Link to home pageLanguagesLink to all Bible versions on this site
26
ಯೆಹೂದ್ಯ ಪ್ರಾಂತ್ಯದ ಅರಸನಾದ ಉಜ್ಜೀಯನು
1 ಆಗ ಯೆಹೂದ ಜನರೆಲ್ಲರು ಹದಿನಾರು ವರ್ಷದವನಾದ ಉಜ್ಜೀಯನನ್ನು ತೆಗೆದುಕೊಂಡು, ಅವನನ್ನು ಅವನ ತಂದೆ ಅಮಚ್ಯನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು. 2 ಅರಸನು ತನ್ನ ಪಿತೃಗಳ ಜೊತೆ ಸೇರಿದ ತರುವಾಯ, ಉಜ್ಜೀಯನು ಏಲೋತ್ ಪಟ್ಟಣವನ್ನು ಕಟ್ಟಿಸಿ, ಅದನ್ನು ಯೆಹೂದಕ್ಕೆ ತಿರುಗಿ ಸೇರಿಸಿದನು.

3 ಉಜ್ಜೀಯನು ಅರಸನಾದಾಗ, ಹದಿನಾರು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಕೊಲ್ಯಳು, ಅವಳು ಯೆರೂಸಲೇಮಿನವಳು. 4 ಅವನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು. 5 ದೇವರ ದರ್ಶನಗಳಲ್ಲಿ ಗ್ರಹಿಕೆಯುಳ್ಳವನಾದ ಜೆಕರ್ಯನ ದಿವಸಗಳಲ್ಲಿ ಅವನು ದೇವರನ್ನು ಹುಡುಕಿದನು. ಯೆಹೋವ ದೇವರನ್ನು ಹುಡುಕುವ ದಿವಸಗಳ ಮಟ್ಟಿಗೂ, ದೇವರು ಅವನನ್ನು ಅಭಿವೃದ್ಧಿ ಪಡಿಸಿದರು.

6 ಅವನು ಹೊರಟುಹೋಗಿ ಫಿಲಿಷ್ಟಿಯರ ಮೇಲೆ ಯುದ್ಧಮಾಡಿ, ಗತ್‌ನ ಗೋಡೆಯನ್ನೂ, ಯಬ್ನೆಯ ಗೋಡೆಯನ್ನೂ, ಅಷ್ಡೋದಿನ ಗೋಡೆಯನ್ನೂ ಕೆಡವಿಬಿಟ್ಟು, ಅಷ್ಡೋದಿನ ಮತ್ತು ಫಿಲಿಷ್ಟಿಯರ ಪ್ರಾಂತ್ಯಗಳಲ್ಲಿ ಪಟ್ಟಣಗಳನ್ನು ಕಟ್ಟಿಸಿದನು. 7 ಇದಲ್ಲದೆ ಫಿಲಿಷ್ಟಿಯರ ಮೇಲೆಯೂ, ಗುರ್ಬಾಳಿನಲ್ಲಿ ವಾಸವಾಗಿದ್ದ ಅರಬಿಯರ ಮೇಲೆಯೂ, ಮೆಗೂನ್ಯರ ಮೇಲೆಯೂ ಅವನು ಯುದ್ಧಮಾಡಿದಾಗ, ದೇವರು ಅವನಿಗೆ ಸಹಾಯ ಮಾಡಿದರು. 8 ಅಮ್ಮೋನ್ಯರು ಉಜ್ಜೀಯನಿಗೆ ಕಪ್ಪವನ್ನು ಕೊಟ್ಟರು. ಆದ್ದರಿಂದ ಅವನ ಹೆಸರು ಈಜಿಪ್ಟಿನ ಪ್ರದೇಶದವರೆಗೂ ಬಹಳವಾಗಿ ಹಬ್ಬಿತು. ಅವನು ಬಹಳವಾಗಿ ಬಲಪಡಿಸಿಕೊಂಡಿದ್ದನು.

9 ಉಜ್ಜೀಯನು ಯೆರೂಸಲೇಮಿನಲ್ಲಿ ಮೂಲೆ ಬಾಗಿಲ ಬಳಿಯಲ್ಲಿಯೂ, ತಗ್ಗಿನ ಬಾಗಿಲ ಬಳಿಯಲ್ಲಿಯೂ, ಕೋಟೆಯ ಮೂಲೆಯಲ್ಲಿಯೂ ಬುರುಜುಗಳನ್ನು ಕಟ್ಟಿಸಿದನು. 10 ತಗ್ಗಿನ ದೇಶದಲ್ಲಿಯೂ, ಬಯಲು ದೇಶದಲ್ಲಿಯೂ ಅವನಿಗೆ ಬಹು ಪಶುಗಳಿದ್ದವು. ಆ ಅಡವಿಯಲ್ಲಿ ಬುರುಜುಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿದನು. ಹಾಗೆಯೇ ಪರ್ವತಗಳಲ್ಲಿಯೂ, ಕರ್ಮೆಲಿನಲ್ಲಿಯೂ ಅವನಿಗೆ ಒಕ್ಕಲಿಗರೂ, ದ್ರಾಕ್ಷಿ ವ್ಯವಸಾಯದವರೂ ಇದ್ದರು. ಏಕೆಂದರೆ ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದನು.

