1 ಇಕೋನ್ಯದಲ್ಲಿಯೂ ಪೌಲ ಮತ್ತು ಬಾರ್ನಬರು ವಾಡಿಕೆಯಂತೆ ಯೆಹೂದ್ಯರ ಸಭಾಮಂದಿರಕ್ಕೆ ಹೋದರು. ಅವರು ಅಲ್ಲಿ ಪರಿಣಾಮಕಾರಿಯಾಗಿ ಮಾತನಾಡಿದ್ದರಿಂದ ಬಹು ಸಂಖ್ಯೆಯಲ್ಲಿ ಯೆಹೂದ್ಯರೂ ಗ್ರೀಕರೂ ವಿಶ್ವಾಸವನ್ನಿಟ್ಟರು. 2 ಆದರೆ ನಂಬಲು ನಿರಾಕರಿಸಿದ ಯೆಹೂದ್ಯರು ಯೆಹೂದ್ಯರಲ್ಲದವರ ಮನಸ್ಸನ್ನು ಕೆಡಿಸಿ, ಸಹೋದರರ ಮೇಲೆ ವಿರೋಧ ಭಾವನೆ ಹುಟ್ಟಿಸಿದರು. 3 ಆದ್ದರಿಂದ ಪೌಲ ಬಾರ್ನಬರು ಅಲ್ಲಿ ಬಹಳ ಸಮಯವಿದ್ದು ಕರ್ತ ಯೇಸುವಿನ ವಿಷಯದಲ್ಲಿ ಧೈರ್ಯದಿಂದ ಮಾತನಾಡುತ್ತಿದ್ದರು. ಆದ್ದರಿಂದ ಕರ್ತ ಯೇಸು ಅವರ ಕೈಗಳಿಂದ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುವ ಶಕ್ತಿಯನ್ನು ಕೊಟ್ಟು ತಮ್ಮ ಕೃಪಾವಾಕ್ಯವನ್ನು ಖಚಿತಪಡಿಸಿದರು. 4 ಆದರೆ ಪಟ್ಟಣದ ಜನರಲ್ಲಿ ಭಿನ್ನಾಭಿಪ್ರಾಯಗಳಾದವು. ಕೆಲವರು ಯೆಹೂದ್ಯರ ಪರವಾದರು, ಇನ್ನೂ ಕೆಲವರು ಅಪೊಸ್ತಲರ ಪರವಾದರು. 5 ಯೆಹೂದ್ಯರೂ ಯೆಹೂದ್ಯರಲ್ಲದವರೂ ತಮ್ಮ ನಾಯಕರನ್ನು ಕೂಡಿಕೊಂಡು ಪೌಲ, ಬಾರ್ನಬರನ್ನು ಅವಮಾನ ಮಾಡಿ ಅವರ ಮೇಲೆ ಕಲ್ಲೆಸೆಯಬೇಕೆಂದು ನುಗ್ಗಿದಾಗ, 6 ಈ ವಿಷಯ ಅಪೊಸ್ತಲರಿಗೆ ತಿಳಿಯಲು ಅವರು ಅಲ್ಲಿಂದ ಪಲಾಯನ ಮಾಡಿ ಲುಕವೋನಿಯದ ಪಟ್ಟಣಗಳಾದ ಲುಸ್ತ್ರ ಮತ್ತು ದೆರ್ಬೆ ಹಾಗೂ ಅವುಗಳ ಸುತ್ತಮುತ್ತಲ ಪ್ರದೇಶಗಳಿಗೆ ಓಡಿಹೋದರು. 7 ಹೀಗೆ ಅವರು ಅಲ್ಲೆಲ್ಲಾ ಸುವಾರ್ತೆ ಸಾರಿದರು.
ಲುಸ್ತ್ರ ಮತ್ತು ದೆರ್ಬೆಯಲ್ಲಿ
8 ಲುಸ್ತ್ರದಲ್ಲಿ ಒಬ್ಬ ಕುಂಟನಿದ್ದನು. ಅವನು ಹುಟ್ಟು ಕುಂಟನಾಗಿದ್ದುದರಿಂದ ಅವನೆಂದೂ ನಡೆದಾಡಿರಲಿಲ್ಲ. 9 ಪೌಲನು ಮಾತನಾಡುತ್ತಿರುವುದನ್ನು ಅವನು ಆಲಿಸುತ್ತಿದ್ದನು. ಪೌಲನು ನೇರವಾಗಿ ಅವನನ್ನೇ ದೃಷ್ಟಿಸಿ ನೋಡಿ, ತಾನು ಗುಣಹೊಂದಲು ಅವನಲ್ಲಿ ವಿಶ್ವಾಸವಿದೆಯೆಂದು ಕಂಡು, 10 “ಎದ್ದೇಳು, ಕಾಲೂರಿ ನಿಲ್ಲು!” ಎಂದು ದೊಡ್ಡ ಧ್ವನಿಯಿಂದ ಹೇಳಿದನು. ಆ ಮನುಷ್ಯನು ಜಿಗಿದು ನಿಂತು, ನಡೆದಾಡಲು ಪ್ರಾರಂಭಿಸಿದನು.
