Link to home pageLanguagesLink to all Bible versions on this site
10
ದೇವರ ಮಹಿಮೆ ದೇವಾಲಯವನ್ನು ಬಿಟ್ಟುಹೋದದ್ದು
1 ಆಗ ನಾನು ನೋಡಲಾಗಿ, ಕೆರೂಬಿಗಳ ತಲೆಯ ಮೇಲಿದ್ದ ಆಕಾಶಮಂಡಲದಲ್ಲಿ ನೀಲಮಣಿಯಂತೆ ಸಿಂಹಾಸನದ ಆಕಾರದಂತಿರುವ ರೂಪವನ್ನು ಕಂಡೆನು. ಅದು ಅವುಗಳ ಮೇಲೆ ಕಾಣಿಸಿತು. 2 ಯೆಹೋವ ದೇವರು ನಾರುಮಡಿಯನ್ನು ಧರಿಸಿಕೊಂಡಿದ್ದ ಮನುಷ್ಯನಿಗೆ, “ನೀನು ಕೆರೂಬಿಗಳ ಕೆಳಗೆ ಇರುವ ಸುಡುವ ಕಲ್ಲಿದ್ದಲನ್ನು ನಿನ್ನ ಕೈತುಂಬ ತೆಗೆದುಕೊಂಡು ಅದನ್ನು ಪಟ್ಟಣದ ಮೇಲೆ ಎರಚು,” ಎಂದರು. ಹಾಗೆಯೇ ನಾನು ನೋಡುತ್ತಿದ್ದಂತೆಯೇ ಅವನು ಒಳಗೆ ಪ್ರವೇಶಿಸಿದನು.

3 ಆ ಮನುಷ್ಯನು ಒಳಗೆ ಹೋದಾಗ ಕೆರೂಬಿಗಳು ಆಲಯದ ದಕ್ಷಿಣ ಭಾಗದ ಬಳಿಯಲ್ಲಿ ನಿಂತಿದ್ದರು. ಮೇಘವು ಒಳಗಿನ ಅಂಗಳವನ್ನು ತುಂಬಿಸಿಕೊಂಡಿತ್ತು. 4 ಆಗ ಯೆಹೋವ ದೇವರ ಮಹಿಮೆಯು ಕೆರೂಬಿಗಳ ಮೇಲಿನಿಂದ ಮೇಲಕ್ಕೆ ಹೋಗಿ ಆಲಯದ ಹೊಸ್ತಿಲಿಗೆ ಹೋಯಿತು. ಆಲಯವು ಮೇಘದಿಂದ ತುಂಬಿತ್ತು. ಆಗ ಯೆಹೋವ ದೇವರ ಮಹಿಮೆಯ ಪ್ರಕಾಶವು ಅಂಗಳದಲ್ಲಿ ತುಂಬಿತ್ತು. 5 ಕೆರೂಬಿಗಳ ರೆಕ್ಕೆಗಳ ಶಬ್ದವು ಸರ್ವಶಕ್ತ ದೇವರು ಮಾತನಾಡುವ ಹಾಗೆ ಹೊರಗಣ ಅಂಗಳದವರೆಗೂ ಕೇಳಿಬಂತು.

6 ಯೆಹೋವ ದೇವರು ನಾರುಮಡಿಯನ್ನು ಧರಿಸಿಕೊಂಡ ಮನುಷ್ಯನಿಗೆ, “ಚಕ್ರಗಳ ಮಧ್ಯದಿಂದಲೂ, ಕೆರೂಬಿಯರ ಮಧ್ಯದಿಂದಲೂ ಬೆಂಕಿಯನ್ನು ತೆಗೆದುಕೊಳ್ಳಲು,” ಆಜ್ಞಾಪಿಸಿದನು. ಮನುಷ್ಯನು ಒಳಗೆ ಹೋಗಿ ಚಕ್ರಗಳ ಬಳಿಯಲ್ಲಿ ನಿಂತನು. 7 ಒಬ್ಬ ಕೆರೂಬಿಯನು ಕೆರೂಬಿಯರ ಮಧ್ಯದೊಳಗಿಂದ ತನ್ನ ಕೈಯನ್ನು ಬೆಂಕಿಗೆ ಚಾಚಿ, ಸ್ವಲ್ಪ ತೆಗೆದುಕೊಂಡು ನಾರುಮಡಿಯನ್ನು ಧರಿಸಿಕೊಂಡಿದ್ದವನ ಕೈಗೆ ಇಟ್ಟನು. ಇವನು ಅದನ್ನು ತೆಗೆದುಕೊಂಡು ಹೊರಗೆ ಹೋದನು. 8 ಕೆರೂಬಿಯರಲ್ಲಿ ಅವರ ರೆಕ್ಕೆಗಳ ಕೆಳಗೆ ಮನುಷ್ಯನ ಕೈಗೆ ಸಮಾನವಾದದ್ದು ಕಂಡುಬಂತು.

