ಪ್ರಸಂಗಿ
1
ಸಮಸ್ತವೂ ವ್ಯರ್ಥ
1 ದಾವೀದನ ಮಗನೂ ಯೆರೂಸಲೇಮಿನ ಅರಸನೂ ಆದ ಪ್ರಸಂಗಿಯ ಮಾತುಗಳು:
2 “ವ್ಯರ್ಥಗಳಲ್ಲಿ ವ್ಯರ್ಥ! ವ್ಯರ್ಥಗಳಲ್ಲಿ ವ್ಯರ್ಥ!”
ಎಂದು ಪ್ರಸಂಗಿ ಹೇಳುತ್ತಾನೆ.
“ಸಮಸ್ತವೂ ವ್ಯರ್ಥ!
ಎಲ್ಲವೂ ವ್ಯರ್ಥ.”
3 ಸೂರ್ಯನ ಕೆಳಗೆ ಮನುಷ್ಯನು ಪಡುವ
ಎಲ್ಲಾ ಪ್ರಯಾಸಗಳಿಂದ ಅವನಿಗೆ ಲಾಭವೇನು?
4 ಸಂತತಿಗಳು ಬರುತ್ತವೆ, ಸಂತತಿಗಳು ಹೋಗುತ್ತವೆ;
ಆದರೆ ಭೂಮಿಯು ಶಾಶ್ವತವಾಗಿ ಉಳಿಯುತ್ತದೆ.
5 ಸೂರ್ಯನು ಉದಯಿಸುತ್ತಾನೆ, ಸೂರ್ಯನು ಮುಳುಗುತ್ತಾನೆ.
ತಾನು ಉದಯಿಸುವ ಸ್ಥಳಕ್ಕೆ ಆತುರದಿಂದ ಹಿಂದಿರುಗುತ್ತಾನೆ.
6 ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ.
ಉತ್ತರದ ಕಡೆಗೆ ತಿರುಗುತ್ತದೆ.
ಸುತ್ತುತ್ತಾ, ಸುತ್ತುತ್ತಾ ಹೋಗುತ್ತದೆ.
ಆ ಗಾಳಿಯು ತನ್ನ ಸುತ್ತಳತೆಗಳ ಪ್ರಕಾರ ಹಿಂದಿರುಗುತ್ತದೆ.
7 ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತವೆ.
ಆದರೂ ಸಮುದ್ರವು ತುಂಬುವುದಿಲ್ಲ.
ನದಿಗಳು ಎಲ್ಲಿಂದ ಬಂದಿವೆಯೋ,
ಆ ಸ್ಥಳಕ್ಕೆ ಅವು ಹಿಂದಿರುಗುತ್ತವೆ.
8 ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿವೆ.
ಇದನ್ನು ಮನುಷ್ಯನು ವಿವರಿಸಲಾರನು.
ನೋಡುವುದರಿಂದ ಕಣ್ಣು ತೃಪ್ತಿಗೊಳ್ಳದು,
ಕೇಳುವುದರಿಂದ ಕಿವಿಯು ದಣಿಯದು.
9 ಇದ್ದದ್ದೇ ಇರುವುದು,
ನಡೆದದ್ದೇ ನಡೆಯುವುದು.
ಸೂರ್ಯನ ಕೆಳಗೆ ಹೊಸದಾದದ್ದು ಯಾವದೂ ಇಲ್ಲ.
10 “ನೋಡು, ಇದು ಹೊಸದು,” ಎಂದು
ಯಾವ ವಿಷಯವಾಗಿ ಹೇಳಬಹುದೋ?
ಅದು ನಮಗಿಂತ ಮುಂಚೆ ಇದ್ದದ್ದು,
ಪುರಾತನ ಕಾಲದಿಂದ ಇದ್ದದ್ದೇ.
11 ಹಿಂದಿನ ಕಾಲದ ಜನರ ಜ್ಞಾಪಕವು ಈಗಿನವರಿಗಿಲ್ಲ.
ಮುಂದಿನ ಕಾಲದಲ್ಲಿ ಬರುವವರ ಜ್ಞಾಪಕವು
ಅವುಗಳ ಮುಂದಿನ ಕಾಲದ
ಜನರಿಗೆ ಇರುವುದಿಲ್ಲ.
ಜ್ಞಾನವು ವ್ಯರ್ಥವಾದದ್ದು
12 ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲರ ಮೇಲೆ ಅರಸನಾಗಿದ್ದೆ. 13 ಆಕಾಶದ ಕೆಳಗೆ ನಡೆಯುವ ಕೆಲಸಗಳನ್ನೆಲ್ಲಾ ಜ್ಞಾನದಿಂದ ವಿಚಾರಿಸಿ, ವಿಮರ್ಶಿಸುವುದಕ್ಕೆ ನಾನು ನನ್ನ ಮನಸ್ಸು ಮಾಡಿದೆ. ದೇವರು ಮಾನವರ ಮೇಲೆ ಈ ಕಷ್ಟಕರವಾದ ಪ್ರಯಾಸವನ್ನು ಹೊರಿಸಿದ್ದಾರೆ. 14 ಸೂರ್ಯನ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ನಾನು ನೋಡಿದ್ದೇನೆ. ಗಾಳಿಯನ್ನು ಹಿಂದಟ್ಟುವಂತೆ ಎಲ್ಲವೂ ವ್ಯರ್ಥ.
15 ವಕ್ರವಾದದ್ದನ್ನು ಸರಿಮಾಡುವುದಕ್ಕೆ ಆಗುವುದಿಲ್ಲ.
ಇಲ್ಲದ್ದನ್ನು ಲೆಕ್ಕಿಸುವುದು ಅಸಾಧ್ಯ.
16 ನನ್ನಷ್ಟಕ್ಕೆ ನಾನೇ ಹೀಗೆಂದುಕೊಂಡೆನು, “ನೋಡು, ಯೆರೂಸಲೇಮಿನಲ್ಲಿ ನನಗಿಂತ ಮೊದಲು ಆಳಿದವರಿಗಿಂತ ನಾನು ಹೆಚ್ಚು ಜ್ಞಾನವನ್ನು ಸಂಪಾದಿಸಿದ್ದೇನೆ. ಹೌದು, ಜ್ಞಾನದ ಹಾಗೂ ತಿಳುವಳಿಕೆಯ ಅನುಭವ ನನಗಿದೆ.” 17 ಆಗ ಜ್ಞಾನವನ್ನೂ ಮನಗುಂದುವಿಕೆಯನ್ನೂ ಬುದ್ಧಿಹೀನತೆಯನ್ನೂ ತಿಳಿದುಕೊಳ್ಳುವಂತೆ ನಾನು ಮನಸ್ಸಿಟ್ಟೆನು, ಅದರ ಜೊತೆಗೆ ಇದು ಸಹ ಗಾಳಿಯನ್ನು ಬೆನ್ನಟ್ಟಿದಂತೆ, ಎಂದು ನಾನು ಅರಿತುಕೊಂಡೆನು.
18 ಏಕೆಂದರೆ ಬಹು ಜ್ಞಾನವಿದ್ದಲ್ಲಿ ಬಹು ಸಂಕಟ,