Link to home pageLanguagesLink to all Bible versions on this site

ಕೊರಿಂಥದವರಿಗೆ
ಪೌಲನು ಬರೆದ ಮೊದಲನೆಯ ಪತ್ರಿಕೆ

1 ದೇವರ ಚಿತ್ತಾನುಸಾರವಾಗಿ ಕ್ರಿಸ್ತ ಯೇಸುವಿನಿಂದ ಅಪೊಸ್ತಲನಾಗಲು ಕರೆಯಲಾದ ಪೌಲನೆಂಬ ನಾನು ಮತ್ತು ನಮ್ಮ ಸಹೋದರ ಸೊಸ್ಥೆನನು,

 
2 ಕ್ರಿಸ್ತ ಯೇಸುವಿನಲ್ಲಿ ಪ್ರತ್ಯೇಕವಾಗಿ, ಪವಿತ್ರರಾಗುವುದಕ್ಕೆ ಕರೆಹೊಂದಿದ ಕೊರಿಂಥದಲ್ಲಿರುವ ದೇವರ ಸಭೆಗೆ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ನಾಮದಲ್ಲಿ[a] ವಿಶ್ವಾಸವಿಟ್ಟ ಸಕಲ ಜನರಿಗೂ ಬರೆಯುವ ಪತ್ರ:
 
3 ನಮ್ಮ ತಂದೆಯಾದ ದೇವರಿಂದಲೂ ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಉಂಟಾಗಲಿ.
 
ಉಪಕಾರ ಸ್ಮರಣೆ
4 ಕ್ರಿಸ್ತ ಯೇಸುವಿನಲ್ಲಿ ನಿಮಗೆ ಕೊಟ್ಟಿರುವ ದೇವರ ಕೃಪೆಯ ಕಾರಣಕ್ಕಾಗಿ ನಾನು ಯಾವಾಗಲೂ ನಿಮಗೋಸ್ಕರ ಅವರಿಗೆ ಕೃತಜ್ಞತೆ ಹೇಳುವವನಾಗಿದ್ದೇನೆ. 5 ನೀವು ಕ್ರಿಸ್ತ ಯೇಸುವಿನಲ್ಲಿ ಜ್ಞಾನದಲ್ಲಿಯೂ ಮಾತುಗಳಲ್ಲಿಯೂ ಎಲ್ಲಾ ಸಮೃದ್ಧಿಯನ್ನು ಹೊಂದಿದ್ದೀರಿ. 6 ಆದ್ದರಿಂದ ದೇವರು ಕ್ರಿಸ್ತ ಯೇಸುವಿನ ವಿಷಯವಾದ ನಮ್ಮ ಸಾಕ್ಷಿಯು ನಿಮ್ಮಲ್ಲಿ ದೃಢವಾಯಿತು. 7 ಹೀಗಿರುವುದರಿಂದ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನ ಪುನರಾಗಮನವನ್ನು ಆತುರದಿಂದ ಎದುರು ನೋಡುವವರಾದ ನಿಮಗೆ, ಯಾವುದೇ ಆತ್ಮಿಕ ವರಗಳ ಕೊರತೆಯು ಇರುವುದಿಲ್ಲ. 8 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ದಿನದಲ್ಲಿ ನೀವು ನಿರ್ದೋಷಿಗಳಾಗಿರುವಂತೆ ಅವರು ಕೊನೆಯತನಕವೂ ನಿಮ್ಮನ್ನು ಬಲಪಡಿಸಿ ಕಾಯುವರು. 9 ತಮ್ಮ ಪುತ್ರರೂ ನಮ್ಮ ಕರ್ತ ದೇವರೂ ಆಗಿರುವ ಕ್ರಿಸ್ತ ಯೇಸುವಿನ ಅನ್ಯೋನ್ಯತೆಗೆ ನಿಮ್ಮನ್ನು ಕರೆದ ದೇವರು ಪ್ರಾಮಾಣಿಕರು.
ಸಭೆಯಲ್ಲಿ ಗುಂಪುಗಾರಿಕೆ
10 ಪ್ರಿಯರೇ, ನೀವೆಲ್ಲರೂ ಒಂದೇ ಅಭಿಪ್ರಾಯವುಳ್ಳವರಾಗಿದ್ದು, ನಿಮ್ಮೊಳಗೆ ಗುಂಪುಗಾರಿಕೆ, ಪಕ್ಷಬೇಧಗಳಿರದೆ, ಒಂದೇ ಮನಸ್ಸು ಮತ್ತು ಒಂದೇ ಆಲೋಚನೆಗಳಲ್ಲಿ ಪರಿಪೂರ್ಣವಾದ ಅನ್ಯೋನ್ಯತೆಯಲ್ಲಿರಬೇಕೆಂದು ನಾನು ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ. 11 ನನ್ನ ಪ್ರಿಯರೇ, ಖ್ಲೋಯೆಯ ಮನೆಯ ಕೆಲವರು, ನಿಮ್ಮೊಳಗೆ ಜಗಳಗಳುಂಟೆಂದು ನನಗೆ ತಿಳಿಸಿದರು. 12 ನಿಮ್ಮಲ್ಲಿ ಒಬ್ಬನು, “ನಾನು ಪೌಲನವನು,” ಇನ್ನೊಬ್ಬನು, “ನಾನು ಅಪೊಲ್ಲೋಸನವನು,” ಬೇರೊಬ್ಬನು, “ನಾನು ಕೇಫನವನು,” ಇನ್ನೊಬ್ಬನು, “ನಾನು ಕ್ರಿಸ್ತನವನು,” ಎಂದು ಹೇಳುತ್ತೀರಂತೆ.

