Link to home pageLanguagesLink to all Bible versions on this site
30
ದೇವರ ಕಡೆಗೆ ತಿರುಗಿಕೊಂಡರೆ ಸಮೃದ್ಧಿ
1 ನಾನು ನಿಮ್ಮ ಮುಂದೆ ಇಟ್ಟ ಈ ಎಲ್ಲಾ ಆಶೀರ್ವಾದವೂ, ಶಾಪವೂ, ನಿಮಗೆ ಸಂಭವಿಸಿದಾಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಚದರಿಸಿರುವ ಎಲ್ಲಾ ಜನಾಂಗಗಳ ಮಧ್ಯದಲ್ಲಿಯೇ ನೀವು ಇವುಗಳನ್ನು ನೆನಪಿಗೆ ತಂದುಕೊಳ್ಳಬೇಕು. 2 ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಂಡು, ನೀವೂ, ನಿಮ್ಮ ಮಕ್ಕಳೂ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಮಾತುಗಳಿಗೆ, ನೀವು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ದೇವರಿಗೆ ವಿಧೇಯರಾಗಬೇಕು. 3 ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಸೆರೆಯಿಂದ ಬಿಡಿಸಿ, ನಿಮ್ಮ ಮೇಲೆ ಕನಿಕರಿಸಿ, ಅವರು ನಿಮ್ಮನ್ನು ಚದರಿಸಿದ ಎಲ್ಲಾ ಜನಾಂಗಗಳೊಳಗಿಂದ ನಿಮ್ಮನ್ನು ಕೂಡಿಸುವರು. 4 ನಿಮ್ಮಲ್ಲಿ ಯಾರಾದರೂ ಭೂಮಿಯ ಕಟ್ಟಕಡೆಯವರೆಗೂ ಚದರಿ ಹೋಗಿದ್ದರೂ, ಅಲ್ಲಿಂದ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ಸಹ ಕರೆದುತರುವರು. 5 ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಪಿತೃಗಳು ಸ್ವಾಧೀನ ಮಾಡಿಕೊಂಡ ದೇಶಕ್ಕೆ ನಿಮ್ಮನ್ನು ತರುವರು. ನೀವು ಅದನ್ನು ಸ್ವಾಧೀನಮಾಡಿಕೊಳ್ಳುವಿರಿ. ದೇವರು ನಿಮ್ಮ ಪಿತೃಗಳಿಗಿಂತಲೂ ನಿಮ್ಮನ್ನು ಸಮೃದ್ಧಿಗೊಳಿಸಿ ಹೆಚ್ಚಿಸುವರು. 6 ಆಗ ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಪ್ರೀತಿಸಿ, ನೀವು ಬದುಕಿ ಬಾಳುವಂತೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಹೃದಯವನ್ನೂ, ನಿಮ್ಮ ಸಂತತಿಯ ಹೃದಯವನ್ನೂ ಪರಿಚ್ಛೇದಿಸುವರು. 7 ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ಆ ಶಾಪಗಳನ್ನೆಲ್ಲಾ ನಿಮ್ಮ ಶತ್ರುಗಳ ಮೇಲೆಯೂ, ನಿಮ್ಮನ್ನು ಹಿಂಸಿಸಿದ ನಿಮ್ಮ ಹಗೆಯವರ ಮೇಲೆಯೂ ಬರಮಾಡುವರು. 8 ಆದರೆ ನೀವು ಪುನಃ ಯೆಹೋವ ದೇವರ ಮಾತನ್ನು ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳಂತೆ ನಡೆಯುವಿರಿ. 9 ಇದಲ್ಲದೆ ಯೆಹೋವ ದೇವರು ನಿಮ್ಮನ್ನು ನಿಮ್ಮ ಎಲ್ಲಾ ಕೈಕೆಲಸದಲ್ಲಿಯೂ, ನಿಮ್ಮ ಗರ್ಭದ ಫಲದಲ್ಲಿಯೂ, ನಿಮ್ಮ ಪಶುಗಳ ಫಲದಲ್ಲಿಯೂ, ನಿಮ್ಮ ಭೂಮಿಯ ಫಲದಲ್ಲಿಯೂ ಅತ್ಯಂತ ಅಭಿವೃದ್ಧಿಯನ್ನು ಮಾಡುವರು. ಯೆಹೋವ ದೇವರು ನಿಮ್ಮ ಪಿತೃಗಳಲ್ಲಿ ಸಂತೋಷಿಸಿದ ಹಾಗೆ ನಿಮ್ಮಲ್ಲಿಯೂ ಸಂತೋಷಿಸುವರು. 10 ಆದರೆ ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳಿ, ಈ ನಿಯಮದ ಗ್ರಂಥದಲ್ಲಿ ಬರೆದಿರುವ ಅವರ ಆಜ್ಞಾತೀರ್ಪುಗಳನ್ನು ಕಾಪಾಡಿ, ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಂಡರೆ, ನಿಮ್ಮಲ್ಲಿ ಸಂತೋಷಿಸುವರು.
ಜೀವವೂ ಮತ್ತು ಮರಣವೂ
11 ನಿಶ್ಚಯವಾಗಿ ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಆಜ್ಞೆಯು ನಿಮಗೆ ಕಠಿಣವಾದದ್ದಲ್ಲ; ದೂರವಾದದ್ದೂ ಅಲ್ಲ. 12 “ನಾವು ಅದನ್ನು ಕೈಗೊಳ್ಳುವಂತೆ ನಮಗೋಸ್ಕರ ಯಾರು ಆಕಾಶಕ್ಕೆ ಏರಿಹೋಗಿ, ಅದನ್ನು ತೆಗೆದುಕೊಂಡು ಬಂದು ನಮಗೆ ತಿಳಿಸುವರು?” ಎಂದು ನೀವು ಕೇಳುವಂತೆ, ಆ ವಾಕ್ಯವು ಆಕಾಶದಲ್ಲಿ ಇರುವಂಥದ್ದೂ ಅಲ್ಲ. 13 “ನಾವು ಅದನ್ನು ಕೈಗೊಳ್ಳುವಂತೆ ನಮಗೋಸ್ಕರ ಯಾರು ಸಮುದ್ರವನ್ನು ದಾಟಿ, ನಮಗೆ ತೆಗೆದುಕೊಂಡು ಬಂದು ಅದನ್ನು ತಿಳಿಸುವರು?” ಎಂದು ನೀವು ಕೇಳುವಂತೆ, ಆ ವಾಕ್ಯವು ಸಮುದ್ರದ ಆಚೆಯಲ್ಲಿ ಇರುವಂಥದ್ದೂ ಅಲ್ಲ. 14 ಆ ವಾಕ್ಯವು ನಿಮಗೆ ಬಹಳ ಸಮೀಪವಾಗಿದೆ. ಅದನ್ನು ಕೈಗೊಳ್ಳುವ ಹಾಗೆ ವಾಕ್ಯವು ನಿಮ್ಮ ಬಾಯಿಯಲ್ಲಿಯೂ ಹೃದಯದಲ್ಲಿಯೂ ಇದೆ.

