Link to home pageLanguagesLink to all Bible versions on this site
2
ಸುಖಭೋಗಗಳು ವ್ಯರ್ಥವಾದವುಗಳು
1 “ಈಗ ಬಾ, ಯಾವುದು ಒಳ್ಳೆಯದು ಎಂಬುದನ್ನು ಸುಖಭೋಗಗಳಿಂದ ನಿನ್ನನ್ನು ಪರೀಕ್ಷಿಸುವೆನು,” ಎಂದು ನನ್ನ ಮನಸ್ಸಿನಲ್ಲಿ ಹೇಳಿಕೊಂಡೆ. ಆದರೆ ಅದೂ ಕೂಡ ವ್ಯರ್ಥವಾದದ್ದೆಂದು ರುಜುವಾತಾಯಿತು. 2 “ನಗುವುದು ಮೂರ್ಖತನ, ಸುಖಭೋಗ ಏನನ್ನು ಸಾಧಿಸುತ್ತದೆ,” ಎಂದು ಹೇಳಿಕೊಂಡೆ. 3 ಆಕಾಶದ ಕೆಳಗೆ ಮನುಷ್ಯರು ಅಲ್ಪಾಯುಷ್ಯದಲ್ಲಿ ಏನು ಮಾಡುವುದು ಹಿತ ಎಂದು ನಾನು ತಿಳಿದುಕೊಳ್ಳಲು ಬಯಸಿದೆ. ನನ್ನ ಮನಸ್ಸು ಇನ್ನೂ ಜ್ಞಾನದಿಂದಿರುವಾಗಲೇ ದ್ರಾಕ್ಷಾರಸದಿಂದ ಸಂತೋಷ ಪಡೋಣ, ಮೂರ್ಖತನವನ್ನು ಅಪ್ಪಿಕೊಳ್ಳೋಣ ಎಂದುಕೊಂಡೆ.

4 ನಾನು ಮಹಾ ಯೋಜನೆಗಳನ್ನು ನಡೆಸಿದೆನು: ನಾನು ನನಗಾಗಿ ಮನೆಗಳನ್ನು ಕಟ್ಟಿಸಿಕೊಂಡೆನು. ನಾನು ದ್ರಾಕ್ಷಿತೋಟಗಳನ್ನು ನೆಟ್ಟೆನು. 5 ನಾನು ಉದ್ಯಾನವನಗಳನ್ನೂ, ತೋಟಗಳನ್ನೂ ಮಾಡಿಕೊಂಡು, ಅವುಗಳಲ್ಲಿ ಸಕಲ ವಿಧವಾದ ಹಣ್ಣಿನ ವೃಕ್ಷಗಳನ್ನು ನೆಟ್ಟೆನು. 6 ಬೆಳೆಯುವ ಗಿಡಗಳ ತೋಪುಗಳಿಗೆ ನೀರು ಹಾಯಿಸುವುದಕ್ಕೆ ನಾನು ಜಲಾಶಯಗಳನ್ನು ಮಾಡಿಕೊಂಡೆನು. 7 ನನಗೆ ದಾಸ, ದಾಸಿಯರನ್ನು ಕೊಂಡುಕೊಂಡೆನು. ನನ್ನ ಮನೆಯಲ್ಲಿ ಜನಿಸಿದ ಇತರ ಗುಲಾಮರು ಸಹ ಇದ್ದರು. ನನಗಿಂತ ಮುಂಚೆ ಯೆರೂಸಲೇಮಿನಲ್ಲಿ, ಇದ್ದವರೆಲ್ಲರಿಗಿಂತಲೂ ಹೆಚ್ಚಾಗಿ ಬಹಳ ಸಂಪತ್ತು ಉಳ್ಳವನಾಗಿ ಹೆಚ್ಚು ದನಕುರಿಗಳ ಮಂದೆಗಳನ್ನು ಹೊಂದಿದೆನು. 