7 ಆಗ ಸೊಲೊಮೋನನು ಮೋವಾಬಿನ ಅಸಹ್ಯಕರವಾದ ಕೆಮೋಷಿಗೋಸ್ಕರವೂ, ಅಮ್ಮೋನ್ಯರ ಅಸಹ್ಯಕರವಾದ ಮೋಲೆಕನಿಗೋಸ್ಕರವೂ ಯೆರೂಸಲೇಮಿನ ಪೂರ್ವದಲ್ಲಿರುವ ಬೆಟ್ಟದಲ್ಲಿ ಎತ್ತರವಾದ ಸ್ಥಳವನ್ನು ಕಟ್ಟಿಸಿದನು. 8 ಇದೇ ಪ್ರಕಾರ ತಮ್ಮ ದೇವರುಗಳಿಗೆ ಧೂಪವನ್ನು ಸುಟ್ಟು, ಬಲಿಗಳನ್ನು ಅರ್ಪಿಸುವ ತನ್ನ ಅನ್ಯಜಾತಿಯ ಸಮಸ್ತ ಪತ್ನಿಯರಿಗೋಸ್ಕರವೂ ಕಟ್ಟಿಸಿದನು.
9 ಇಸ್ರಾಯೇಲಿನ ದೇವರಾದ ಯೆಹೋವ ದೇವರು ಸೊಲೊಮೋನನಿಗೆ ಎರಡು ಸಾರಿ ಪ್ರತ್ಯಕ್ಷರಾಗಿದ್ದರೂ, ಅವನ ಹೃದಯವು ದೇವರಿಂದ ತಿರುಗಿ ಹೋದುದರಿಂದ, ಅವನ ಮೇಲೆ ಕೋಪಿಸಿಕೊಂಡಿದ್ದರು. 10 ಅನ್ಯದೇವರುಗಳ ಹಿಂದೆ ಹೋಗಬಾರದೆಂದು ಅವರು ಇದನ್ನು ಕುರಿತು ಅವನಿಗೆ ಆಜ್ಞಾಪಿಸಿದ್ದರೂ, ಅವನು, ಯೆಹೋವ ದೇವರು ಆಜ್ಞಾಪಿಸಿದ್ದನ್ನು ಕೈಗೊಳ್ಳದೆ ಹೋದನು. 11 ಆದಕಾರಣ ಯೆಹೋವ ದೇವರು ಸೊಲೊಮೋನನಿಗೆ, “ನೀನು ಹೀಗೆ ನಡೆದು ನಾನು ನಿನಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನೂ, ನನ್ನ ಕಟ್ಟಳೆಗಳನ್ನೂ ಕೈಗೊಳ್ಳದೆ ಹೋದುದರಿಂದ ನಿಶ್ಚಯವಾಗಿ ನಾನು ರಾಜ್ಯವನ್ನು ನಿನ್ನಿಂದ ಕಸಿದುಕೊಂಡು ಅದನ್ನು ನಿನ್ನ ಸೇವಕನಿಗೆ ಕೊಡುವೆನು. 12 ಆದರೆ ನಿನ್ನ ತಂದೆ ದಾವೀದನಿಗೋಸ್ಕರ ನಿನ್ನ ಕಾಲದಲ್ಲಿ ನಾನು ಇದನ್ನು ಮಾಡದೆ ನಿನ್ನ ಮಗನ ಕೈಯೊಳಗಿಂದ ಅದನ್ನು ಕಸಿದುಕೊಳ್ಳುವೆನು. 13 ಇದಲ್ಲದೆ ರಾಜ್ಯವನ್ನೆಲ್ಲಾ ನಾನು ಕಸಿದುಕೊಳ್ಳದೆ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ, ನಾನು ಆಯ್ದುಕೊಂಡ ಯೆರೂಸಲೇಮಿಗೋಸ್ಕರವೂ ನಿನ್ನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು,” ಎಂದರು.