13 ಕ್ರಿಸ್ತ ಯೇಸು ವಿಭಾಗವಾಗಿದ್ದಾರೋ? ಪೌಲನು ನಿಮಗೋಸ್ಕರ ಶಿಲುಬೆಗೆ ಹಾಕಿಸಿಕೊಂಡನೋ? ಪೌಲನ ಹೆಸರಿನಲ್ಲಿ ನೀವು ದೀಕ್ಷಾಸ್ನಾನ ತೆಗೆದುಕೊಂಡಿರುವಿರೋ? 14 ಕ್ರಿಸ್ಪನನ್ನು ಮತ್ತು ಗಾಯನನ್ನು ಹೊರತು ಬೇರೆ ಯಾರಿಗೂ ನಾನು ದೀಕ್ಷಾಸ್ನಾನ ಕೊಡಲಿಲ್ಲ. ಅದಕ್ಕಾಗಿ ನಾನು ದೇವರಿಗೆ ಸ್ತೋತ್ರ ಹೇಳುತ್ತೇನೆ. 15 ಏಕೆಂದರೆ ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಹೊಂದಿದ್ದಾರೆಂದು ಯಾರೂ ಹೇಳಬಾರದು. 16 ಹೌದು, ಸ್ತೆಫನನ ಮನೆಯವರಿಗೂ ನಾನು ದೀಕ್ಷಾಸ್ನಾನ ಕೊಟ್ಟಿದ್ದೇನೆ. ಇದನ್ನು ಬಿಟ್ಟು ಯಾರಿಗೂ ನಾನು ದೀಕ್ಷಾಸ್ನಾನ ಕೊಟ್ಟಿದ್ದು ನನ್ನ ಜ್ಞಾಪಕದಲ್ಲಿಲ್ಲ. 17 ದೀಕ್ಷಾಸ್ನಾನ ಕೊಡುವುದಕ್ಕಾಗಿ ಕ್ರಿಸ್ತ ಯೇಸು ನನ್ನನ್ನು ಕಳುಹಿಸದೆ ಸುವಾರ್ತೆಯನ್ನು ಸಾರುವುದಕ್ಕಾಗಿ ನನ್ನನ್ನು ಕಳುಹಿಸಿದ್ದಾರೆ. ಸುವಾರ್ತೆ ಸಾರುವಂಥದ್ದು ವಾಕ್ಚಾತುರ್ಯದಿಂದಲ್ಲ. ಹಾಗೆ ಸಾರುತ್ತಿದ್ದರೆ ಕ್ರಿಸ್ತ ಯೇಸುವಿನ ಶಿಲುಬೆಯ ಶಕ್ತಿಯು ಬರಿದಾಗಿಬಿಡುತಿತ್ತು.

ದೇವರ ಜ್ಞಾನವೂ ಸಾಮರ್ಥ್ಯವೂ ಆಗಿರುವ ಕ್ರಿಸ್ತ ಯೇಸು
18 ಶಿಲುಬೆಯ ಸಂದೇಶವು ವಿನಾಶದ ಮಾರ್ಗದಲ್ಲಿರುವವರಿಗೆ ಬುದ್ದಿಹೀನವಾಗಿದೆ. ರಕ್ಷಣೆ ಹೊಂದುತ್ತಿರುವ ನಮಗಾದರೋ, ಅದು ದೇವರ ಶಕ್ತಿಯಾಗಿದೆ. 19 ಏಕೆಂದರೆ, ಪವಿತ್ರ ವೇದದಲ್ಲಿ ಹೀಗೆ ಬರೆದಿದೆ:
“ಜ್ಞಾನಿಗಳ ಜ್ಞಾನವನ್ನು ನಾನು ನಾಶಮಾಡುವೆನು;
ವಿವೇಕಿಗಳ ವಿವೇಕವನ್ನು ನಾನು ನಿರರ್ಥಕ ಮಾಡುವೆನು.”[b]

