Link to home pageLanguagesLink to all Bible versions on this site
5
1 ಆದ್ದರಿಂದ ನೀವು ದೇವರ ಪ್ರಿಯರಾದ ಮಕ್ಕಳಂತೆ ದೇವರ ಮಾದರಿಯನ್ನು ಅನುಸರಿಸಿ ಬಾಳಿರಿ. 2 ಕ್ರಿಸ್ತ ಯೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ದೇವರಿಗೆ ಸುಗಂಧ ಕಾಣಿಕೆಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಸಹ ಪ್ರೀತಿಯಿಂದ ಬಾಳಿರಿ.

3 ಆದರೆ ನಿಮ್ಮೊಳಗೆ ಅನೈತಿಕತೆಯಾಗಲಿ, ಯಾವ ಅಶುದ್ಧತ್ವವಾಗಲಿ, ಇಲ್ಲವೆ ಲೋಭವಾಗಲಿ ಇರಲೇಬಾರದು. ಇವು ದೇವರ ಪರಿಶುದ್ಧರಿಗೆ ಯೋಗ್ಯವಲ್ಲ. 4 ಅಶ್ಲೀಲತೆ, ಬುದ್ಧಿಹೀನ ಮಾತು, ಅಸಭ್ಯ ಹರಟೆ ಇವು ಬೇಡ, ಇವು ಅಯುಕ್ತವಾಗಿವೆ, ಪ್ರತಿಯಾಗಿ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ. 5 ಏಕೆಂದರೆ ಯಾವ ಜಾರನಾಗಲಿ, ಅಶುದ್ಧನಾಗಲಿ, ದೇವರಲ್ಲದವುಗಳನ್ನು ಪೂಜಿಸುವ ಲೋಭಿಯಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಹಕ್ಕುಬಾಧ್ಯತೆಯನ್ನು ಹೊಂದುವುದಿಲ್ಲವೆಂಬುದು ನಿಮಗೆ ಮನದಟ್ಟಾಗಿರಲಿ. 6 ಪ್ರಯೋಜನವಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನು ವಂಚಿಸದಿರಲಿ. ಏಕೆಂದರೆ ಇಂಥವುಗಳ ದೆಸೆಯಿಂದ ದೇವರ ಕೋಪಾಗ್ನಿಯು ಅವರಿಗೆ ಅವಿಧೇಯರಾದ ಮಕ್ಕಳ ಮೇಲೆ ಬರುತ್ತದೆ. 7 ಆದ್ದರಿಂದ ನೀವು ಅವರೊಂದಿಗೆ ಪಾಲುಗಾರರಾಗಿರಬೇಡಿರಿ.

8 ನೀವು ಹಿಂದೊಮ್ಮೆ ಕತ್ತಲೆಯಾಗಿದ್ದಿರಿ. ಆದರೆ ಈಗ ನೀವು ಕರ್ತನಲ್ಲಿ ಬೆಳಕಾಗಿದ್ದೀರಿ. ಬೆಳಕಿನ ಮಕ್ಕಳಾಗಿ ಬಾಳಿರಿ. 9 ಬೆಳಕಿನ ಫಲವು ಎಲ್ಲಾ ಒಳ್ಳೆಯತನದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಇರುತ್ತದೆ. 10 ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬುದನ್ನು ಪರಿಶೋಧಿಸಿರಿ. 11 ನಿಷ್ಪ್ರಯೋಜಕವಾದ ಕತ್ತಲೆಯ ಕಾರ್ಯಗಳೊಂದಿಗೆ ಪಾಲುಗಾರರಾಗಿರದೆ ಅವುಗಳನ್ನು ಬೆಳಕಿಗೆ ತನ್ನಿರಿ. 12 ಆ ಅವಿಧೇಯರು ಗುಟ್ಟಾಗಿ ಮಾಡುವ ಕೃತ್ಯಗಳನ್ನು ಹೇಳುವುದಕ್ಕೂ ಅವಮಾನಕರವಾಗಿವೆ. 13 ಆದರೆ, ಬಹಿರಂಗವಾದವುಗಳೆಲ್ಲವೂ ಬೆಳಕಿನಿಂದ ಪ್ರಕಟವಾಗುತ್ತವೆ. ಎಲ್ಲವನ್ನೂ ಪ್ರಕಾಶಪಡಿಸುವಂಥದ್ದು ಬೆಳಕೇ. 14 ಆದ್ದರಿಂದ ಹೀಗೆ ಹೇಳಲಾಗಿದೆ:

“ನಿದ್ರೆ ಮಾಡುವವನೇ,
ಎಚ್ಚರವಾಗು, ಸತ್ತವರಿಂದ ಎದ್ದೇಳು,
ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”

