8 ಆಸನು ಆ ಮಾತುಗಳನ್ನೂ, ಪ್ರವಾದಿಯಾದ ಓದೇದನ ಮಗ ಅಜರ್ಯನ ಪ್ರವಾದನಾ ಮಾತುಗಳನ್ನೂ ಕೇಳಿದಾಗ, ಅವನು ಬಲಗೊಂಡು ಯೆಹೂದ ಬೆನ್ಯಾಮೀನಿನ ಸಮಸ್ತ ದೇಶದೊಳಗಿಂದಲೂ, ಎಫ್ರಾಯೀಮನ ಬೆಟ್ಟದಲ್ಲಿ ತಾನು ಹಿಡಿದ ಪಟ್ಟಣಗಳೊಳಗಿಂದಲೂ ಅಸಹ್ಯ ವಿಗ್ರಹಗಳನ್ನು ತೆಗೆದುಹಾಕಿ, ಯೆಹೋವ ದೇವರ ದ್ವಾರಾಂಗಳದ ಮುಂದೆ ಇದ್ದ ಯೆಹೋವ ದೇವರ ಬಲಿಪೀಠವನ್ನು ನೂತನಪಡಿಸಿದನು.
9 ತರುವಾಯ ಆಸನು ಎಲ್ಲಾ ಯೆಹೂದ ಹಾಗೂ ಬೆನ್ಯಾಮೀನ್ ಕುಲಗಳವರನ್ನು ಬರಮಾಡಿದನು. ಯೆಹೂದ ದೇಶದಲ್ಲಿ ನೆಲೆಸಿದ್ದ ಎಫ್ರಾಯೀಮ್, ಮನಸ್ಸೆ ಹಾಗೂ ಸಿಮೆಯೋನ್ ಕುಲಗಳವರನ್ನು ಸಹ ಕರೆಸಿಕೊಂಡನು. ಅವನ ದೇವರಾದ ಯೆಹೋವ ದೇವರು ಅವನ ಸಂಗಡ ಇದ್ದಾರೆಂದು ಇವರು ಕಂಡಾಗ, ಇಸ್ರಾಯೇಲಿನೊಳಗಿಂದ ಅನೇಕರು ಅವನ ಕಡೆಗೆ ಬಂದಿದ್ದರು.
10 ಹೀಗೆಯೇ ಆಸನ ಆಳಿಕೆಯ ಹದಿನೈದನೆಯ ವರ್ಷದ ಮೂರನೆಯ ತಿಂಗಳಿನಲ್ಲಿ ಅವರು ಯೆರೂಸಲೇಮಿನಲ್ಲಿ ಕೂಡಿಕೊಂಡರು. 11 ಅದೇ ಕಾಲದಲ್ಲಿ ತಾವು ತಂದ ಕೊಳ್ಳೆಯಿಂದ ಏಳು ನೂರು ಹೋರಿಗಳನ್ನೂ, ಏಳು ಸಾವಿರ ಕುರಿಗಳನ್ನೂ ಯೆಹೋವ ದೇವರಿಗೆ ಬಲಿ ಅರ್ಪಿಸಿದರು. 12 ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ತಮ್ಮ ಪೂರ್ಣಹೃದಯದಿಂದಲೂ, ತಮ್ಮ ಪೂರ್ಣಪ್ರಾಣದಿಂದಲೂ ಹುಡುಕಬೇಕೆಂದೂ 13 ಯಾವನಾದರೂ ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಹುಡುಕದೆ ಹೋದರೆ; ಹಿರಿಯನಾದರೂ, ಕಿರಿಯನಾದರೂ, ಪುರುಷನಾದರೂ, ಸ್ತ್ರೀಯಾದರೂ ಸಾಯಬೇಕೆಂದು ಒಡಂಬಡಿಕೆ ಮಾಡಿಕೊಂಡರು. 14 ಮಹಾಶಬ್ದದಿಂದಲೂ, ಆರ್ಭಟದಿಂದಲೂ, ತುತೂರಿಗಳ ಶಬ್ದದಿಂದಲೂ, ಕೊಂಬುಗಳ ಶಬ್ದದಿಂದಲೂ ಯೆಹೋವ ದೇವರ ಮುಂದೆ ಆಣೆ ಇಟ್ಟರು. 15 ಯೆಹೂದದವರೆಲ್ಲರು ಪ್ರಮಾಣಕ್ಕೆ ಸಂತೋಷಪಟ್ಟರು. ಏಕೆಂದರೆ ಅವರು ತಮ್ಮ ಪೂರ್ಣಹೃದಯದಿಂದ ಆಣೆ ಇಟ್ಟು, ತಮ್ಮ ಪೂರ್ಣ ಇಷ್ಟಪೂರ್ವಕವಾಗಿ ದೇವರನ್ನು ಹುಡುಕಿದರು; ದೇವರು ಅವರಿಗೆ ಸಿಕ್ಕಿದರು. ಯೆಹೋವ ದೇವರು ಅವರಿಗೆ ಸುತ್ತಲೂ ವಿಶ್ರಾಂತಿಕೊಟ್ಟರು.
16 ಅರಸನಾದ ಆಸನ ಅಜ್ಜಿ ಮಾಕ ಎಂಬವಳು ಅಶೇರ ದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದ್ದರಿಂದ, ಅವಳನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಿದನು. ಇದಲ್ಲದೆ ಆಸನು ಆ ಮೂರ್ತಿಯನ್ನು ಕಡಿದು ಚೂರುಚೂರು ಮಾಡಿ, ಕಿದ್ರೋನ್ ಹಳ್ಳದ ಹತ್ತಿರ ಸುಟ್ಟುಬಿಟ್ಟನು. 17 ಇಸ್ರಾಯೇಲಿನೊಳಗಿಂದ ಪೂಜಾಸ್ಥಳಗಳನ್ನು ತೆಗೆದು ಹಾಕದಿದ್ದರೂ ಆಸನ ಹೃದಯವು ತನ್ನ ಜೀವಮಾನದಲ್ಲೆಲ್ಲಾ ಯೆಹೋವ ದೇವರಿಗೆ ಸಮರ್ಪಿತವಾಗಿತ್ತು. 18 ತಾನು ಮತ್ತು ತನ್ನ ತಂದೆಯೂ ಪ್ರತಿಷ್ಠಿಸಿದ ಬೆಳ್ಳಿಬಂಗಾರವನ್ನೂ ಸಲಕರಣೆಗಳನ್ನೂ ದೇವರ ಆಲಯಕ್ಕೆ ತಂದನು.
19 ಆಸನ ಆಳ್ವಿಕೆಯಲ್ಲಿ ಮೂವತ್ತೈದನೆಯ ವರ್ಷದವರೆಗೂ ಯುದ್ಧವಿಲ್ಲದೆ ಇತ್ತು.
<- 2 ಪೂರ್ವಕಾಲ ವೃತ್ತಾಂತ 142 ಪೂರ್ವಕಾಲ ವೃತ್ತಾಂತ 16 ->