ ಮುರಿದದ್ದನ್ನು ಕಟ್ಟುವುದಿಲ್ಲ. ಕಳೆದುಹೋದದ್ದನ್ನು ಹುಡುಕುವುದಿಲ್ಲ, ಓಡಿಸಿದ್ದನ್ನು ನೀವು ಹಿಂದಕ್ಕೆ ತರುವುದಿಲ್ಲ. ಆದರೆ ಬಲಾತ್ಕಾರದಿಂದ ಮತ್ತು ಕ್ರೂರತನದಿಂದ ಅವುಗಳ ಮೇಲೆ ದೊರೆತನ ಮಾಡುತ್ತೀರಿ. 5 ಅವು ಚದರಿಹೋದವು. ಏಕೆಂದರೆ ಅಲ್ಲಿ ಕುರುಬರಿಲ್ಲ; ಅವರು ಚದರಿಹೋದಾಗ ಎಲ್ಲಾ ಕಾಡುಮೃಗಗಳಿಗೆ ಆಹಾರವಾದವು. 6 ನನ್ನ ಕುರಿಗಳು ಎಲ್ಲಾ ಪರ್ವತಗಳ ಮೇಲೆಯೂ ಪ್ರತಿಯೊಂದು ಎತ್ತರವಾದ ಬೆಟ್ಟಗಳ ಮೇಲೆಯೂ ಅಲೆದಾಡುತ್ತಿವೆ. ಹೌದು, ನನ್ನ ಮಂದೆಯು ಎಲ್ಲಾ ಭೂಮಿಯ ಮೇಲೆಲ್ಲಾ ಚದರಿಹೋಗಿದೆ. ಯಾವನೂ ಅವುಗಳಿಗಾಗಿ ವಿಚಾರಿಸಲಿಲ್ಲ ಅಥವಾ ಹುಡುಕಲಿಲ್ಲ.

7 “ ‘ಆದ್ದರಿಂದ ಕುರುಬರೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ. 8 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ, ನಿಶ್ಚಯವಾಗಿ ನನ್ನ ಮಂದೆಯು ಕೊಳ್ಳೆಯಾದುದರಿಂದಲೂ ನನ್ನ ಮಂದೆಯು ಕುರುಬನಿಲ್ಲದೆ ಕಾಡುಮೃಗಗಳಿಗೆಲ್ಲಾ ಆಹಾರವಾದದ್ದರಿಂದಲೂ ನನ್ನ ಕುರುಬರು ನನ್ನ ಮಂದೆಯನ್ನು ಹುಡುಕದೆ ಇದ್ದುದರಿಂದಲೂ ಕುರುಬರು ತಮ್ಮನ್ನು ಮೇಯಿಸಿಕೊಂಡರೇ ಹೊರತು ತಮ್ಮ ಕುರಿಗಳನ್ನು ಮೇಯಿಸದೆ ಇದ್ದುದರಿಂದಲೂ 9 ಕುರುಬರೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ. 10 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಕುರುಬರಿಗೆ ವಿರುದ್ಧವಾಗಿದ್ದೇನೆ. ನನ್ನ ಮಂದೆಯನ್ನು ಅವರ ಕೈಯಿಂದ ವಿಚಾರಿಸುವೆನು. ಅವರು ಮಂದೆ ಮೇಯಿಸುವುದನ್ನು ನಿಲ್ಲಿಸಿಬಿಡುತ್ತೇನೆ, ಇನ್ನು ಮೇಲೆ ಕುರುಬರು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳರು. ಏಕೆಂದರೆ ನಾನು ನನ್ನ ಮಂದೆಯನ್ನು ಅವರಿಗೆ ಆಹಾರವಾಗದ ಹಾಗೆ ಅವರ ಬಾಯಿಂದ ತಪ್ಪಿಸುತ್ತೇನೆ.

