1 ಆಗ ಅಗ್ರಿಪ್ಪನು, “ನಿನ್ನ ಪರವಾಗಿ ಮಾತನಾಡಲು ನಿನಗೆ ಅಪ್ಪಣೆಯಿದೆ,” ಎಂದು ಪೌಲನಿಗೆ ಹೇಳಿದನು.
4 “ನಾನು ಬಾಲಕನಾಗಿದ್ದಾಗಿನಿಂದ, ನನ್ನ ಪಟ್ಟಣದಲ್ಲಿಯೂ ಅನಂತರ ಯೆರೂಸಲೇಮಿನಲ್ಲಿಯೂ ನಾನು ಜೀವನ ಮಾಡಿದ ರೀತಿಯನ್ನು ಯೆಹೂದ್ಯರೆಲ್ಲರೂ ಬಲ್ಲವರಾಗಿದ್ದಾರೆ. 5 ಅವರು ನಮ್ಮ ವಿಶ್ವಾಸದ ಅತಿ ಕಟ್ಟುನಿಟ್ಟಾದ ಪಂಗಡಕ್ಕೆ ತಕ್ಕಂತೆ ನಾನು ಫರಿಸಾಯನಾಗಿ ಜೀವಿಸಿದೆನೆಂಬುದಾಗಿ ತಿಳಿದವರಾಗಿದ್ದಾರೆ. ಸಾಕ್ಷಿ ಹೇಳುವುದಕ್ಕೆ, ಅವರಿಗೆ ಮನಸ್ಸಿದ್ದರೆ ಹೇಳಬಹುದು. 6 ಈಗ ನಾನು ನನ್ನ ಪಿತೃಗಳಿಗೆ ದೇವರು ವಾಗ್ದಾನ ಮಾಡಿದ್ದರಲ್ಲಿ ನಿರೀಕ್ಷೆಯಿಟ್ಟಿದ್ದರಿಂದ ಇಂದು ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ. 7 ರಾಜರೇ, ನಮ್ಮ ಹನ್ನೆರಡು ಗೋತ್ರಗಳವರು ಅತ್ಯಾಸಕ್ತಿಯಿಂದ ಹಗಲಿರುಳು ದೇವರ ಸೇವೆಮಾಡುತ್ತಾ, ಆ ವಾಗ್ದಾನವು ನೆರವೇರುವುದೆಂದು ನಿರೀಕ್ಷಿಸುತ್ತಾ ಇದ್ದಾರೆ. ರಾಜರೇ, ಈ ನಿರೀಕ್ಷೆಯ ನಿಮಿತ್ತವಾಗಿಯೇ ಯೆಹೂದ್ಯರು ನನ್ನ ಮೇಲೆ ದೋಷಾರೋಪಣೆ ಮಾಡುತ್ತಿದ್ದಾರೆ. 8 ಸತ್ತವರನ್ನು ದೇವರು ಜೀವಂತವಾಗಿ ಎಬ್ಬಿಸುತ್ತಾರೆಂಬುದನ್ನು ನಂಬಲು ಅಸಾಧ್ಯವೆಂದು ನೀವು ಪರಿಗಣಿಸುವುದು ಏಕೆ?
9 “ನಜರೇತಿನ ಯೇಸುವಿನ ಹೆಸರನ್ನು ವಿರೋಧಿಸಲು ಅನೇಕ ಸಂಗತಿಗಳನ್ನು ಮಾಡಬೇಕೆಂದು ನಾನು ಸಹ ಒಮ್ಮೆ ಯೋಚಿಸಿಕೊಂಡಿದ್ದೆನು. 10 ಹಾಗೆಯೇ ನಾನು ಯೆರೂಸಲೇಮಿನಲ್ಲಿ ಮಾಡಿದೆನು. ಮುಖ್ಯಯಾಜಕರ ಅಧಿಕಾರ ಪಡೆದು ಅನೇಕ ಭಕ್ತರನ್ನು ಸೆರೆಮನೆಗೆ ಹಾಕಿಸಿದೆನು. ಅವರನ್ನು ಮರಣದಂಡನೆಗೆ ಒಪ್ಪಿಸುವಾಗ, ಅವರಿಗೆ ವಿರುದ್ಧವಾಗಿ ಮತ ಚಲಾಯಿಸಿದೆನು. 11 ಅನೇಕ ಸಲ ಅವರನ್ನು ದಂಡಿಸಲು ನಾನು ಒಂದು ಸಭಾಮಂದಿರದಿಂದ ಇನ್ನೊಂದು ಸಭಾಮಂದಿರಕ್ಕೆ ಹೋಗಿ ಅವರು ದೇವದೂಷಣೆ ಮಾಡುವಂತೆ ಒತ್ತಾಯ ಮಾಡಿದೆ. ಇದಲ್ಲದೆ ಅವರ ಮೇಲೆ ಬಹು ಕೋಪಗೊಂಡವನಾಗಿ ನಾನು ಅವರನ್ನು ಹಿಂಸಿಸಲು ವಿದೇಶಿ ಪಟ್ಟಣಗಳಿಗೂ ಹೋದೆನು.