11 ಪೌಲನು ಮಾಡಿದ್ದನ್ನು ಜನರು ಕಂಡಾಗ, ಲುಕವೋನಿಯ ಭಾಷೆಯಲ್ಲಿ, “ಮಾನವ ರೂಪದಲ್ಲಿ ದೇವರುಗಳು ಬಂದಿದ್ದಾರೆ!” ಎಂದು ಘೋಷಿಸಿದರು. 12 ಅವರು ಬಾರ್ನಬನನ್ನು “ಜೆಯುಸ್” ದೇವರು ಎಂದೂ ಪೌಲನು ಪ್ರಮುಖ ಭಾಷಣಕಾರನಾದ್ದರಿಂದ ಅವನನ್ನು “ಹೆರ್ಮೆ” ದೇವರು ಎಂದೂ ಕರೆದರು. 13 ಪಟ್ಟಣದ ಹೊರಗೆ ಸಮೀಪದಲ್ಲಿದ್ದ ಜೆಯುಸ್ ದೇವರ ಗುಡಿಯ ಪೂಜಾರಿಯು, ಪಟ್ಟಣದ ದ್ವಾರಗಳ ಬಳಿಗೆ ಹೋರಿಗಳನ್ನೂ ಹೂಮಾಲೆಗಳನ್ನೂ ತೆಗೆದುಕೊಂಡು ಬರಲು, ಅವರಿಗಾಗಿ ಯಜ್ಞಗಳನ್ನು ಅರ್ಪಿಸಲು ಜನರು ಅಪೇಕ್ಷಿಸಿದರು.
14 ಆದರೆ ಅಪೊಸ್ತಲರಾದ ಬಾರ್ನಬ ಮತ್ತು ಪೌಲರು ಇದನ್ನು ಕೇಳಿದಾಗ, ತಮ್ಮ ಬಟ್ಟೆಗಳನ್ನು ಹರಿದುಕೊಂಡು ಜನಸಮೂಹದ ಕಡೆಗೆ ಓಡಿಬಂದು ಕೂಗಿ ಹೇಳಿದ್ದೇನೆಂದರೆ: 15 “ಪ್ರಿಯ ಜನರೇ, ನೀವಿದನ್ನು ಏಕೆ ಮಾಡುತ್ತಿರುವಿರಿ? ನಾವೂ ನಿಮ್ಮ ಹಾಗೆಯೇ ಮಾನವರು. ಇಂಥಾ ವ್ಯರ್ಥವಾದ ಸಂಗತಿಗಳನ್ನು ಬಿಟ್ಟು ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದ ಜೀವಿಸುವ ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನಿಮಗೆ ಸುವಾರ್ತೆಯನ್ನು ಸಾರುತ್ತಿದ್ದೇವೆ. 16 ದೇವರು ಹಿಂದಿನ ಕಾಲದಲ್ಲಿ, ಆಯಾ ದೇಶಗಳು ತಮ್ಮ ತಮ್ಮ ಮಾರ್ಗಗಳಲ್ಲಿಯೇ ನಡೆಯುವಂತೆ ಬಿಟ್ಟುಬಿಟ್ಟರು. 17 ಆದರೂ ದೇವರು ತಮ್ಮ ಬಗ್ಗೆ ಸಾಕ್ಷಿಕೊಡದೆ ಇರಲಿಲ್ಲ. ಆಕಾಶದಿಂದ ಮಳೆಯನ್ನೂ ಸಕಾಲದಲ್ಲಿ ಬೆಳೆಯನ್ನೂ ನಿಮಗೆ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸಿ ಒಳ್ಳೆಯದನ್ನು ಮಾಡುತ್ತಾ ಬಂದವರು ದೇವರೇ.” 18 ಹೀಗೆ ಹೇಳಿದರೂ ಆ ಜನಸಮೂಹ ಅವರಿಗೆ ಬಲಿಯರ್ಪಿಸುವುದನ್ನು ತಡೆಯಲು ಕಷ್ಟವಾಯಿತು.
