Link to home pageLanguagesLink to all Bible versions on this site
3
ಪೇತ್ರನು ಹುಟ್ಟುಕುಂಟನನ್ನು ಗುಣಪಡಿಸಿದ್ದು
1 ಒಂದು ಮಧ್ಯಾಹ್ನ ಮೂರು ಗಂಟೆಗೆ ಪ್ರಾರ್ಥನೆಯ ಸಮಯದಲ್ಲಿ ಪೇತ್ರ ಹಾಗೂ ಯೋಹಾನನು ದೇವಾಲಯಕ್ಕೆ ಹೋದರು. 2 ದೇವಾಲಯದೊಳಗೆ ಹೋಗುವವರಿಂದ ಭಿಕ್ಷೆ ಬೇಡಲು ಪ್ರತಿದಿನ “ಸುಂದರದ್ವಾರ” ಎಂದು ಕರೆಯಲಾಗುತ್ತಿದ್ದ ದೇವಾಲಯದ ದ್ವಾರದ ಬಳಿಯಲ್ಲಿ ಹುಟ್ಟುಕುಂಟನೊಬ್ಬನನ್ನು ಕೆಲವರು ಹೊತ್ತುಕೊಂಡು ಬಂದು ಬಿಡುತ್ತಿದ್ದರು. 3 ಅವನು ಪೇತ್ರ, ಯೋಹಾನರು ದೇವಾಲಯದೊಳಗೆ ಪ್ರವೇಶಿಸುತ್ತಿರುವುದನ್ನು ಕಂಡು, ಭಿಕ್ಷೆ ಬೇಡಿದನು. 4 ಪೇತ್ರ ಯೋಹಾನರಿಬ್ಬರೂ ಭಿಕ್ಷುಕನನ್ನು ನೇರವಾಗಿ ದೃಷ್ಟಿಸಿ ನೋಡಿದರು. ಪೇತ್ರನು ಭಿಕ್ಷುಕನಿಗೆ, “ನಮ್ಮನ್ನು ನೋಡು!” ಎಂದು ಹೇಳಿದನು. 5 ಅವರಿಂದ ಏನಾದರೂ ದೊರೆಯುವುದೆಂದು ನಿರೀಕ್ಷಿಸಿ ಅವನು ಅವರ ಕಡೆಗೆ ಲಕ್ಷ್ಯವಿಟ್ಟು ನೋಡಿದನು.

6 ಆಗ ಪೇತ್ರನು, “ಬೆಳ್ಳಿಬಂಗಾರ ನನ್ನಲ್ಲಿಲ್ಲ, ನನ್ನಲ್ಲಿರುವುದನ್ನು ನಿನಗೆ ಕೊಡುತ್ತೇನೆ. ನಜರೇತಿನ ಕ್ರಿಸ್ತ ಯೇಸುವಿನ ಹೆಸರಿನಲ್ಲಿ, ಎದ್ದು ನಡೆ,” ಎಂದು ಹೇಳಿ, 7 ಬಲಗೈ ಹಿಡಿದೆಬ್ಬಿಸಿದಾಗ ಕೂಡಲೇ ಆ ಮನುಷ್ಯನ ಪಾದ ಮತ್ತು ಹರಡುಗಳು ಬಲಗೊಂಡವು. 8 ಅವನು ಜಿಗಿದು ನಿಂತು ನಡೆದಾಡಲು ಪ್ರಾರಂಭಿಸಿದನು. ಆಮೇಲೆ ನಡೆಯುತ್ತಾ, ಕುಣಿಯುತ್ತಾ, ದೇವರ ಸ್ತೋತ್ರ ಮಾಡುತ್ತಾ, ಅವರೊಂದಿಗೆ ದೇವಾಲಯದೊಳಗೆ ಪ್ರವೇಶಿಸಿದನು. 9 ಅವನು ನಡೆಯುವುದನ್ನೂ ದೇವರ ಸ್ತೋತ್ರ ಮಾಡುತ್ತಿರುವುದನ್ನೂ ಜನರೆಲ್ಲರೂ ಕಂಡರು. 10 ಅವನು ದೇವಾಲಯದ “ಸುಂದರದ್ವಾರದ” ಬಳಿಯಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಮನುಷ್ಯನೇ ಎಂದು ಗುರುತಿಸಿದರು. ಅವನಿಗೆ ಸಂಭವಿಸಿದ್ದರ ಬಗ್ಗೆ ಅವರು ವಿಸ್ಮಯಗೊಂಡು ಬೆರಗಾದರು.