8 ನಾನು ಬೆಳ್ಳಿಬಂಗಾರಗಳನ್ನು, ಅರಸರ ಮತ್ತು ಪ್ರಾಂತಗಳ ವಿಶೇಷ ಸಂಪತ್ತನ್ನು ಸಂಗ್ರಹಿಸಿಕೊಂಡೆನು. ಗಾಯಕ, ಗಾಯಕಿಯರನ್ನು ಮತ್ತು ಮನುಷ್ಯರಿಗೆ ಭೋಗವಿಲಾಸಕ್ಕಾಗಿ ಅನೇಕ ಉಪಪತ್ನಿಯರನ್ನು ಸಂಪಾದಿಸಿಕೊಂಡೆನು. 9 ಹೀಗೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದ ಎಲ್ಲರಿಗಿಂತಲೂ ನಾನು ಹೆಚ್ಚು ಅಭಿವೃದ್ಧಿಹೊಂದಿ, ಶ್ರೀಮಂತನಾದೆನು. ಇದೆಲ್ಲದರಲ್ಲಿ ನನ್ನ ಜ್ಞಾನವು ನನ್ನಲ್ಲಿ ನೆಲೆಯಾಗಿತ್ತು.

10 ನನ್ನ ಕಣ್ಣು ಬಯಸಿದ್ದೆಲ್ಲವನ್ನು ಅದರಿಂದ ಹಿಂತೆಗೆಯಲಿಲ್ಲ,
ಯಾವ ಸಂತೋಷಕ್ಕಾಗಿಯೂ ನನ್ನ ಹೃದಯವನ್ನು ನಾನು ತಡೆಯಲಿಲ್ಲ.
ನನ್ನ ಎಲ್ಲಾ ಪ್ರಯಾಸದಲ್ಲಿ ನನ್ನ ಹೃದಯವು ಸಂತೋಷಿಸಿತು.
ಇದು ನನ್ನ ಎಲ್ಲಾ ಪ್ರಯಾಸದಿಂದ ನನಗೆ ಬಂದ ಬಹುಮಾನ.
11 ನನ್ನ ಕೈಗಳು ನಡೆಸಿದವುಗಳೆಲ್ಲವನ್ನೂ
ನಾನು ಸಾಧಿಸಲು ಪ್ರಯಾಸಪಟ್ಟದ್ದನ್ನೂ ಪರಿಶೀಲಿಸಿ ನೋಡಿದೆ.
ಗಾಳಿಯನ್ನು ಬೆನ್ನಟ್ಟಿದಂತೆ ಎಲ್ಲವೂ ವ್ಯರ್ಥವಾಗಿತ್ತು.
ಸೂರ್ಯನ ಕೆಳಗೆ ಯಾವುದೂ ಲಾಭಕರವಾಗಿ ಕಾಣಲಿಲ್ಲ.
ಜ್ಞಾನವೂ ಮೂಢತನವೂ ವ್ಯರ್ಥ
12 ಅನಂತರ ಜ್ಞಾನವನ್ನೂ ಮನಗುಂದುವಿಕೆಯನ್ನೂ ಮೂಡತೆಯನ್ನೂ
ಮತ್ತೆ ಯೋಚಿಸುವುದಕ್ಕೆ ನಾನು ತಿರುಗಿಕೊಂಡೆನು.
ಈಗಾಗಲೇ ಮಾಡಿದ್ದನ್ನು ಬಿಟ್ಟು, ಅರಸನ ತರುವಾಯ
ಬರುವವನು ಹೊಸದಾಗಿ ಏನು ಮಾಡಬಲ್ಲನು?
13 ಆಗ ಬೆಳಕು ಕತ್ತಲೆಗಿಂತ ಶ್ರೇಷ್ಠವಾಗಿರುವಂತೆ,
ಜ್ಞಾನವು ಮೂಢತನಕ್ಕಿಂತ ಶ್ರೇಷ್ಠವಾಗಿದೆ ಎಂದು ನಾನು ಕಂಡೆನು.
