9 ಇವನ ತರುವಾಯ ಅಹೋಹ್ಯನಾಗಿರುವ ದೋದೋ ಎಂಬವನ ಮಗನಾಗಿರುವ ಎಲಿಯಾಜರನು; ಇವನು ಇಸ್ರಾಯೇಲ್ ಜನರು ಓಡಿ ಹೋದ ತರುವಾಯ ಯುದ್ಧಕ್ಕೆ ಕೂಡಿಬಂದ ಫಿಲಿಷ್ಟಿಯರನ್ನು ನಿಂದಿಸಿದ ದಾವೀದನ ಸಂಗಡ ಇದ್ದ ಮೂವರು ಪರಾಕ್ರಮಶಾಲಿಗಳಲ್ಲಿ ಒಬ್ಬನಾಗಿದ್ದನು. 10 ಎಲಿಯಾಜರನು ಎದ್ದು ಖಡ್ಗ ಹಿಡಿದ ತನ್ನ ಕೈ ದಣಿದು ಮರಗಟ್ಟಿ ಹೋಗುವವರೆಗೂ ಫಿಲಿಷ್ಟಿಯರನ್ನು ಸಂಹರಿಸುತ್ತಿದ್ದನು. ಆ ದಿನ ಯೆಹೋವ ದೇವರು ದೊಡ್ಡ ರಕ್ಷಣೆಯನ್ನು ಉಂಟುಮಾಡಿದರು. ಸೈನಿಕರು ಸುಲಿದುಕೊಳ್ಳುವುದಕ್ಕೆ ಮಾತ್ರ ಅವನ ಹಿಂದೆ ಹಿಂದಿರುಗಿದರು.
11 ಇವನ ತರುವಾಯ ಹರಾರ್ಯನಾದ ಆಗೇಯನ ಮಗನಾದ ಶಮ್ಮನು; ಅಲಸಂದಿಯಿಂದ ತುಂಬಿರುವ ಹೊಲದಲ್ಲಿ ಫಿಲಿಷ್ಟಿಯರು ದಂಡಾಗಿ ಕೂಡಿಬಂದಾಗ, ಇಸ್ರಾಯೇಲ್ ಸೈನ್ಯದವರು ಫಿಲಿಷ್ಟಿಯರ ಎದುರಿನಿಂದ ಓಡಿಹೋದರು. 12 ಆದರೆ ಅವನು ಆ ಹೊಲದ ಮಧ್ಯದಲ್ಲಿ ನಿಂತುಕೊಂಡು, ಫಿಲಿಷ್ಟಿಯರನ್ನು ಕೊಂದುಹಾಕಿ ಹೊಲವನ್ನು ಕಾಪಾಡಿದನು, ಹೀಗೆ ಯೆಹೋವ ದೇವರು ಮಹಾಜಯವನ್ನು ಉಂಟುಮಾಡಿದರು.
13 ಮೂವತ್ತು ಮಂದಿ ಪರಾಕ್ರಮಶಾಲಿಗಳ ಮುಖ್ಯಸ್ಥರಲ್ಲಿ ಮೂರು ಮಂದಿ ಹೊರಟು ಸುಗ್ಗಿಯ ಕಾಲದಲ್ಲಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿಗೆ ಬಂದರು. ಅದೇ ವೇಳೆಯಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಿತ್ತು. 14 ದಾವೀದನು ಕೋಟೆ ಸ್ಥಳದಲ್ಲಿ ಇದ್ದನು, ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು. 15 ಆಗ ದಾವೀದನು, “ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ನನಗೆ ಕುಡಿಯಲು ಕೊಡುವವನ್ಯಾರು,” ಎಂದು ಬಹು ಆಶೆಯಿಂದ ಹೇಳಿದನು. 16 ಆಗ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿಹೋಗಿ ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ, ದಾವೀದನಿಗೆ ತೆಗೆದುಕೊಂಡು ಬಂದರು. ಆದರೆ ಅದನ್ನು ಅವನು ಕುಡಿಯದೇ ಯೆಹೋವ ದೇವರಿಗೆ ಸಮರ್ಪಿಸುವಂತೆ ನೆಲದ ಮೇಲೆ ಸುರಿದನು. 17 ಅವನು, “ಯೆಹೋವ ದೇವರೇ, ನಾನು ಇಂಥಾ ಕಾರ್ಯವನ್ನು ಎಂದಿಗೂ ಮಾಡಲು ಸಾಧ್ಯವಿಲ್ಲ. ಇದು ತಮ್ಮ ಪ್ರಾಣದಾಶೆ ತೊರೆದ ಮನುಷ್ಯರ ರಕ್ತವಲ್ಲವೇ?” ಎಂದು ಹೇಳಿ ಕುಡಿಯಲೊಲ್ಲದೆ ಇದ್ದನು.