11 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನೇ ನನ್ನ ಕುರಿಗಳನ್ನು ಹುಡುಕಿ ಅವುಗಳನ್ನು ಮೇಯಿಸುತ್ತೇನೆ. 12 ಕುರುಬನು ಚದರಿದ್ದ ತನ್ನ ಕುರಿಗಳ ಮಧ್ಯದಲ್ಲಿ ಇರುವ ದಿನದಲ್ಲಿ ತನ್ನ ಮಂದೆಯನ್ನು ಹುಡುಕುವ ಪ್ರಕಾರ ನಾನು ನನ್ನ ಕುರಿಗಳನ್ನು ಹುಡುಕಿ, ಕಾರ್ಮುಗಿಲಿನ ಕಾರ್ಗತ್ತಲಿನ ದಿನದಲ್ಲಿ ಚೆಲ್ಲಾಪಿಲ್ಲಿಯಾದ ಅವುಗಳನ್ನು ಎಲ್ಲಾ ಸ್ಥಳಗಳಿಂದ ಬಿಡಿಸುವೆನು. 13 ಜನಗಳೊಳಗಿಂದ ಅವುಗಳನ್ನು ಹೊರಗೆ ತೆಗೆದು, ದೇಶಗಳಿಂದ ಅವುಗಳನ್ನು ಕೂಡಿಸಿ, ಅವುಗಳನ್ನು ಸ್ವಂತ ದೇಶಕ್ಕೆ ತರುವೆನು. ಅವುಗಳನ್ನು ಇಸ್ರಾಯೇಲಿನ ಪರ್ವತಗಳ ಮೇಲೆ ಹಳ್ಳಗಳಲ್ಲಿ ನಿವಾಸಿಗಳುಳ್ಳ ಎಲ್ಲಾ ದೇಶಗಳಲ್ಲಿಯೂ ಮೇಯಿಸುವೆನು. 14 ನಾನು ಒಳ್ಳೆಯ ಮೇವಿನಲ್ಲಿ ಅವುಗಳನ್ನು ಮೇಯಿಸುವೆನು. ಇಸ್ರಾಯೇಲಿನ ಎತ್ತರವಾದ ಪರ್ವತಗಳಲ್ಲಿ ಮಂದೆಯು ಇರುವುದು. ಅವುಗಳು ಆ ಒಳ್ಳೆಯ ಮಂದೆಯಲ್ಲಿ ಮಲಗಿ ಇಸ್ರಾಯೇಲಿನ ಪರ್ವತಗಳ ಮೇಲೆ ಪುಷ್ಟಿಯುಳ್ಳ ಮೇವನ್ನು ಮೇಯುವುವು. 15 ನಾನೇ ನನ್ನ ಮಂದೆಯನ್ನು ಮೇಯಿಸಿ, ನಾನೇ ಅವುಗಳನ್ನು ಮಲಗಿಸುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. 16 ಕಳೆದುಹೋದದ್ದನ್ನು ನಾನೇ ಹುಡುಕುವೆನು. ದಾರಿ ತಪ್ಪಿದ್ದನ್ನು ನಾನೇ ಮತ್ತೆ ತರುವೆನು, ಮುರಿದ ಅಂಗವನ್ನು ನಾನೇ ಕಟ್ಟುವೆನು. ದುರ್ಬಲವಾದುದನ್ನು ಬಲಗೊಳಿಸುವೆನು, ಆದರೆ ಕೊಬ್ಬಿದ್ದನ್ನೂ ಬಲಿಷ್ಠವಾದದ್ದನ್ನೂ ನಾನೇ ಸಂಹರಿಸುವೆನು. ನಾನು ನ್ಯಾಯದಿಂದ ಮಂದೆಯನ್ನು ಮೇಯಿಸುವೆನು.

17 “ ‘ನಿಮಗೆ ನನ್ನ ಮಂದೆಯೇ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ಕುರಿಗಳ ನಡುವೆ ಮತ್ತು ಟಗರುಗಳ ಹೋತಗಳ ನಡುವೆ ನಾನು ನ್ಯಾಯತೀರಿಸುವೆನು. 18 ಒಳ್ಳೆಯ ಮೇವನ್ನು ಚೆನ್ನಾಗಿ ಮೇದು ಮಿಕ್ಕ ಮೇವನ್ನು ತುಳಿದು ಕಸಮಾಡಿದ್ದು ಅಲ್ಪಕಾರ್ಯವೋ? ತಿಳಿನೀರನ್ನು ಕುಡಿದು ಮಿಕ್ಕಿದ್ದನ್ನು ಕಾಲಿನಿಂದ ಕಲಕಿ ಹೊಲಸು ಮಾಡಿದ್ದು ಸಣ್ಣ ಕೆಲಸವೋ? 19 ನನ್ನ ಮಂದೆಗಳಾದರೋ ನಿಮ್ಮ ಕಾಲಲ್ಲಿ ಕಸಮಾಡಿದ್ದನ್ನು ತಿನ್ನುವುವು. ನಿನ್ನ ಕಾಲಿನಿಂದ ಕಲಕಿ ಹೊಲಸಾದದ್ದನ್ನು ಕುಡಿಯುವುವು.

