8 ಹೀಗಿರುವುದರಿಂದ ಈಗ ನಾನು ನಿಮಗೆ ಬೋಧಿಸುವ ಈ ಆಜ್ಞೆಯನ್ನೆಲ್ಲಾ ಕೈಗೊಳ್ಳಬೇಕು. ಆಗ ನೀವು ಬಲವುಳ್ಳವರಾಗಿ, ಈ ನದಿದಾಟಿ ಆಚೆಯಿರುವ ದೇಶವನ್ನು ಪ್ರವೇಶಿಸಿ, ಅದನ್ನು ಸ್ವಾಧೀನಮಾಡಿಕೊಳ್ಳುವಿರಿ. 9 ಯೆಹೋವ ದೇವರು ನಿಮ್ಮ ಪಿತೃಗಳಿಗೂ, ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣ ಮಾಡಿದ ಭೂಮಿಯಾಗಿರುವ ಆ ಹಾಲೂ ಜೇನೂ ಹರಿಯುವ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ. 10 ಏಕೆಂದರೆ ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶವು, ನೀವು ಹೊರಟ ಈಜಿಪ್ಟ್ ದೇಶದ ಹಾಗಲ್ಲ. ಅಲ್ಲಿ ನೀವು ಬೀಜವನ್ನು ಬಿತ್ತಿ, ಪಲ್ಯಗಳ ತೋಟವನ್ನು ಸಾಗುವಳಿ ಮಾಡುವ ರೀತಿಯಲ್ಲಿ ಏತವನ್ನು ತುಳಿದು, ನೀರು ಕಟ್ಟುತ್ತಿದ್ದಿರಿ. 11 ಆದರೆ ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶವು ಬೆಟ್ಟಗಳೂ, ತಗ್ಗುಗಳೂ ಉಳ್ಳ ದೇಶವೇ; ಆಕಾಶದ ಮಳೆಯಿಂದ ಅದಕ್ಕೆ ನೀರು ದೊರೆಯುವುದು. 12 ಅದು ನಿಮ್ಮ ದೇವರಾದ ಯೆಹೋವ ದೇವರು ಪರಾಮರಿಸುವ ದೇಶವೇ; ವರ್ಷದ ಆರಂಭದಿಂದ ವರ್ಷದ ಅಂತ್ಯದವರೆಗೂ ಯಾವಾಗಲೂ ನಿಮ್ಮ ದೇವರಾದ ಯೆಹೋವ ದೇವರ ಕಣ್ಣು ಅದರ ಮೇಲಿರುವುದು.
13 ಹಾಗಾದರೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ನನ್ನ ಆಜ್ಞೆಗಳನ್ನು ನೀವು ಲಕ್ಯಕೊಟ್ಟು ಕೇಳಿ, ನಿಮ್ಮ ದೇವರಾದ ಯೆಹೋವ ದೇವರನ್ನು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಪ್ರೀತಿಸಿ ಅವರಿಗೆ ಸೇವೆ ಮಾಡಿದರೆ, 14 ನೀವು ನಿಮ್ಮ ಧಾನ್ಯವನ್ನೂ, ಹೊಸ ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ಕೂಡಿಸುವಂತೆ ದೇವರು ನಿಮ್ಮ ಭೂಮಿಗೆ ಅದರ ತಕ್ಕ ಕಾಲದಲ್ಲಿ ಮಳೆಯನ್ನೂ, ಮುಂಗಾರು ಹಿಂಗಾರುಗಳನ್ನೂ ಕೊಡುವರು. 15 ನಿಮ್ಮ ದನಕರುಗಳಿಗೆ ಬೇಕಾದಷ್ಟು ಹುಲ್ಲನ್ನು ನಿಮ್ಮ ಹೊಲದಲ್ಲಿ ಕೊಡುವರು. ನೀವು ಆಹಾರದಿಂದ ತೃಪ್ತರಾಗುವಿರಿ.