18 ಯೋವಾಬನ ಸಹೋದರ ಚೆರೂಯಳ ಮಗ ಅಬೀಷೈಯನು ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿಯನ್ನು ಎತ್ತಿ ಅವರನ್ನು ಕೊಂದುಹಾಕಿದ್ದರಿಂದ, ಮೂವರಂತೆ ಹೆಸರುಗೊಂಡನು. 19 ಈ ಮೂವರಲ್ಲಿ ಅವನು ಇಬ್ಬರಿಗಿಂತ ಹೆಚ್ಚು ಘನವುಳ್ಳವನಾಗಿದ್ದನು, ಆದ್ದರಿಂದ ಅವನು ಅವರಲ್ಲಿ ಪ್ರಧಾನನಾದನು. ಆದರೂ ಆ ಮೊದಲಿನ ಮೂರು ಜನರಿಗೆ ಅವನು ಸಮಾನನಾಗಿರಲಿಲ್ಲ.
20 ಕಬ್ಜಯೇಲನ ಪರಾಕ್ರಮಶಾಲಿಯ ಮೊಮ್ಮಗನೂ ಯೆಹೋಯಾದಾವನ ಮಗನೂ ಆದ ಬೆನಾಯನು ಅನೇಕ ಶೂರ ಕೃತ್ಯಗಳನ್ನು ಮಾಡಿದನು. ಅವನು ಬಲಶಾಲಿಯಾದ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದನು. ಇದಲ್ಲದೆ ಹಿಮಕಾಲದಲ್ಲಿ ಕುಣಿಯೊಳಗೆ ಇಳಿದು ಒಂದು ಸಿಂಹವನ್ನು ಕೊಂದುಬಿಟ್ಟನು. 21 ಅವನು ಬಲಿಷ್ಠನಾದ ಒಬ್ಬ ಈಜಿಪ್ಟಿನವನನ್ನು ಹೊಡೆದುಬಿಟ್ಟನು. ಆ ಈಜಿಪ್ಟಿನವನ ಕೈಯಲ್ಲಿ ದಪ್ಪವಾದ ಒಂದು ಈಟಿ ಇದ್ದರೂ, ತಾನು ಒಂದು ಕೋಲು ಹಿಡಿದುಕೊಂಡು ಅವನ ಬಳಿಗೆ ಹೋಗಿ ಈಜಿಪ್ಟಿನವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು, ಅವನ ಈಟಿಯಿಂದಲೇ ಅವನನ್ನು ಕೊಂದುಹಾಕಿದನು. 22 ಇವುಗಳನ್ನು ಯೆಹೋಯಾದಾವನ ಮಗ ಬೆನಾಯನು ಮಾಡಿದ್ದರಿಂದ, ಮೂರು ಮಂದಿ ಪರಾಕ್ರಮಶಾಲಿಗಳಂತೆಯೇ ಹೆಸರುಗೊಂಡನು. 23 ಇವನು ಮೂವತ್ತು ಜನರಿಗಿಂತ ಹೆಚ್ಚು ಘನವುಳ್ಳವನಾಗಿದ್ದನು. ಆದರೆ ಆ ಮೊದಲಿನ ಮೂರು ಮಂದಿಯಲ್ಲಿ ಅವನನ್ನು ಸೇರಿಸಲಾಗಲಿಲ್ಲ. ದಾವೀದನು ಅವನನ್ನು ತನ್ನ ಮೈಗಾವಲಿನವರ ಮೇಲೆ ಯಜಮಾನನನ್ನಾಗಿ ಇಟ್ಟನು.