11 ಇದಲ್ಲದೆ ಲೇಖಕನಾದ ಯೆಹೀಯೇಲನ ಕೈಯಿಂದಲೂ, ಅಧಿಪತಿಯಾದ ಮಾಸೇಯನ ಕೈಯಿಂದ ಬರೆದಿರುವ ಲೆಕ್ಕದ ಪ್ರಕಾರ, ಗುಂಪುಗುಂಪಾಗಿ ಯುದ್ಧಕ್ಕೆ ಹೋಗುವ ಯುದ್ಧವೀರರ ಸೈನ್ಯವು ಉಜ್ಜೀಯನಿಗೆ ಇತ್ತು. ಆ ಸೈನ್ಯವು ಅರಸನ ಪ್ರಧಾನರಲ್ಲಿ ಒಬ್ಬನಾದ ಹನನ್ಯನ ಕೈಕೆಳಗೆ ಇತ್ತು. 12 ಪರಾಕ್ರಮಶಾಲಿಗಳಲ್ಲಿ ಕುಟುಂಬಗಳ ಮುಖ್ಯಸ್ಥರ ಲೆಕ್ಕವು 2,600 ಮಂದಿ. 13 ಅವರ ಕೈಕೆಳಗೆ ಅರಸನಿಗೆ ಸಹಾಯವಾಗಿ ಶತ್ರುವಿನ ಮೇಲೆ ಬಹಳ ಪರಾಕ್ರಮದಿಂದ ಯುದ್ಧಮಾಡುವ 3,07,500 ಮಂದಿಯುಳ್ಳ ಸೈನ್ಯವಿತ್ತು. 14 ಉಜ್ಜೀಯನು ಸಮಸ್ತ ದಂಡಿನಲ್ಲಿ ಅವರ ನಿಮಿತ್ತ ಗುರಾಣಿಗಳನ್ನೂ, ಈಟಿಗಳನ್ನೂ, ಶಿರಸ್ತ್ರಾಣಗಳನ್ನೂ, ಉಕ್ಕಿನ ಕವಚಗಳನ್ನೂ, ಬಿಲ್ಲುಗಳನ್ನೂ, ಕವಣೆಗಳನ್ನೂ ಸಿದ್ಧಮಾಡಿದನು. 15 ಇದಲ್ಲದೆ ಬಾಣಗಳನ್ನೂ, ದೊಡ್ಡ ಕಲ್ಲುಗಳನ್ನೂ ಎಸೆಯುವ ನಿಮಿತ್ತ ಬುರುಜುಗಳ ಮೇಲೆಯೂ, ಮಣ್ಣುದಿಬ್ಬಗಳ ಮೇಲೆಯೂ ಇರಲು, ಪ್ರವೀಣರಿಂದ ಮಾಡಿದ ಯಂತ್ರಗಳನ್ನೂ ಯೆರೂಸಲೇಮಿನಲ್ಲಿ ಮಾಡಿಸಿದನು. ಆದ್ದರಿಂದ ಅವನ ಹೆಸರು ಬಹಳ ದೂರದವರೆಗೆ ಪ್ರಸಿದ್ಧಿಯಾಯಿತು. ಬಹು ಬಲಿಷ್ಠನಾಗುವ ಪರ್ಯಂತರ ಅವನು ಬಹು ಆಶ್ಚರ್ಯಕರವಾಗಿ ಸಹಾಯ ಪಡೆಯುತ್ತಿದ್ದನು.