ನೋಡುತ್ತಿದ್ದ ಜನರೊಂದಿಗೆ ಪೇತ್ರನು ಮಾತನಾಡಿದ್ದು
11 ಭಿಕ್ಷುಕನು ಇನ್ನೂ ಪೇತ್ರ ಯೋಹಾನರೊಂದಿಗೆ ಇದ್ದಾಗ, ಆಶ್ಚರ್ಯಚಕಿತರಾದ ಜನರೆಲ್ಲರು ಅವರಿದ್ದ “ಸೊಲೊಮೋನನ ಮಂಟಪ” ಎಂದು ಕರೆಯಲಾಗುತ್ತಿದ್ದ ಸ್ಥಳಕ್ಕೆ ಓಡಿ ಬಂದರು. 12 ಜನರನ್ನು ಕಂಡು ಪೇತ್ರನು ಅವರಿಗೆ ಹೇಳಿದ ಮಾತುಗಳಿವು: “ಇಸ್ರಾಯೇಲಿನ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮ ಸ್ವಂತ ಬಲದಿಂದಾಗಲಿ, ಭಕ್ತಿಯಿಂದಾಗಲಿ ಈ ಮನುಷ್ಯನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಿ ನಮ್ಮ ಕಡೆಗೆ ಏಕೆ ನೋಡುತ್ತಿರುವಿರಿ? 13 ಅಬ್ರಹಾಮನ, ಇಸಾಕನ, ಯಾಕೋಬನ ದೇವರು, ನಮ್ಮ ಪಿತೃಗಳ ದೇವರು, ತಮ್ಮ ಸೇವಕರಾದ ಯೇಸುವನ್ನು ಮಹಿಮೆಪಡಿಸಿದ್ದಾರೆ. ಅವರನ್ನು ಬಿಡಿಸಬೇಕೆಂದು ಪಿಲಾತನು ನಿರ್ಣಯಿಸಿಕೊಂಡಿದ್ದರೂ ನೀವು ಯೇಸುವನ್ನು ಕೊಲ್ಲುವುದಕ್ಕೆ ಒಪ್ಪಿಸಿಕೊಟ್ಟು ಪಿಲಾತನ ಮುಂದೆ ಅವರನ್ನು ನಿರಾಕರಿಸಿದಿರಿ. 14 ಆದರೆ ನೀವು ಪವಿತ್ರರೂ ನೀತಿವಂತರೂ ಆಗಿರುವ ಯೇಸುವನ್ನು ನಿರಾಕರಿಸಿ ಆ ಕೊಲೆಗಾರನನ್ನು ನಿಮಗೆ ಬಿಡುಗಡೆ ಮಾಡಿಕೊಡಬೇಕೆಂದು ಕೇಳಿಕೊಂಡಿರಿ. 15 ಜೀವದ ಒಡೆಯನನ್ನು ನೀವು ಕೊಂದಿರಿ. ದೇವರಾದರೋ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರು. ಇದಕ್ಕೆ ನಾವೇ ಸಾಕ್ಷಿಗಳು. 16 ಯೇಸುವಿನ ನಾಮದಲ್ಲಿಟ್ಟ ವಿಶ್ವಾಸದಿಂದಲೇ ನೀವು ಕಂಡು ತಿಳಿದಿರುವ ಈ ಮನುಷ್ಯನು ಬಲಹೊಂದಿದ್ದಾನೆ. ಯೇಸುವಿನ ನಾಮವೂ ಅವರ ಮೂಲಕವಾಗಿ ಬರುವ ನಂಬಿಕೆಯೂ ಇವನಿಗೆ ಸಂಪೂರ್ಣ ಸ್ವಸ್ಥತೆಯನ್ನು ತಂದುಕೊಟ್ಟಿದೆ. ನೀವೆಲ್ಲರೂ ಇದನ್ನು ನೋಡಿದ್ದೀರಿ.

