Link to home pageLanguagesLink to all Bible versions on this site
24
ದಾವೀದನು ಸೌಲನನ್ನು ಉಳಿಸಿದ್ದು
1 ಆಗ ಸೌಲನು ಫಿಲಿಷ್ಟಿಯರನ್ನು ಹಿಂದಟ್ಟಿ ತಿರುಗಿ ಬಂದಾಗ, “ದಾವೀದನು ಏನ್ಗೆದಿ ಮರುಭೂಮಿಯಲ್ಲಿ ಇದ್ದಾನೆ,” ಎಂದು ಅವನಿಗೆ ತಿಳಿದುಬಂದಿತು. 2 ಆಗ ಸೌಲನು ಸಮಸ್ತ ಇಸ್ರಾಯೇಲಿನಲ್ಲಿ ಶ್ರೇಷ್ಠರಾದ ಮೂರು ಸಾವಿರ ಸೈನಿಕರನ್ನು ತೆಗೆದುಕೊಂಡು ದಾವೀದನನ್ನೂ, ಅವನ ಜನರನ್ನೂ ಹುಡುಕಲು ಕಾಡುಮೇಕೆಗಳಿರುವ ಬಂಡೆಗಳಿಗೆ ಹೋದನು.

3 ಸೌಲನು ಮಾರ್ಗದಲ್ಲಿ ಕುರಿಹಟ್ಟಿಗಳು ಇರುವ ಗವಿಯ ಬಳಿಗೆ ಬಂದು, ಅದರಲ್ಲಿ ಅವನು ಶೌಚಕ್ಕಾಗಿ ಹೋದನು. ಆದರೆ ದಾವೀದನೂ, ಅವನ ಜನರೂ ಅದೇ ಗವಿಯ ಹಿಂದೆ ಅಡಗಿಕೊಂಡಿದ್ದರು. 4 ಆಗ ದಾವೀದನ ಜನರು ಅವನಿಗೆ, “ ‘ನಾನು ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು. ಆಗ ನೀನು ನಿನ್ನ ಇಷ್ಟಾನುಸಾರ ಅವನಿಗೆ ಮಾಡಬಹುದು,’ ಎಂದು ಯೆಹೋವ ದೇವರು ನಿನಗೆ ಹೇಳಿದ ದಿನವು ಇದೇ,” ಎಂದರು. ಆಗ ದಾವೀದನು ಎದ್ದು ಹೋಗಿ ರಹಸ್ಯವಾಗಿ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡನು.

5 ಆದರೆ ಹಾಗೆ ಮಾಡಿದ ಮೇಲೆ, ಸೌಲನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ದಾವೀದನ ಮನಃಸ್ಸಾಕ್ಷಿ ಅವನನ್ನು ಹಂಗಿಸತೊಡಗಿತು. 6 ದಾವೀದನು ತನ್ನ ಜನರಿಗೆ, “ಅವನು ಯೆಹೋವ ದೇವರ ಅಭಿಷಿಕ್ತನಾದದರಿಂದ ನನ್ನ ಕೈ ಅವನಿಗೆ ವಿರೋಧವಾಗಿ ಚಾಚಿ, ನನ್ನ ಒಡೆಯನಿಗೆ ಈ ಕಾರ್ಯ ಮಾಡುವುದನ್ನು ಯೆಹೋವ ದೇವರು ತಡೆಯಲಿ,” ಎಂದನು. 7 ಹೀಗೆಯೇ ದಾವೀದನು ತನ್ನ ಜನರನ್ನು ಸೌಲನ ಮೇಲೆ ಬೀಳಗೊಡದೆ, ಈ ಮಾತುಗಳಿಂದ ಅವರನ್ನು ನಿಲ್ಲಿಸಿದನು. ಸೌಲನು ಎದ್ದು ಗವಿಯನ್ನು ಬಿಟ್ಟು, ಹೊರಗೆ ನಡೆದು ಹೋದನು.