20 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ನಿಮಗೆ ಹೀಗೆ ಹೇಳುತ್ತಾರೆ, ನಾನು, ನಾನೇ ಕೊಬ್ಬಿದ ಕುರಿಗಳಿಗೂ ಮತ್ತು ಬಡಕಲಾದ ಕುರಿಗಳಿಗೂ ನ್ಯಾಯತೀರಿಸುತ್ತೇನೆ. 21 ಏಕೆಂದರೆ ನೀವು ಅವುಗಳನ್ನು ಪಕ್ಕೆ ಮತ್ತು ಹೆಗಲುಗಳಿಂದ ನೂಕುತ್ತಾ ದುರ್ಬಲವಾದವುಗಳನ್ನು ಕೊಂಬುಗಳಿಂದ ಹಾಯುತ್ತಾ ನನ್ನ ಮಂದೆಯನ್ನು ದೂರ ಚದುರಿಸಿಬಿಟ್ಟಿರಿ. 22 ಆದ್ದರಿಂದ ನಾನು ನನ್ನ ಮಂದೆಯನ್ನು ಕಾಪಾಡುತ್ತೇನೆ. ಅವು ಎಂದೆಂದೂ ಕೊಳ್ಳೆಯಾಗುವುದಿಲ್ಲ. ನಾನು ಕುರಿಮೇಕೆಗಳ ಮಧ್ಯೆ ನ್ಯಾಯತೀರಿಸುವೆನು. 23 ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ. 24 ಯೆಹೋವ ದೇವರಾದ ನಾನೇ ಅವುಗಳಿಗೆ ದೇವರಾಗಿರುವೆನು; ನನ್ನ ಸೇವಕನಾದ ದಾವೀದನು ಅವುಗಳ ಮಧ್ಯೆ ಪ್ರಧಾನನಾಗಿರುವೆನೆಂದು ಯೆಹೋವ ದೇವರಾದ ನಾನೇ ಅದನ್ನು ಮಾತಾಡಿದ್ದೇನೆ.

25 “ ‘ಅವರ ಸಂಗಡ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ದುಷ್ಟಮೃಗಗಳನ್ನು ದೇಶದೊಳಗೆ ಇಲ್ಲದಂತೆ ಮಾಡುವೆನು. ಆದ್ದರಿಂದ ಅವರು ನಿರ್ಭಯವಾಗಿ ಮರುಭೂಮಿಯಲ್ಲಿ ವಾಸಿಸಿ ಅಡವಿಗಳಲ್ಲಿ ಮಲಗುವರು. 26 ಅವರನ್ನೂ ನನ್ನ ಪರ್ವತಗಳ ಸುತ್ತಣ ಪ್ರದೇಶಗಳನ್ನೂ ಆಶೀರ್ವಾದವನ್ನಾಗಿ ಮಾಡುವೆನು. ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು. ದಿವ್ಯಾಶೀರ್ವಾದದ ಮಳೆಯಾಗುವುದು. 27 ಬಯಲಿನ ಮರವು ಅದರ ಫಲವನ್ನು ಕೊಡುವುದು. ಭೂಮಿಯು ಅದರ ಆದಾಯವನ್ನು ಕೊಡುವುದು. ಅವರು ತಮ್ಮ ದೇಶದಲ್ಲಿ ನಿರ್ಭಯವಾಗಿರುವರು. ನಾನೇ ಅದರ ನೊಗದ ಬಂಧನಗಳ್ನು ಬಿಡಿಸಿ ಅವರಿಂದ ಸೇವೆಮಾಡಿಸಿಕೊಂಡವರ ಕೈಯಿಂದ ಅವರನ್ನು ತಪ್ಪಿಸಿದಾಗ ನಾನೇ ಯೆಹೋವ ದೇವರೆಂದು ಅವರು ತಿಳಿಯುವರು. 28 ಅವರು ಇನ್ನು ಮೇಲೆ ಇತರ ಜನಾಂಗಗಳಿಗೆ ಕೊಳ್ಳೆಯಾಗುವುದಿಲ್ಲ; ಕಾಡುಮೃಗಗಳು ಅವರನ್ನು ತಿನ್ನುವುದಿಲ್ಲ. ಯಾರೂ ಅವರನ್ನು ಹೆದರಿಸುವವರಿಲ್ಲದೆ ನಿರ್ಭಯವಾಗಿ ವಾಸಿಸುವರು. 29 ನಾನು ಅವರಿಗಾಗಿ ಒಂದು ಪ್ರಸಿದ್ಧ ಫಲವೃಕ್ಷವನ್ನು ಬೆಳೆಯಿಸುವೆನು. ಇನ್ನು ಮೇಲೆ ಅವರು ದೇಶದಲ್ಲಿ ಬರಗಾಲದಿಂದ ನಾಶವಾಗುವುದಿಲ್ಲ. ಅವರು ಇತರ ಜನರ ತಿರಸ್ಕಾರಕ್ಕೆ ಇನ್ನು ಮೇಲೆ ಗುರಿಯಾಗುವುದೇ ಇಲ್ಲ. 30 ಆಗ ಅವರು ತಮ್ಮ ಯೆಹೋವ ದೇವರೆಂಬ ನಾನೇ ಅವರ ಸಂಗಡ ಇರುವೆನೆಂದೂ ಇಸ್ರಾಯೇಲಿನ ಮನೆತನದವರಾದ ಅವರೇ ನನ್ನ ಜನರಾಗಿರುವರೆಂದೂ ತಿಳಿಯುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. 31 ನೀವು ನನ್ನ ಕುರಿಗಳು, ನನ್ನ ಹುಲ್ಲುಗಾವಲಿನ ಕುರಿಗಳು, ಮತ್ತು ನಾನು ನಿಮ್ಮ ದೇವರು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”

<- ಯೆಹೆಜ್ಕೇಲನು 33ಯೆಹೆಜ್ಕೇಲನು 35 ->