Link to home pageLanguagesLink to all Bible versions on this site
3
ಮೋಶೆ ಹಾಗೂ ಉರಿಯುತ್ತಿರುವ ಪೊದೆ
1 ಮೋಶೆಯು ತನ್ನ ಮಾವನೂ ಮಿದ್ಯಾನಿನ ಯಾಜಕನೂ ಆದ ಇತ್ರೋವನ ಮಂದೆಯನ್ನು ಮೇಯಿಸುತ್ತಿದ್ದನು. ಮರುಭೂಮಿಯ ಹಿಂಭಾಗಕ್ಕೆ ನಡೆಸಿಕೊಂಡು ಹೋಗಿ ಹೋರೇಬ್ ಎಂಬ ದೇವರ ಬೆಟ್ಟಕ್ಕೆ ಬಂದನು. 2 ಆಗ ಯೆಹೋವ ದೇವರ ದೂತನು ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಅವನಿಗೆ ಕಾಣಿಸಿಕೊಂಡನು. ಮೋಶೆಯು ನೋಡಿದಾಗ, ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು ಆದಾಗ್ಯೂ ಪೊದೆಯು ಸುಟ್ಟು ಹೋಗಲಿಲ್ಲ. 3 ಆಗ ಮೋಶೆಯು, “ನಾನು ಹೋಗಿ ಆ ವಿಚಿತ್ರ ನೋಟವನ್ನೂ ಪೊದೆಯು ಏಕೆ ಸುಟ್ಟುಹೋಗಲಿಲ್ಲವೆಂಬುದನ್ನೂ ನೋಡುವೆನು,” ಎಂದುಕೊಂಡನು.

4 ಅವನು ನೋಡುವುದಕ್ಕೆ ಹತ್ತಿರ ಬರುವುದನ್ನು ಯೆಹೋವ ದೇವರು ನೋಡಿದಾಗ, ದೇವರು ಪೊದೆಯೊಳಗಿಂದ ಅವನಿಗೆ, “ಮೋಶೇ, ಮೋಶೇ,” ಎಂದು ಕರೆದರು.

ಆಗ ಅವನು, “ನಾನು ಇಲ್ಲಿ ಇದ್ದೇನೆ,” ಎಂದನು.

5 ಆಗ ದೇವರು ಅವನಿಗೆ, “ಇಲ್ಲಿ ಸಮೀಪಕ್ಕೆ ಬರಬೇಡ, ನಿನ್ನ ಪಾದರಕ್ಷೆಗಳನ್ನು ತೆಗೆದಿಡು. ನೀನು ನಿಂತಿರುವ ಸ್ಥಳ ಪರಿಶುದ್ಧ ಭೂಮಿ,” ಎಂದರು. 6 ಇದಲ್ಲದೆ ಮೋಶೆಗೆ, “ನಾನು ನಿನ್ನ ಪಿತೃಗಳ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿದ್ದೇನೆ,” ಎಂದು ಹೇಳಿದರು. ಮೋಶೆಯು ದೇವರ ಕಡೆ ದೃಷ್ಟಿ ಇಡುವುದಕ್ಕೆ ಭಯಪಟ್ಟು ತನ್ನ ಮುಖವನ್ನು ಮುಚ್ಚಿಕೊಂಡನು.

7 ಆಗ ಯೆಹೋವ ದೇವರು, “ಈಜಿಪ್ಟಿನಲ್ಲಿರುವ ನನ್ನ ಜನರ ವ್ಯಥೆಯನ್ನು ವಾಸ್ತವವಾಗಿಯೂ ಕಂಡಿದ್ದೇನೆ. ಬಿಟ್ಟೀ ಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು. ಅವರ ದುಃಖವನ್ನು ಬಲ್ಲೆನು. 8 ಆದಕಾರಣ ಅವರನ್ನು ಈಜಿಪ್ಟನವರ ಕೈಯೊಳಗಿಂದ ಬಿಡುಗಡೆ ಮಾಡುವುದಕ್ಕೆ ಬಂದಿದ್ದೇನೆ. ನಾನು ಅವರನ್ನು ಆ ದೇಶದಿಂದ ಬಿಡಿಸಿ, ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೆಯ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡೆಸಿಕೊಂಡು ಹೋಗುವುದಕ್ಕೂ ಇಳಿದು ಬಂದಿದ್ದೇನೆ. 9 ಈಗ ಇಸ್ರಾಯೇಲರ ಕೂಗು ನನಗೆ ಮುಟ್ಟಿದೆ. ಈಜಿಪ್ಟಿನವರು ಅವರಿಗೆ ಕೊಡುತ್ತಿರುವ ಉಪದ್ರವವನ್ನು ನಾನು ನೋಡಿದ್ದೇನೆ. 10 ಆದ್ದರಿಂದ ಈಗ ಬಾ, ನಾನು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ. ಇಸ್ರಾಯೇಲರಾದ ನನ್ನ ಜನರನ್ನು ನೀನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಬೇಕು,” ಎಂದರು.