16 ನಿಮ್ಮ ಹೃದಯವು ಮರಳುಗೊಂಡು ನೀವು ದಾರಿತಪ್ಪಿ ಬೇರೆ ದೇವರುಗಳನ್ನು ಆರಾಧಿಸಿ ಅಡ್ಡಬೀಳದಂತೆ ಎಚ್ಚರವಾಗಿರಿ. 17 ಇಲ್ಲದಿದ್ದರೆ, ಯೆಹೋವ ದೇವರ ಕೋಪವು ನಿಮ್ಮ ಮೇಲೆ ಉರಿಯಲು ಅವರು ಮಳೆಯಾಗದಂತೆ ಮಾಡುವರು. ಭೂಮಿಯು ತನ್ನ ಬೆಳೆಯನ್ನು ಕೊಡದಂತೆ ಆಕಾಶವನ್ನು ಮುಚ್ಚಿಬಿಡುವರು. ಯೆಹೋವ ದೇವರು ನಿಮಗೆ ಕೊಡುವ ಆ ಒಳ್ಳೆಯ ದೇಶದಲ್ಲಿ ನೀವು ಬೇಗ ನಾಶವಾಗಿಹೋಗುವಿರಿ, ಎಚ್ಚರಿಕೆ. 18 ಈ ನನ್ನ ವಾಕ್ಯಗಳನ್ನು ನಿಮ್ಮ ಹೃದಯದಲ್ಲಿಯೂ, ಪ್ರಾಣಗಳಲ್ಲಿಯೂ ಇಟ್ಟುಕೊಳ್ಳಿರಿ. ಅವುಗಳನ್ನು ಗುರುತಾಗಿ ನಿಮ್ಮ ಕೈಗಳಿಗೆ ಕಟ್ಟಿಕೊಳ್ಳಿರಿ, ಅವು ನಿಮ್ಮ ಹಣೆಗೆ ಕಟ್ಟಿರಲಿ. 19 ನೀವು ನಿಮ್ಮ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯ ಮಾತನಾಡಿ, ಅವುಗಳನ್ನು ನಿಮ್ಮ ಮಕ್ಕಳಿಗೆ ಕಲಿಸಬೇಕು. 20 ಅವುಗಳನ್ನು ನಿಮ್ಮ ಮನೆಯ ನಿಲುವು ಪಟ್ಟಿಗಳ ಮೇಲೆಯೂ ನಿಮ್ಮ ಬಾಗಿಲುಗಳ ಮೇಲೆಯೂ ಬರೆಯಬೇಕು. 21 ಹೀಗೆ ಮಾಡಿದರೆ ನಿಮ್ಮ ದಿನಗಳೂ, ನಿಮ್ಮ ಮಕ್ಕಳ ದಿನಗಳೂ ಭೂಮಿಯಲ್ಲಿ ಆಕಾಶದ ದಿನಗಳು ನೆಲೆಯಾಗಿರುವ ಪ್ರಕಾರ, ಯೆಹೋವ ದೇವರು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶದಲ್ಲಿ ನೆಲೆಯಾಗಿರುವಿರಿ.
