3 ನನ್ನ ಮೇಲೆ ತಪ್ಪು ಹೊರಿಸುವವರಿಗೆ ಇದೇ ನನ್ನ ಪ್ರತಿವಾದ: 4 ಅನ್ನಪಾನಗಳಿಗಾಗಿ ನಮಗೆ ಹಕ್ಕಿಲ್ಲವೇ? 5 ಮಿಕ್ಕ ಅಪೊಸ್ತಲರಂತೆಯೂ ಕರ್ತದೇವರ ತಮ್ಮಂದಿರಂತೆಯೂ ಕೇಫನಂತೆಯೂ ವಿಶ್ವಾಸಿಯಾದ ಒಬ್ಬಳನ್ನು ಮದುವೆಮಾಡಿಕೊಳ್ಳಲು ನಮಗೆ ಹಕ್ಕಿಲ್ಲವೇ? 6 ಇಲ್ಲವೆ ಉಪಜೀವನಕ್ಕಾಗಿ ನಾನೂ ಮತ್ತು ಬಾರ್ನಬನೂ ಮಾತ್ರವೇ ಕೆಲಸಮಾಡಬೇಕೋ?
7 ಸೈನಿಕ ಸೇವೆಯನ್ನು ಯಾವನಾದರೂ ಸ್ವಂತ ಖರ್ಚಿನಿಂದ ಮಾಡುವುದುಂಟೋ? ದ್ರಾಕ್ಷಿಯ ತೋಟವನ್ನು ಮಾಡಿ ಅದರ ಫಲವನ್ನು ತಿನ್ನದೇ ಇರುವವರುಂಟೋ? ಮಂದೆಯನ್ನು ಮೇಯಿಸುವವನು ಹಾಲನ್ನು ಕುಡಿಯದೇ ಇರುವುದುಂಟೋ? 8 ನಾನು ಕೇವಲ ಮಾನವೀಯ ನೋಟದಲ್ಲಿ ಮಾತನಾಡುತ್ತಿದ್ದೇನೋ? ನಿಯಮವು ಸಹ ಇದನ್ನು ಹೇಳುವುದಿಲ್ಲವೋ? 9 “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು,”[a] ಎಂದು ಮೋಶೆಯ ನಿಯಮದಲ್ಲಿ ಬರೆದಿದೆ. ಇಲ್ಲಿ ದೇವರಿಗೆ ಎತ್ತಿನ ಬಗ್ಗೆ ಮಾತ್ರ ಚಿಂತೆಯಿದೆಯೋ? 10 ನಿಶ್ಚಯವಾಗಿಯೂ, ದೇವರು ನಮಗೋಸ್ಕರ ಇವೆಲ್ಲವನ್ನು ಹೇಳುತ್ತಾರೆ ಅಲ್ಲವೇ? ಹೌದು, ಪವಿತ್ರ ವೇದವು ನಮಗೋಸ್ಕರವಾಗಿಯೇ ಬರೆಯಲಾಗಿದೆ. ಉಳುವವನು ಉಳುವಾಗ, ಒಕ್ಕುವವನು ಒಕ್ಕುವಾಗ ಸುಗ್ಗಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿಂದ ಹಾಗೆ ಮಾಡಬೇಕು. 11 ನಾವು ನಿಮ್ಮಲ್ಲಿ ಆತ್ಮಿಕ ಸಂಗತಿಗಳನ್ನು ಬಿತ್ತಿದ ಮೇಲೆ, ನಿಮ್ಮಿಂದ ಭೌತಿಕ ಸುಗ್ಗಿಯನ್ನು ಕೊಯ್ಯುವುದು ದೊಡ್ಡದೋ? 12 ಇತರರಿಗೆ ನಿಮ್ಮ ಸಹಾಯದಲ್ಲಿ ಪಾಲು ಇದ್ದರೆ, ಅದರಲ್ಲಿ ನಮಗೂ ಹೆಚ್ಚು ಪಾಲು ಇರಬೇಕಲ್ಲಾ?
13 ದೇವಾಲಯದಲ್ಲಿ ಸೇವೆಮಾಡುವವರು, ದೇವಾಲಯದಲ್ಲಿ ಊಟ ಪಡೆಯುತ್ತಾರೆಂಬುದೂ; ಬಲಿಪೀಠದ ಬಳಿಯಲ್ಲಿ ಸೇವೆಮಾಡುವವರು, ಆ ಬಲಿಪೀಠದ ಮೇಲೆ ಸಮರ್ಪಿಸಿದ್ದರಲ್ಲಿ ಪಾಲು ಹೊಂದುತ್ತಾರೆಂಬುದೂ ನಿಮಗೆ ತಿಳಿಯದೋ? 14 ಅದೇ ರೀತಿಯಾಗಿ ಸುವಾರ್ತೆಯನ್ನು ಸಾರುವವರು, ಸುವಾರ್ತೆಯಿಂದಲೇ ಜೀವನ ಮಾಡಬೇಕೆಂದು ಕರ್ತದೇವರು ಸಹ ಆಜ್ಞಾಪಿಸಿದ್ದಾರೆ.
15 ಆದರೆ ನಾನಂತೂ ಇವುಗಳಲ್ಲಿ ಒಂದು ಹಕ್ಕನ್ನೂ ಉಪಯೋಗಿಸಿಕೊಂಡಿಲ್ಲ. ಅಂಥವುಗಳನ್ನು ನನಗೆ ನೀವು ಮಾಡಬೇಕೆಂಬ ಅಪೇಕ್ಷೆಯಿಂದ ಈ ಸಂಗತಿಗಳನ್ನು ನಾನು ಬರೆಯಲಿಲ್ಲ. ಯಾರಾದರೂ ಈ ಹೆಮ್ಮೆಯನ್ನು ನನ್ನಿಂದ ಅಪಹರಿಸುವುದಕ್ಕಿಂತಲೂ ಸಾಯುವುದೇ ಲೇಸು. 16 ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಸಿಕೊಳ್ಳುವ ಯಾವ ಆಸೆಯೂ ನನಗೆ ಇಲ್ಲ. ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಸಾಲಗಾರನಾಗಿದ್ದೇನೆ. ಸುವಾರ್ತೆಯನ್ನು ಸಾರದಿದ್ದರೆ, ನನ್ನ ಗತಿ ಏನೆಂದು ಹೇಳಲಿ! 17 ನಾನು ಇಷ್ಟಪೂರ್ವಕವಾಗಿ ಸುವಾರ್ತೆ ಸಾರಿದರೆ, ನನಗೆ ಬಹುಮಾನವಿರುವುದು. ಇಷ್ಟವಿಲ್ಲದೆ ಮಾಡಿದರೆ, ನನ್ನ ವಶಕ್ಕೆ ಒಪ್ಪಿಸಲಾದ ಕಾರ್ಯಭಾರವನ್ನು ನಾನು ನೆರವೇರಿಸಿದಂತಾಗುತ್ತದೆ. 18 ಹಾಗಾದರೆ ನನಗೆ ದೊರೆಯುವ ಬಹುಮಾನವೇನು? ನಾನು ಸುವಾರ್ತೆಯನ್ನು ಸಾರುವಾಗ, ಅದನ್ನು ಉಚಿತವಾಗಿ ಸಾರುತ್ತಾ, ಸುವಾರ್ತೆಯ ಪ್ರಸಂಗಿಯಾಗಿ ನನ್ನ ಪೂರ್ಣ ಹಕ್ಕನ್ನು ಉಪಯೋಗಿಸದಿರುವುದೇ ನನ್ನ ಬಹುಮಾನ.
- a ಧರ್ಮೋ 25:4