11 ಆಗ ಮೋಶೆಯು ದೇವರಿಗೆ, “ಫರೋಹನ ಬಳಿಗೆ ಹೋಗಿ, ಇಸ್ರಾಯೇಲರನ್ನು ಈಜಿಪ್ಟಿನೊಳಗಿಂದ ಹೊರಗೆ ತರುವುದಕ್ಕೆ ನಾನು ಎಷ್ಟರವನು?” ಎಂದನು.

12 ಆಗ ದೇವರು, “ನಿಶ್ಚಯವಾಗಿ ನಾನು ನಿನ್ನ ಸಂಗಡ ಇರುವೆನು. ನೀನು ಜನರನ್ನು ಈಜಿಪ್ಟಿನೊಳಗಿಂದ ಹೊರಗೆ ತಂದ ತರುವಾಯ ನೀವು ಈ ಬೆಟ್ಟದ ಮೇಲೆ ದೇವರಾದ ನನ್ನನ್ನು ಆರಾಧಿಸುವಿರಿ. ನಾನು ನಿನ್ನನ್ನು ಕಳುಹಿಸಿದವನು ಎಂಬುದಕ್ಕೆ ಇದೇ ನಿನಗೆ ಗುರುತಾಗಿ ಇರುವುದು,” ಎಂದರು.

13 ಅದಕ್ಕೆ ಮೋಶೆಯು ದೇವರಿಗೆ, “ಇಸ್ರಾಯೇಲರ ಬಳಿಗೆ ಹೋಗಿ, ‘ನಿಮ್ಮ ಪಿತೃಗಳ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ,’ ಎಂದು ಹೇಳುವಾಗ ಅವರು ನನಗೆ, ‘ಅವರ ಹೆಸರು ಏನು?’ ಎಂದು ಕೇಳಿದರೆ, ನಾನು ಅವರಿಗೆ ಏನು ಹೇಳಬೇಕು?” ಎಂದನು.

14 ಆಗ ದೇವರು ಮೋಶೆಗೆ, “ಇರುವಾತನೇ ಆಗಿದ್ದೇನೆ. ‘ಆ ಇರುವಾತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ,’ ಎಂದು ಇಸ್ರಾಯೇಲರಿಗೆ ಹೇಳಬೇಕು,” ಎಂದರು.

15 ಮತ್ತೆ ದೇವರು ಮೋಶೆಗೆ, “ ‘ನಿಮ್ಮ ಪಿತೃಗಳ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿರುವ ಯೆಹೋವ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ,’ ಎಂದು ಇಸ್ರಾಯೇಲರಿಗೆ ಹೇಳಬೇಕು,

“ಇದೇ ಯುಗಯುಗಕ್ಕೆ ನನ್ನ ಹೆಸರೂ,
ತಲತಲಾಂತರಕ್ಕೂ ನನ್ನನ್ನು
ಸ್ಮರಿಸಬೇಕಾದ ಹೆಸರು.

16 “ನೀನು ಹೋಗಿ ಇಸ್ರಾಯೇಲ್ ಹಿರಿಯರನ್ನು ಕೂಡಿಸಿ ಅವರಿಗೆ, ‘ನಿಮ್ಮ ಪಿತೃಗಳ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿರುವ ಯೆಹೋವ ದೇವರು ನನಗೆ ಕಾಣಿಸಿಕೊಂಡು ಹೀಗೆಂದಿದ್ದಾರೆ: ನಾನು ನಿಮ್ಮನ್ನೂ ಈಜಿಪ್ಟಿನಲ್ಲಿ ನಿಮಗೆ ಸಂಭವಿಸಿದ್ದನ್ನೆಲ್ಲವನ್ನೂ ನಿಶ್ಚಯವಾಗಿ ನೋಡಿದ್ದೇನೆ. 17 ಈಜಿಪ್ಟಿನ ವ್ಯಥೆಯಿಂದ ಬಿಡಿಸಿ ನಿಮ್ಮನ್ನು ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ಇರುವ ಹಾಲು ಜೇನು ಹರಿಯುವ ದೇಶಕ್ಕೆ ಬರಮಾಡುವೆನೆಂದು ವಾಗ್ದಾನ ಮಾಡಿದ್ದೇನೆ,’ ಎಂದು ಅವರಿಗೆ ತಿಳಿಸು.