22 ನಾನು ನಿಮಗೆ ಆಜ್ಞಾಪಿಸುವ ಈ ಆಜ್ಞೆಯನ್ನೆಲ್ಲಾ ನೀವು ಎಚ್ಚರಿಕೆಯಿಂದ ಕಾಪಾಡಿ, ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಎಲ್ಲಾ ಮಾರ್ಗಗಳಲ್ಲಿ ನಡೆದು, ಅವರನ್ನು ಅಂಟಿಕೊಂಡರೆ, 23 ಯೆಹೋವ ದೇವರು ಆ ಜನಾಂಗಗಳನ್ನೆಲ್ಲಾ ನಿಮ್ಮ ಮುಂದೆ ಹೊರಡಿಸುವರು. ನೀವು ನಿಮಗಿಂತ ಬಲವುಳ್ಳ ದೊಡ್ಡ ಜನಾಂಗಗಳನ್ನು ಸ್ವಾಧೀನಮಾಡಿಕೊಳ್ಳುವಿರಿ. 24 ನೀವು ಹೆಜ್ಜೆ ಇಡುವ ಸ್ಥಳವೆಲ್ಲಾ ನಿಮ್ಮದಾಗುವುದು. ಮರುಭೂಮಿಯಿಂದ ಲೆಬನೋನಿನವರೆಗೂ, ಯೂಫ್ರೇಟೀಸ್ ನದಿಯಿಂದ ಪಶ್ಚಿಮ ಸಮುದ್ರದ ಅಂತ್ಯದವರೆಗೂ ನಿಮ್ಮ ಮೇರೆಯಾಗಿರುವುದು. 25 ಯಾರೂ ನಿಮ್ಮ ಮುಂದೆ ನಿಲ್ಲಲಾರರು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಹೇಳಿದ ಹಾಗೆ ನಿಮ್ಮ ಹೆದರಿಕೆಯನ್ನೂ, ದಿಗಿಲನ್ನೂ, ನೀವು ಸಂಚಾರ ಮಾಡುವ ಸಮಸ್ತ ದೇಶದ ಮೇಲೆ ಇಡುವರು.
26 ನಾನು ಈ ಹೊತ್ತು ಆಶೀರ್ವಾದವನ್ನೂ, ಶಾಪವನ್ನೂ ನಿಮ್ಮ ಮುಂದೆ ಇಡುತ್ತೇನೆ. 27 ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವಂಥ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳಿಗೆ ನೀವು ವಿಧೇಯರಾದರೆ, ಆಶೀರ್ವಾದವನ್ನು ಪಡೆದುಕೊಳ್ಳುವಿರಿ. 28 ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳಿಗೆ ವಿಧೇಯರಾಗದೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಮಾರ್ಗಕ್ಕೆ ಓರೆಯಾದರೆ, ನೀವು ತಿಳಿಯದ ಬೇರೆ ದೇವರುಗಳನ್ನು ಹಿಂಬಾಲಿಸಿದರೆ, ನಿಮಗೆ ಶಾಪವು ತಗಲುವುದು. 29 ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಪ್ರವೇಶಿಸುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಸೇರಿಸಿದಾಗ, ನೀವು ಗೆರಿಜೀಮ್ ಬೆಟ್ಟದ ಮೇಲೆ ಆಶೀರ್ವಾದವನ್ನೂ ಏಬಾಲ್ ಬೆಟ್ಟದ ಮೇಲೆ ಶಾಪವನ್ನೂ ಪ್ರಕಟಿಸಬೇಕು. 30 ಇವು ಯೊರ್ದನ್ ನದಿಯ ಆಚೆ ಸೂರ್ಯನು ಅಸ್ತಮಿಸುವ ದಿಕ್ಕಿನಲ್ಲಿ ಅರಾಬಾ ಪ್ರದೇಶದಲ್ಲಿ ಗಿಲ್ಗಾಲಿಗೆ ಎದುರಾಗಿರುವ ಬಯಲಿನೊಳಗೆ ಮೋರೆ ಎಂಬ ಮಹಾವೃಕ್ಷದ ಸಮೀಪ ವಾಸಮಾಡುವ ಕಾನಾನ್ಯರ ದೇಶದಲ್ಲಿ ಇರುತ್ತವೆ. 31 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶವನ್ನು ಸೇರಿ, ಸ್ವಾಧೀನಮಾಡಿಕೊಳ್ಳುವುದಕ್ಕೆ ನೀವು ಯೊರ್ದನ್ ನದಿಯನ್ನು ದಾಟಿ ಹೋಗಬೇಕು. ಆಗ ಅದನ್ನು ನೀವು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಮಾಡುವಾಗ, 32 ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಎಲ್ಲಾ ಆಜ್ಞಾವಿಧಿಗಳನ್ನು ಕಾಪಾಡಿ ನಡೆದುಕೊಳ್ಳಬೇಕು.
<- ಧರ್ಮೋಪದೇಶಕಾಂಡ 10ಧರ್ಮೋಪದೇಶಕಾಂಡ 12 ->