Link to home pageLanguagesLink to all Bible versions on this site
31
ಮೋಶೆಯ ಉತ್ತರಾಧಿಕಾರಿಯಾಗಿ ಯೆಹೋಶುವನು
1 ಆಗ ಮೋಶೆ ಹೋಗಿ ಇಸ್ರಾಯೇಲರಿಗೆಲ್ಲಾ ಈ ಮಾತುಗಳನ್ನು ಹೇಳಿದನು: 2 “ನಾನು ಈ ಹೊತ್ತು ನೂರ ಇಪ್ಪತ್ತು ವರ್ಷದವನಾಗಿದ್ದೇನೆ. ಇನ್ನು ಮುಂದೆ ನಿಮ್ಮನ್ನು ಮುನ್ನಡೆಸಲು ನನಗೆ ಸಾಧ್ಯವಾಗುತ್ತಿಲ್ಲ. ಇದಲ್ಲದೆ ಯೆಹೋವ ದೇವರು ನನಗೆ, ‘ನೀನು ಈ ಯೊರ್ದನನ್ನು ದಾಟುವುದಿಲ್ಲ,’ ಎಂದು ಹೇಳಿದ್ದಾರೆ. 3 ನಿಮ್ಮ ದೇವರಾದ ಯೆಹೋವ ದೇವರು ತಾವೇ ನಿಮ್ಮ ಮುಂದೆ ಹೋಗುವರು. ಅವರು ಆ ಜನಾಂಗಗಳನ್ನು ನಿಮ್ಮ ಮುಂದೆ ಸೋಲಿಸುವರು. ನೀವು ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವಿರಿ. ಯೆಹೋವ ದೇವರು ಹೇಳಿದ ಪ್ರಕಾರ ಯೆಹೋಶುವನು ನಿಮ್ಮ ಮುಂದೆ ಹೋಗುವನು. 4 ಯೆಹೋವ ದೇವರು ಅಮೋರಿಯರ ಅರಸನಾದ ಸೀಹೋನನಿಗೂ, ಓಗನಿಗೂ, ಅವರ ದೇಶಕ್ಕೂ ಮಾಡಿದ ಪ್ರಕಾರ ಆ ಜನಾಂಗಗಳನ್ನು ದಂಡಿಸುವರು. 5 ಯೆಹೋವ ದೇವರು ಅವರನ್ನು ನಿಮಗೆ ಒಪ್ಪಿಸಿಕೊಡುವಾಗ, ನಾನು ನಿಮಗೆ ಆಜ್ಞಾಪಿಸಿದಂತೆ ನೀವು ಅವರಿಗೆ ಮಾಡಬೇಕು. 6 ಶಕ್ತಿಶಾಲಿಗಳಾಗಿರಿ, ಧೈರ್ಯವಾಗಿರಿ, ಭಯಪಡಬೇಡಿರಿ, ಅವರಿಗೆ ಹೆದರಬೇಡಿರಿ. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ತಾವೇ ನಿಮ್ಮ ಮುಂದೆ ಹೋಗುತ್ತಾರೆ. ಅವರು ನಿಮ್ಮನ್ನು ಕೈಬಿಡುವುದಿಲ್ಲ, ತೊರೆಯುವುದೂ ಇಲ್ಲ.”

7 ಆಗ ಮೋಶೆಯು ಯೆಹೋಶುವನನ್ನು ಕರೆದು, ಸಮಸ್ತ ಇಸ್ರಾಯೇಲಿನ ಮುಂದೆ ಅವನಿಗೆ, “ಶಕ್ತಿಶಾಲಿಯಾಗಿರು, ಧೈರ್ಯವಾಗಿರು. ಏಕೆಂದರೆ ನೀನು ಈ ಜನರ ಸಂಗಡ ಹೋಗಿ ಯೆಹೋವ ದೇವರು ಅವರ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶದಲ್ಲಿ ಸೇರಿಸಬೇಕು. ನೀನು ಅವರಿಗೆ ಅದನ್ನು ಸೊತ್ತಾಗಿ ಹಂಚಿಕೊಡಬೇಕು. 8 ಯೆಹೋವ ದೇವರು ತಾವೇ ನಿನ್ನ ಮುಂದೆ ಹೋಗುತ್ತಾರೆ. ಅವರು ನಿನ್ನ ಸಂಗಡ ಇರುವರು, ಅವರು ನಿನ್ನನ್ನು ತೊರೆಯುವುದಿಲ್ಲ, ಮರೆತುಬಿಡುವುದಿಲ್ಲ. ನೀನು ಭಯಪಡಬೇಡ, ಅಂಜಿಕೊಳ್ಳಬೇಡ,” ಎಂದು ಹೇಳಿದನು.

