Link to home pageLanguagesLink to all Bible versions on this site
12
ಯುಗ ಸಮಾಪ್ತಿ
1 “ಆ ಕಾಲದಲ್ಲಿ ನಿನ್ನ ಜನರನ್ನು ಕಾಪಾಡುವುದಕ್ಕಾಗಿ ಮಹಾರಾಜಕುಮಾರನಾದ ಮೀಕಾಯೇಲನು ಏಳುವನು. ಮೊಟ್ಟಮೊದಲು ಜನಾಂಗ ಉಂಟಾದಂದಿನಿಂದ ಇಂದಿನವರೆಗೂ ಸಂಭವಿಸದಂತಹ ಸಂಕಟವು ಸಂಭವಿಸುವುದು. ಆಗ ನಿನ್ನ ಜನರೊಳಗೆ ಎಂದರೆ ಜೀವ ಪುಸ್ತಕದಲ್ಲಿ ಯಾರ ಹೆಸರು ಬರೆಯಲಾಗಿದೆಯೋ, ಅವರೆಲ್ಲರೂ ಬಿಡುಗಡೆಯಾಗುವರು. 2 ಭೂಮಿಯ ಧೂಳಿನೊಳಗೆ ನಿದ್ರೆ ಮಾಡುವವರಲ್ಲಿ ಅನೇಕರು ಎಚ್ಚತ್ತು, ಕೆಲವರು ನಿತ್ಯಜೀವವನ್ನೂ ಮತ್ತು ಕೆಲವರು ತಿರಸ್ಕೃತರಾಗಿ ನಿತ್ಯ ನಿಂದನೆಗೆ ಗುರಿಯಾಗುವರು. 3 ಜ್ಞಾನಿಗಳಾದವರು ಆಕಾಶದ ಕಾಂತಿಯ ಹಾಗೆಯೂ, ಅನೇಕರನ್ನು ನೀತಿಯ ಕಡೆಗೆ ತಿರುಗಿಸುವರು, ನಕ್ಷತ್ರಗಳ ಹಾಗೆ ಎಂದೆಂದಿಗೂ ಪ್ರಕಾಶಿಸುವರು, ನಿತ್ಯ ಅವಮಾನವನ್ನು ಅನುಭವಿಸುವರು. 4 ಆದರೆ ದಾನಿಯೇಲನೇ ನೀನು, ಅಂತ್ಯಕಾಲದವರೆಗೂ ಈ ಮಾತುಗಳನ್ನು ಮುಚ್ಚಿಡು; ಅವುಗಳನ್ನು ಬರೆದಿರುವ ಆ ಗ್ರಂಥಕ್ಕೆ ಮುದ್ರೆ ಹಾಕು. ಅನೇಕರು ಅತ್ತಿತ್ತ ಓಡಾಡುವರು, ಜ್ಞಾನವು ಹೆಚ್ಚಾಗುವುದು,” ಎಂದು ಹೇಳಿದನು.
 
5 ಆಗ ದಾನಿಯೇಲನೆಂಬ ನಾನು ನೋಡಿದೆನು. ಅವರಿಬ್ಬರಲ್ಲಿ ಒಬ್ಬನು ನದಿಯ ತೀರದ ಈ ಕೊನೆಗೂ, ಇನ್ನೊಬ್ಬನು ನದಿಯ ತೀರದ ಆ ಕೊನೆಗೂ ನಿಂತಿದ್ದರು. 6 ಅವರು ನದಿಯ ನೀರಿನ ಮೇಲೆ ನಿಂತು, ನಾರುಬಟ್ಟೆಯನ್ನು ಧರಿಸಿದ್ದ ಒಬ್ಬನಿಗೆ ಇನ್ನೊಬ್ಬನು, “ಈ ಆಶ್ಚರ್ಯದ ಅಂತ್ಯವು ಎಷ್ಟರವರೆಗೆ ಇರುವುದು?” ಎಂದು ಕೇಳಿದನು.