15 ನೋಡಿರಿ, ನಾನು ಈ ಹೊತ್ತು ಜೀವ ಸಮೃದ್ಧಿಯನ್ನೂ, ಮರಣ ನಾಶನವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ. 16 ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಮಾರ್ಗಗಳಲ್ಲಿ ನಡೆದುಕೊಂಡು, ಅವರ ಆಜ್ಞಾತೀರ್ಪುಗಳನ್ನೂ, ಅನುಸರಿಸಬೇಕೆಂದು ಈ ಹೊತ್ತು ನಿಮಗೆ ಆಜ್ಞಾಪಿಸಿದ್ದೇನೆ. ಹಾಗೆ ಮಾಡಿದರೆ, ನೀವು ಬದುಕಿ ಹೆಚ್ಚುವಿರಿ. ನಿಮ್ಮ ದೇವರಾದ ಯೆಹೋವ ದೇವರು ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮನ್ನು ಆಶೀರ್ವದಿಸುವರು.

17 ಆದರೆ ನಿಮ್ಮ ಹೃದಯವು ತಿರುಗಿಬಿದ್ದು ನೀವು ಮಾತು ಕೇಳದೆ ಹೋದರೆ ಇಲ್ಲವೆ ಬೇರೆ ದೇವರುಗಳ ಕಡೆಗೆ ಸೆಳೆದವರಾಗಿ ಅಡ್ಡಬಿದ್ದು, ಅವುಗಳಿಗೆ ಸೇವೆ ಮಾಡಿದರೆ, 18 ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನನ್ನು ದಾಟಿ ಹೋಗುವ ದೇಶದಲ್ಲಿ ಬಹುಕಾಲ ಬಾಳದೆ, ನಾಶವಾಗಿಹೋಗುವಿರಿ ಎಂದು ಈ ಹೊತ್ತು ನಿಮಗೆ ಖಂಡಿತವಾಗಿ ತಿಳಿಸುತ್ತೇನೆ.

19 ನಾನು ಜೀವ ಮರಣವನ್ನೂ, ಆಶೀರ್ವಾದ ಶಾಪವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆಂಬುದಕ್ಕೆ ಆಕಾಶವನ್ನೂ, ಭೂಮಿಯನ್ನೂ ಈ ಹೊತ್ತು ನಿಮ್ಮ ಮೇಲೆ ಸಾಕ್ಷಿಗಳಾಗಿ ಕರೆಯುತ್ತೇನೆ. ಆದುದರಿಂದ ನೀವೂ, ನಿಮ್ಮ ಸಂತತಿಯೂ, ಬದುಕಿ ಬಾಳುವಂತೆ ಜೀವವನ್ನೇ ಆಯ್ದುಕೊಳ್ಳಿರಿ. 20 ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಮಾತನ್ನು ಕೇಳಿ, ಅವರನ್ನೇ ಹೊಂದಿಕೊಂಡಿರಿ. ಯೆಹೋವ ದೇವರು ನಿಮ್ಮ ಪಿತೃಗಳಾದ ಅಬ್ರಹಾಮನಿಗೂ, ಇಸಾಕನಿಗೂ, ಯಾಕೋಬನಿಗೂ ಕೊಡುತ್ತೇನೆಂದು ಪ್ರಮಾಣ ಮಾಡಿದ ಭೂಮಿಯಲ್ಲಿ ನೀವು ಬಹುಕಾಲ ವಾಸಮಾಡುವಿರಿ.

<- ಧರ್ಮೋಪದೇಶಕಾಂಡ 29ಧರ್ಮೋಪದೇಶಕಾಂಡ 31 ->