15 ಅರಸನಾದ ಸೊಲೊಮೋನನು ದಾಸರನ್ನು ಕೂಡಿಸಿದ ಕಾರಣವೇನೆಂದರೆ, ಯೆಹೋವ ದೇವರ ಮಂದಿರವನ್ನೂ, ತನ್ನ ಅರಮನೆಯನ್ನೂ, ಮಿಲ್ಲೋವನ್ನೂ, ಯೆರೂಸಲೇಮಿನ ಗೋಡೆಯನ್ನೂ, ಹಾಚೋರನ್ನೂ, ಮೆಗಿದ್ದೋವನ್ನೂ, ಗೆಜೆರನ್ನೂ ಕಟ್ಟುವುದಕ್ಕೋಸ್ಕರವೇ. 16 ಈಜಿಪ್ಟಿನ ಅರಸನಾದ ಫರೋಹನು ಹೊರಟುಹೋಗಿ, ಗೆಜೆರನ್ನು ತೆಗೆದುಕೊಂಡು, ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟು, ಪಟ್ಟಣದಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಕೊಂದು, ಸೊಲೊಮೋನನ ಹೆಂಡತಿಯಾದ ತನ್ನ ಮಗಳಿಗೆ ಅದನ್ನು ಬಹುಮಾನವಾಗಿ ಕೊಟ್ಟನು. 17 ಹೀಗೆಯೇ ಸೊಲೊಮೋನನು ಗೆಜೆರನ್ನೂ, ಕೆಳಗಿನ ಬೇತ್ ಹೋರೋನನ್ನೂ, 18 ಬಾಲಾತನ್ನೂ, ಮರುಭೂಮಿಯಲ್ಲಿರುವ ತದ್ಮೋರ್[a] ಎಂಬ ಸ್ಥಳವನ್ನೂ ಕಟ್ಟಿಸಿದನು. 19 ಇದಲ್ಲದೆ ಸೊಲೊಮೋನನು ಉಗ್ರಾಣದ ಪಟ್ಟಣಗಳನ್ನೂ, ತನ್ನ ರಾಹುತರಿಗೋಸ್ಕರ ಮತ್ತು ರಥಗಳಿಗೋಸ್ಕರ ಪಟ್ಟಣಗಳನ್ನೂ ಕಟ್ಟಿಸಿದನು. ಯೆರೂಸಲೇಮಿನಲ್ಲಿಯೂ, ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತಗಳಲ್ಲಿಯೂ ತನಗೆ ಇಷ್ಟವಾದವುಗಳನ್ನೆಲ್ಲಾ ಕಟ್ಟಿಸಿದನು.
20 ಇಸ್ರಾಯೇಲರಲ್ಲದ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು, ಇವರಲ್ಲಿ ಉಳಿದ ಸಮಸ್ತ ಜನರನ್ನೂ 21 ಇಸ್ರಾಯೇಲರು ಸಂಹರಿಸದೆ ಉಳಿಸಿದ್ದ ಅವರ ಮಕ್ಕಳನ್ನೂ ಸೊಲೊಮೋನನು ಇಂದಿನವರೆಗೂ ದಾಸತ್ವಕ್ಕಾಗಿ ನೇಮಿಸಿದನು. 22 ಆದರೆ ಸೊಲೊಮೋನನು ಇಸ್ರಾಯೇಲರನ್ನು ದಾಸರಾಗಿ ಮಾಡಲಿಲ್ಲ. ಅವರು ಯುದ್ಧಭಟರಾಗಿಯೂ, ಅವನ ಅಧಿಪತಿಯಾಗಿಯೂ, ತನ್ನ ಕೈಕೆಳಗಿರುವ ಅವನ ಪ್ರಧಾನರಾಗಿಯೂ, ಅಧಿಕಾರಿಗಳಾಗಿಯೂ, ತನ್ನ ರಥಗಳ ಮೇಲೆಯೂ, ರಾಹುತರ ಮೇಲೆಯೂ ಅಧಿಪತಿಗಳಾಗಿಯೂ ಇದ್ದರು. 23 ಇದರೊಳಗೆ ಐದು ನೂರ ಐವತ್ತು ಮಂದಿ ಸೊಲೊಮೋನನ ಕೆಲಸದ ಪ್ರಧಾನ ಅಧಿಕಾರಿಗಳಾಗಿದ್ದರು. ಇವರು ಕೆಲಸದಲ್ಲಿ ಕಷ್ಟಪಡುವ ಜನರ ಮೇಲೆ ಅಧಿಕಾರಿಗಳಾಗಿದ್ದರು.
24 ಆದರೆ ಫರೋಹನ ಮಗಳು ದಾವೀದನ ಪಟ್ಟಣದಿಂದ ತನಗೋಸ್ಕರ ಸೊಲೊಮೋನನು ಕಟ್ಟಿಸಿದ ಪಟ್ಟಣಕ್ಕೆ ಬಂದಳು. ಆಗ ಅವನು ಮಿಲ್ಲೋವನ್ನು ಕಟ್ಟಿಸಿದನು.
25 ವರುಷಕ್ಕೆ ಮೂರು ಸಾರಿ ಸೊಲೊಮೋನನು ಯೆಹೋವ ದೇವರಿಗೆ ತಾನು ಕಟ್ಟಿಸಿದ ಬಲಿಪೀಠದ ಮೇಲೆ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿ, ಯೆಹೋವ ದೇವರ ಮುಂದಿರುವ ಪೀಠದ ಮೇಲೆ ಧೂಪವನ್ನು ಸುಡುತ್ತಿದ್ದನು. ಹೀಗೆ ಆಲಯದ ಅರ್ಪಣೆಗಳನ್ನು ಪೂರೈಸಿದನು.
26 ಇದಲ್ಲದೆ ಅರಸನಾದ ಸೊಲೊಮೋನನು ಎದೋಮ್ ದೇಶದ ಕೆಂಪು ಸಮುದ್ರತೀರದ ಏಲೋತ್ ಎಂಬ ಊರ ಬಳಿಯಲ್ಲಿರುವ ಎಚ್ಯೋನ್ ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿಸಿದನು. 27 ಹೀರಾಮನು ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಸೊಲೊಮೋನನ ಸೇವಕರ ಸಂಗಡ ಆ ಹಡಗುಗಳಲ್ಲಿ ಕಳುಹಿಸಿದನು. 28 ಅವರು ಓಫೀರಿಗೆ ಹೋಗಿ, ಅಲ್ಲಿಂದ ಹದಿನಾಲ್ಕು ಸಾವಿರ ಕಿಲೋಗ್ರಾಂ ಬಂಗಾರವನ್ನು ಅರಸನಾದ ಸೊಲೊಮೋನನಿಗೆ ತೆಗೆದುಕೊಂಡು ಬಂದರು.
<- 1 ಅರಸುಗಳು 81 ಅರಸುಗಳು 10 ->- a ತದ್ಮೋರ್ ಹೀಬ್ರೂ ಭಾಷೆಯಲ್ಲಿ ತಾಮಾರ್