14 ಜ್ಞಾನಿಯ ಕಣ್ಣು ಅವನ ತಲೆಯಲ್ಲಿರುತ್ತದೆ.
ಆದರೆ ಮೂಢನು ಕತ್ತಲೆಯಲ್ಲಿ ನಡೆಯುತ್ತಾನೆ.
ಇವರಿಬ್ಬರಿಗೂ ಒಂದೇ ಗತಿಯು ಸಂಭವಿಸುವುದೆಂದೂ
ನಾನು ಗ್ರಹಿಸಿಕೊಂಡೆನು.

15 ಆಗ ನಾನು ನನ್ನ ಮನಸ್ಸಿನಲ್ಲಿ,

“ಮೂಢನಿಗೆ ಸಂಭವಿಸುವ ಗತಿಯೂ ನನಗೂ ಸಂಭವಿಸುತ್ತದೆ.
ನಾನು ಜ್ಞಾನಿಯಾಗುವುದರಿಂದ ಲಾಭವೇನು?”
“ಇದು ಸಹ ವ್ಯರ್ಥವೇ,” ಎಂದುಕೊಂಡೆನು.
16 ಮೂಢನನ್ನು ಹೇಗೋ ಹಾಗೆಯೇ ಜ್ಞಾನಿಯನ್ನೂ
ಜನರು ಬಹಳ ದಿನಗಳವರೆಗೆ ಜ್ಞಾಪಕಮಾಡಿಕೊಳ್ಳುವುದಿಲ್ಲ.
ಇವರಿಬ್ಬರನ್ನೂ ಮರೆತುಹೋದ ದಿನಗಳು ಈಗಾಗಲೇ ಬಂದಿವೆ.
ಮೂಢನಂತೆ ಜ್ಞಾನಿಯೂ ಸಹ ಸಾಯಲೇಬೇಕು.
ಶ್ರಮೆಯೂ ವ್ಯರ್ಥ
17 ಸೂರ್ಯನ ಕೆಳಗೆ ನಡೆಯುವ ಕಾರ್ಯವು ನನಗೆ ದುಃಖಕರವಾಗಿ ತೋರಿತು. ಆದಕಾರಣ ನಾನು ನನ್ನ ಜೀವನವನ್ನು ಹಗೆ ಮಾಡಿದೆನು. ಗಾಳಿಯನ್ನು ಬೆನ್ನಟ್ಟುವಂತೆ ಎಲ್ಲವೂ ವ್ಯರ್ಥವಾಗಿದೆ. 18 ನನ್ನ ತರುವಾಯ ಬರುವ ಮನುಷ್ಯನಿಗೆ ನಾನು ಇದನ್ನೆಲ್ಲಾ ಬಿಟ್ಟುಬಿಡಬೇಕಾದ್ದರಿಂದ ಸೂರ್ಯನ ಕೆಳಗೆ ಪಟ್ಟ ನನ್ನ ಎಲ್ಲಾ ಪ್ರಯಾಸವನ್ನು ನಾನು ಹಗೆ ಮಾಡಿದೆನು. 19 ನನ್ನ ನಂತರ ಬರುವವನು ಜ್ಞಾನಿಯೋ ಮೂಢನೋ ಯಾರಿಗೆ ಗೊತ್ತು? ಆದರೂ ನಾನು ಪಟ್ಟ ಎಲ್ಲಾ ಪ್ರಯಾಸದ ಮೇಲೆಯೂ ಸೂರ್ಯನ ಕೆಳಗೆ ನಾನು ತೋರ್ಪಡಿಸಿಕೊಂಡದರ ಮೇಲೆಯೂ ಅವನು ಆಳುವನು. ಇದು ವ್ಯರ್ಥವೇ. 20 ಆದ್ದರಿಂದ ಸೂರ್ಯನ ಕೆಳಗೆ ಪ್ರಯಾಸಪಟ್ಟ ಎಲ್ಲಾ ಪ್ರಯಾಸದ ವಿಷಯವಾಗಿ, ನನ್ನ ಹೃದಯವು ನಿರಾಶೆಗೊಳ್ಳಲು ಪ್ರಾರಂಭಿಸಿತು. 