8 ತರುವಾಯ ದಾವೀದನು ಎದ್ದು ಗವಿಯಿಂದ ಹೊರಗೆ ಬಂದು ಸೌಲನಿಗೆ, “ಅರಸನೇ, ನನ್ನ ಒಡೆಯನೇ,” ಎಂದು ಕೂಗಿದನು. ಸೌಲನು ಹಿಂದಿರುಗಿ ನೋಡಿದಾಗ, ದಾವೀದನು ನೆಲದವರೆಗೆ ಬಗ್ಗಿ ವಂದಿಸಿದನು. 9 ಸೌಲನಿಗೆ ದಾವೀದನು, “ಇಗೋ, ದಾವೀದನು ನಿನಗೆ ಕೇಡು ಮಾಡಲು ಹುಡುಕುತ್ತಾನೆಂದು ಹೇಳುವ ಮನುಷ್ಯರ ಮಾತುಗಳನ್ನು ಏಕೆ ಕೇಳುತ್ತಿದ್ದೀ? 10 ಯೆಹೋವ ದೇವರು ಈ ಗವಿಯಲ್ಲಿ ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರೆಂಬುದನ್ನು ಈ ದಿನ ನಿನ್ನ ಕಣ್ಣುಗಳು ಕಂಡವು. ಕೆಲವರು ನಿನ್ನನ್ನು ಕೊಂದುಹಾಕಲು ನನಗೆ ಒತ್ತಾಯಮಾಡಿದರು. ಆದರೆ ನಾನು ಅವರಿಗೆ, ‘ಅರಸನು ಯೆಹೋವ ದೇವರ ಅಭಿಷಿಕ್ತನು. ಆದುದರಿಂದ ನಾನು ನನ್ನ ಒಡೆಯನಿಗೆ ವಿರೋಧವಾಗಿ ಕೈಯೆತ್ತುವುದಿಲ್ಲ’ ಎಂದು ಹೇಳಿ ನಿನ್ನನ್ನು ಉಳಿಸಿದೆ. 11 ಇದಲ್ಲದೆ ನನ್ನ ತಂದೆಯೇ, ಇಲ್ಲಿ ನೋಡು! ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ತುಂಡನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ, ನಿನ್ನ ನಿಲುವಂಗಿಯ ಅಂಚನ್ನು ಮಾತ್ರ ಕತ್ತರಿಸಿಕೊಂಡದ್ದರಿಂದ, ನನ್ನಲ್ಲಿ ಕೆಟ್ಟತನವೂ, ದ್ರೋಹವೂ ಇಲ್ಲವೆಂದು ಇದು ಸೂಚಿಸುತ್ತಿದೆ; ನಾನು ನಿನಗೆ ವಿರೋಧವಾಗಿ ತಪ್ಪುಮಾಡಲಿಲ್ಲವೆಂದು ತಿಳಿದುಕೋ. ಹೀಗಿದ್ದರೂ, ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ. 12 ಯೆಹೋವ ದೇವರು ನನ್ನ ನಿನ್ನ ಮಧ್ಯದಲ್ಲಿ ನ್ಯಾಯತೀರಿಸಲಿ. ಹೌದು, ಯೆಹೋವ ದೇವರು ತಾವೇ ನನಗೋಸ್ಕರ ನಿನ್ನ ವಿಷಯವಾಗಿ ಮುಯ್ಯಿಗೆ ಮುಯ್ಯಿ ಮಾಡಲಿ. ಆದರೆ ನಾನು ನಿನ್ನ ಮೇಲೆ ನನ್ನ ಕೈಯೆತ್ತುವುದಿಲ್ಲ. 13 ಪೂರ್ವಿಕರು ಹೇಳಿದ ಸಾಮತಿಯ ಪ್ರಕಾರ, ‘ದುಷ್ಟರಿಂದ ದುಷ್ಟತ್ವವು ಹುಟ್ಟುವುದು’ ಆದರೂ ನಾನು ನಿನಗೆ ವಿರೋಧವಾಗಿ ನನ್ನ ಕೈ ಮುಟ್ಟುವುದಿಲ್ಲ.

