2 ಅರಸನು ಸೈನ್ಯಾಧಿಪತಿಯಾದ ಯೋವಾಬನಿಗೆ, “ನಾನು ಜನರ ಲೆಕ್ಕವನ್ನು ತಿಳಿಯುವ ಹಾಗೆ, ನೀನು ದಾನಿನಿಂದ ಬೇರ್ಷೆಬದವರೆಗೂ ಇರುವ ಇಸ್ರಾಯೇಲ್ ಸಮಸ್ತ ಗೋತ್ರಗಳಲ್ಲಿ ಹೋಗಿ, ಯುದ್ಧಮಾಡಲು ಶಕ್ತರಾದ ಜನರನ್ನು ಲೆಕ್ಕಮಾಡಿಕೊಂಡು ಬಾ,” ಎಂದನು.
3 ಆಗ ಯೋವಾಬನು ಅರಸನಿಗೆ, “ಅರಸನಾದ ನನ್ನ ಒಡೆಯನ ಕಣ್ಣುಗಳು ಅದನ್ನು ಕಾಣುವ ಹಾಗೆ ನಿನ್ನ ದೇವರಾದ ಯೆಹೋವ ದೇವರು ತಮ್ಮ ಜನರನ್ನು ಈಗ ಇರುವುದಕ್ಕಿಂತ ನೂರರಷ್ಟಾಗಿ ಹೆಚ್ಚಿಸಲಿ; ಆದರೆ ನನ್ನ ಒಡೆಯನಾದ ಅರಸನು ಈ ಕಾರ್ಯವನ್ನು ಮಾಡಲು ಅಪೇಕ್ಷಿಸುವುದು ಏಕೆ?” ಎಂದನು.
4 ಆದಾಗ್ಯೂ ಅರಸನ ಮಾತೇ ಯೋವಾಬನಿಗೆ ವಿರೋಧವಾಗಿ ಗೆದ್ದಿತು. ಆದ್ದರಿಂದ ಯೋವಾಬನೂ, ಸೈನ್ಯಾಧಿಪತಿಗಳೂ ಇಸ್ರಾಯೇಲರಲ್ಲಿ ಯುದ್ಧಮಾಡಲು ಶಕ್ತರಾದ ಜನರನ್ನು ಲೆಕ್ಕಿಸಲು ಅರಸನ ಸಮ್ಮುಖದಿಂದ ಹೊರಟು ಹೋದರು.
5 ಅವರು ಯೊರ್ದನನ್ನು ದಾಟಿ, ಗಾದ್ ತಗ್ಗಿನಲ್ಲಿರುವ ಪಟ್ಟಣ ಹತ್ತಿರವಿರುವ ಅರೋಯೇರಿನಲ್ಲಿ ಇಳಿದು ಅಲ್ಲಿಂದ ಯಜ್ಜೇರಿಗೆ ಹೋದರು. 6 ಅಲ್ಲಿಂದ ಗಿಲ್ಯಾದಿಗೂ, ತಖ್ತೀಮ್ ಹೊಜೀ ಪ್ರದೇಶಕ್ಕೂ, ಅಲ್ಲಿಂದ ದಾನ್ ಯಾನಿಗೂ, ಅಲ್ಲಿಂದ ಸುತ್ತಿಕೊಂಡು ಸೀದೋನಿಗೂ ಬಂದರು. 7 ಅವರು ಟೈರಿನ ಭದ್ರಸ್ಥಳಕ್ಕೂ, ಹಿವ್ವಿಯರ, ಕಾನಾನ್ಯರ ಸಕಲ ಪಟ್ಟಣಗಳಿಗೂ, ಅಲ್ಲಿಂದ ಯೆಹೂದದ ದಕ್ಷಿಣಕ್ಕೂ, ಬೇರ್ಷೆಬಕ್ಕೂ ಬಂದರು.
8 ಹೀಗೆಯೇ ಅವರು ಸಮಸ್ತ ದೇಶಕ್ಕೆ ಹೋಗಿ, ಒಂಬತ್ತು ತಿಂಗಳು ಇಪ್ಪತ್ತು ದಿವಸವಾದ ತರುವಾಯ ಯೆರೂಸಲೇಮಿಗೆ ಬಂದರು.