21 ಒಬ್ಬ ಮನುಷ್ಯನು ಜ್ಞಾನದಲ್ಲಿಯೂ ತಿಳುವಳಿಕೆಯಲ್ಲಿಯೂ ಕೌಶಲಯುತವಾಗಿಯೂ ತನ್ನ ಕೆಲಸ ಮಾಡಬಹುದು. ಅನಂತರ ತನಗಿರುವುದೆಲ್ಲವನ್ನು ಪ್ರಯಾಸಪಡದೆ ಇದ್ದ ಮನುಷ್ಯನಿಗೆ ಪಾಲಾಗಿ ಅವನು ಬಿಟ್ಟುಬಿಡಬೇಕಾಗುತ್ತದೆ. ಇದೂ ವ್ಯರ್ಥವೂ ದೊಡ್ಡ ವ್ಯಸನವೂ ಆಗಿವೆ. 22 ಸೂರ್ಯನ ಕೆಳಗೆ ತಾನು ಪ್ರಯಾಸಪಟ್ಟ ತನ್ನ ಹೃದಯದ ಆಯಾಸಕ್ಕಾಗಿಯೂ ತನ್ನ ಎಲ್ಲಾ ಪ್ರಯಾಸಕ್ಕಾಗಿಯೂ ಮನುಷ್ಯನಿಗೆ ಏನು ಸಿಕ್ಕುತ್ತದೆ? 23 ಅವನ ದಿನಗಳೆಲ್ಲಾ ವ್ಯಸನವೇ. ಅವನ ಪ್ರಯಾಸವು ದುಃಖವೇ. ರಾತ್ರಿಯಲ್ಲಿಯೂ ಅವನ ಮನಸ್ಸಿಗೆ ವಿಶ್ರಾಂತಿಯಿಲ್ಲ. ಇದೂ ಕೂಡ ವ್ಯರ್ಥವೇ.

24 ಒಬ್ಬ ವ್ಯಕ್ತಿ ತನ್ನ ಪ್ರಯಾಸದಲ್ಲಿ ತೃಪ್ತಿಹೊಂದುವಂತೆ ತಿಂದು ಕುಡಿಯುವುದಕ್ಕಿಂತ ಶ್ರೇಷ್ಠವಾದದ್ದು ಮನುಷ್ಯನಿಗೆ ಯಾವುದೂ ಇಲ್ಲ. ಇದೂ ಕೂಡ ದೇವರ ಕೈಯಿಂದಲೇ ಆಗುತ್ತದೆ ಎಂದು ನಾನು ಕಂಡೆನು. 25 ದೇವರಿಲ್ಲದೆ ಯಾರಿಗೆ ಊಟ ದೊರಕಿತು? ದೇವರಿಲ್ಲದೆ ಯಾರು ಸುಖಾನುಭವ ಹೊಂದುವರು? 26 ಏಕೆಂದರೆ ದೇವರು ಮೆಚ್ಚಿದವರಿಗೆ ಅವರು ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ದಯಪಾಲಿಸುತ್ತಾರೆ. ಆದರೆ ದೇವರು ತಮಗೆ ಮೆಚ್ಚುಗೆಯಾದವನಿಗೆ ಕೊಡತಕ್ಕ ಐಶ್ವರ್ಯವನ್ನು ಕೂಡಿಸಿಡುವ ಪ್ರಯಾಸವನ್ನು ಮಾತ್ರ ಪಾಪಿಗೆ ಕೊಡುತ್ತಾರೆ. ಏಕೆಂದರೆ ಇದು ಸಹ ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ.

<- ಪ್ರಸಂಗಿ 1ಪ್ರಸಂಗಿ 3 ->