6 ಹೀಗಿರುವುದರಿಂದ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ಕೈಗೊಂಡು, ಅವರ ಮಾರ್ಗಗಳಲ್ಲಿ ನಡೆದು ಅವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. 7 ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಒಳ್ಳೆಯ ದೇಶಕ್ಕೆ ಬರಮಾಡುತ್ತಾರೆ. ಅದು ನೀರಿನ ಹಳ್ಳಗಳೂ, ತಗ್ಗುಗಳಲ್ಲಿಯೂ, ಬೆಟ್ಟದಲ್ಲಿಯೂ, ಉಕ್ಕುವ ಬುಗ್ಗೆಗಳೂ ಇರುವ ದೇಶವಾಗಿರುತ್ತದೆ. 8 ಆ ದೇಶದಲ್ಲಿ ಗೋಧಿಯೂ, ಜವೆಗೋಧಿಯೂ, ದ್ರಾಕ್ಷೆಯೂ, ಅಂಜೂರ ಮರಗಳೂ, ದಾಳಿಂಬೆಗಳೂ ಇರುತ್ತವೆ. ಅದು ಓಲಿವ್ ಎಣ್ಣೆಯೂ, ಜೇನೂ ಉಳ್ಳ ದೇಶವೇ. 9 ಆ ದೇಶದಲ್ಲಿ ನಿಮಗೆ ಆಹಾರಕ್ಕೆ ಕೊರತೆ ಇರುವುದಿಲ್ಲ. ಅಲ್ಲಿ ಯಾವುದರ ಕೊರತೆ ನಿಮಗೆ ಆಗದು. ಅದರ ಕಲ್ಲುಗಳಲ್ಲಿ ಕಬ್ಬಿಣವನ್ನೂ, ಅದರ ಬೆಟ್ಟಗಳಲ್ಲಿ ತಾಮ್ರದ ಗಣಿಗಳನ್ನೂ ಅಗೆಯಬಹುದು.
10 ನೀವು ತಿಂದು ತೃಪ್ತಿ ಹೊಂದಿದಾಗ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಒಳ್ಳೆಯ ದೇಶದಲ್ಲಿ ಅವರನ್ನು ಸ್ತುತಿಸಬೇಕು. 11 ನಾನು ಈ ಹೊತ್ತು ನಿಮಗೆ ಕೊಡುವ ದೇವರ ಆಜ್ಞೆಗಳನ್ನೂ ನಿಯಮಗಳನ್ನೂ ತೀರ್ಪುಗಳನ್ನೂ ಕೈಕೊಳ್ಳದವರೂ, ಯೆಹೋವ ದೇವರನ್ನು ಮರೆಯದವರೂ ಆಗದಂತೆ ನೋಡಿಕೊಳ್ಳಿರಿ. 12 ನೀವು ತಿಂದು ತೃಪ್ತಿಹೊಂದಿ, ಒಳ್ಳೆಯ ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಮಾಡುವಾಗಲೂ, 13 ನಿಮ್ಮ ಪಶು ಕುರಿಗಳು ಹೆಚ್ಚಿದಾಗಲೂ, ಬೆಳ್ಳಿಬಂಗಾರ ನಿಮಗೆ ಹೆಚ್ಚಿದಾಗಲೂ, ನಿಮಗಿರುವ ಆಸ್ತಿಯೆಲ್ಲವೂ ಹೆಚ್ಚುತ್ತಿರುವಾಗ, 14 ನಿಮ್ಮ ಹೃದಯವು ಗರ್ವಗೊಂಡು, ನಿಮ್ಮನ್ನು ಈಜಿಪ್ಟ್ ದೇಶದ ದಾಸತ್ವದ ಮನೆಯೊಳಗಿಂದ ಹೊರಗೆ ಬರಮಾಡಿದಂಥ ನಿಮ್ಮ ದೇವರಾದ ಯೆಹೋವ ದೇವರನ್ನೇ ಮರೆತುಬಿಡಬೇಡಿರಿ. 