Link to home pageLanguagesLink to all Bible versions on this site
2
ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕ
1 ಆದ್ದರಿಂದ ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಲ್ಲಿ ಬಲಗೊಂಡವನಾಗಿರು. 2 ಅನೇಕ ಸಾಕ್ಷಿಗಳ ಮುಂದೆ ನೀನು ನನ್ನಿಂದ ಕೇಳಿದವುಗಳನ್ನು ಇತರರಿಗೆ ಸಹ ಬೋಧಿಸಲು ಶಕ್ತರಾದ ನಂಬಿಗಸ್ತ ಮನುಷ್ಯರಿಗೆ ಒಪ್ಪಿಸಿಕೊಡು. 3 ಆದ್ದರಿಂದ ನೀನು ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಶ್ರಮೆಯನ್ನು ಅನುಭವಿಸು. 4 ತನ್ನನ್ನು ಸೈನಿಕನನ್ನಾಗಿ ಆರಿಸಿಕೊಂಡ ನಾಯಕನನ್ನು ಮೆಚ್ಚಿಸಬೇಕೆಂದು ಯುದ್ಧಕ್ಕೆ ಹೋಗುವವನು ಈ ಜೀವನದ ವ್ಯವಹಾರಗಳಲ್ಲಿ ಸಿಕ್ಕಿಕೊಳ್ಳಲಾರನು. 5 ಇದಲ್ಲದೆ ಯಾವನಾದರೂ ಆಟದ ಸ್ವರ್ಧೆಯಲ್ಲಿ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ, ಅವನು ಜಯಶಾಲಿಯ ಕಿರೀಟ ಹೊಂದುವುದಿಲ್ಲ. 6 ಪ್ರಯಾಸ ಪಡುವ ವ್ಯವಸಾಯಗಾರನು ಫಲಗಳಲ್ಲಿ ಮೊದಲನೆಯದಾಗಿ ಪಾಲುಗಾರನಾಗಿರತಕ್ಕದ್ದು. 7 ನಾನು ಹೇಳುತ್ತಿರುವುದನ್ನು ಆಲೋಚಿಸು. ಕರ್ತ ಯೇಸುವು ಇವೆಲ್ಲವುಗಳಲ್ಲಿ ನಿನಗೆ ವಿವೇಕವನ್ನು ದಯಪಾಲಿಸುವರು.

8 ನನ್ನ ಸುವಾರ್ತೆಯ ಸಾರೋಣಕ್ಕೆ ಅನುಸಾರವಾಗಿ ದಾವೀದನ ವಂಶದವರಾದ ಯೇಸು ಕ್ರಿಸ್ತರು ಸತ್ತವರೊಳಗಿಂದ ಎಬ್ಬಿಸಲಾದರೆಂದು ಜ್ಞಾಪಕಮಾಡಿಕೋ. 9 ಈ ಸುವಾರ್ತೆಗಾಗಿ ನಾನು ಕಷ್ಟವನ್ನು ಅನುಭವಿಸಿ ದುಷ್ಕರ್ಮಿಯಂತೆ ಬೇಡಿಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ. 10 ಆದಕಾರಣ ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯ ಮಹಿಮೆ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ.

11 ಇದು ನಂಬತಕ್ಕ ವಾಕ್ಯವಾಗಿದೆ:

ನಾವು ಕ್ರಿಸ್ತ ಯೇಸುವಿನ ಜೊತೆಯಲ್ಲಿ ಸತ್ತಿದ್ದರೆ,
ಕ್ರಿಸ್ತ ಯೇಸುವಿನ ಜೊತೆಯಲ್ಲಿ ನಾವು ಸಹ ಜೀವಿಸುವೆವು.
12 ನಾವು ಸಹಿಸಿಕೊಳ್ಳುವವರಾಗಿದ್ದರೆ
ಕ್ರಿಸ್ತ ಯೇಸುವಿನ ಜೊತೆಯಲ್ಲಿ ನಾವು ಸಹ ಆಳುವೆವು.
ಅವರನ್ನು ನಿರಾಕರಿಸಿದರೆ
ಅವರು ಸಹ ನಮ್ಮನ್ನು ನಿರಾಕರಿಸುವರು.
13 ನಾವು ಅಪನಂಬಿಗಸ್ತರಾಗಿದ್ದರೂ
ಅವರು ನಂಬಿಗಸ್ತರಾಗಿಯೇ ಉಳಿದಿರುವರು.
ಅವರು ತಮ್ಮ ಸ್ವಭಾವವನ್ನು ತಾವೇ ನಿರಾಕರಿಸಲಾರರು.
ದೇವರಿಂದ ಮನ್ನಣೆ ಹೊಂದಿದ ಕೆಲಸದವನು
14 ಈ ವಿಷಯಗಳನ್ನು ದೇವಜನರ ನೆನಪಿಗೆ ತರಬೇಕು. ಕೇಳುವವರಿಗೆ ಯಾವ ಪ್ರಯೋಜನವನ್ನೂ ಉಂಟು ಮಾಡದೆ ಕೆಡವಿ ಹಾಕುವ ವಾಗ್ವಾದಗಳನ್ನು ಮಾಡಬಾರದೆಂದು ಅವರಿಗೆ ದೇವರ ಮುಂದೆ ಎಚ್ಚರಿಸು. 15 ನೀನು ನಾಚಿಕೆಗೆ ಒಳಪಡದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಬೋಧಿಸುವವನೂ ಆಗಿರುವಂತೆ ನಿನ್ನನ್ನು ದೇವರಿಗೆ ಮೆಚ್ಚಿಕೆಯಾದವನಾಗಿರಲು ಸಮರ್ಪಿಸಲು ಅತ್ಯಂತ ಆಸಕ್ತನಾಗಿರು. 16 ಆದರೆ ಭಕ್ತಿಗೆ ವಿರುದ್ಧವಾದ ಹರಟೆ ಮಾತುಗಳಿಂದ ತೊಲಗಿರು. ಅವುಗಳಿಗೆ ಮನಸ್ಸು ಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು. 17 ಅವರ ಬೋಧನೆ ಮಾರಕ ಹುಣ್ಣಿನಂತೆ ಹರಡಿಕೊಳ್ಳುವುದು. ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ. 18 ಅವರು ಪುನರುತ್ಥಾನವು ಆಗಲೇ ಆಗಿ ಹೋಯಿತೆಂದು ಹೇಳುತ್ತಾ ಸತ್ಯದ ಗುರಿಯನ್ನು ತಪ್ಪಿದವರಾಗಿ ಕೆಲವರ ವಿಶ್ವಾಸವನ್ನು ಕೆಡಿಸಿಬಿಡುವವರಾಗಿದ್ದಾರೆ. 19 ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ. ಅದರ ಮೇಲೆ, “ತನ್ನವರು ಯಾರಾರೆಂಬುದನ್ನು ಕರ್ತದೇವರು ತಿಳಿದಿದ್ದಾರೆ!” ಎಂತಲೂ, “ಕರ್ತದೇವರ ಹೆಸರನ್ನು ಅರಿಕೆಮಾಡುವವರೆಲ್ಲರೂ ದುಷ್ಟತನವನ್ನು ಬಿಟ್ಟುಬಿಡಬೇಕು!” ಎಂತಲೂ ಮುದ್ರೆ ಉಂಟು.

