Link to home pageLanguagesLink to all Bible versions on this site

ಯೆಹೆಜ್ಕೇಲನು

1
ಯೆಹೆಜ್ಕೇಲನ ಮೊದಲನೆಯ ದರ್ಶನ
1 ನಾನು ಸೆರೆಯವರ ಜೊತೆ ಕೆಬಾರ್ ನದಿಯ ಬಳಿಯಲ್ಲಿರುವಾಗ ಮೂವತ್ತನೆಯ ವರ್ಷದ, ನಾಲ್ಕನೆಯ ತಿಂಗಳಿನ, ಐದನೆಯ ದಿನದಲ್ಲಿ ಆಕಾಶ ತೆರೆಯಿತು. ನಾನು ದೇವರ ದರ್ಶನಗಳನ್ನು ಕಂಡೆನು.

2 ತಿಂಗಳಿನ ಐದನೆಯ ದಿನದಲ್ಲಿ ಅರಸನಾದ ಯೆಹೋಯಾಕೀನನ ಸೆರೆಯ ಐದನೆಯ ವರ್ಷದಲ್ಲಿ, 3 ಯೆಹೋವ ದೇವರ ವಾಕ್ಯವು ಬಾಬಿಲೋನಿಯರ ದೇಶದ ಕೆಬಾರ್ ನದಿಯ ಬಳಿಯಲ್ಲಿ, ಬೂಜಿಯ ಮಗ ಹಾಗೂ ಯಾಜಕ ಆಗಿರುವ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಬಂದಿತು ಮತ್ತು ಅಲ್ಲಿ ಯೆಹೋವ ದೇವರ ಕೈ ಅವನ ಮೇಲಿತ್ತು.

4 ನಾನು ಕಂಡ ದರ್ಶನ ಹೀಗಿತ್ತು: ಇಗೋ, ಉತ್ತರ ದಿಕ್ಕಿನಿಂದ ಬಿರುಗಾಳಿ ಬೀಸಿತು. ಎಡೆಬಿಡದೆ ಝಗಝಗಿಸುವ ಜ್ವಾಲೆಯಿಂದ ಕೂಡಿದ ಮಹಾ ಮೇಘವೊಂದು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು. ಅದರ ನಡುವೆ ಜ್ವಾಲೆಯ ಮಧ್ಯೆ ಹೊಳೆಯುವ ಲೋಹ ಬೆಳಗಿತು. 5 ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ರೂಪವು ಹೊರಟಿತು. ಅವುಗಳಿಗೆ ಮನುಷ್ಯನ ರೂಪವಿತ್ತು. 6 ಪ್ರತಿಯೊಂದಕ್ಕೂ ನಾಲ್ಕು ಮುಖಗಳು ಮತ್ತು ನಾಲ್ಕು ರೆಕ್ಕೆಗಳು ಇದ್ದವು. 7 ಅವುಗಳ ಕಾಲುಗಳು ನೆಟ್ಟಗಿದ್ದು, ಅವುಗಳ ಅಂಗಾಲು ಕರುವಿನ ಪಾದದ ಹಾಗಿದ್ದು, ಕಂಚಿಗೆ ಮೆರುಗು ಕೊಟ್ಟ ಬಣ್ಣದ ಹಾಗೆ ಅವು ಥಳಥಳಿಸುತ್ತಿದ್ದವು. 8 ಅವುಗಳ ರೆಕ್ಕೆಗಳ ಕೆಳಗೆ ನಾಲ್ಕು ಪಕ್ಕೆಗಳ ಮೇಲೆ ಮನುಷ್ಯನ ಕೈಗಳು ಇದ್ದವು. ಆ ನಾಲ್ಕಕ್ಕೂ ಮುಖಗಳು, ರೆಕ್ಕೆಗಳು ಇದ್ದವು. 9 ಅವುಗಳ ರೆಕ್ಕೆಗಳು ಪರಸ್ಪರರ ರೆಕ್ಕೆಗಳನ್ನು ಸ್ಪರ್ಶಿಸುತ್ತಿದ್ದವು. ಪ್ರತಿಯೊಂದೂ ನೇರವಾಗಿ ಮುಂದೆ ಹೋಗುತ್ತಿದ್ದವು ಮತ್ತು ಅವರು ತಿರುಗದೆ ಮುಂದೆ ಸಾಗುತ್ತಿದ್ದರು.