12 “ಹೀಗೆ ನಾನು ಮುಖ್ಯಯಾಜಕರ ಅಧಿಕಾರ, ಅಪ್ಪಣೆಗಳೊಂದಿಗೆ ದಮಸ್ಕಕ್ಕೆ ಪ್ರಯಾಣ ಹೋಗುತ್ತಿದ್ದೆನು. 13 ಆಗ ರಾಜರೇ, ಮಧ್ಯಾಹ್ನದ ಸಮಯದಲ್ಲಿ, ಮಾರ್ಗ ಮಧ್ಯದಲ್ಲಿ ನಾನು, ಆಕಾಶದಿಂದ ಸೂರ್ಯನ ಪ್ರಕಾಶಕ್ಕಿಂತಲೂ ಹೆಚ್ಚಾಗಿ ಹೊಳೆಯುವ ಒಂದು ಬೆಳಕನ್ನು ಕಂಡೆನು. ಅದು ನನ್ನ ಸುತ್ತಲೂ ನನ್ನ ಸಂಗಡಿಗರ ಸುತ್ತಲೂ ಪ್ರಕಾಶಿಸಿತು. 14 ನಾವೆಲ್ಲರೂ ನೆಲದ ಮೇಲೆ ಬಿದ್ದೆವು. ಆಗ, ‘ಸೌಲನೇ, ಸೌಲನೇ, ಏಕೆ ನನ್ನನ್ನು ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವುದರಿಂದ ನಿನಗೇ ಹಾನಿ,’ ಎಂದು ಹೀಬ್ರೂ ಭಾಷೆಯಲ್ಲಿ ಹೇಳುವ ವಾಣಿಯನ್ನು ಕೇಳಿದೆನು.
15 “ಆಗ ನಾನು, ‘ಸ್ವಾಮಿ, ತಾವು ಯಾರು?’ ಎಂದು ಕೇಳಲು,
19 “ಆದ್ದರಿಂದ ಅಗ್ರಿಪ್ಪ ರಾಜರೇ, ಆ ಪರಲೋಕದ ದರ್ಶನಕ್ಕೆ ನಾನು ಅವಿಧೇಯನಾಗಲಿಲ್ಲ. 20 ಆದರೆ ಮೊದಲು ದಮಸ್ಕದಲ್ಲಿದ್ದವರಿಗೂ ಆಮೇಲೆ ಯೆರೂಸಲೇಮಿನಲ್ಲಿಯೂ ಯೂದಾಯದ ಎಲ್ಲಾ ಕಡೆಗಳಲ್ಲಿ ಇದ್ದವರಿಗೂ ಯೆಹೂದ್ಯರಲ್ಲದವರಿಗೂ ನಾನು ಬೋಧಿಸಿದೆನು. ಅವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು, ಪಶ್ಚಾತ್ತಾಪಕ್ಕೆ ಯೋಗ್ಯ ಕೃತ್ಯಗಳನ್ನು ನಡೆಸಬೇಕೆಂದು ನಾನು ಘೋಷಿಸಿದೆನು. 21 ಈ ಕಾರಣದಿಂದಲೇ ಯೆಹೂದ್ಯರು ನನ್ನನ್ನು ದೇವಾಲಯದಲ್ಲಿ ಬಂಧಿಸಿ ಕೊಲ್ಲಲು ಪ್ರಯತ್ನಿಸಿದರು. 22 ಆದರೆ ನಾನು ಇಂದಿನವರೆಗೂ ದೇವರಿಂದ ಸಹಾಯವನ್ನು ಪಡೆದಿರುತ್ತೇನೆ. ಹೀಗೆ ನಾನು ಇಲ್ಲಿ ನಿಂತುಕೊಂಡು ಚಿಕ್ಕವರಿಗೂ ದೊಡ್ಡವರಿಗೂ ಸಾಕ್ಷಿ ಕೊಡುತ್ತಿದ್ದೇನೆ. ಪ್ರವಾದಿಗಳೂ ಮೋಶೆಯೂ ಮುಂದೆ ಏನು ಸಂಭವಿಸುತ್ತದೆಯೆಂದು ಹೇಳಿದ್ದಕ್ಕಿಂತ ಹೆಚ್ಚಾಗಿ ನಾನು ಏನನ್ನೂ ಹೇಳಲಿಲ್ಲ. 23 ಕ್ರಿಸ್ತ ಯೇಸು ಶ್ರಮೆಹೊಂದಿ, ಸತ್ತವರೊಳಗಿಂದ ಜೀವಂತರಾಗಿ ಮೊದಲು ಎದ್ದು ತಮ್ಮ ಜನರಿಗೂ ಯೆಹೂದ್ಯರಲ್ಲದವರಿಗೂ ಬೆಳಕಿನ ಸಂದೇಶವನ್ನು ತರುವರು ಎಂದು ಪ್ರವಾದಿಗಳು ಮತ್ತು ಮೋಶೆಯು ಹೇಳಿದ್ದಾರೆ,” ಎಂದನು.