18 “ಇಸ್ರಾಯೇಲರ ಹಿರಿಯರು ನಿನ್ನ ಮಾತನ್ನು ಕೇಳುವರು. ಆಗ ನೀನು ಇಸ್ರಾಯೇಲ್ ಜನರ ಹಿರಿಯರ ಸಹಿತವಾಗಿ ಈಜಿಪ್ಟಿನ ಅರಸನ ಬಳಿಗೆ ಹೋಗಿ ಅವನಿಗೆ, ‘ಹಿಬ್ರಿಯರ ದೇವರಾಗಿರುವ ಯೆಹೋವ ದೇವರು ನಮಗೆ ಪ್ರತ್ಯಕ್ಷನಾಗಿದ್ದಾರೆ. ಆದ್ದರಿಂದ ನಾವು ಮರುಭೂಮಿಯಲ್ಲಿ ಮೂರು ದಿನ ಪ್ರಯಾಣಮಾಡಿ, ನಮ್ಮ ಯೆಹೋವ ದೇವರಿಗೆ ಯಜ್ಞಮಾಡಬೇಕಾಗಿದೆ. ಅದಕ್ಕಾಗಿ ನಮ್ಮನ್ನು ಬಿಡು ಎಂದು ಬೇಡಿಕೊಳ್ಳುತ್ತೇವೆ,’ ಎಂದು ಹೇಳಬೇಕು. 19 ಆದರೂ ಈಜಿಪ್ಟಿನ ಅರಸನು ನೀವು ಎಷ್ಟು ಬಲವಂತ ಮಾಡಿದರೂ ನಿಮ್ಮನ್ನು ಹೋಗಗೊಡಿಸುವುದಿಲ್ಲ ಎಂದು ನನಗೆ ನಿಶ್ಚಯವಾಗಿ ತಿಳಿದಿದೆ. 20 ಹೀಗಿರುವುದರಿಂದ ನನ್ನ ಕೈಯನ್ನು ಚಾಚಿ ಈಜಿಪ್ಟ್ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿ, ನಾನು ಅದನ್ನು ನಾನಾ ವಿಧವಾಗಿ ಬಾಧಿಸುವೆನು. ತರುವಾಯ ಅವನು ನಿಮ್ಮನ್ನು ಕಳುಹಿಸಿಬಿಡುವನು.

21 “ಇದಲ್ಲದೆ ಈ ಜನರಿಗೆ ಈಜಿಪ್ಟಿನವರ ಕಣ್ಣೆದುರಿನಲ್ಲಿ ದಯೆ ದೊರಕುವಂತೆ ಮಾಡುವೆನು. ನೀವು ಹೋಗುವಾಗ ಬರಿಗೈಯಲ್ಲಿ ಹೋಗುವುದಿಲ್ಲ. 22 ಆದರೆ ಪ್ರತಿ ಸ್ತ್ರೀಯು ತನ್ನ ಮನೆಯಲ್ಲಿ ಇಳಿದುಕೊಂಡಿರುವ ಸ್ತ್ರೀಯಿಂದಲೂ ನೆರೆಯವಳಿಂದಲೂ ಬೆಳ್ಳಿಬಂಗಾರದ ಒಡವೆಗಳನ್ನು ಮತ್ತು ವಸ್ತ್ರಗಳನ್ನು ಕೇಳಿಕೊಳ್ಳಲಿ. ಅವುಗಳನ್ನು ನಿಮ್ಮ ಪುತ್ರಪುತ್ರಿಯರ ಮೇಲೆ ಹಾಕಿರಿ. ಹೀಗೆ ನೀವು ಈಜಿಪ್ಟಿನವರನ್ನು ಸೂರೆಮಾಡುವಿರಿ,” ಎಂದರು.

<- ವಿಮೋಚನಕಾಂಡ 2ವಿಮೋಚನಕಾಂಡ 4 ->