20 ಜ್ಞಾನಿಯಾದ ಮನುಷ್ಯನೆಲ್ಲಿ? ಪಂಡಿತನು ಎಲ್ಲಿ? ಈ ಕಾಲದ ತತ್ವಜ್ಞಾನಿ ಎಲ್ಲಿ? ಈ ಲೋಕದ ಜ್ಞಾನವನ್ನು ದೇವರು ಬುದ್ದಿಹೀನತೆಯನ್ನಾಗಿ ಮಾಡಿದ್ದಾರಲ್ಲವೇ? 21 ಈ ಪ್ರಪಂಚವು ತನ್ನ ಜ್ಞಾನದ ಮೂಲಕ ದೇವರನ್ನು ಅರಿತುಕೊಳ್ಳಲಿಲ್ಲ; ಆದ್ದರಿಂದ ದೇವರ ಜ್ಞಾನದಿಂದ, ನಂಬಿದವರನ್ನು ಪ್ರಸಂಗದ ಬುದ್ದಿಹೀನತೆಯಿಂದ ರಕ್ಷಿಸುವುದು ದೇವರಿಗೆ ಮೆಚ್ಚುಗೆಯಾಯಿತು. 22 ಯೆಹೂದ್ಯರು ಆಶ್ಚರ್ಯಕರವಾದ ಗುರುತುಗಳನ್ನು ಹುಡುಕುತ್ತಾರೆ. ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ. 23 ನಾವಾದರೋ ಶಿಲುಬೆಗೆ ಹಾಕಲಾದ ಕ್ರಿಸ್ತ ಯೇಸುವನ್ನೇ ಪ್ರಸಂಗಿಸುತ್ತಿದ್ದೇವೆ. ಇದು ಯೆಹೂದ್ಯರಿಗೆ ವಿಘ್ನವೂ ಯೆಹೂದ್ಯರಲ್ಲದವರಿಗೆ ಬುದ್ದಿಹೀನತೆಯಾಗಿದೆ. 24 ಆದರೆ ದೇವರಿಂದ ರಕ್ಷಣೆಗೆ ಕರೆಹೊಂದಿದ ಯೆಹೂದ್ಯರಿಗಾಗಲಿ, ಯೆಹೂದ್ಯರಲ್ಲದವರಿಗಾಗಲಿ ಕ್ರಿಸ್ತ ಯೇಸು ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿದ್ದಾರೆ. 25 ಏಕೆಂದರೆ ದೇವರ ಬುದ್ಧಿಹೀನತೆ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆ ಮನುಷ್ಯರ ಬಲಕ್ಕಿಂತಲೂ ಬಲವುಳ್ಳದ್ದಾಗಿದೆ.

26 ಪ್ರಿಯರೇ, ನೀವು ದೇವರ ಕರೆಯನ್ನು ಹೊಂದಿದಾಗ ಏನಾಗಿದ್ದಿರೆಂಬುದನ್ನು ಆಲೋಚಿಸಿರಿ. ನಿಮ್ಮೊಳಗೆ ಲೋಕಾನುಸಾರವಾಗಿ ಜ್ಞಾನಿಗಳೂ ಅನೇಕರಿಲ್ಲ, ಪ್ರಭಾವಿಗಳೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ. 27 ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವಂತೆ, ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾರೆ. ದೇವರು ಬಲಿಷ್ಠರನ್ನು ನಾಚಿಕೆಪಡಿಸುವಂತೆ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾರೆ. 28 ದೇವರು ಈ ಲೋಕದ ಗಣ್ಯರನ್ನು ಏನೂ ಇಲ್ಲದವರನ್ನಾಗಿ ಮಾಡುವುದಕ್ಕಾಗಿ ಗಣನೆಗೆ ಬಾರದವರನ್ನೂ, ಹೀನೈಸಲಾದವರನ್ನೂ ಕೀಳಾದವರನ್ನೂ, ಆರಿಸಿಕೊಂಡಿದ್ದಾರೆ. 29 ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿರುವುದಿಲ್ಲ. 30 ನೀವು ದೇವರಿಂದಲೇ ಕ್ರಿಸ್ತ ಯೇಸುವಿನಲ್ಲಿದ್ದೀರಿ. ಕ್ರಿಸ್ತ ಯೇಸು ನಮಗೆ ದೇವರ ಕಡೆಯಿಂದ ಜ್ಞಾನವೂ ನೀತಿಯೂ ಶುದ್ಧೀಕರಣವೂ ವಿಮೋಚನೆಯೂ ಆಗಿದ್ದಾರೆ. 31 ಪವಿತ್ರ ವೇದದಲ್ಲಿ ಬರೆದಿರುವಂತೆ, “ಹೆಚ್ಚಳ ಪಡುವವನು ಕರ್ತ ದೇವರಲ್ಲಿಯೇ ಹೆಚ್ಚಳ ಪಡಲಿ.”[c]

1 ಕೊರಿಂಥದವರಿಗೆ 2 ->