19 ಇದಲ್ಲದೆ ಫರೋಹನು ಹದದನನ್ನು ಬಹಳವಾಗಿ ಮೆಚ್ಚಿಕೊಂಡನು. ಫರೋಹನು ತನ್ನ ಹೆಂಡತಿಯೂ ರಾಣಿಯೂ ಆದ ತಪ್ನೆಸ್ ಎಂಬವಳ ಸಹೋದರಿಯನ್ನು ಅವನಿಗೆ ಮದುವೆ ಮಾಡಿಕೊಟ್ಟನು. 20 ತಪ್ನೆಸ್ ಸಹೋದರಿಯು ಅವನಿಗೆ ಗೆನುಬತ್ ಎಂಬ ಮಗನನ್ನು ಹೆತ್ತಳು. ತಪ್ನೆಸ್ ಇವನನ್ನು ಫರೋಹನ ಮನೆಯಲ್ಲಿ ಬೆಳೆಸಿದಳು. ಗೆನುಬತನು ಫರೋಹನ ಮನೆಯಲ್ಲಿ ಫರೋಹನ ಮಕ್ಕಳ ಸಂಗಡ ಇದ್ದನು.
21 ಆದರೆ ದಾವೀದನು ಮರಣ ಹೊಂದಿದನೆಂದೂ, ಸೇನಾಧಿಪತಿಯಾದ ಯೋವಾಬನು ಸತ್ತು ಹೋದನೆಂದೂ, ಹದದನು ಈಜಿಪ್ಟಿನಲ್ಲಿ ಕೇಳಿದಾಗ, ಹದದನು ಫರೋಹನಿಗೆ, “ನಾನು ನನ್ನ ದೇಶಕ್ಕೆ ಹೋಗುವಹಾಗೆ ನನ್ನನ್ನು ಕಳುಹಿಸು,” ಎಂದನು.
22 ಫರೋಹನು ಅವನಿಗೆ, “ನೀನು ನಿನ್ನ ದೇಶಕ್ಕೆ ಹೋಗಬೇಕೆನ್ನುವ ಹಾಗೆ ನಿನಗೆ ನನ್ನ ಸಂಗಡ ಇರುವಾಗ ಏನು ಕೊರತೆಯಾಯಿತು?” ಎಂದು ಕೇಳಿದನು.
23 ಇದಲ್ಲದೆ ದೇವರು ಮತ್ತೊಬ್ಬ ಶತ್ರುವನ್ನು ಸೊಲೊಮೋನನ ಮೇಲೆ ಎಬ್ಬಿಸಿದರು. ಅವನು ಚೋಬದ ಅರಸನಾದ ತನ್ನ ಯಜಮಾನನಾಗಿರುವ ಹದದೆಜೆರನನ್ನು ಬಿಟ್ಟು ಓಡಿ ಹೋದ ಎಲ್ಯಾದಾವನ ಮಗನಾದ ರೆಜೋನನು. 24 ದಾವೀದನು ಚೋಬದ ಜನರನ್ನು ಸಂಹರಿಸುವಾಗ ಇವನು ಜನರನ್ನು ತನ್ನ ಬಳಿಯಲ್ಲಿ ಕೂಡಿಸಿಕೊಂಡು ಒಂದು ಗುಂಪಿಗೆ ಅಧಿಪತಿಯಾಗಿ ಅವರ ಸಂಗಡ ದಮಸ್ಕಕ್ಕೆ ಹೋಗಿ ಅಲ್ಲಿ ವಾಸಿಸಿ, ಅರಸನಾದನು. 25 ಹದದನು ಮಾಡಿದ ಕೇಡಿಗೆ ಹೊರತಾಗಿ ಇವನು ಸೊಲೊಮೋನನ ದಿವಸಗಳಲ್ಲೆಲ್ಲಾ ಇಸ್ರಾಯೇಲಿಗೆ ಶತ್ರುವಾಗಿದ್ದನು. ಅವನು ಇಸ್ರಾಯೇಲನ್ನು ಹಗೆಮಾಡಿ, ಅರಾಮ್ ದೇಶವನ್ನು ಆಳುತ್ತಾ ಇದ್ದನು.
27 ಅವನು ಅರಸನಿಗೆ ವಿರೋಧವಾಗಿ ದಂಗೆಯೆದ್ದ ಕಾರಣವೇನೆಂದರೆ, ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿ, ತನ್ನ ತಂದೆಯಾದ ದಾವೀದನ ಪಟ್ಟಣದಲ್ಲಿ ಬಿದ್ದುಹೋದವುಗಳನ್ನು ಕಟ್ಟಿಸುತ್ತಿರುವಾಗ, 28 ಯಾರೊಬ್ಬಾಮನು ಪರಾಕ್ರಮಶಾಲಿಯಾಗಿರುವುದರಿಂದ ಸೊಲೊಮೋನನು ಈ ಪ್ರಾಯಸ್ಥನು ಕೆಲಸಮಾಡತಕ್ಕವನೆಂದು ಕಂಡು, ಯೋಸೇಫನ ಗೋತ್ರದ ಸಮಸ್ತ ಆಳುಗಳ ಮೇಲೆ ಅವನನ್ನು ಅಧಿಪತಿಯಾಗಿಟ್ಟನು.
