Link to home pageLanguagesLink to all Bible versions on this site
2
ಆರಾಧನೆಯ ಕ್ರಮ
1 ಎಲ್ಲದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರವೂ ಅರಸರುಗಳಿಗಾಗಿಯೂ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಬಿನ್ನಹಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಪ್ರಬೋಧಿಸುತ್ತೇನೆ. 2 ಹೀಗೆ ಮಾಡಿದರೆ ನಾವು ನೆಮ್ಮದಿ ಹಾಗೂ ಸಮಾಧಾನಗಳಿಂದ ಕೂಡಿದ ಜೀವನವನ್ನು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ನಡೆಸುವುದಕ್ಕಾಗುವುದು. 3 ಏಕೆಂದರೆ ಇದು ನಮ್ಮ ರಕ್ಷಕರಾದ ದೇವರ ಮುಂದೆ ಒಳ್ಳೆಯದಾಗಿಯೂ ಅಂಗೀಕರಿಸತಕ್ಕದ್ದಾಗಿಯೂ ಇದೆ. 4 ಎಲ್ಲಾ ಮನುಷ್ಯರೂ ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಬರಬೇಕೆಂಬುದು ದೇವರ ಚಿತ್ತವಾಗಿದೆ. 5 ದೇವರು ಒಬ್ಬರೇ, ದೇವರಿಗೂ ಮನುಷ್ಯರಿಗೂ ಮಧ್ಯಸ್ಥ ಒಬ್ಬರೇ. ಅವರು ಮನುಷ್ಯರಾಗಿ ಬಂದ ಕ್ರಿಸ್ತ ಯೇಸುವೇ. 6 ಯೇಸು ಎಲ್ಲರಿಗೋಸ್ಕರ ವಿಮೋಚನೆಯ ಕ್ರಯವಾಗಿ ತಮ್ಮನ್ನು ತಾವೇ ಒಪ್ಪಿಸಿಕೊಟ್ಟರು. ಇದೇ ಸೂಕ್ತ ಸಮಯದಲ್ಲಿ ನೀಡಬೇಕಾದ ಸಾಕ್ಷಿಯಾಗಿದೆ. 7 ಇದಕ್ಕಾಗಿಯೇ ಸಂದೇಶ ಸಾರುವವನೂ ಅಪೊಸ್ತಲನೂ ಆಗಿರುವ ನಾನು ಯೆಹೂದ್ಯರಲ್ಲದವರಿಗೆ ನಂಬಿಗಸ್ತನಾದ ಸತ್ಯ ಬೋಧಕನಾಗಿ ನೇಮಕವಾದೆನು. ಇದು ಸುಳ್ಳಲ್ಲ, ಸತ್ಯವನ್ನೇ ಹೇಳುತ್ತೇನೆ.

8 ಆದ್ದರಿಂದ ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ಸಂದೇಹವೂ ಇಲ್ಲದೆ ಶುದ್ಧವಾದ ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ನಾನು ಅಪೇಕ್ಷಿಸುತ್ತೇನೆ. 9 ಹಾಗೆಯೇ ಸ್ತ್ರೀಯರು ಸಭ್ಯತೆ ಹಾಗೂ ಸ್ವಸ್ಥಬುದ್ಧಿಯುಳ್ಳವರಾಗಿದ್ದು ಗೌರವಕ್ಕೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ, ಚಿನ್ನ, ಮುತ್ತುಗಳು, ಬೆಲೆಯುಳ್ಳ ವಸ್ತ್ರ ಇವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ, 10 ದೇವ ಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ತಕ್ಕಂತೆ ಸತ್ಕ್ರಿಯೆಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳಬೇಕು.

11 ಸ್ತ್ರೀಯು*ಅಥವಾ ಹೆಂಡತಿ ಮೌನವಾಗಿದ್ದು ಎಲ್ಲಾ ಅಧೀನತೆಯನ್ನು ಕಲಿಯಬೇಕು. 12 ಆದರೆ ಉಪದೇಶ ಮಾಡುವುದಕ್ಕಾಗಲಿ, ಪುರುಷನಅಥವಾ ತನ್ನ ಗಂಡನ ಮೇಲೆ ಮೇಲೆ ಅಧಿಕಾರ ನಡೆಸುವುದಕ್ಕಾಗಲಿ ಸ್ತ್ರೀಗೆ ನಾನು ಅಪ್ಪಣೆ ಕೊಡುವುದಿಲ್ಲ. ಆಕೆಯು ಮೌನವಾಗಿರಬೇಕು. 13 ಏಕೆಂದರೆ ಮೊದಲು ನಿರ್ಮಿತನಾದವನು ಆದಾಮನು, ಆಮೇಲೆ ಹವ್ವಳು. 14 ಆದಾಮನು ವಂಚನೆಗೊಳಗಾಗಲಿಲ್ಲ, ಸ್ತ್ರೀಯು ವಂಚನೆಗೊಳಗಾಗಿ ಅಪರಾಧಿಯಾದಳು. 15 ಆದರೂ ಸ್ತ್ರೀಯರು ಸ್ವಸ್ಥಬುದ್ಧಿಯಿಂದ ನಂಬಿಕೆ, ಪ್ರೀತಿ ಹಾಗೂ ಪರಿಶುದ್ಧತೆಯಲ್ಲಿ ನೆಲೆಗೊಂಡಿದ್ದರೆ ಅವರು ಮಗುವನ್ನು ಹೆರುವುದರ ಮೂಲಕ ರಕ್ಷಣೆಹೊಂದುವರು.

<- 1 ತಿಮೊಥೆಯನಿಗೆ 11 ತಿಮೊಥೆಯನಿಗೆ 3 ->