1 ಆದರೆ ಕಡೆಯ ದಿವಸಗಳಲ್ಲಿ ಕಷ್ಟಕರವಾದ ಕಾಲಗಳು ಬರುವುವೆಂಬುದನ್ನು ಸಹ ತಿಳಿದುಕೋ. 2 ಮನುಷ್ಯರು ತಮ್ಮನ್ನು ತಾವೇ ಪ್ರೀತಿಸಿಕೊಳ್ಳುವವರೂ ಹಣದಾಶೆಯುಳ್ಳವರೂ ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ ದೇವದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಕೃತಜ್ಞತೆಯಿಲ್ಲದವರೂ ಅಶುದ್ಧರೂ 3 ಮಾನವತ್ವವಿಲ್ಲದವರೂ ಸಮಾಧಾನವಾಗದವರೂ ಚಾಡಿಕೋರರೂ ಸಂಯಮವಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೆಯದನ್ನು ಪ್ರೀತಿಸದವರೂ 4 ದ್ರೋಹಿಗಳೂ ದುಡುಕುವವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವುದಕ್ಕಿಂತಲೂ ಭೋಗಗಳನ್ನೇ ಪ್ರೀತಿಸುವವರೂ 5 ಭಕ್ತಿಯ ವೇಷವಿದ್ದು ಅದರ ಬಲವನ್ನು ಅಲ್ಲಗಳೆಯುವವರೂ ಆಗಿರುವರು. ಇಂಥವರನ್ನು ಬಿಟ್ಟು ಪ್ರತ್ಯೇಕವಾಗಿರು.
6 ಇಂಥವರು ಮನೆಗಳಲ್ಲಿ ನುಸುಳಿ ಪಾಪಗಳಿಂದ ತುಂಬಿದವರೂ ನಾನಾ ವಿಧವಾದ ಇಚ್ಛೆಗಳಿಂದ ಪ್ರೇರಣೆ ಹೊಂದಿ ಸುಲಭವಾಗಿ ಮೋಸಹೋಗುವ ಸ್ತ್ರೀಯರನ್ನು ವಶಮಾಡಿಕೊಳ್ಳುವರು. 7 ಇಂಥ ಸ್ತ್ರೀಯರು ಯಾವಾಗಲೂ ಕಲಿಯುತ್ತಿದ್ದರೂ ಸತ್ಯದ ಜ್ಞಾನಕ್ಕೆ ಬರಲಾರದವರು ಆಗಿರುವರು. 8 ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ, ಈ ಸುಳ್ಳು ಬೋಧಕರು ಸಹ ಸತ್ಯವನ್ನು ವಿರೋಧಿಸುತ್ತಾರೆ. ಇದಲ್ಲದೆ ಇವರು ಬುದ್ಧಿಗೆಟ್ಟವರೂ ವಿಶ್ವಾಸದ ವಿಷಯದಲ್ಲಿ ಭ್ರಷ್ಠರೂ ಆಗಿ, ತಿರಸ್ಕಾರ ಹೊಂದಿರುತ್ತಾರೆ. 9 ಆದರೆ ಇವರು ಇನ್ನು ಮುಂದುವರಿಯಲಾರರು. ಯನ್ನ, ಯಂಬ್ರರ ಮೂರ್ಖತನವು ಎಲ್ಲರಿಗೂ ಸ್ಪಷ್ಟವಾಗಿ ತಿಳಿದುಬಂದಂತೆಯೇ, ಇವರದೂ ತಿಳಿದುಬರುವುದು.