9 ನಾನು ನೋಡಿದಾಗ, ಇಗೋ ಒಬ್ಬೊಬ್ಬ ಕೆರೂಬಿಯನ ಬಳಿಯಲ್ಲಿ ಒಂದು ಚಕ್ರ, ಈ ಪ್ರಕಾರ ಕೆರೂಬಿಯರ ಬಳಿಯಲ್ಲಿ ನಾಲ್ಕು ಚಕ್ರಗಳಿದ್ದವು. ಆ ಚಕ್ರಗಳ ವರ್ಣವು ಹೊಳೆಯುವ ಪೀತರತ್ನದ ಹಾಗಿತ್ತು. 10 ಆ ನಾಲ್ಕಕ್ಕೂ ಒಂದೇ ರೂಪವಿತ್ತು. ಚಕ್ರದೊಳಗೆ ಇನ್ನೊಂದು ಚಕ್ರವು ರಚಿಸಿದ್ದ ಹಾಗೆ ಇದ್ದವು. 11 ಅವು ಹೊರಳುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ಹೊರಳುತ್ತಿದ್ದವು. ಕೆರೂಬಿಗಳು ಹೋದಂತೆ ಚಕ್ರಗಳು ತಿರುಗಲಿಲ್ಲ. ಎದುರುಮುಖವಾಗಿ ಹೋಗುತ್ತಿದ್ದವೇ ಹೊರತು ಓರೆಯಾಗಿ ಹೋಗುತ್ತಿರಲಿಲ್ಲ. 12 ಅವುಗಳ ದೇಹ, ಬೆನ್ನು, ಕೈ, ರೆಕ್ಕೆ ಮತ್ತು ಚಕ್ರಗಳು ಇವೆಲ್ಲವುಗಳ ಸುತ್ತಲೂ ಕಣ್ಣುಗಳಿಂದ ತುಂಬಿದ್ದವು, ಮತ್ತು ಅವನ ಎಲ್ಲಾ ನಾಲ್ಕು ಚಕ್ರಗಳು ಕಣ್ಣುಗಳಿಂದ ತುಂಬಿದ್ದವು. 13 ಆ ಚಕ್ರಗಳನ್ನು, “ತಿರುಗುವ ಚಕ್ರಗಳು” ಎಂದು ಕರೆಯುತ್ತಾರೆ ಎಂದು ನಾನು ಕೇಳಿದೆ. 14 ಒಬ್ಬೊಬ್ಬ ಕೆರೂಬಿಗೆ ನಾಲ್ಕು ಮುಖಗಳಿದ್ದವು. ಮೊದಲನೆಯ ಮುಖವು ಕೆರೂಬಿಯ ಮುಖ, ಎರಡನೆಯ ಮುಖವು ಮನುಷ್ಯನ ಮುಖ, ಮೂರನೆಯದು ಸಿಂಹದ ಮುಖ ಮತ್ತು ನಾಲ್ಕನೆಯದು ಹದ್ದಿನ ಮುಖಗಳಾಗಿದ್ದವು.