ದೇವರ ನಿಯಮದ ಪಠಣ
9 ಇದಲ್ಲದೆ ಮೋಶೆಯು ಈ ನಿಯಮವನ್ನು ಬರೆದು, ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವಂಥ ಲೇವಿಯ ಪುತ್ರರಾದ ಯಾಜಕರಿಗೂ, ಇಸ್ರಾಯೇಲಿನ ಎಲ್ಲಾ ಹಿರಿಯರಿಗೂ ಒಪ್ಪಿಸಿದನು. 10 ಅನಂತರ ಮೋಶೆಯು ಅವರಿಗೆ, “ಪ್ರತಿ ಏಳು ವರ್ಷ ಕೊನೆಯಲ್ಲಿರುವ ಬಿಡುಗಡೆಯ ಪರಿಶುದ್ಧವಾದ ವರ್ಷದಲ್ಲಿ ಅಂದರೆ, ಗುಡಾರಗಳ ಹಬ್ಬದಲ್ಲಿ 11 ಇಸ್ರಾಯೇಲಿನವರೆಲ್ಲರು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ, ಅವರು ಆಯ್ದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಂದಾಗ, ನೀವು ಈ ನಿಯಮವನ್ನು ಇಸ್ರಾಯೇಲಿನವರೆಲ್ಲರ ಮುಂದೆ ಜನರು ಕೇಳುವ ಹಾಗೆ ಓದಬೇಕು. 12 ಜನರನ್ನು ಅಂದರೆ, ಪುರುಷರನ್ನೂ ಸ್ತ್ರೀಯರನ್ನೂ ಮಕ್ಕಳನ್ನೂ ನಿಮ್ಮ ಊರುಗಳಲ್ಲಿರುವ ಪರದೇಶಿಯರನ್ನೂ ಕೂಡಿಸಬೇಕು. ಅವರು ಕೇಳಿ ಕಲಿತು, ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಟ್ಟು, ಈ ನಿಯಮದ ವಾಕ್ಯಗಳನ್ನೆಲ್ಲಾ ಕೈಗೊಂಡು ನಡೆಯುವ ಹಾಗೆ, ಅವರೆಲ್ಲರನ್ನು ಒಂದು ಕಡೆ ಕೂಡಿಸಬೇಕು. 13 ದೇವರ ಈ ನಿಯಮವನ್ನು ತಿಳಿಯದಿರುವ ಅವರ ಮಕ್ಕಳು ಸಹ ಕೇಳಿ, ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ಬದುಕುವ ದಿವಸಗಳೆಲ್ಲಾ ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಡುವುದಕ್ಕೆ ಕಲಿತುಕೊಳ್ಳಿರಿ, ಎಂದು ಅವರಿಗೆ ಆಜ್ಞಾಪಿಸಿ ಹೇಳಬೇಕು,” ಎಂದನು.
ಇಸ್ರಾಯೇಲರ ತಿರುಗಿ ಬೀಳುವಿಕೆ ಮುಂಚಿತವಾಗಿ ತಿಳಿಸಿದ್ದು
14 ಇದಲ್ಲದೆ ಯೆಹೋವ ದೇವರು ಮೋಶೆಗೆ, “ಇಗೋ, ನೀನು ಸಾಯುವ ದಿನಗಳು ಸಮೀಪವಾದವು. ಯೆಹೋಶುವನನ್ನು ಕರೆದು ನೀವು ದೇವದರ್ಶನ ಗುಡಾರದಲ್ಲಿ ನಿಂತುಕೊಳ್ಳಿರಿ. ಆಗ ಅವನಿಗೆ ಅಧಿಕಾರ ಕೊಡುವೆನು,” ಎಂದರು. ಆ ಪ್ರಕಾರವೆ ಮೋಶೆಯೂ, ಯೆಹೋಶುವನೂ ಹೋಗಿ ದೇವದರ್ಶನ ಗುಡಾರದಲ್ಲಿ ನಿಂತುಕೊಂಡರು.

