9 ನಾನು ಇದನ್ನೆಲ್ಲಾ ನೋಡಿ, ಸೂರ್ಯನ ಕೆಳಗೆ ಮಾಡುವ ಪ್ರತಿಯೊಂದು ಕೆಲಸಕ್ಕೂ ನನ್ನ ಹೃದಯವನ್ನು ಪ್ರಯೋಗಿಸಿದ್ದೇನೆ. ಒಬ್ಬ ಮನುಷ್ಯನು ಇನ್ನೊಬ್ಬನ ಮೇಲೆ ತನ್ನ ಹಾನಿಗಾಗಿ ಅಧಿಕಾರ ನಡೆಸುವ ಕಾಲವೂ ಇದೆ. 10 ಇದಲ್ಲದೆ ದುರ್ಜನರು ಸತ್ತು ಸಮಾಧಿಯಾಗುವುದನ್ನೂ ನಾನು ನೋಡಿದ್ದೇನೆ. ಆದರೆ ಜನರು ಪರಿಶುದ್ಧ ಸ್ಥಳಕ್ಕೆ ಹೋಗಿ ಬಂದ ಆ ದುಷ್ಟರನ್ನು ಅವರಿದ್ದ ಪಟ್ಟಣದಲ್ಲಿ ಹೊಗಳುತ್ತಾರೆ[a]. ಇದೂ ಸಹ ನಿರರ್ಥಕವಾದದ್ದು.
11 ಏಕೆಂದರೆ ದುಷ್ಟ ಕೆಲಸಕ್ಕೆ ದಂಡನೆಯು ಕೂಡಲೇ ಆಗದಿರುವುದರಿಂದ ಮನುಷ್ಯರ ಹೃದಯವು ಅವರನ್ನು ಕೆಟ್ಟದ್ದು ಮಾಡುವ ಯುಕ್ತಿಯಲ್ಲಿಯೇ ತುಂಬಿರುವುದು. 12 ಪಾಪಿಯು ನೂರು ಸಾರಿ ಕೆಟ್ಟದ್ದನ್ನು ಮಾಡಿ, ಬಹುಕಾಲ ಬದುಕಿದರೂ ದೇವರಿಗೆ ಹೆದರಿ ದೈವಭಕ್ತಿಯುಳ್ಳವರಿಗೆ ಒಳ್ಳೆಯದಾಗುವುದೆಂದು ನಾನು ಬಲ್ಲೆನು. 13 ದುಷ್ಟರು ದೇವರಿಗೆ ಭಯಪಡುವುದಿಲ್ಲ. ಆದ್ದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ. ನೆರಳಿನ ಹಾಗಿರುವ ದುಷ್ಟರ ದಿನಗಳು ಹೆಚ್ಚುವುದಿಲ್ಲ.
14 ಭೂಮಿಯ ಮೇಲೆ ನಡೆಯುವ ಇನ್ನೊಂದು ವ್ಯರ್ಥ ಕಾರ್ಯವಿದು: ದುಷ್ಟರಿಗೆ ಆಗಬೇಕಾದ ಶಿಕ್ಷೆಯನ್ನು ನೀತಿವಂತರು ಅನುಭವಿಸುತ್ತಾರೆ. ನೀತಿವಂತರಿಗೆ ಆಗಬೇಕಾದ ಪ್ರತಿಫಲವನ್ನು ದುಷ್ಟರು ಅನುಭವಿಸುತ್ತಾರೆ. ಇದು ಸಹ ವ್ಯರ್ಥವೆಂದು ನಾನು ಹೇಳುತ್ತೇನೆ. 15 ಆದುದರಿಂದ ನಾನು ಸಂತೋಷವನ್ನು ಮೆಚ್ಚಿದೆನು. ಏಕೆಂದರೆ ಮನುಷ್ಯನಿಗೆ ಸೂರ್ಯನ ಕೆಳಗೆ ಕುಡಿಯುವುದೂ ತಿನ್ನುವುದೂ ಸಂತೋಷಪಡುವುದೇ ಹೊರತು ಬೇರೇನೂ ಒಳ್ಳೆಯದಿಲ್ಲ. ಸೂರ್ಯನ ಕೆಳಗೆ ದೇವರು ಮನುಷ್ಯನಿಗೆ ಕೊಡುವ ಜೀವನದ ದಿವಸಗಳಲ್ಲಿ ಅವನು ಪಡುವ ಕಷ್ಟಕ್ಕೆ ಸುಖಾನುಭವವು ಅವನಿಗೆ ಸೇರಿರುತ್ತದೆ.
16 ಜ್ಞಾನವನ್ನು ತಿಳಿದುಕೊಳ್ಳುವುದಕ್ಕೂ ಭೂಮಿಯ ಮೇಲೆ ಮಾಡುವ ಪರಿಶ್ರಮವನ್ನು ನೋಡುವುದಕ್ಕೂ ನಾನು ನನ್ನ ಹೃದಯವನ್ನು ಪ್ರಯೋಗಿಸಿದೆನು. ಜನರು ರಾತ್ರಿ ಹಗಲು ತಮ್ಮ ಕಣ್ಣುಗಳಿಗೆ ನಿದ್ರೆ ಹಚ್ಚಗೊಡದವರೂ ಇದ್ದಾರೆ. 17 ತರುವಾಯ ದೇವರ ಮಾಡುವ ಎಲ್ಲಾ ಕೆಲಸಗಳನ್ನು ನಾನು ನೋಡಿದೆನು. ಅದೇನೆಂದರೆ, ಸೂರ್ಯನ ಕೆಳಗೆ ಮಾಡುವ ದೇವರ ಕೆಲಸಗಳನ್ನು ಮನುಷ್ಯನು ಗ್ರಹಿಸಲಾರನು. ಮನುಷ್ಯನು ಅದನ್ನು ಹುಡುಕುವುದಕ್ಕೆ ಎಷ್ಟು ಕಷ್ಟಪಟ್ಟರೂ ಅದನ್ನು ಕಂಡುಕೊಳ್ಳಲಾರನು. ಹೌದು, ಜ್ಞಾನಿಯು ಸಹ ದೇವರು ಮಾಡುವುದನ್ನು ತಿಳಿದುಕೊಳ್ಳಲು ಯೋಚಿಸಿದರೂ ಅವನು ಅದನ್ನು ಕಂಡುಕೊಳ್ಳಲಾರನು.
<- ಪ್ರಸಂಗಿ 7ಪ್ರಸಂಗಿ 9 ->- a ಹೊಗಳುತ್ತಾರೆ ಪಟ್ಟಣದಲ್ಲಿ ಅವರ ಜ್ಞಾಪಕವೇ ಇಲ್ಲವಾಯಿತು