24 ಹೀಗೆ ಪೌಲನು ಪ್ರತಿವಾದ ಮಾಡುತ್ತಿದ್ದಾಗ, ಫೆಸ್ತನು ಮಧ್ಯೆ ಬಾಯಿ ಹಾಕಿ, “ಪೌಲನೇ, ನಿನಗೆ ಹುಚ್ಚುಹಿಡಿದಿದೆ! ನಿನ್ನ ಅಧಿಕಪಾಂಡಿತ್ಯ ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ,” ಎಂದು ಗಟ್ಟಿಯಾಗಿ ಕೂಗಿದನು.
25 ಆದರೆ ಪೌಲನು, “ಬಹು ಗೌರವವುಳ್ಳ ಫೆಸ್ತರೇ, ನಾನು ಹುಚ್ಚನಲ್ಲ, ಆದರೆ ನಾನು ಸತ್ಯವನ್ನೇ ಸ್ವಸ್ಥಬುದ್ಧಿಯಿಂದ ಮಾತನಾಡುತ್ತಿರುವೆನು. 26 ಏಕೆಂದರೆ ರಾಜರಿಗೆ ಈ ಎಲ್ಲಾ ಸಂಗತಿಗಳ ಪರಿಚಯವಿದೆ. ರಾಜರೊಂದಿಗೆ ನಾನು ಸಹ ಭರವಸೆಯಿಂದ ಮಾತನಾಡುತ್ತಿರುವೆನು. ಇವುಗಳಲ್ಲಿ ಯಾವುದೂ ರಾಜರ ಗಮನಕ್ಕೆ ಬಾರದೆ ಹೋಗಿಲ್ಲ ಎಂಬುದು ನನ್ನ ದೃಢ ನಂಬಿಕೆ. ಏಕೆಂದರೆ ಇದು ಮೂಲೆಯಲ್ಲಿ ನಡೆದ ಸಂಗತಿಯಲ್ಲ. 27 ಅಗ್ರಿಪ್ಪ ರಾಜರೇ, ನೀವು ಪ್ರವಾದಿಗಳನ್ನು ನಂಬುತ್ತೀರೋ? ನೀವು ನಂಬುತ್ತೀರೆಂದು ನಾನು ಬಲ್ಲೆ,” ಎಂದನು.
28 ಆಗ ಅಗ್ರಿಪ್ಪನು ಪೌಲನಿಗೆ, “ಅಲ್ಪ ಸಮಯದಲ್ಲಿಯೇ ನನ್ನನ್ನು ಕ್ರಿಸ್ತ ವಿಶ್ವಾಸಿಯನ್ನಾಗಿ ಮಾಡಬೇಕೆಂದಿದ್ದೀಯಾ?” ಎಂದನು.
29 ಪೌಲನು, “ಅಲ್ಪ ಕಾಲದಲ್ಲಾಗಲಿ, ದೀರ್ಘಕಾಲದಲ್ಲಾಗಲಿ ನೀವಷ್ಟೇ ಅಲ್ಲ, ನನ್ನ ಮಾತುಗಳನ್ನು ಇಂದು ಆಲಿಸುತ್ತಿರುವ ಪ್ರತಿಯೊಬ್ಬರೂ ಈ ಬೇಡಿಗಳನ್ನು ಹೊರತು ನನ್ನಂತೆಯೇ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ,” ಎಂದನು.
30 ರಾಜನು ಎದ್ದೇಳಲು ಅವನೊಂದಿಗೆ ರಾಜ್ಯಪಾಲನೂ ಬೆರ್ನಿಕೆಯೂ ಅವರೊಂದಿಗೆ ಕುಳಿತಿದ್ದವರೆಲ್ಲರೂ ಎದ್ದರು. 31 ಅವರು ಅಲ್ಲಿಂದ ಹೊರಗೆ ಬಂದು, ಒಬ್ಬರೊಂದಿಗೊಬ್ಬರು ಮಾತನಾಡುತ್ತಾ, “ಮರಣದಂಡನೆಗಾಗಲಿ, ಸೆರೆಮನೆ ವಾಸಕ್ಕಾಗಲಿ ಯೋಗ್ಯವಾದ ಏನನ್ನೂ ಈ ಮನುಷ್ಯನು ಮಾಡಿಲ್ಲ,” ಎಂದರು.
32 ಆಗ ಅಗ್ರಿಪ್ಪನು ಫೆಸ್ತನಿಗೆ, “ಪೌಲನು ನೇರವಾಗಿ ಕೈಸರನಿಗೆ ಬೇಡಿಕೆ ಸಲ್ಲಿಸದಿದ್ದರೆ ಇವನನ್ನು ಬಿಡುಗಡೆ ಮಾಡಬಹುದಾಗಿತ್ತು,” ಎಂದನು.
<- ಅಪೊಸ್ತಲರ ಕೃತ್ಯಗಳು 25ಅಪೊಸ್ತಲರ ಕೃತ್ಯಗಳು 27 ->