9 ಯೋವಾಬನು ಅರಸನಿಗೆ ಕೊಟ್ಟ ಜನರ ಒಟ್ಟು ಲೆಕ್ಕವೇನೆಂದರೆ: ಇಸ್ರಾಯೇಲರಲ್ಲಿ ಖಡ್ಗ ಹಿಡಿಯತಕ್ಕ ಪರಾಕ್ರಮವುಳ್ಳ ಎಂಟು ಲಕ್ಷಮಂದಿ ಇದ್ದರು. ಯೆಹೂದದ ಜನರು ಐದು ಲಕ್ಷಮಂದಿ ಇದ್ದರು.
10 ದಾವೀದನು ಜನರನ್ನು ಲೆಕ್ಕಿಸಿದ ತರುವಾಯ ಅವನ ಮನಸ್ಸಾಕ್ಷಿ ಹಂಗಿಸತೊಡಗಿತು. ಆದ್ದರಿಂದ ದಾವೀದನು ಯೆಹೋವ ದೇವರಿಗೆ, “ನಾನು ಈ ಕಾರ್ಯವನ್ನು ಮಾಡಿದ್ದರಿಂದ ಮಹಾಪಾಪ ಮಾಡಿದೆನು. ಯೆಹೋವ ದೇವರೇ, ದಯಮಾಡಿ ನಿಮ್ಮ ಸೇವಕನ ಅಕ್ರಮವನ್ನು ಪರಿಹರಿಸಿರಿ; ಏಕೆಂದರೆ ನಾನು ಇದರಲ್ಲಿ ಬಹಳ ಬುದ್ಧಿಹೀನನಾಗಿ ನಡೆದೆನು,” ಎಂದನು.
11 ದಾವೀದನು ಉದಯದಲ್ಲಿ ಎದ್ದಾಗ ಅವನ ದರ್ಶಿಯಾದ ಗಾದನೆಂಬ ಪ್ರವಾದಿಗೆ ಯೆಹೋವ ದೇವರ ವಾಕ್ಯ ಬಂದು ಅವನಿಗೆ, 12 “ನೀನು ದಾವೀದನ ಬಳಿಗೆ ಹೋಗಿ, ಅವನ ಸಂಗಡ ಮಾತಾಡಿ, ‘ನಾನು ಮೂರು ವಿಧವಾದ ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಯಾವುದನ್ನು ನಿನಗೆ ವಿರೋಧವಾಗಿ ಬರಮಾಡಬೇಕೋ ಅದನ್ನು ಆಯ್ದುಕೋ, ಎಂದು ಯೆಹೋವ ದೇವರು ಹೇಳುತ್ತಾರೆ,’ ಎಂದು ಹೇಳು,” ಎಂದರು.
13 ಹಾಗೆಯೇ ಗಾದನು ದಾವೀದನ ಬಳಿಗೆ ಬಂದು ಅವನಿಗೆ, “ನಿನ್ನ ದೇಶದಲ್ಲಿ ಮೂರು[a] ವರುಷ ಕ್ಷಾಮ ಉಂಟಾಗಬೇಕೋ? ಇಲ್ಲವೆ ನಿನ್ನ ಶತ್ರುಗಳು ನಿನ್ನನ್ನು ಬೆನ್ನಟ್ಟಿ ಮೂರು ತಿಂಗಳವರೆಗೆ ಓಡಿಸಿಬಿಡಬೇಕೋ? ಇಲ್ಲವೆ ಮೂರು ದಿವಸಗಳವರೆಗೆ ಘೋರವ್ಯಾಧಿ ಉಂಟಾಗಬೇಕೋ? ಈಗ ನನ್ನನ್ನು ಕಳುಹಿಸಿದವರಿಗೆ ನಾನು ಏನು ಉತ್ತರ ತೆಗೆದುಕೊಂಡು ಹೋಗಬೇಕು? ಯೋಚಿಸಿನೋಡು,” ಎಂದನು.
14 ಆಗ ದಾವೀದನು ಗಾದನಿಗೆ, “ನಾನು ಬಹು ಇಕ್ಕಟ್ಟಿನಲ್ಲಿ ಇದ್ದೇನೆ. ಈಗ ಯೆಹೋವ ದೇವರ ಕೈಯಲ್ಲಿಯೇ ಬೀಳೋಣ, ಏಕೆಂದರೆ ಅವರ ಕರುಣೆಯು ದೊಡ್ಡದು, ಆದರೆ ಮನುಷ್ಯರ ಕೈಯಲ್ಲಿ ಬೀಳಲಾರೆನು,” ಎಂದನು.