15 ಆಗ ಕೆರೂಬಿಯರು ಮೇಲಕ್ಕೆತ್ತಲಾದರು. ನಾನು ಕೆಬಾರ್ ನದಿಯ ಬಳಿಯಲ್ಲಿ ನೋಡಿದ ಜೀವಗಳು ಇವೇ. 16 ಕೆರೂಬಿಯರು ಚಲಿಸಿದಾಗ, ಚಕ್ರಗಳು ಅವರ ಸಂಗಡ ಹೋದವು. ಕೆರೂಬಿಯರು ಭೂಮಿಯನ್ನು ಬಿಟ್ಟು ಮೇಲೇರುವಾಗ ತಮ್ಮ ರೆಕ್ಕೆಗಳನ್ನು ಚಾಚಿದಾಗ, ಅವರ ಚಕ್ರಗಳು ಪಕ್ಕಕ್ಕೆ ತಿರುಗಲಿಲ್ಲ. 17 ಜೀವಿಗಳ ಆತ್ಮ ಆ ಚಕ್ರಗಳಲ್ಲಿಯೂ ಇದ್ದ ಕಾರಣ, ಅವು ನಿಂತು ಹೋದಾಗ ಇವೂ ನಿಂತುಹೋದವು. ಅವು ಏರಿದಾಗ, ಇವೂ ಅವುಗಳ ಜೊತೆಯಲ್ಲೇ ಏರಿದವು.

18 ಆಗ ಯೆಹೋವ ದೇವರ ಮಹಿಮೆಯು ಆಲಯದ ಹೊಸ್ತಿಲನ್ನು ಬಿಟ್ಟು ಕೆರೂಬಿಯರ ಮೇಲೆ ನಿಂತಿತು. 19 ನಾನು ನೋಡುವಾಗಲೇ ಕೆರೂಬಿಯರು ತಮ್ಮ ರೆಕ್ಕೆಗಳನ್ನು ಎತ್ತಿಕೊಂಡು, ಭೂಮಿಯನ್ನು ಬಿಟ್ಟು ಮೇಲಕ್ಕೇರಿ ಹೋದರು. ಅವು ಹೊರಟಾಗ, ಚಕ್ರಗಳೂ ಅದರ ಸಂಗಡ ಇದ್ದವು. ಅವರು ಯೆಹೋವ ದೇವರ ಆಲಯದ ಪೂರ್ವದಿಕ್ಕಿನ ಬಾಗಿಲಿನ ದ್ವಾರದ ಬಳಿಯಲ್ಲಿ ನಿಂತಿದ್ದರು. ಇಸ್ರಾಯೇಲಿನ ದೇವರ ಮಹಿಮೆಯು ಅವರ ಮೇಲೆ ಇತ್ತು.

20 ಇಸ್ರಾಯೇಲಿನ ದೇವರ ವಾಹನವಾಗಿ ಕೆಬಾರ್ ನದಿಯ ಹತ್ತಿರ ನನಗೆ ಕಾಣಿಸಿದ ಆ ಜೀವಿಗಳು ಇವೇ. ಅವು ಕೆರೂಬಿಗಳೆಂದು ಈಗ ನನಗೆ ತಿಳಿದುಬಂತು. 21 ಪ್ರತಿಯೊಬ್ಬನಿಗೂ ನಾಲ್ಕು ಮುಖಗಳು ಮತ್ತು ನಾಲ್ಕು ರೆಕ್ಕೆಗಳು ಇದ್ದವು. ಅವರ ರೆಕ್ಕೆಗಳ ಕೆಳಗೆ ಮನುಷ್ಯರ ಕೈಗಳ ರೂಪವಿತ್ತು. 22 ಅವುಗಳ ಮುಖಗಳ ರೂಪವು ನಾನು ಕೆಬಾರ್ ನದಿಯ ಬಳಿಯಲ್ಲಿ ನೋಡಿದ ಆ ಮುಖಗಳ ಹಾಗೆ ಇತ್ತು. ಅವರಲ್ಲಿ ಪ್ರತಿಯೊಬ್ಬರೂ ನೇರವಾಗಿ ಹೋಗುತ್ತಿದ್ದರು.

<- ಯೆಹೆಜ್ಕೇಲನು 9ಯೆಹೆಜ್ಕೇಲನು 11 ->