15 ಆಗ ಯೆಹೋವ ದೇವರು ಗುಡಾರದೊಳಗೆ ಮೇಘ ಸ್ತಂಭದಲ್ಲಿ ಕಾಣಿಸಿಕೊಂಡರು. ಆ ಮೇಘಸ್ತಂಭವು ಗುಡಾರದ ಬಾಗಿಲಿನ ಮೇಲೆ ನಿಂತಿತು. 16 ಆಗ ಯೆಹೋವ ದೇವರು ಮೋಶೆಗೆ, “ನೀನು ಮೃತನಾಗಿ, ನಿನ್ನ ಪಿತೃಗಳ ಸಂಗಡ ಸೇರುವಿ. ಈ ಜನರು ದೇವದ್ರೋಹಿಗಳಾಗಿ, ಅವರು ಪ್ರವೇಶಿಸುವ ದೇಶದ ಅನ್ಯದೇವರುಗಳನ್ನು ಅನುಸರಿಸಿ ಪೂಜೆ ಮಾಡಿ, ನನ್ನನ್ನು ಬಿಟ್ಟು ನಾನು ಅವರ ಸಂಗಡ ಮಾಡಿದ ಒಡಂಬಡಿಕೆಯನ್ನು ಮೀರುವರು. 17 ಆ ದಿವಸದಲ್ಲಿ ನಾನು ಅವರ ಮೇಲೆ ಕೋಪಗೊಂಡು ಅವರನ್ನು ಬಿಟ್ಟುಬಿಟ್ಟು, ನನ್ನ ಮುಖವನ್ನು ಅವರಿಗೆ ಮರೆಮಾಡುವೆನು. ವಿರೋಧಿಗಳು ಅವರನ್ನು ನುಂಗಿಬಿಡುವರು. ಬಹಳ ಕೇಡುಗಳೂ, ಇಕ್ಕಟ್ಟುಗಳೂ ಅವರಿಗೆ ಸಂಭವಿಸುವುದು. ಆ ದಿವಸದಲ್ಲಿ ಅವರು, ‘ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ನಮಗೆ ಕೇಡುಗಳು,’ ಎಂದು ಹೇಳುವರು. 18 ಅವರು ಮಾಡಿದ ಎಲ್ಲಾ ದುಷ್ಕೃತ್ಯದ ನಿಮಿತ್ತವೂ, ಅನ್ಯದೇವರುಗಳ ಕಡೆಗೆ ತಿರುಗಿದ್ದರಿಂದಲೂ ನಾನು ಆ ದಿವಸದಲ್ಲಿ ನನ್ನ ಮುಖವನ್ನು ಖಂಡಿತ ಮರೆಮಾಡುವೆನು.

19 “ಹೀಗಿರುವುದರಿಂದ ಈಗ ಈ ಹಾಡನ್ನು ಬರೆದುಕೊಳ್ಳಿರಿ. ಇಸ್ರಾಯೇಲರಲ್ಲಿ ಈ ಹಾಡು ನನಗೆ ಸಾಕ್ಷಿಯಾಗಿರುವ ಹಾಗೆ ಅದನ್ನು ಅವರಿಗೆ ಬಾಯಿಪಾಠ ಮಾಡಿಸು. 20 ನಾನು ಅವರ ಪಿತೃಗಳಿಗೆ ಪ್ರಮಾಣ ಮಾಡಿದಂಥ, ಹಾಲೂ ಜೇನೂ ಹರಿಯುವಂಥ ದೇಶಕ್ಕೆ ಅವರನ್ನು ತರಲಾಗಿ, ಅವರು ತಿಂದು ತೃಪ್ತರಾಗಿ ಕೊಬ್ಬಿದವರಾದಾಗ, ಅವರು ಅನ್ಯದೇವರುಗಳ ಕಡೆಗೆ ತಿರುಗಿಕೊಂಡು, ಅವುಗಳನ್ನು ಪೂಜಿಸಿ, ನನಗೆ ಕೋಪವನ್ನೆಬ್ಬಿಸಿ, ನನ್ನ ಒಡಂಬಡಿಕೆಯನ್ನು ಮೀರುವರು. 21 ಬಹಳ ಕೇಡುಗಳೂ ವಿಪತ್ತುಗಳೂ ಅವರಿಗೆ ಸಂಭವಿಸುವಾಗ, ಈ ಹಾಡು ಅವರಿಗೆ ವಿರೋಧ ಸಾಕ್ಷಿಯಾಗಿ ಉತ್ತರಕೊಡುವುದು. ಏಕೆಂದರೆ ಅದು ಅವರ ಸಂತತಿಯ ಬಾಯಿಯಲ್ಲಿಂದ ಮರೆತು ಹೋಗುವುದಿಲ್ಲ. ನಾನು ಪ್ರಮಾಣ ಮಾಡಿದ ದೇಶದಲ್ಲಿ ಅವರನ್ನು ತರುವುದಕ್ಕಿಂತ ಮುಂಚೆ ಅವರು ಈ ಹೊತ್ತು ಮಾಡುವ ದುರಾಲೋಚನೆಗಳನ್ನು ನಾನು ಬಲ್ಲೆನು.” 22 ಆದ್ದರಿಂದ ಮೋಶೆ ಅದೇ ದಿವಸದಲ್ಲಿ ಈ ಹಾಡನ್ನು ಬರೆದು ಇಸ್ರಾಯೇಲರಿಗೆ ಕಲಿಸಿದನು.