29 ಆ ಕಾಲದಲ್ಲಿ, ಯಾರೊಬ್ಬಾಮನು ಯೆರೂಸಲೇಮಿನೊಳಗಿಂದ ಹೊರಟು ಹೋಗುವಾಗ, ಶೀಲೋವಿನವನಾದ ಅಹೀಯನೆಂಬ ಪ್ರವಾದಿಯು ಅವನನ್ನು ಹಾದಿಯಲ್ಲಿ ಕಂಡನು. ಅವನು ಹೊಸ ಕಂಬಳಿಯನ್ನು ಹೊದ್ದುಕೊಂಡಿದ್ದನು. ಅವರಿಬ್ಬರೂ ಹೊಲದಲ್ಲಿ ಒಂಟಿಯಾಗಿದ್ದರು. 30 ಆಗ ಅಹೀಯನು ತನ್ನ ಮೇಲೆ ಇರುವ ಹೊಸ ಕಂಬಳಿಯನ್ನು ತೆಗೆದುಕೊಂಡು ಅದನ್ನು ಹನ್ನೆರಡು ತುಂಡುಗಳಾಗಿ ಹರಿದು, 31 ಯಾರೊಬ್ಬಾಮನಿಗೆ ಈ ಹತ್ತು ತುಂಡುಗಳನ್ನು ನೀನು ತೆಗೆದುಕೋ. ಇಸ್ರಾಯೇಲಿನ ದೇವರಾದ ಯೆಹೋವ ದೇವರು, “ಇಗೋ, ನಾನು ಸೊಲೊಮೋನನ ಕೈಯಿಂದ ರಾಜ್ಯವನ್ನು ಹರಿದು ತೆಗೆದುಕೊಂಡು, ಹತ್ತು ಗೋತ್ರಗಳನ್ನು ನಿನಗೆ ಕೊಡುವೆನು. 32 ಆದರೆ, ನನ್ನ ಸೇವಕ ದಾವೀದನಿಗೋಸ್ಕರವೂ, ಇಸ್ರಾಯೇಲಿನ ಸಮಸ್ತ ಗೋತ್ರಗಳಿಂದ ನಾನು ಆಯ್ದುಕೊಂಡ ಪಟ್ಟಣವಾದ ಯೆರೂಸಲೇಮಿಗೋಸ್ಕರವೂ ಅವನಿಗೆ ಒಂದು ಗೋತ್ರ ಇರುವುದು. 33 ಏಕೆಂದರೆ ಅವನ ತಂದೆಯಾದ ದಾವೀದನ ಹಾಗೆ ನನ್ನ ಕಟ್ಟಳೆಗಳನ್ನೂ, ನನ್ನ ನ್ಯಾಯಗಳನ್ನೂ ಕೈಗೊಳ್ಳುವುದಕ್ಕೂ, ನನ್ನ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡುವುದಕ್ಕೂ, ಸೊಲೊಮೋನನೂ ಅವನ ಮನೆಯವರೂ ನನ್ನ ಮಾರ್ಗಗಳಲ್ಲಿ ನಡೆಯದೆ, ನನ್ನನ್ನು ಬಿಟ್ಟು ಸೀದೋನ್ಯರ ದೇವತೆಯಾದ ಅಷ್ಟೋರೆತಳನ್ನೂ, ಮೋವಾಬ್ಯರ ದೇವರಾದ ಕೆಮೋಷನ್ನೂ, ಅಮ್ಮೋನಿಯರ ದೇವರಾದ ಮಿಲ್ಕೋಮನ್ನೂ ಆರಾಧಿಸಿದ್ದಾರೆ.