7 ನದಿಯ ನೀರಿನ ಮೇಲೆ ನಿಂತು ನಾರುಬಟ್ಟೆಯನ್ನು ಧರಿಸಿ ನಿಂತಿದ್ದ ಮನುಷ್ಯನು ತನ್ನ ಎಡಗೈಯನ್ನೂ ಬಲಗೈಯನ್ನೂ ಆಕಾಶದ ಕಡೆಗೆ ಎತ್ತಿ ಸದಾಕಾಲ ಜೀವಂತರಾಗಿರುವವರ ಮೇಲೆ ಆಣೆಯಿಟ್ಟು, “ಅದು ಒಂದುಕಾಲ, ಎರಡುಕಾಲ, ಅರ್ಧಕಾಲ ಕಳೆಯಬೇಕು; ಕೊನೆಗೆ ಪರಿಶುದ್ಧರ ಬಲವನ್ನು ಮುರಿದ ಮೇಲೆ ಈ ಕಾರ್ಯಗಳೆಲ್ಲ ಮುಕ್ತಾಯವಾಗುವುವು,” ಎಂಬುದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು.

8 ನಾನು ಅದನ್ನು ಕೇಳಿದೆನು, ಆದರೆ ಗ್ರಹಿಸಲಿಲ್ಲ. ಆಗ ನಾನು, “ನನ್ನ ಒಡೆಯನೇ, ಈ ಸಂಗತಿಗಳ ಅಂತ್ಯವೇನು?” ಎಂದು ಕೇಳಿದೆನು.

9 ಆಗ ಅವನು, “ದಾನಿಯೇಲನೇ, ನಿನ್ನ ದಾರಿಯಲ್ಲಿ ಹೋಗು, ಏಕೆಂದರೆ ಈ ಮಾತುಗಳು ಅಂತ್ಯಕಾಲದವರೆಗೂ ಮುಚ್ಚಿ, ಮುದ್ರಿತವಾಗಿವೆ. 10 ಅನೇಕರು ತಮ್ಮನ್ನು ಶುದ್ಧೀಕರಿಸಿ, ಶುಭ್ರಮಾಡಿಕೊಂಡು ಶೋಧಿತರಾಗುವರು. ಆದರೆ ದುಷ್ಟರು ದುಷ್ಟರಾಗಿಯೇ ಮುಂದುವರಿಯುವರು. ಯಾವ ದುಷ್ಟನೂ ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಬುದ್ಧಿವಂತರಾದವರು ಅರಿತುಕೊಳ್ಳುವರು.

11 “ಪ್ರತಿದಿನದ ಯಜ್ಞವು ಸಕಾಲಕ್ಕೆ ನಿಂತುಹೋಗುವುದು. ಆ ಹಾಳುಮಾಡುವ ಅಸಹ್ಯ ವಸ್ತುವು ಪ್ರತಿಷ್ಠಿತವಾದ ಮೇಲೆ, 1,290 ದಿನಗಳು ಕಳೆಯಬೇಕು. 12 1,335 ದಿನಗಳು ಬರುವವರೆಗೆ ಕಾದಿರುವವನೇ ಭಾಗ್ಯವಂತನು.

13 “ನೀನು ಅಂತ್ಯದವರೆಗೂ ನಿನ್ನ ಮಾರ್ಗದಲ್ಲಿ ಹೋಗು. ನೀನು ವಿಶ್ರಮಿಸಿಕೊಳ್ಳುವೆ ಮತ್ತು ದಿನಗಳ ಅಂತ್ಯದಲ್ಲಿ ನಿನಗೆ ಪಾಲಾಗಿ ಇಟ್ಟಿರುವ ಬಾಧ್ಯತೆಯನ್ನು ಸ್ವೀಕರಿಸಲು ಎದ್ದು ಬರುವೆ,” ಎಂದು ಹೇಳಿದನು.

<- ದಾನಿಯೇಲ 11