Link to home pageLanguagesLink to all Bible versions on this site
25
ಅಮ್ಮೋನನ ವಿಷಯವಾದ ಪ್ರವಾದನೆ
1 ಯೆಹೋವ ದೇವರ ವಾಕ್ಯವು ನನಗೆ ಬಂದಿತು, 2 “ಮನುಷ್ಯಪುತ್ರನೇ, ನೀನು ಅಮ್ಮೋನ್ಯರಿಗೆ ಅಭಿಮುಖನಾಗಿ ಅವರಿಗೆ ವಿರೋಧವಾಗಿ ಪ್ರವಾದಿಸು. 3 ಅಮ್ಮೋನ್ಯರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನೀವು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಪಡಿಸಿದಾಗಲೂ ಇಸ್ರಾಯೇಲಿನ ದೇಶವು ಹಾಳಾದಾಗಲೂ ಯೆಹೂದನ ಮನೆತನದವರು ಸೆರೆಯಲ್ಲಿದ್ದಾಗಲೂ ನೀವು “ಆಹಾ!” ಅಂದದ್ದರಿಂದ 4 ನಾನು ನಿಮ್ಮನ್ನು ಪೂರ್ವದೇಶದ ಜನರಿಗೆ ಸೊತ್ತಾಗಿ ಕೊಡುತ್ತೇನೆ, ಅವರು ತಮ್ಮ ಗುಡಾರಗಳನ್ನು ನಿನ್ನಲ್ಲಿ ನೆಲೆಗೊಳಿಸುವರು. ತಮ್ಮ ನಿವಾಸಗಳನ್ನು ನಿನ್ನಲ್ಲಿ ಮಾಡಿಕೊಳ್ಳುವರು, ಅವರು ನಿಮ್ಮ ಫಲವನ್ನು ತಿಂದು ನಿಮ್ಮ ಹಾಲನ್ನೇ ಕುಡಿಯುವರು. 5 ನಾನು ರಬ್ಬಾ ಪಟ್ಟಣವನ್ನು ಒಂಟೆಗಳ ನಿವಾಸ ಸ್ಥಳವಾಗಿ ಮತ್ತು ಅಮ್ಮೋನ್ ದೇಶವನ್ನು ಮಂದೆಗಳು ಮಲಗುವ ಸ್ಥಳವನ್ನಾಗಿ ಮಾಡುವೆನು. ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ. 6 ಏಕೆಂದರೆ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ; ನೀವು ಕೈತಟ್ಟಿ ಕಾಲಿನಿಂದ ತುಳಿದು ಇಸ್ರಾಯೇಲ್ ದೇಶದವರನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಅದರ ಸ್ಥಿತಿಗೆ ಸಂತೋಷಪಟ್ಟದ್ದರಿಂದ, 7 ನಾನು ನನ್ನ ಕೈಯನ್ನು ನಿಮ್ಮ ಮೇಲೆ ಚಾಚಿ, ಇತರ ಜನಾಂಗಗಳಿಗೆ ಕೊಳ್ಳೆಯಾಗಿ ಕೊಟ್ಟು ಜನಾಂಗಗಳೊಳಗಿಂದ ನಿಮ್ಮನ್ನು ಕಡಿದುಬಿಟ್ಟು ದೇಶದೊಳಗಿಂದ ನಿನ್ನ ಹೆಸರನ್ನು ಅಳಿಸಿಬಿಡುವೆನು. ನಾನು ನಿಮ್ಮನ್ನು ನಾಶಮಾಡುವೆನು. ಆಗ ನಾನೇ ಯೆಹೋವ ದೇವರೆಂದು ತಿಳಿಯುವಿರಿ.’ ”
ಮೋವಾಬಿನ ವಿರುದ್ಧ ಪ್ರವಾದನೆ
