Link to home pageLanguagesLink to all Bible versions on this site
5
ನಲ್ಲ
1 ಪ್ರಿಯಳೇ, ವಧುವೇ, ಇಗೋ ನಾ ಬಂದಿರುವೆ ನನ್ನ ತೋಟದೊಳಗೆ,
ನನ್ನ ರಕ್ತಬೋಳ ಸುಗಂಧದ್ರವ್ಯಗಳನ್ನು ಕೂಡಿಸಿರುವೆ,
ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿರುವೆ,
ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿರುವೆ.
ಮಿತ್ರರೇ, ತಿನ್ನಿರಿ.
ಪ್ರಿಯರೇ ಕುಡಿಯಿರಿ, ಬೇಕಾದಷ್ಟು ಪಾನಮಾಡಿರಿ.
ನಾಲ್ಕನೆಯ ಗೀತೆ - ನಲ್ಲೆ
2 ನಾನು ನಿದ್ರೆಗೊಂಡಿದ್ದರೂ ನನ್ನ ಹೃದಯವು ಎಚ್ಚರಗೊಂಡಿತ್ತು.
ಇಗೋ, ಎನ್ನಿನಿಯನು ಕದ ತಟ್ಟಿ,
“ಪ್ರಿಯಳೇ, ಕಾಂತಳೇ, ಪಾರಿವಾಳವೇ, ನಿರ್ಮಲೆಯೇ, ಬಾಗಿಲು ತೆಗೆ!
ನನ್ನ ತಲೆಯ ಮೇಲೆಲ್ಲಾ ಇಬ್ಬನಿಯು ಬಿದ್ದಿದೆ,
ನನ್ನ ಕೂದಲು ರಾತ್ರಿ ಬೀಳುವ ಹನಿಗಳಿಂದ ತುಂಬಿದೆ” ಅಂದನು.
3 “ನನ್ನ ಒಳಂಗಿಯನ್ನು ತೆಗೆದೆನಲ್ಲಾ, ಅದನ್ನು ಹೇಗೆ ಹಾಕಿಕೊಂಡೇನು?
ಪಾದಗಳನ್ನು ತೊಳೆದುಕೊಂಡೆನಲ್ಲಾ,
ಅವುಗಳನ್ನು ಹೇಗೆ ಕೊಳೆಮಾಡಿಕೊಳ್ಳಲಿ?” ಎಂದು ನಾನು ಅಂದುಕೊಂಡಾಗ,
4 ನನ್ನ ಕಾಂತನು ಬಾಗಿಲ ರಂಧ್ರದಲ್ಲಿ ಕೈ ನೀಡಿದನು,
ಅವನಿಗಾಗಿ ನನ್ನ ಮನ ಮಿಡಿಯಿತು.
5 ನಾನೆದ್ದು ನನ್ನ ನಲ್ಲನಿಗೆ ಬಾಗಿಲು ತೆರೆಯಲು
ಅಗುಳಿಯ ಮೇಲೆ ಕೈಯಿಟ್ಟೆನು,
ನನ್ನ ಕೈಗಳಿಂದ ರಕ್ತಬೋಳವು,
ನನ್ನ ಬೆರಳುಗಳಿಂದ ಅಚ್ಚರಕ್ತಬೋಳವು ತೊಟ್ಟಿಕ್ಕಿತು.
6 ನನ್ನ ಇನಿಯನಿಗೆ ಕದ ತೆಗೆದೆನು,
ಅಷ್ಟರಲ್ಲಿ ಅವನು ಹಿಂದಿರುಗಿ ಹೋಗಿದ್ದನು.
ನನ್ನೆದೆಯ ಬಡಿತವೇ ನಿಂತಂತಾಯಿತು ಅವನ ದನಿಗೆ.
ಎಷ್ಟು ಹುಡುಕಿದರೂ ಸಿಕ್ಕಲಿಲ್ಲ ಅವನು, ಎಷ್ಟು ಕೂಗಿದರೂ ಉತ್ತರವಿಲ್ಲ.
7 ಊರಲ್ಲಿ ಸುತ್ತುತ್ತಿರುವ ಕಾವಲುಗಾರರು ನನ್ನನ್ನು ಕಂಡುಹಿಡಿದು,
ಹೊಡೆದು ಗಾಯಪಡಿಸಿದರು,
ಪೌಳಿಯ ಕಾವಲುಗಾರರು ಮೇಲೊದಿಕೆಯನ್ನು ನನ್ನಿಂದ ಕಿತ್ತುಕೊಂಡರು.