10 ಅವುಗಳ ಮುಖಗಳು ಹೀಗಿದ್ದವು: ಪ್ರತಿಯೊಂದರ ಮುಂದಿನ ನಾಲ್ಕು ಮುಖಗಳು ಮನುಷ್ಯನ ಮುಖದಂತಿತ್ತು; ಬಲಗಡೆಯ ನಾಲ್ಕು ಮುಖಗಳು ಸಿಂಹದ ಮುಖದಂತಿತ್ತು; ಎಡಗಡೆಯ ನಾಲ್ಕು ಮುಖಗಳು ಹೋರಿಯ ಮುಖದಂತಿತ್ತು; ಹಿಂದಿನ ನಾಲ್ಕು ಮುಖಗಳು ಗರುಡಪಕ್ಷಿಯ ಮುಖದಂತಿತ್ತು. 11 ಅವುಗಳ ಮುಖಗಳು ಹೀಗಿದ್ದವು. ಅವುಗಳ ರೆಕ್ಕೆಗಳು ಮೇಲಕ್ಕೆ ಚಾಚಿಕೊಂಡಿದ್ದವು. ಪ್ರತಿಯೊಂದಕ್ಕೂ ಎರಡು ರೆಕ್ಕೆಗಳಿದ್ದು, ಒಂದಕ್ಕೊಂದು ಅಂಟಿಕೊಂಡಿದ್ದವು. ಇನ್ನೆರಡು ರೆಕ್ಕೆಗಳು ದೇಹವನ್ನು ಮುಚ್ಚಿಕೊಂಡಿದ್ದವು. 12 ಅವೆಲ್ಲವೂ ನೆಟ್ಟಗೆ ಮುಂದಕ್ಕೆ ಹೋದವು. ಅವುಗಳ ಆತ್ಮವು ಎಲ್ಲಿಗೆ ಹೋಗಬೇಕಿತ್ತೋ, ಅಲ್ಲಿಗೇ ಹೋದವು, ಹೋಗುವಾಗ ಅವು ತಿರುಗಿಕೊಳ್ಳಲಿಲ್ಲ. 13 ಆ ಜೀವಿಗಳ ಮಧ್ಯೆ ಅದ್ಭುತ ಕಾಂತಿಯೊಂದು ಉರಿಯುವ ಕೆಂಡಗಳೋ, ಪಂಜುಗಳೋ ಎಂಬಂತೆ ಕಾಣಿಸಿತು. ಅದು ಆ ಜೀವಿಗಳ ನಡುವೆ ಓಲಾಡುತ್ತಿತ್ತು. ಆ ಉರಿ ತೇಜೋಮಯವಾಗಿತ್ತು. ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು. 14 ಆ ಜೀವಿಗಳು ಮಿಂಚಿನ ಹಾಗೆ ಓಡುತ್ತಾ ತಿರುಗಾಡುತ್ತಾ ಇದ್ದವು.

15 ಆಗ ನಾನು ಆ ಜೀವಿಗಳನ್ನು ನೋಡಲಾಗಿ, ಜೀವಿಗಳ ಪಕ್ಕದಲ್ಲಿ ಭೂಮಿಯ ಮೇಲೆ ಒಂದು ಚಕ್ರವು ನಾಲ್ಕು ಮುಖವುಳ್ಳದ್ದಾಗಿರುವುದನ್ನು ನಾನು ನೋಡಿದೆನು. 16 ಆ ಚಕ್ರಗಳ ಆಕಾರವೂ, ಅವುಗಳ ಕೆಲಸವೂ ಪೀತರತ್ನದ ವರ್ಣದ ಹಾಗಿದೆ. ಆ ನಾಲ್ಕಕ್ಕೆ ಒಂದೇ ಮಾದರಿಯಾಗಿದ್ದವು. ಅವುಗಳ ಆಕಾರವೂ, ಅವುಗಳ ಕೆಲಸವೂ ಚಕ್ರದ ಮಧ್ಯದೊಳಗೆ ಚಕ್ರವು ಇದ್ದ ಹಾಗಿತ್ತು. 17 ಅವು ಚಲಿಸುವಾಗ ತಮ್ಮ ನಾಲ್ಕು ಪಕ್ಕೆಗಳ ಮೇಲೆ ಹೋದವು ಮತ್ತು ಅವು ಹೋಗುವಾಗ ತಿರುಗಲಿಲ್ಲ. 18 ಅವುಗಳ ಚಕ್ರಗಳು ಎತ್ತರವಾಗಿಯೂ, ಭಯಂಕರವಾಗಿಯೂ ಇದ್ದವು. ಆ ನಾಲ್ಕು ಚಕ್ರಗಳ ಸುತ್ತಲೂ ಅನೇಕ ಕಣ್ಣುಗಳಿದ್ದವು.