34 “ ‘ಆದರೂ ನನ್ನ ಆಜ್ಞೆಗಳನ್ನೂ, ನನ್ನ ತೀರ್ಪುಗಳನ್ನೂ ಕೈಗೊಂಡದ್ದರಿಂದ, ನಾನು ಆಯ್ದು ತೆಗೆದುಕೊಂಡ ನನ್ನ ಸೇವಕನಾದ ದಾವೀದನಿಗೋಸ್ಕರ ನಾನು ಅವನ ಕೈಯಿಂದ ರಾಜ್ಯವನ್ನೆಲ್ಲಾ ತೆಗೆದುಕೊಳ್ಳದೆ, ಅವನ ಜೀವಮಾನದ ಸಕಲ ದಿವಸಗಳಲ್ಲಿ ಅವನನ್ನು ಪ್ರಭುವಾಗಿ ಇರಿಸುವೆನು. 35 ಆದರೆ ನಾನು ಅವನ ಮಗನ ಕೈಯಿಂದ ರಾಜ್ಯವನ್ನು ತೆಗೆದುಕೊಂಡು, ಅದರಲ್ಲಿ ಹತ್ತು ಗೋತ್ರಗಳನ್ನು ನಿನಗೆ ಕೊಡುವೆನು. 36 ಅಲ್ಲಿ ನನ್ನ ಹೆಸರನ್ನಿಡಲು ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ನನ್ನ ಮುಂದೆ ನನ್ನ ಸೇವಕನಾದ ದಾವೀದನಿಗೆ ಎಂದಿಗೂ ಬೆಳಕು ಆರಿಹೋಗದ ಹಾಗೆ, ಅವನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು. 37 ಇದಲ್ಲದೆ ನಾನು ನಿನ್ನನ್ನು ತೆಗೆದುಕೊಂಡು, ನಿನ್ನ ಪ್ರಾಣವು ಇಚ್ಛಿಸುವುದೆಲ್ಲಾದರಲ್ಲಿ ಅರಸುತನವನ್ನು ನಡೆಸಿ, ಇಸ್ರಾಯೇಲಿನ ಮೇಲೆ ಅರಸನಾಗಿರುವಿ. 38 ನಾನು ನಿನಗೆ ಆಜ್ಞಾಪಿಸಿದ್ದೆಲ್ಲಾ ನೀನು ಕೇಳಿ, ನನ್ನ ಮಾರ್ಗಗಳಲ್ಲಿ ನಡೆದು, ನನ್ನ ಸೇವಕನಾದ ದಾವೀದನು ಮಾಡಿದ ಹಾಗೆ, ನನ್ನ ತೀರ್ಪುಗಳನ್ನೂ, ನನ್ನ ಆಜ್ಞೆಗಳನ್ನೂ ಕೈಗೊಂಡು, ನನ್ನ ದೃಷ್ಟಿಗೆ ಯಥಾರ್ಥವಾದದ್ದನ್ನು ಮಾಡಿದರೆ, ನಾನು ನಿನ್ನ ಸಂಗಡ ಇದ್ದು ದಾವೀದನ ಸಂತಾನದಂತೆ ನಿನ್ನ ಸಂತಾನವನ್ನೂ ಸ್ಥಿರಪಡಿಸಿ, ಇಸ್ರಾಯೇಲನ್ನು ನಿನಗೆ ಕೊಡುವೆನು. 39 ಇದಕ್ಕೋಸ್ಕರ ದಾವೀದನ ಸಂತತಿಯನ್ನು ಬಾಧಿಸುವೆನು, ಆದರೆ ನಿರಂತರವಾಗಿ ಅಲ್ಲ,’ ” ಎಂದು ಅಹೀಯನು ಹೇಳಿದನು.
40 ಇದರ ನಿಮಿತ್ತ ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲಲು ಹುಡುಕಿದನು. ಆದ್ದರಿಂದ ಯಾರೊಬ್ಬಾಮನು ಎದ್ದು, ಈಜಿಪ್ಟಿನ ಅರಸನಾದ ಶೀಶಕನ ಬಳಿಗೆ ಈಜಿಪ್ಟಿಗೆ ಓಡಿಹೋಗಿ, ಸೊಲೊಮೋನನು ಸಾಯುವವರೆಗೂ ಅಲ್ಲಿ ಇದ್ದನು.
- a ಮಿಲ್ಕೋಮ ಇನ್ನೊಂದು ಹೆಸರು ಮೋಲೆಕ್