19 ಅದೇ ಸಮಯದಲ್ಲಿ ಅಂತಿಯೋಕ್ಯ ಮತ್ತು ಇಕೋನ್ಯದಿಂದ ಕೆಲವು ಜನ ಯೆಹೂದ್ಯರು ಬಂದು ಜನಸಮೂಹವನ್ನು ತಮ್ಮ ಕಡೆಗೆ ಒಲಿಸಿಕೊಂಡು, ಪೌಲನ ಮೇಲೆ ಕಲ್ಲೆಸೆಯಲು, ಅವನು ಸತ್ತನೆಂದು ಭಾವಿಸಿ ಅವನನ್ನು ಊರ ಹೊರಗೆ ಎಳೆದು ಹಾಕಿದರು. 20 ಆದರೆ ಶಿಷ್ಯರು ಬಂದು ಪೌಲನ ಸುತ್ತಲೂ ನಿಂತುಕೊಳ್ಳಲು ಅವನು ಎದ್ದು ಪಟ್ಟಣಕ್ಕೆ ಹಿಂದಿರುಗಿ ಹೋದನು. ಮರುದಿನ ಅವನೂ ಬಾರ್ನಬನೂ ದೆರ್ಬೆಗೆ ಹೊರಟು ಹೋದರು.
ಸಿರಿಯದ ಅಂತಿಯೋಕ್ಯಕ್ಕೆ ಮರುಪ್ರಯಾಣ
21 ಆ ಪಟ್ಟಣದಲ್ಲಿ ಪೌಲ, ಬಾರ್ನಬರು ಸುವಾರ್ತೆಯನ್ನು ಸಾರಿದರು. ಬಹುಜನರನ್ನು ಶಿಷ್ಯರನ್ನಾಗಿ ಮಾಡಿದರು. ಅನಂತರ ಅವರು ಲುಸ್ತ್ರ, ಇಕೋನ್ಯ ಮತ್ತು ಅಂತಿಯೋಕ್ಯಗಳಿಗೆ ಹಿಂದಿರುಗಿದರು. 22 ಅಲ್ಲಿದ್ದ ಶಿಷ್ಯರು ವಿಶ್ವಾಸದಲ್ಲಿ ಮುಂದುವರಿಯಲು, “ನಾವು ಅನೇಕ ಸಂಕಟಗಳಿಂದ ದೇವರ ರಾಜ್ಯದೊಳಗೆ ಸೇರಬೇಕು,” ಎಂದು ಹೇಳಿ ದೃಢಪಡಿಸಿದರು. 23 ಪ್ರತಿಯೊಂದು ಸಭೆಯಲ್ಲಿ ಪೌಲ, ಬಾರ್ನಬರು ಸಭಾ ಹಿರಿಯರನ್ನು ನೇಮಿಸಿ, ಉಪವಾಸ ಪ್ರಾರ್ಥನೆಯನ್ನು ಮಾಡಿ ಅವರು ನಂಬಿದ್ದ ಕರ್ತ ಯೇಸುವಿಗೆ ಅವರನ್ನು ಒಪ್ಪಿಸಿಕೊಟ್ಟರು. 24 ತರುವಾಯ ಪಿಸಿದ್ಯವನ್ನು ದಾಟಿಕೊಂಡು, ಪಂಫುಲ್ಯದೊಳಗೆ ಬಂದರು, 25 ಪೆರ್ಗೆಯಲ್ಲಿ ದೇವರ ವಾಕ್ಯವನ್ನು ಸಾರಿ, ಅಲ್ಲಿಂದ ಅತ್ತಾಲಿಯ ಎಂಬಲ್ಲಿಗೆ ಹೋದರು.
26 ಅತ್ತಾಲಿಯದಿಂದ ನೌಕೆಯಲ್ಲಿ ಪ್ರಯಾಣಮಾಡಿ ಅಂತಿಯೋಕ್ಯಕ್ಕೆ ಬಂದರು. ಅವರು ಪೂರೈಸಿದ ಸೇವೆಗಾಗಿ ದೇವರ ಕೃಪೆಗೆ ತಮ್ಮನ್ನು ಸಮರ್ಪಿಸಿಕೊಂಡದ್ದು ಈ ಪಟ್ಟಣದಿಂದಲೇ. 27 ಇಲ್ಲಿಗೆ ತಲುಪಿದಾಗ, ಅವರು ಸಭೆಯನ್ನು ಒಟ್ಟುಕೂಡಿಸಿದರು. ದೇವರು ಅವರಿಗೆ ತಮ್ಮ ಮುಖಾಂತರವಾಗಿ ಮಾಡಿದ್ದನ್ನೂ ಯೆಹೂದ್ಯರಲ್ಲದವರಿಗೂ ದೇವರು ವಿಶ್ವಾಸದ ದ್ವಾರವನ್ನು ತೆರೆದಿರುವುದನ್ನೂ ವರದಿಮಾಡಿದರು. 28 ಅವರು ಅಲ್ಲಿಯೇ ಶಿಷ್ಯರೊಂದಿಗೆ ಬಹುಕಾಲ ತಂಗಿದ್ದರು.