15 ಆದಕಾರಣ ಯೆಹೋವ ದೇವರು ಉದಯಕಾಲದಿಂದ ನೇಮಿಸಿದ ಕಾಲದವರೆಗೂ ಇಸ್ರಾಯೇಲರ ಮೇಲೆ ವ್ಯಾಧಿಯನ್ನು ಕಳುಹಿಸಿದರು. ಆಗ ದಾನಿನಿಂದ ಬೇರ್ಷೆಬದವರೆಗೂ ಇರುವ ಜನರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು. 16 ದೂತನು ಯೆರೂಸಲೇಮನ್ನು ನಾಶಮಾಡಲು, ಅದರ ಮೇಲೆ ತನ್ನ ಕೈಚಾಚಿದಾಗ, ಯೆಹೋವ ದೇವರು ಆ ದಂಡನೆಗಾಗಿ ನೊಂದುಕೊಂಡು, ಜನರನ್ನು ಸಂಹರಿಸುತ್ತಿದ್ದ ದೇವದೂತನಿಗೆ, “ಸಾಕು, ನಿನ್ನ ಕೈಯನ್ನು ಹಿಂದೆಗೆ,” ಎಂದರು. ಆಗ ಯೆಹೋವ ದೇವರ ದೂತನು ಯೆಬೂಸಿಯನಾದ ಅರೌನನ ಕಣದ ಬಳಿಯಲ್ಲಿ ಇದ್ದನು.
17 ದಾವೀದನು ಜನರನ್ನು ಹೊಡೆಯುವ ದೂತನನ್ನು ನೋಡಿದಾಗ, ಅವನು ಯೆಹೋವ ದೇವರಿಗೆ, “ಇಗೋ, ನಾನೇ ಪಾಪಮಾಡಿದೆನು. ಕುರುಬನಂತಿರುವ ನಾನೇ ಕೆಟ್ಟದ್ದನ್ನು ಮಾಡಿದೆನು. ಆದರೆ ಕುರಿಗಳಂತಿರುವ ಇವರು ಮಾಡಿದ್ದೇನು? ನಿಮ್ಮ ಹಸ್ತವು ನನಗೆ ವಿರೋಧವಾಗಿಯೂ ನನ್ನ ಕುಟುಂಬದ ವಿರೋಧವಾಗಿಯೂ ಇರಲಿ ಎಂದು ನಾನು ಬೇಡುತ್ತೇನೆ,” ಎಂದನು.
21 ಅರೌನನು, “ಅರಸನಾದ ನನ್ನ ಒಡೆಯನು ತನ್ನ ಸೇವಕನ ಬಳಿಗೆ ಬಂದದ್ದೇನು?” ಎಂದನು.
22 ಅರೌನನು ದಾವೀದನಿಗೆ, “ಅರಸನಾದ ನನ್ನ ಒಡೆಯನು ಅದನ್ನು ತೆಗೆದುಕೊಂಡು, ತನ್ನ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ಅರ್ಪಿಸಲಿ. ದಹನಬಲಿಗೋಸ್ಕರ ಎತ್ತುಗಳೂ, ಸೌದೆಗೆ ಹಂತೀಕುಂಟೆ ಮುಂತಾದವುಗಳು ಇಲ್ಲಿ ಇವೆ,” ಎಂದನು. 23 ಅರೌನನು ಇವುಗಳನ್ನೆಲ್ಲಾ ಅರಸನಿಗೆ ಕೊಟ್ಟನು. ಇದಲ್ಲದೆ ಅರೌನನು ಅರಸನಿಗೆ, “ನಿನ್ನ ದೇವರಾದ ಯೆಹೋವ ದೇವರು ನಿನ್ನನ್ನು ಅಂಗೀಕರಿಸಲಿ,” ಎಂದನು.
24 ಆದರೆ ಅರಸನು ಅರೌನನಿಗೆ, “ಹಾಗಲ್ಲ, ನಿಶ್ಚಯವಾಗಿ ನಿನ್ನಿಂದ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ. ಉಚಿತವಾಗಿ ಸಿಕ್ಕಿದ್ದನ್ನು ದಹನಬಲಿಯಾಗಿ ನನ್ನ ದೇವರಾದ ಯೆಹೋವ ದೇವರಿಗೆ ಅರ್ಪಿಸೆನು,” ಎಂದನು.
- a ಮೂರು ಹೀಬ್ರೂ ಭಾಷೆಯಲ್ಲಿ ಏಳು