15 ಆದಕಾರಣ ನೀವು ಹೇಗೆ ಜೀವಿಸಬೇಕೆಂದು ಜಾಗರೂಕರಾಗಿರಿ. ಅಜ್ಞಾನಿಗಳಂತಿರದೆ, ಜಾಣರಾಗಿ ಜೀವಿಸಿರಿ. 16 ಈ ದಿನಗಳು ಕೆಟ್ಟವುಗಳಾಗಿರುವುದರಿಂದ, ಸರ್ವ ಸದಾವಕಾಶಗಳನ್ನೂ ಸದ್ವಿನಿಯೋಗಿಸಿಕೊಳ್ಳಿರಿ. 17 ಆದಕಾರಣ ಬುದ್ಧಿಹೀನರಾಗಿರದೆ ಕರ್ತನ ಚಿತ್ತವೇನೆಂಬುದನ್ನು ತಿಳಿದವರಾಗಿರಿ. 18 ಮದ್ಯಪಾನ ಮಾಡಿ ಮತ್ತರಾಗಬೇಡಿರಿ. ಅದು ದುಷ್ಟತನಕ್ಕೆ ಎಡೆಮಾಡುತ್ತದೆ. ಆದರೆ ಪವಿತ್ರಾತ್ಮರಿಂದ ತುಂಬಿದವರಾಗಿದ್ದು,[a] 19 ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮನಿಂದಾದ ಹಾಡುಗಳಿಂದಲೂ ಪರಸ್ಪರ ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯಾಂತರಾಳದಿಂದ ಕರ್ತನಿಗೆ ಹಾಡಿ ಹರಸಿರಿ. 20 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿ ತಂದೆಯಾದ ದೇವರಿಗೆ, ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ಕೃತಜ್ಞತೆಯನ್ನು ಸಲ್ಲಿಸಿರಿ.

ವಿಶ್ವಾಸಿಗಳ ಕುಟುಂಬಕ್ಕೆ ಬುದ್ಧಿವಾದಗಳು
21 ಇದಲ್ಲದೆ ಕ್ರಿಸ್ತನ ಭಯಭಕ್ತಿಯಲ್ಲಿ ಒಬ್ಬರಿಗೊಬ್ಬರು ಅಧೀನರಾಗಿ ನಡೆದುಕೊಳ್ಳಿರಿ.

22 ಹೆಂಡತಿಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. 23 ಏಕೆಂದರೆ, ಕ್ರಿಸ್ತ ಯೇಸು ಸಭೆಗೆ ಶಿರಸ್ಸಾಗಿರುವ ಪ್ರಕಾರ ಗಂಡನು ಹೆಂಡತಿಗೆ ಶಿರಸ್ಸಾಗಿದ್ದಾನೆ. ಕ್ರಿಸ್ತ ಯೇಸು ತಮ್ಮ ಸಭೆ ಎಂಬ ದೇಹಕ್ಕೆ ರಕ್ಷಕರಾಗಿದ್ದಾರೆ. 24 ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮ ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.

25 ಗಂಡಂದಿರೇ, ಕ್ರಿಸ್ತ ಯೇಸು ಸಭೆಯನ್ನು ಪ್ರೀತಿಸಿ, ಅದಕ್ಕಾಗಿ ತಮ್ಮನ್ನು ತಾವೇ ಒಪ್ಪಿಸಿಕೊಟ್ಟಂತೆಯೇ ನೀವು ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. 26 ಕ್ರಿಸ್ತ ಯೇಸು ತಮ್ಮ ಸಭೆಯನ್ನು ವಾಕ್ಯದ ನೀರಿನ ಸ್ನಾನದಿಂದ ಪವಿತ್ರಗೊಳಿಸಿ, ಶುದ್ಧಮಾಡಿ, 27 ಅದನ್ನು ಕಳಂಕ, ಸುಕ್ಕು ಇಂಥದ್ದು ಯಾವುದೂ ಇಲ್ಲದೆ ಪರಿಶುದ್ಧವೂ ದೋಷವಿಲ್ಲದ್ದೂ ಆಗಿರುವ ಮಹಿಮೆಯುಳ್ಳ ಸಭೆಯನ್ನಾಗಿ ತಮ್ಮ ಮುಂದೆ ನಿಲ್ಲಿಸಿಕೊಳ್ಳಬೇಕೆಂದು ತಮ್ಮನ್ನೇ ಒಪ್ಪಿಸಿಕೊಟ್ಟರು. 28 ಗಂಡಂದಿರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವಂತೆಯೇ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುತ್ತಾನೆ. 29 ಏಕೆಂದರೆ, ಯಾರೂ ಸ್ವಂತ ಶರೀರವನ್ನು ಎಂದೂ ದ್ವೇಷಿಸುವುದಿಲ್ಲ, ಬದಲಿಗೆ ತಮ್ಮ ಶರೀರವನ್ನು ಪೋಷಿಸಿ ಸಂರಕ್ಷಿಸುತ್ತಾರೆ. ಅದೇ ಪ್ರಕಾರ ಕರ್ತ ಯೇಸು ಸಭೆಯನ್ನು ಪೋಷಿಸಿ, ಸಂರಕ್ಷಿಸುವವರಾಗಿದ್ದಾರೆ. 30 ನಾವು ಕ್ರಿಸ್ತ ಯೇಸುವಿನ ದೇಹದ ಅಂಗಗಳಾಗಿದ್ದೇವೆ. 31 “ಇದರ ನಿಮಿತ್ತದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಶರೀರವಾಗಿರುವರು.”[b] 32 ಈ ರಹಸ್ಯವು ಮಹತ್ತಾದದ್ದು. ಆದರೆ ನಾನು ಕ್ರಿಸ್ತನ ಹಾಗೂ ಸಭೆಯ ವಿಷಯವಾಗಿ ಮಾತನಾಡುತ್ತಿದ್ದೇನೆ. 33 ಆದರೂ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನನ್ನು ಪ್ರೀತಿಸುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. ಹೆಂಡತಿಯು ತನ್ನ ಗಂಡನನ್ನು ಗೌರವಿಸುವವಳಾಗಿರಬೇಕು.

<- ಎಫೆಸದವರಿಗೆ 4ಎಫೆಸದವರಿಗೆ 6 ->