Link to home pageLanguagesLink to all Bible versions on this site

ಥೆಸಲೋನಿಕದವರಿಗೆ
ಪೌಲನು ಬರೆದ ಮೊದಲನೆಯ ಪತ್ರಿಕೆ

1 ತಂದೆ ದೇವರಲ್ಲಿಯೂ ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ,

 
ಪೌಲ, ಸಿಲ್ವಾನ ಹಾಗೂ ತಿಮೊಥೆ ಇವರು ಬರೆಯುವ ಪತ್ರ:
 
ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
 
ಪೌಲನ ಕೃತಜ್ಞತಾಸ್ತುತಿ
2 ನಾವು ನಮ್ಮ ಪ್ರಾರ್ಥನೆಗಳಲ್ಲಿ ನಿಮ್ಮನ್ನು ಸ್ಮರಿಸುತ್ತಾ ನಿಮ್ಮೆಲ್ಲರಿಗಾಗಿ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. 3 ನಿಮ್ಮ ವಿಶ್ವಾಸ ಪ್ರಕಟಿಸುವ ಕ್ರಿಯೆಯನ್ನೂ ಪ್ರೀತಿ ಪ್ರೇರಿತ ಪ್ರಯಾಸವನ್ನೂ ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿರುವ ನಿರೀಕ್ಷೆಯ ಸ್ಮರಣೆಯನ್ನೂ ನಾವು ನಮ್ಮ ತಂದೆಯಾದ ದೇವರ ಮುಂದೆ ಎಡಬಿಡದೆ ಜ್ಞಾಪಿಸಿಕೊಳ್ಳುತ್ತೇವೆ.

4 ದೇವರು ಪ್ರೀತಿಸುವ ಪ್ರಿಯರೇ, ದೇವರು ತಾವಾಗಿಯೇ ನಿಮ್ಮನ್ನು ಆರಿಸಿಕೊಂಡಿದ್ದಾರೆಂದು ನಾವು ಬಲ್ಲೆವು. 5 ಏಕೆಂದರೆ ನಮ್ಮ ಸುವಾರ್ತೆಯು ನಿಮಗೆ ಬರೀ ಮಾತಾಗಿ ಬಾರದೆ, ಶಕ್ತಿಯಲ್ಲಿಯೂ ಪವಿತ್ರಾತ್ಮ ದೇವರ ಸನ್ನಿಧಿಯಲ್ಲಿಯೂ ಬಹು ನಿಶ್ಚಯದಲ್ಲಿಯೂ ಬಂತೆಂಬುದನ್ನು ತಿಳಿದಿದ್ದೇವೆ. ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಮಾಡಿದ ಜೀವನ ಎಂಥದ್ದೆಂದು ನೀವೇ ಬಲ್ಲಿರಿ. 6 ನೀವು ಬಹು ಹಿಂಸೆಯಿಂದಲೂ ಪವಿತ್ರಾತ್ಮ ಪ್ರೇರಿತ ಆನಂದದಿಂದಲೂ ವಾಕ್ಯವನ್ನು ಅಂಗೀಕರಿಸಿ ನಮ್ಮನ್ನೂ ಕರ್ತ ಯೇಸುವನ್ನೂ ಅನುಸರಿಸುವವರಾಗಿದ್ದೀರಿ. 7 ಹೀಗೆ ಮಕೆದೋನ್ಯ ಹಾಗೂ ಅಖಾಯದ ವಿಶ್ವಾಸಿಗಳೆಲ್ಲರಿಗೂ ನೀವು ಆದರ್ಶರಾದಿರಿ. 8 ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯ ಹಾಗೂ ಅಖಾಯದಲ್ಲಿ ಘೋಷಿತವಾದದ್ದಲ್ಲದೆ, ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು ಎಲ್ಲಾ ಸ್ಥಳಗಳಲ್ಲಿಯೂ ಹರಡಿತು. ಆದ್ದರಿಂದ ಇದನ್ನು ಕುರಿತು ನಾವು ಹೇಳಬೇಕಾದ ಅವಶ್ಯ ಏನೂ ಇಲ್ಲ. 9 ಏಕೆಂದರೆ ನೀವು ನಮ್ಮನ್ನು ಹೇಗೆ ಸ್ವೀಕರಿಸಿದ್ದಿರೆಂಬುದನ್ನೂ ನೀವು ಹೇಗೆ ದೇವರಲ್ಲದವುಗಳನ್ನು ಬಿಟ್ಟುಬಿಟ್ಟು ದೇವರ ಕಡೆಗೆ ತಿರುಗಿಕೊಂಡು ಜೀವವುಳ್ಳ ಸತ್ಯದೇವರನ್ನು ಸೇವಿಸುವವರಾದಿರೆಂಬುದನ್ನೂ ಅವರು ತಾವೇ ವಿವರಿಸುತ್ತಾರೆ. 10 ಇದಲ್ಲದೆ, ದೇವರು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ ತಮ್ಮ ಪುತ್ರರಾಗಿರುವ ಯೇಸು ಮುಂದೆ ಬರುವ ಕೋಪದಿಂದ ನಮ್ಮನ್ನು ಬಿಡಿಸುವವರೂ ಆಗಿದ್ದಾರೆ. ಈ ಯೇಸುವನ್ನೇ ಪರಲೋಕದಿಂದ ಬರುವುದನ್ನು ನೀವು ಎದುರು ನೋಡುತ್ತಿದ್ದೀರಿ ಎಂಬುದನ್ನೂ ಅವರು ನಮಗೆ ವಿವರಿಸಿದರು.

1 ಥೆಸಲೋನಿಕದವರಿಗೆ 2 ->