14 “ಇಸ್ರಾಯೇಲಿನ ಅರಸನು ಯಾರನ್ನು ಹಿಂದಟ್ಟಿ ಹೊರಟನು? ಯಾರನ್ನು ಹಿಂದಟ್ಟುತ್ತೀ? ಸತ್ತ ನಾಯಿಯನ್ನೇ? ಒಂದು ನೊಣವನ್ನೇ? 15 ಯೆಹೋವ ದೇವರು ನ್ಯಾಯಾಧಿಪತಿಯಾಗಿದ್ದು ನನಗೂ ನಿನಗೂ ನ್ಯಾಯತೀರಿಸಿ, ನನ್ನ ಪರವಾಗಿ ವಾದಿಸಿ, ನನ್ನನ್ನು ನಿನ್ನ ಕೈಯಿಂದ ತಪ್ಪಿಸಿಬಿಡಲಿ,” ಎಂದನು.

16 ದಾವೀದನ ಮಾತುಗಳು ಮುಗಿದ ನಂತರ, ಸೌಲನು ದಾವೀದನಿಗೆ, “ದಾವೀದನೇ, ನನ್ನ ಮಗನೇ, ಇದು ನಿನ್ನ ಸ್ವರವೋ?” ಎಂದು ಗಟ್ಟಿಯಾಗಿ ಅತ್ತನು. 17 ಇದಲ್ಲದೆ ಅವನು ದಾವೀದನಿಗೆ, “ನೀನು ನನಗಿಂತ ನೀತಿವಂತನು. ನಾನು ನಿನಗೆ ಕೇಡನ್ನು ಮಾಡಿದರೂ, ನೀನು ನನಗೆ ಒಳ್ಳೆಯದನ್ನು ಮಾಡಿದೆ. 18 ಯೆಹೋವ ದೇವರು ನನ್ನನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಾಗ, ನೀನು ನನ್ನನ್ನು ಕೊಂದುಹಾಕದೆ ಇದ್ದುದರಿಂದ, ನೀನು ನನಗೆ ಉಪಕಾರ ಮಾಡಿದ್ದನ್ನು ಈ ಹೊತ್ತು ತೋರಿಸಿದೆ. 19 ಏಕೆಂದರೆ ಯಾವನಾದರೂ ತನ್ನ ಶತ್ರುವನ್ನು ಹಿಡಿದುಕೊಂಡರೆ, ಅವನನ್ನು ಸುರಕ್ಷಿತನಾಗಿ ಬಿಟ್ಟುಬಿಡುವನೋ? ಈ ಹೊತ್ತು ನೀನು ನನಗೆ ಒಳ್ಳೆಯದನ್ನು ಮಾಡಿದ್ದರಿಂದ ಯೆಹೋವ ದೇವರು ನಿನಗೆ ಒಳ್ಳೆಯದನ್ನು ಮಾಡಲಿ. 20 ಈಗ ಇಗೋ, ನೀನು ನಿಶ್ಚಯವಾಗಿ ಅರಸನಾಗುವೆ ಎಂದೂ, ಇಸ್ರಾಯೇಲಿನ ರಾಜ್ಯವು ನಿನ್ನ ಕೈಯಲ್ಲಿ ಸ್ಥಿರವಾಗುವುದೆಂದೂ ನಾನು ಚೆನ್ನಾಗಿ ಬಲ್ಲೆನು. 21 ಆದ್ದರಿಂದ ನೀನು ನನ್ನ ತರುವಾಯ ನನ್ನ ಸಂತಾನವನ್ನು ಕಡಿದುಬಿಡುವುದಿಲ್ಲವೆಂದೂ, ನನ್ನ ಗೋತ್ರದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ನನಗೆ ಯೆಹೋವ ದೇವರ ಹೆಸರಿನಲ್ಲಿ ಪ್ರಮಾಣಮಾಡು,” ಎಂದನು.

22 ಹಾಗೆಯೇ ದಾವೀದನು ಸೌಲನಿಗೆ ಪ್ರಮಾಣ ಮಾಡಿದನು. ಆಗ ಸೌಲನು ತನ್ನ ಮನೆಗೆ ಹೋದನು. ಆದರೆ ದಾವೀದನೂ ಅವನ ಮನುಷ್ಯರೂ ಆಶ್ರಯಗಿರಿಗೆ ಏರಿಹೋದರು.

<- 1 ಸಮುಯೇಲ 231 ಸಮುಯೇಲ 25 ->