20 ದೊಡ್ಡ ಮನೆಯಲ್ಲಿ ಬೆಳ್ಳಿಬಂಗಾರದ ಪಾತ್ರೆಗಳಲ್ಲದೆ ಮರದ ಹಾಗೂ ಮಣ್ಣಿನ ಪಾತ್ರೆಗಳೂ ಇರುತ್ತವೆ. ಕೆಲವು ವಿಶೇಷ ಉದ್ದೇಶಗಳಿಗಾಗಿಯೂ ಕೆಲವು ಸಾಮಾನ್ಯ ಉಪಯೋಗಕ್ಕಾಗಿಯೂ ಇರುತ್ತವೆ. 21 ಒಬ್ಬನು ತನ್ನನ್ನು ಸಾಮಾನ್ಯ ಘನಹೀನತೆಯಿಂದ ಶುದ್ಧಮಾಡಿಕೊಂಡರೆ, ಅವನು ವಿಶೇಷ ಉದ್ದೇಶಕ್ಕಾಗಿ ಶುದ್ಧೀಕರಗೊಂಡವನೂ ಯಜಮಾನನಿಗೆ ಉಪಯುಕ್ತನೂ ಸಕಲ ಸತ್ಕಾರ್ಯಕ್ಕೆ ಸಿದ್ಧನೂ ಆಗಿರುವ ಗೌರವದ ಪಾತ್ರೆಯಾಗಿರುವನು.

22 ಯೌವನದ ಆಶೆಗಳನ್ನು ಬಿಟ್ಟು ಓಡಿಹೋಗು. ಶುದ್ಧ ಹೃದಯವುಳ್ಳವರಾಗಿ ಕರ್ತ ಯೇಸುವನ್ನು ಬೇಡಿಕೊಳ್ಳುವವರ ಸಂಗಡ ನೀತಿ, ವಿಶ್ವಾಸ, ಪ್ರೀತಿ, ಸಮಾಧಾನ ಇವುಗಳನ್ನು ಬೆನ್ನಟ್ಟು. 23 ಬುದ್ಧಿಯಿಲ್ಲದ ಅಯುಕ್ತ ವಾಗ್ವಾದಗಳು ಜಗಳಗಳನ್ನು ಹುಟ್ಟಿಸುತ್ತವೆ ಎಂದು ತಿಳಿದು ಅವುಗಳನ್ನು ನಿರಾಕರಿಸು. 24 ಕರ್ತ ಯೇಸುವಿನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ದಯೆಯುಳ್ಳವನೂ ಬೋಧಿಸುವುದರಲ್ಲಿ ಪ್ರವೀಣನೂ ಸಹನೆಯುಳ್ಳವನೂ ಆಗಿರಬೇಕು. 25 ವಿರೋಧಿಸುವವರ ಮನಸ್ಸನ್ನು ತಾಳ್ಮೆಯಿಂದ ತಿದ್ದುವವನಾಗಿದ್ದರೆ, ದೇವರು ಒಂದು ವೇಳೆ ಅಂಥವರಿಗೆ ಸತ್ಯದ ತಿಳುವಳಿಕೆಗೆ ನಡೆಸುವ ಪಶ್ಚಾತ್ತಾಪವನ್ನು ಕೊಡುವ ನಿರೀಕ್ಷೆ ಇರುವುದು. 26 ಈ ರೀತಿಯಾಗಿ, ಸೈತಾನನ ಚಿತ್ತವನ್ನು ನೆರವೇರಿಸಲು ಗುಲಾಮರಾಗಿರುವವರು, ಅವನ ಬಲೆಯಿಂದ ಬಿಡುಗಡೆಹೊಂದಿ ಸ್ವಸ್ಥಮನಸ್ಸುಳ್ಳವರಾಗಿ ತಪ್ಪಿಸಿಕೊಳ್ಳುವರು.

<- 2 ತಿಮೊಥೆಯನಿಗೆ 12 ತಿಮೊಥೆಯನಿಗೆ 3 ->