Link to home pageLanguagesLink to all Bible versions on this site
19
ಇಸ್ರಾಯೇಲಿನ ರಾಜಕುಮಾರರಿಗಾಗಿ ಶೋಕಗೀತ
1 “ಇದಲ್ಲದೆ ನೀನು ಇಸ್ರಾಯೇಲಿನ ಪ್ರಧಾನರ ವಿಷಯವಾಗಿ ಈ ಪ್ರಲಾಪವನ್ನೆತ್ತಿ, 2 ಹೀಗೆ ಹೇಳು:
“ ‘ಇಗೋ, ನಿನ್ನ ತಾಯಿ,
ಸಿಂಹಗಳ ಮಧ್ಯೆ ಸಿಂಹಿಣಿ,
ತನ್ನ ಮರಿಗಳನ್ನು ಸಾಕಿ,
ಯುವ ಸಿಂಹಗಳ ನಡುವೆ ವಾಸಿಸಿತು.
3 ಅವಳೂ ತನ್ನ ಮರಿಗಳಲ್ಲಿ ಒಂದನ್ನು ಬೆಳೆಸಿದಳು,
ಇದು ಪ್ರಾಯದ ಸಿಂಹವಾಯಿತು.
ಇದು ಬೇಟೆಯನ್ನು ಕಲಿತು,
ಮನುಷ್ಯರನ್ನು ನುಂಗಿಬಿಟ್ಟಿತು.
4 ಜನಾಂಗಗಳವರು ಅದರ ಸುದ್ದಿಯನ್ನು ಕೇಳಿದರು,
ಅವರ ಗುಂಡಿಯಲ್ಲಿ ಇದನ್ನು ಹಿಡಿದುಕೊಂಡರು.
ಸಂಕೋಲೆಗಳಿಂದ ಬಂಧಿಸಿ,
ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋದರು.
 
5 “ ‘ಆಗ ಅವಳು ಅದನ್ನು ನೋಡಿ ತನ್ನ
ನಿರೀಕ್ಷೆ ಕಳೆದುಕೊಂಡೆನೆಂದು
ತನ್ನ ಮರಿಗಳಲ್ಲಿ ಮತ್ತೊಂದನ್ನು ತೆಗೆದುಕೊಂಡು,
ಅದನ್ನು ಪ್ರಾಯದ ಸಿಂಹವಾಗಿ ಮಾಡಿದಳು.
6 ಅದೂ ಸಿಂಹಗಳ ನಡುವೆ ತಿರುಗಾಡಿ,
ಪ್ರಾಯದ ಸಿಂಹವಾಗಿ
ಬೇಟೆಯನ್ನು ಕಲಿತು,
ಮನುಷ್ಯರನ್ನು ನುಂಗಿಬಿಟ್ಟಿತು.
7 ಅವರ ಅರಮನೆಗಳನ್ನು ಹಾಳುಮಾಡಿತು,
ಅವರ ನಗರಗಳನ್ನೂ ನಾಶಮಾಡಿತು,
ಅದರ ಘರ್ಜನೆಯ ಶಬ್ದದಿಂದಾಗಿ ದೇಶವೂ,
ಅದರಲ್ಲಿದ್ದ ಎಲ್ಲರೂ ದಂಗಾದವು.
8 ಆಗ ಜನಾಂಗಗಳು ಸುತ್ತಲಿನ ಪ್ರಾಂತಗಳೊಳಗಿಂದ ಕೂಡಿಬಂದು,
ಅದಕ್ಕೆ ವಿರೋಧವಾಗಿ ನಿಂತು,
ಅದರ ಮೇಲೆ ಬಲೆಯನ್ನೊಡ್ಡಿದರು,
ಆಗ ಅದು ಅವರ ಗುಂಡಿಯಲ್ಲಿ ಸಿಕ್ಕಿಬಿದ್ದಿತು.
9 ಅದಕ್ಕೆ ಸಂಕೋಲೆಗಳನ್ನು ತೊಡಿಸಿ,
ಪಂಜರದಲ್ಲಿ ಹಾಕಿ, ಬಾಬಿಲೋನಿನ ಅರಸನ ಬಳಿಗೆ ತೆಗೆದುಕೊಂಡು ಹೋದರು.
ಅದರ ಶಬ್ದವು ಇನ್ನು ಮೇಲೆ
ಇಸ್ರಾಯೇಲಿನ ಪರ್ವತಗಳ ಮೇಲೆ ಕೇಳಿಸದಂತೆ
ಅದನ್ನು ಕೋಟೆಯೊಳಗೆ ಸೇರಿಸಿದರು.
 
10 “ ‘ನಿನ್ನ ತಾಯಿ ನೀರಿನ ಬಳಿಯಲ್ಲಿ
ನೆಟ್ಟ ದ್ರಾಕ್ಷಿ ಗಿಡದ ಹಾಗೆ ಇದ್ದಾಳೆ.
ಅದು ಸಮೃದ್ಧಿಯಾದ ನೀರಾವರಿಯಿಂದ
ಫಲವುಳ್ಳದ್ದಾಗಿಯೂ ಇದೆ.
11 ಆಳುವವರ ರಾಜದಂಡಗಳಿಗೆ
ತಕ್ಕ ಬಲವುಳ್ಳ ಬಳ್ಳಿಗಳು ಅದರಲ್ಲಿವೆ.
ಅದರ ಉದ್ದವು
ಎಲ್ಲಾ ರೆಂಬೆಗಳಿಗಿಂತ ಹೆಚ್ಚಾಗಿವೆ.
ಹಾಗೆಯೇ ಅದು ಬಹು ಕೊಂಬೆಗಳ ಮಧ್ಯದಲ್ಲಿ
ಎತ್ತರವಾಗಿ ಕಾಣಬರುತ್ತಿದೆ.
12 ಆದರೆ ಆ ಲತೆಯನ್ನು ರೋಷದಲ್ಲಿ ಕಿತ್ತು
ನೆಲಕ್ಕೆ ಬಿಸಾಡಿದರು.
ಪೂರ್ವದಿಕ್ಕಿನ ಗಾಳಿಯು
ಅದರ ಫಲವನ್ನು ಒಣಗಿಸಿತು.
ಅದರ ಬಲವಾದ ಬಳ್ಳಿಗಳು ಮುರಿದು ಒಣಗಿಹೋದವು.
ಬೆಂಕಿಯು ಅವುಗಳನ್ನು ಸುಟ್ಟುಹಾಕಿತು.
13 ಈಗ ಅದು ಮರುಭೂಮಿಯಲ್ಲಿ ಒಣಗಿ,
ನೀರಿಲ್ಲದಂಥ ಪ್ರದೇಶದಲ್ಲಿ ನೆಡಲಾಗಿದೆ.
14 ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು,
ಅದರಲ್ಲಿ ಫಲವನ್ನು ತಿಂದುಬಿಟ್ಟಿದೆ.
ಅದರಲ್ಲಿ ಆಳುವುದಕ್ಕೆ ರಾಜದಂಡಕ್ಕಾಗಿ
ತಕ್ಕ ಬಲವುಳ್ಳ ಬಳ್ಳಿಯು ಈಗ ಇಲ್ಲ.’
ಇದು ಪ್ರಲಾಪವಾಗಿದೆ. ಪ್ರಲಾಪಕ್ಕಾಗಿಯೇ ಇದೆ.”

<- ಯೆಹೆಜ್ಕೇಲನು 18ಯೆಹೆಜ್ಕೇಲನು 20 ->