17 “ಈಗ, ಪ್ರಿಯರೇ, ನೀವು ಅಜ್ಞಾನದಿಂದ ಹಾಗೆ ವರ್ತಿಸಿದಿರೆಂದು ನನಗೆ ಗೊತ್ತು. ಹಾಗೆಯೇ ನಿಮ್ಮ ನಾಯಕರೂ ಮಾಡಿದರು. 18 ಆದರೆ ತಮ್ಮ ಕ್ರಿಸ್ತ ಯೇಸು ಹಿಂಸೆಗೊಳಗಾಗಬೇಕೆಂದು, ಎಲ್ಲಾ ಪ್ರವಾದಿಗಳ ಬಾಯಿಯ ಮುಖಾಂತರ ದೇವರು ಮುಂತಿಳಿಸಿದ್ದನ್ನು ಈ ರೀತಿ ನೆರವೇರಿಸಿದರು. 19 ಆದ್ದರಿಂದ ನಿಮ್ಮ ಪಾಪಗಳು ತೊಳೆದುಹೋಗುವಂತೆ ಪಶ್ಚಾತ್ತಾಪಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಿರಿ. ಆಗ ನಿಮ್ಮ ಪಾಪಗಳು ಪರಿಹಾರವಾಗಿ ಕರ್ತ ದೇವರಿಂದ ವಿಶ್ರಾಂತಿಯ ಕಾಲಗಳು ನಿಮಗೆ ಒದಗಿ ಬರುವವು. 20 ದೇವರು ನಿಮಗೋಸ್ಕರ ನೇಮಕವಾಗಿರುವ ಕ್ರಿಸ್ತ ಯೇಸುವನ್ನು ಕಳುಹಿಸಿಕೊಡುವರು. 21 ದೇವರು ತಮ್ಮ ಪವಿತ್ರ ಪ್ರವಾದಿಗಳ ಮುಖಾಂತರ ಬಹುಕಾಲದ ಹಿಂದೆಯೇ ವಾಗ್ದಾನಮಾಡಿದ ಪ್ರಕಾರ, ಅವರು ಸಮಸ್ತವನ್ನು ಪುನಃಸ್ಥಾಪಿಸಿದರು. ಆ ಕಾಲ ಬರುವವರೆಗೆ ಕ್ರಿಸ್ತ ಯೇಸು ಪರಲೋಕದಲ್ಲಿಯೇ ಇರುವರು. 22 ಮೋಶೆಯು ಹೇಳಿದ್ದೇನೆಂದರೆ: ‘ನಿಮ್ಮ ಕರ್ತದೇವರು ನಿಮ್ಮ ಸ್ವಂತ ಸಹೋದರರೊಳಗಿಂದ ನನ್ನಂಥ ಒಬ್ಬ ಪ್ರವಾದಿಯನ್ನು ನಿಮಗಾಗಿ ಎಬ್ಬಿಸುವರು. ಅವರು ನಿಮಗೆ ಹೇಳುವ ಪ್ರತಿಯೊಂದಕ್ಕೂ ವಿಧೇಯರಾಗಿರಬೇಕು. 23 ಆ ಪ್ರವಾದಿಯ ಮಾತನ್ನು ಕೇಳದಿರುವ ಪ್ರತಿಯೊಬ್ಬನು ತನ್ನ ಜನರೊಳಗಿಂದ ಸಂಪೂರ್ಣವಾಗಿ ತೆಗೆಯಲಾಗುವುದು.’*ಧರ್ಮೋ 18:15,18,19

24 “ಸಮುಯೇಲನು ಮೊದಲುಗೊಂಡು, ಮಾತನಾಡಿದ ಎಲ್ಲಾ ಪ್ರವಾದಿಗಳು ಕ್ರಮವಾಗಿ ಈ ದಿನಗಳನ್ನು ಕುರಿತು ಮುಂತಿಳಿಸಿದ್ದಾರೆ. 25 ನೀವು ಪ್ರವಾದಿಗಳ ಮತ್ತು ನಿಮ್ಮ ಪಿತೃಗಳೊಂದಿಗೆ ದೇವರು ಮಾಡಿಕೊಂಡ ಒಡಂಬಡಿಕೆಯ ಮಕ್ಕಳಾಗಿದ್ದೀರಿ. ಏಕೆಂದರೆ ದೇವರು, ‘ನಿನ್ನ ಸಂತತಿಯ ಮುಖಾಂತರವಾಗಿ ಭೂಲೋಕದ ಎಲ್ಲಾ ಕುಟುಂಬಗಳಿಗೆ ಆಶೀರ್ವಾದವುಂಟಾಗುವುದು,’ಆದಿ 22:18; 26:4 ಎಂದು ಅಬ್ರಹಾಮನಿಗೆ ಹೇಳಿದರು. 26 ದೇವರು ತಮ್ಮ ಸೇವಕರಾದ ಯೇಸುವನ್ನು ಜೀವಂತವಾಗಿ ಎಬ್ಬಿಸಿದಾಗ, ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ದುರ್ಮಾರ್ಗಗಳಿಂದ ತಿರುಗಿಸಿ ನಿಮ್ಮನ್ನು ಮೊಟ್ಟಮೊದಲು ಆಶೀರ್ವದಿಸಲು ಯೇಸುವನ್ನು ನಿಮ್ಮ ಬಳಿಗೆ ಕಳುಹಿಸಿದರು.”

<- ಅಪೊಸ್ತಲರ ಕೃತ್ಯಗಳು 2ಅಪೊಸ್ತಲರ ಕೃತ್ಯಗಳು 4 ->