15 ದೇವರು ಅಗ್ನಿಸರ್ಪಗಳೂ, ಚೇಳುಗಳೂ ತುಂಬಿದ ಮತ್ತು ನೀರಿಲ್ಲದ ಆ ಭಯಂಕರವಾದ ವಿಶಾಲ ಮರುಭೂಮಿಯಲ್ಲಿ ನಿಮ್ಮನ್ನು ನಡೆಸಿ, ಗಟ್ಟಿಯಾದ ಬಂಡೆಯೊಳಗಿಂದ ನಿಮಗೆ ನೀರು ಬರಮಾಡಿದರು. 16 ನಿಮ್ಮನ್ನು ದೀನತ್ವಕೆ ಒಳಪಡಿಸಿ, ಪರೀಕ್ಷಿಸಿದ ನಂತರ, ಕಡೆಯಲ್ಲಿ ನಿಮಗೆ ಒಳ್ಳೆಯದನ್ನು ಮಾಡುವಂತೆ ನಿಮ್ಮ ಪಿತೃಗಳು ಅರಿಯದ ಮನ್ನವನ್ನು ಮರುಭೂಮಿಯಲ್ಲಿ ನಿಮಗೆ ಪೋಷಿಸಿದರು. 17 ನಿಮ್ಮ ದೇವರಾದ ಯೆಹೋವ ದೇವರನ್ನು ಮರೆತು, “ನಮ್ಮ ಹಸ್ತ ಬಲ ಸಾಮರ್ಥ್ಯವೇ ನಮಗೆ ಈ ಆಸ್ತಿಯನ್ನು ಸಂಪಾದಿಸಿತು,” ಎಂದು ನಿಮ್ಮ ಹೃದಯದಲ್ಲಿ ಹೇಳಿಕೊಳ್ಳದ ಹಾಗೆ ನೋಡಿಕೊಳ್ಳಿರಿ. 18 ನಿಮ್ಮ ದೇವರಾದ ಯೆಹೋವ ದೇವರನ್ನು ಜ್ಞಾಪಕಮಾಡಿಕೊಳ್ಳಿರಿ. ಅವರೇ ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ತಮ್ಮ ಒಡಂಬಡಿಕೆಯನ್ನು ಸ್ಥಾಪಿಸುವಂತೆ ಇಂದು ನೀವು ಇಷ್ಟು ಆಸ್ತಿಯನ್ನು ಸಂಪಾದಿಸುವ ಸಾಮರ್ಥ್ಯವನ್ನು ನಿಮಗೆ ಕೊಟ್ಟಿದ್ದಾರೆ.
19 ಒಂದು ವೇಳೆ ನೀವು ನಿಮ್ಮ ಯೆಹೋವ ದೇವರನ್ನು ಮರೆತು, ಬೇರೆ ದೇವರುಗಳನ್ನು ಹಿಂಬಾಲಿಸಿ, ಅವುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ, ನಿಶ್ಚಯವಾಗಿ ನಾಶವಾಗುವಿರೆಂದು ನಿಮಗೆ ವಿರೋಧವಾಗಿ ಈ ಹೊತ್ತು ಸಾಕ್ಷಿ ಹೇಳುತ್ತೇನೆ. 20 ನೀವು ನಿಮ್ಮ ಯೆಹೋವ ದೇವರ ಮಾತಿಗೆ ವಿಧೇಯರಾಗದ ಕಾರಣ ಅವರು ನಿಮ್ಮ ಮುಂದೆ ನಾಶಮಾಡುವ ಇತರ ಜನಾಂಗಗಳ ಹಾಗೆಯೇ ನೀವೂ ನಾಶವಾಗಿಹೋಗುವಿರಿ.
<- ಧರ್ಮೋಪದೇಶಕಾಂಡ 7ಧರ್ಮೋಪದೇಶಕಾಂಡ 9 ->