8 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಮೋವಾಬು ಮತ್ತು ಸೇಯೀರು, “ಇಗೋ, ಯೆಹೂದನ ಮನೆಯು ಸಮಸ್ತ ಇತರ ಜನಾಂಗಗಳ ಹಾಗಿದೆ,” ಎಂದು ಹೇಳುವರು. 9 ಆದ್ದರಿಂದ ಇಗೋ, ದೇಶದ ವೈಭವಗಳಾದ ಮೋವಾಬಿನ ಗಡಿಯ ಪಟ್ಟಣಗಳಾದ ಬೇತ್ ಯೆಷೀಮೋತ್, ಬಾಳ್ ಮೆಯೋನ್, ಕಿರ್ಯಾತಯಿಮ್ ಎಂಬ ಪಟ್ಟಣಗಳು ಇರುವ ಕಡೆಯಲ್ಲಿ ನಾನು ಮೋವಾಬಿನ ಮೇರೆಯನ್ನು ಒಡೆದುಬಿಡುವೆನು. 10 ಆ ಅಮ್ಮೋನನ್ನೂ ಪೂರ್ವದವರೆಗೆ ಸೊತ್ತಾಗಿ ಕೊಟ್ಟು ಅಮ್ಮೋನ್ಯರು ಜನಾಂಗಗಳೊಳಗೆ ಜ್ಞಾಪಕ ಮಾಡದ ಹಾಗೆ ಅವರಿಗೆ ಸೊತ್ತಾಗಿ ಕೊಡುವೆನು. 11 ಮೋವಾಬ್ಯರಿಗೆ ನಾನು ಶಿಕ್ಷೆಯನ್ನು ವಿಧಿಸುವೆನು. ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”
ಎದೋಮಿಗೆ ವಿರೋಧವಾದ ಪ್ರವಾದನೆ
12 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಏಕೆಂದರೆ ಎದೋಮು ಯೆಹೂದನ ಮನೆತನದವರಿಗೆ ಮುಯ್ಯಿಗೆ ಮುಯ್ಯಿ ತೀರಿಸಿದ್ದರಿಂದ ಅತಿ ಅಪರಾಧಮಾಡಿ ಅವರಲ್ಲಿ ಸೇಡು ತೀರಿಸಿಕೊಂಡಿತು. 13 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಎದೋಮಿನ ವಿರುದ್ಧ ನನ್ನ ಕೈಯನ್ನು ಚಾಚುತ್ತೇನೆ: ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ. ಅದನ್ನು ಕಾಡನ್ನಾಗಿ ಮಾಡುತ್ತೇನೆ, ತೇಮಾನು ಮೊದಲುಗೊಂಡು ದೆದಾನಿಯವರು ಖಡ್ಗದಿಂದ ಬೀಳುವರು. 14 ನಾನು ಎದೋಮಿಗೆ ನನ್ನ ಜನರಾದ ಇಸ್ರಾಯೇಲರ ಕೈಯಿಂದ ಮುಯ್ಯಿತೀರಿಸುವೆನು, ಅವರು ನನ್ನ ಕೋಪರೋಷಗಳಿಗೆ ತಕ್ಕ ಹಾಗೆ ಅದಕ್ಕೆ ಮಾಡುವರು, ನನ್ನ ಪ್ರತೀಕಾರವು ಎದೋಮಿನ ಅನುಭವಕ್ಕೆ ಬರುವುದು, ಇದು ಸಾರ್ವಭೌಮ ಯೆಹೋವ ದೇವರ ನುಡಿ.’ ”
ಫಿಲಿಷ್ಟಿಯಕ್ಕೆ ವಿರೋಧವಾದ ಪ್ರವಾದನೆ
15 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ತೀರಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಯೆಹೂದವನ್ನು ಕೆಡಿಸಿದರು. 16 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಫಿಲಿಷ್ಟಿಯರ ವಿರುದ್ಧ ನನ್ನ ಕೈಯನ್ನು ಚಾಚುವೆನು. ಕೆರೇತಿಯರನ್ನು ಕಡಿದುಬಿಡುವೆನು: ಉಳಿದವರನ್ನು ಸಮುದ್ರ ತೀರದಲ್ಲಿ ನಾಶಮಾಡುವೆನು. 17 ನಾನು ದೊಡ್ಡ ಪ್ರತಿದಂಡನೆಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ಮುಯ್ಯಿತೀರಿಸುವೆನು. ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”

<- ಯೆಹೆಜ್ಕೇಲನು 24ಯೆಹೆಜ್ಕೇಲನು 26 ->