16 ಆದರೆ ಅವನು ಬಲ ಹೊಂದಿದ ಮೇಲೆ ಅವನ ಗರ್ವವು ನಾಶಕ್ಕೆ ನಡೆಸಿತು. ಅವನು ಧೂಪಪೀಠದ ಮೇಲೆ ಧೂಪಸುಡುವುದಕ್ಕೂ, ಯೆಹೋವ ದೇವರ ಆಲಯದಲ್ಲಿ ಪ್ರವೇಶಿಸಿ ತನ್ನ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಅಪರಾಧ ಮಾಡಿದನು. 17 ಆಗ ಯಾಜಕನಾದ ಅಜರ್ಯನೂ, ಅವನ ಸಂಗಡ ಯೆಹೋವ ದೇವರ ಪರಾಕ್ರಮವುಳ್ಳ ಯಾಜಕರಾದ ಎಂಬತ್ತು ಮಂದಿಯೂ ಅರಸನಾದ ಉಜ್ಜೀಯನ ಹಿಂದೆ ಪ್ರವೇಶಿಸಿ, 18 ಅವನನ್ನು ಎದುರಿಸಿ, “ಉಜ್ಜೀಯನೇ, ಯೆಹೋವ ದೇವರಿಗೆ ಧೂಪ ಸುಡುವುದು ಪ್ರತಿಷ್ಠಿತರಾದ ಯಾಜಕರಾದ ಆರೋನನ ಮಕ್ಕಳಿಗೆ ಸೇರಿದ್ದು. ನೀನು ಪರಿಶುದ್ಧ ಸ್ಥಳದಿಂದ ಹೊರಟು ಹೋಗು, ಅಪರಾಧ ಮಾಡಿದೆ. ದೇವರಾದ ಯೆಹೋವ ದೇವರಿಂದ ನಿನಗೆ ಗೌರವ ದೊರಕದು,” ಎಂದನು.

19 ಆಗ ಉಜ್ಜೀಯನು ಕೋಪಿಸಿಕೊಂಡನು. ಧೂಪವನ್ನು ಸುಡಲು ಅವನ ಕೈಯಲ್ಲಿ ಧೂಪಾರತಿ ಇತ್ತು. ಆದರೆ ಅವನು ಯಾಜಕರ ಮೇಲೆ ಕೋಪ ಮಾಡುತ್ತಿರುವಾಗಲೇ, ಯೆಹೋವ ದೇವರ ಮಂದಿರದಲ್ಲಿರುವ ಧೂಪಪೀಠದ ಬಳಿಯಲ್ಲಿ ನಿಂತ ಯಾಜಕರ ಮುಂದೆ ಅವನ ಹಣೆಯಲ್ಲಿ ಕುಷ್ಠವು ಬಂದಿತು. 20 ಆಗ ಮುಖ್ಯಯಾಜಕನಾದ ಅಜರ್ಯನೂ, ಯಾಜಕರೆಲ್ಲರೂ ಅವನನ್ನು ದೃಷ್ಟಿಸಿ ನೋಡಿದಾಗ ಅವನ ಹಣೆಯಲ್ಲಿ ಕುಷ್ಠವು ಕಂಡುಬಂದದ್ದರಿಂದ ಅವರು ಅವನನ್ನು ಶೀಘ್ರವಾಗಿ ಅಲ್ಲಿಂದ ಹೊರಹಾಕಿದರು. ಯೆಹೋವ ದೇವರು ತನ್ನನ್ನು ಬಾಧಿಸಿದ್ದರಿಂದ ಅವನು ಸ್ವತಃ ಹೊರಗೆ ಹೋಗಲು ತ್ವರೆಪಟ್ಟನು.

21 ಅರಸನಾದ ಉಜ್ಜೀಯನು ಮರಣದ ದಿವಸದವರೆಗೂ ಕುಷ್ಠರೋಗಿಯಾಗಿದ್ದು ಯೆಹೋವ ದೇವರ ಆಲಯದಿಂದ ಬಹಿಷ್ಕೃತನಾದನು. ಅವನು ಕುಷ್ಠರೋಗದ ನಿಮಿತ್ತ ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅವನ ಮಗ ಯೋತಾಮನು ರಾಜಗೃಹಾಧಿಪತ್ಯವನ್ನು ಮತ್ತು ಪ್ರಜಾಪಾಲನೆಯನ್ನೂ ನೋಡಿಕೊಳ್ಳುತ್ತಿದ್ದನು.

22 ಉಜ್ಜೀಯನ ಇತರ ಕ್ರಿಯೆಗಳನ್ನು, ಮೊದಲನೆಯದಿಂದ ಕಡೆಯವರೆಗೆ ಆಮೋಚನ ಮಗನಾದ ಯೆಶಾಯನೆಂಬ ಪ್ರವಾದಿಯು ಬರೆದನು. 23 ಉಜ್ಜೀಯನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನು ಕುಷ್ಠರೋಗಿಯಾಗಿದ್ದರಿಂದ, ಅವರು ಅವನ ಶವವನ್ನು ರಾಜಕುಟುಂಬದ ಸ್ಮಶಾನ ಭೂಮಿಯ ಹತ್ತಿರದ ಹೊಲದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು.

<- 2 ಪೂರ್ವಕಾಲ ವೃತ್ತಾಂತ 252 ಪೂರ್ವಕಾಲ ವೃತ್ತಾಂತ 27 ->