14 ಕ್ರಿಸ್ತ ಯೇಸು ತಾವೇ ನಮ್ಮ ಸಮಾಧಾನವಾಗಿದ್ದು, ಎರಡು ಗುಂಪಿನವರನ್ನು ಒಂದು ಮಾಡಿ, ಅಗಲಿಸಿದ ವೈರತ್ವದ ಅಡ್ಡಗೋಡೆಯನ್ನು ತಮ್ಮ ಶರೀರದ ಮೂಲಕ ಕೆಡವಿಹಾಕಿದರು. 15 ಹೀಗೆ ಕ್ರಿಸ್ತ ಯೇಸು ತಮ್ಮ ದೇಹವನ್ನು ಶಿಲುಬೆಯಲ್ಲಿ ಸಮರ್ಪಿಸಿದ್ದರಿಂದ ನಿಯಮದ ಆಜ್ಞೆಗಳುಳ್ಳ ಶಾಸನಗಳನ್ನು ರದ್ದುಗೊಳಿಸಿದರು. ಈ ರೀತಿಯಾಗಿ ಇವೆರಡೂ ಗುಂಪಿನವರಿಂದ ಒಬ್ಬ ನೂತನ ಮಾನವತ್ವವನ್ನು ತಮ್ಮಲ್ಲಿ ಸೃಷ್ಟಿಸಿ ಸಮಾಧಾನವನ್ನು ಉಂಟುಮಾಡಿದರು. 16 ಶಿಲುಬೆಯ ಮರಣದ ಮೂಲಕ ಇವೆರಡೂ ಗುಂಪಿನವರಿಂದ ಒಂದೇ ದೇಹದವರನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿ, ಇದ್ದ ವೈರತ್ವವನ್ನು ಇಲ್ಲದಂತೆ ಮಾಡಿದರು. 17 ಇದಲ್ಲದೆ ಕ್ರಿಸ್ತ ಯೇಸುವು ಬಂದು ದೂರವಾಗಿದ್ದ ನಿಮಗೂ ಸಮೀಪವಾಗಿದ್ದ ನಮಗೂ ಸಮಾಧಾನವನ್ನು ಸಾರಿದರು. 18 ಏಕೆಂದರೆ ಕ್ರಿಸ್ತ ಯೇಸುವಿನ ಮೂಲಕ ನಾವೂ ನೀವೂ ಪವಿತ್ರಾತ್ಮ ದೇವರಿಂದ ತಂದೆಯ ಬಳಿಗೆ ಪ್ರವೇಶಿಸುವುದಕ್ಕೆ ಮಾರ್ಗವಾಯಿತು.
19 ಹೀಗಿರಲಾಗಿ, ನೀವು ಇನ್ನು ಮೇಲೆ ಪರಕೀಯರೂ ಪರದೇಶದವರೂ ಆಗಿರದೆ ದೇವಜನರೊಂದಿಗೆ ಜೊತೆ ನಾಗರಿಕರೂ ದೇವರ ಮನೆಯವರೂ ಆಗಿದ್ದೀರಿ. 20 ಕ್ರಿಸ್ತ ಯೇಸು ಎಂಬ ಮುಖ್ಯ ಮೂಲೆಗಲ್ಲಿನೊಂದಿಗೆ ಅಪೊಸ್ತಲರು ಹಾಗೂ ಪ್ರವಾದಿಗಳೆಂಬ ಅಸ್ತಿವಾರದ ಮೇಲೆ ನೀವು ಕಟ್ಟಲಾಗಿದ್ದೀರಿ. 21 ಕ್ರಿಸ್ತನಲ್ಲಿ ಕಟ್ಟಡವೆಲ್ಲವೂ ಒಂದಾಗಿ ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ. 22 ನೀವೂ ಸಹ ಆತ್ಮನ ಮೂಲಕ ಕ್ರಿಸ್ತನಲ್ಲಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ನಿರ್ಮಿತರಾಗುತ್ತಿದ್ದೀರಿ.
<- ಎಫೆಸದವರಿಗೆ 1ಎಫೆಸದವರಿಗೆ 3 ->- a ಅಥವಾ ಶಿಲುಬೆಯ ಮರಣದಿಂದ