8 ಯೆರೂಸಲೇಮಿನ ಮಹಿಳೆಯರೇ, ನೀವು ನನ್ನ ಕಾಂತನನ್ನು ಕಂಡರೆ
ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆ ಎಂಬುವುದನ್ನು ಅವನಿಗೆ ತಿಳಿಸಬೇಕೆಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
ಸ್ತ್ರೀಯರು
9 ಸ್ತ್ರೀರತ್ನವೇ, ಇತರರ ಕಾಂತರಿಗಿಂತ ನಿನ್ನ ಕಾಂತನ ವಿಶೇಷತೆಯೇನು?
ನಮ್ಮಿಂದ ನೀನು ಹೀಗೆ ಪ್ರಮಾಣಮಾಡಿಸುವುದಕ್ಕೆ ಇತರರ ಕಾಂತರಿಗಿಂತ ನಿನ್ನ ಕಾಂತನ ಅತಿಶಯವೇನು?
ನಲ್ಲೆ
10 ನನ್ನ ನಲ್ಲನು ತೇಜೋಮಯವಾದ ಕೆಂಪು ಬಣ್ಣವುಳ್ಳವನು;
*ಅವನು ಹತ್ತು ಸಾವಿರ ಜನರಲ್ಲಿ ಧ್ವಜಪ್ರಾಯನು. ಅಥವಾ ನನ್ನ ನಲ್ಲನು ಬಿಳುಪು ಮತ್ತು ಕೆಂಪು ಬಣ್ಣವುಳ್ಳವನು. ಅವನಿಗೆ ಸಮಾನರು ಯಾರು ಇಲ್ಲ ಅವನು ಹತ್ತು ಸಾವಿರ ಜನರಲ್ಲಿ ಧ್ವಜಪ್ರಾಯನು.
11 ಅವನ ತಲೆಯು ಚೊಕ್ಕ ಬಂಗಾರದಂತಿದೆ,
ಗುಂಗುರು ಗುಂಗುರಾಗಿರುವ ಅವನ ಕೂದಲು ಕಾಗೆಯಂತೆ ಕಪ್ಪಾಗಿದೆ.
12 ಅವನ ಕಣ್ಣುಗಳೋ ತುಂಬಿತುಳುಕುವ ತೊರೆಗಳ ಹತ್ತಿರ ತಂಗುವ,
ಕ್ಷೀರದಲ್ಲಿ ಸ್ನಾನಮಾಡುವ ಪಾರಿವಾಳಗಳಂತಿವೆ.
13 ಅವನ ಕೆನ್ನೆಗಳು ಕರ್ಣಕುಂಡಲ ಗಿಡಗಳ ಪಾತಿಗಳಂತೆಯೂ
ಸುಗಂಧಸಸ್ಯಗಳು ಬೆಳೆಯುವ ದಿಬ್ಬಗಳಂತೆಯೂ ಇವೆ;
ಅಚ್ಚರಕ್ತಬೋಳವನ್ನು ಸುರಿಸುವ ಅವನ ತುಟಿಗಳು ಕೆಂದಾವರೆಗಳೇ.
14 ಅವನ ಕೈಗಳು ಪೀತರತ್ನ ಖಚಿತವಾದ ಬಂಗಾರದ ಸಲಾಕಿಗಳೋಪಾದಿಯಲ್ಲಿವೆ,
ಅವನ ಮೈ ಇಂದ್ರನೀಲಮಯವಾದ ದಂತಫಲಕದ ಹಾಗಿದೆ.
15 ಅವನ ಕಾಲುಗಳು ಅಪರಂಜಿಯ ಸುಣ್ಣಪಾದಗಳ ಮೇಲಿಟ್ಟ ಚಂದ್ರಕಾಂತ ಸ್ತಂಭಗಳು;
ದೇವದಾರುಗಳಷ್ಟು ರಮಣೀಯವಾದ ಅವನ ಗಾಂಭೀರ್ಯವು ಲೆಬನೋನಿಗೆ ಸಮಾನ.
16 ಅವನ ನುಡಿ ಮಧುರ,
ಅವನು ಸರ್ವಾಂಗ ಸುಂದರ.
ಯೆರೂಸಲೇಮಿನ ಸ್ತ್ರೀಯರುಗಳಿರಾ,
ಇವನೇ ಎನ್ನಿನಿಯನು; ಇವನೇ ನನ್ನ ಪ್ರಿಯನು.

<- ಪರಮಗೀತೆ 4ಪರಮಗೀತೆ 6 ->