23 ಅವನು ನೂನನ ಮಗನಾದ ಯೆಹೋಶುವನಿಗೆ ಆಜ್ಞಾಪಿಸಿ, “ಶೂರನಾಗಿರು, ಧೈರ್ಯವಾಗಿರು, ಏಕೆಂದರೆ ನೀನು ಇಸ್ರಾಯೇಲರನ್ನು ನಾನು ಅವರಿಗೆ ಪ್ರಮಾಣ ಮಾಡಿದ ದೇಶಕ್ಕೆ ತರುವೆ, ನಾನು ನಿನ್ನ ಸಂಗಡ ಇರುವೆನು,” ಎಂದು ಹೇಳಿದನು.

24 ಇದಲ್ಲದೆ ಮೋಶೆ ಈ ನಿಯಮದ ವಾಕ್ಯಗಳನ್ನು ಗ್ರಂಥದಲ್ಲಿ ಬರೆದು ತೀರಿಸಿದಾಗ, 25 ಮೋಶೆ ಯೆಹೋವ ದೇವರು ಒಡಂಬಡಿಕೆಯ ಮಂಜೂಷವನ್ನು ಹೊರುವ ಲೇವಿಯರಿಗೆ, 26 “ದೇವರ ನಿಯಮದ ಈ ಗ್ರಂಥವನ್ನು ತೆಗೆದುಕೊಂಡು ನಿಮ್ಮ ದೇವರಾದ ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಬಳಿಯಲ್ಲಿ ಇಡಿರಿ. ಅದು ನಿಮಗೆ ವಿರೋಧವಾದ ಸಾಕ್ಷಿಯಾಗಿ ಅಲ್ಲಿ ಇರಲಿ. 27 ಏಕೆಂದರೆ ನಿಮ್ಮ ದ್ರೋಹವನ್ನೂ, ನಿಮ್ಮ ಹಟಮಾರಿತನವನ್ನೂ ನಾನು ಬಲ್ಲೆನು. ಈ ಹೊತ್ತು ನಾನು ಇನ್ನೂ ನಿಮ್ಮ ಸಂಗಡ ಬದುಕಿರುವಾಗಲೇ ಯೆಹೋವ ದೇವರಿಗೆ ದ್ರೋಹ ಮಾಡಿದವರಾದಿರಿ. ನಾನು ಸತ್ತಮೇಲೆ ಇನ್ನೇನಾಗುವುದು? 28 ನಿಮ್ಮ ಗೋತ್ರಗಳ ಎಲ್ಲಾ ಹಿರಿಯರನ್ನೂ, ನಿಮ್ಮ ಅಧಿಕಾರಿಗಳನ್ನೂ ನನ್ನ ಬಳಿಗೆ ಸೇರಿಸಿರಿ. ಆಗ ಈ ಮಾತುಗಳನ್ನು ಅವರು ಕೇಳುವ ಹಾಗೆ ಆಕಾಶವನ್ನೂ, ಭೂಮಿಯನ್ನೂ ಸಾಕ್ಷಿಗೆ ಕರೆಯುವೆನು. 29 ಏಕೆಂದರೆ ನಾನು ಸತ್ತಮೇಲೆ ನೀವು ಪೂರ್ಣವಾಗಿ ನಿಮ್ಮನ್ನು ನೀವೇ ಕೆಡಿಸಿಕೊಂಡು, ನಾನು ನಿಮಗೆ ಆಜ್ಞಾಪಿಸಿದ ಮಾರ್ಗದಿಂದ ತೊಲಗಿ ಹೋಗುವಿರೆಂದು ನಾನು ಬಲ್ಲೆನು. ನೀವು ಯೆಹೋವ ದೇವರ ಮುಂದೆ ಕೆಟ್ಟದ್ದನ್ನು ಮಾಡಿ, ನಿಮ್ಮ ಕ್ರಿಯೆಗಳಿಂದ ಅವರಿಗೆ ಕೋಪವನ್ನೆಬ್ಬಿಸುವದರಿಂದ ನಿಮಗೆ ಕೇಡು ಸಂಭವಿಸುವುದು,” ಎಂದು ಹೇಳಿದನು.

ಮೋಶೆಯ ಗೀತ
30 ಆಗ ಮೋಶೆ ಇಸ್ರಾಯೇಲ್ ಸಮೂಹಕ್ಕೆ ಕೇಳುವ ಹಾಗೆ ಈ ಹಾಡಿನ ಮಾತುಗಳನ್ನು ಪ್ರಾರಂಭದಿಂದ ಕೊನೆಯವರೆಗೆ ಹೇಳಿದನು.

<- ಧರ್ಮೋಪದೇಶಕಾಂಡ 30ಧರ್ಮೋಪದೇಶಕಾಂಡ 32 ->