19 ಜೀವಿಗಳು ಹೋಗುವಾಗ ಆ ಚಕ್ರಗಳು ಅವುಗಳ ಬಳಿಯಲ್ಲೇ ಹೋದವು. ಆ ಜೀವಿಗಳು ಭೂಮಿಯಿಂದ ಮೇಲಕ್ಕೆ ಏಳುವಾಗ, ಚಕ್ರಗಳು ಮೇಲಕ್ಕೆ ಏಳುತ್ತಿದ್ದವು. 20 ಆತ್ಮವು ಎಲ್ಲಿಗೆ ಹೋಗಬೇಕಿತ್ತೋ, ಅಲ್ಲಿಗೇ ಅವುಗಳು ಹೋದವು. ಚಕ್ರಗಳು ಸಹ ಅವುಗಳಿಗೆದುರಾಗಿ ಮೇಲಕ್ಕೆ ಏಳುತ್ತಿದ್ದವು. ಏಕೆಂದರೆ ಚಕ್ರಗಳಲ್ಲಿ ಆ ಜೀವಿಯ ಆತ್ಮವು ಇತ್ತು. 21 ಆ ಜೀವಿಗಳು ಮುಂದುವರಿಯುವಾಗ, ಚಕ್ರಗಳೂ ಮುಂದುವರಿಯುತ್ತಿದ್ದವು. ಅವು ನಿಂತು ಹೋಗುವಾಗ, ಇವೂ ನಿಂತು ಹೋಗುತ್ತಿದ್ದವು. ಅವು ನೆಲದಿಂದ ಮೇಲಕ್ಕೆ ಏಳುವಾಗ, ಚಕ್ರಗಳೂ ಅವುಗಳ ಪಕ್ಕದಲ್ಲಿ ಏಳುತ್ತಿದ್ದವು. ಏಕೆಂದರೆ ಆ ಜೀವಿಗಳ ಆತ್ಮ ಚಕ್ರಗಳಲ್ಲಿಯೂ ಇತ್ತು.

22 ಜೀವಿಯ ತಲೆಗಳ ಮೇಲೆ ಗಗನ ಮಂಡಲ ವಿಶಾಲ ರೂಪವು ವಜ್ರದಂತಿತ್ತು. ಮತ್ತು ಅದು ಅದ್ಭುತವಾಗಿತ್ತು. 23 ಆ ಗಗನ ಮಂಡಲದ ಕೆಳಗೆ ಆ ಜೀವಿಗಳ ರೆಕ್ಕೆಗಳು ಒಂದರ ಕಡೆಗೆ ಒಂದರಂತೆ ಚಾಚಿದವು. ಇದಲ್ಲದೆ ಒಂದೊಂದು ಜೀವಿಗೆ ದೇಹವನ್ನು ಮುಚ್ಚಿಕೊಳ್ಳುವ ಎರಡೆರಡು ರೆಕ್ಕೆಗಳಿದ್ದವು. 24 ಅವು ಚಲಿಸುವಾಗ, ನಾನು ಅವುಗಳ ರೆಕ್ಕೆಗಳ ಶಬ್ದವನ್ನು ಕೇಳಿದೆನು. ಅದು ಜಲಪ್ರವಾಹದ ಶಬ್ದದಂತೆಯೂ, ಸರ್ವಶಕ್ತರ ಧ್ವನಿಯ ಹಾಗೆಯೂ, ಸೈನ್ಯದ ಶಬ್ದದ ಹಾಗೆಯೂ ಇತ್ತು. ಅವು ನಿಲ್ಲುವಾಗ ಅವುಗಳ ರೆಕ್ಕೆಗಳನ್ನು ಕೆಳಗೆ ಇಳಿಸುತ್ತಿದ್ದವು.

25 ಅವುಗಳು ನಿಂತು, ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸಿದಾಗ, ಅವುಗಳ ತಲೆಗಳ ಮೇಲಿರುವ ಗಗನ ಮಂಡಲದೊಳಗಿಂದ ಒಂದು ಶಬ್ದವಾಯಿತು. 26 ಅವುಗಳ ತಲೆಗಳ ಮೇಲಿರುವ ಗಗನ ಮಂಡಲದ ಮೇಲ್ಭಾಗದಲ್ಲಿ ನೀಲಮಣಿಯ ಹಾಗೆ ಇರುವ ಒಂದು ಸಿಂಹಾಸನವಿತ್ತು. ಅದರ ಮೇಲೆ ಮನುಷ್ಯನ ಹಾಗೆ ಕಾಣಿಸುವ ಒಂದು ರೂಪವೂ ಇತ್ತು. 27 ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಮೇಲ್ಗಡೆ ಲೋಹವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಭುತ ಕಾಂತಿಯನ್ನು ನಾನು ಕಂಡೆನು. 28 ಮಳೆ ಬೀಳುವ ದಿನದಲ್ಲಿ ಮೇಘದಲ್ಲಿ ಮಳೆಬಿಲ್ಲು ಹೇಗೆ ಕಾಣಿಸುವುದೋ ಹಾಗೆ ಅದರ ಸುತ್ತಲೂ ಆ ಪ್ರಕಾಶವು ಕಾಣಿಸಿತು.

ಇದೇ ಯೆಹೋವ ದೇವರ ಮಹಿಮೆಯ ರೂಪದ ದರ್ಶನವಾಗಿತ್ತು. ಅದನ್ನು ನಾನು ಕಂಡಾಗ ನಾನು ನನ್ನ ಮುಖವನ್ನು ಕೆಳಗೆಮಾಡಿ ಬಿದ್ದೆನು ಮತ್ತು ಮಾತನಾಡುವ ಒಬ್ಬನ ಸ್ವರವನ್ನು ಕೇಳಿದೆನು.

ಯೆಹೆಜ್ಕೇಲನು 2 ->