7 ಯಾವುದಾದರೊಂದು ವಸ್ತುವನ್ನು ಬಿಡಿಸಿಕೊಳ್ಳುವಾಗಲೂ, ತೆಗೆದುಕೊಳ್ಳುವಾಗಲೂ, ಕೊಡುವಾಗಲೂ ಮಾತನ್ನು ದೃಢಪಡಿಸುವುದಕ್ಕೋಸ್ಕರ ಇಸ್ರಾಯೇಲರಲ್ಲಿ ಪೂರ್ವಕಾಲದಿಂದ ಇದ್ದ ಪದ್ಧತಿ ಯಾವುದಂದರೆ, ಕೊಡುವವನು ತೆಗೆದುಕೊಳ್ಳುವವನಿಗೆ ತನ್ನ ಪಾದರಕ್ಷೆಯನ್ನು ಬಿಚ್ಚಿ ಕೊಡಬೇಕು; ಇದರಿಂದ ಮಾತು ದೃಢವಾಯಿತೆಂದು ಇಸ್ರಾಯೇಲ್ಯರು ತಿಳಿದುಕೊಳ್ಳುವರು. 8 ಹಾಗೆಯೇ ಆ ಸಮೀಪಬಂಧುವು ಬೋವಜನಿಗೆ “ನೀನೇ ತೆಗೆದುಕೋ” ಎಂದು ಹೇಳಿ ತನ್ನ ಪಾದರಕ್ಷೆಯನ್ನು ತೆಗೆದುಕೊಟ್ಟನು.
9 ಆಗ ಬೋವಜನು ಹಿರಿಯರಿಗೂ, ಎಲ್ಲಾ ಜನರಿಗೂ “ನಾನು ಎಲೀಮೆಲೆಕ್, ಕಿಲ್ಯೋನ್, ಮಹ್ಲೋನ್ ಎಂಬುವರಿಗಿದ್ದದ್ದನ್ನೆಲ್ಲಾ ನವೊಮಿಯಿಂದ ತೆಗೆದುಕೊಂಡಿದ್ದೇನೆ; 10 ಇದಲ್ಲದೆ ಹೊಲದ ಖಾತೆಯು ಸತ್ತುಹೋದ ಮಹ್ಲೋನನ ಹೆಸರಿನಲ್ಲೇ ಉಳಿದು, ಅವನ ಬಂಧುಗಳಲ್ಲಿಯೂ ಊರಲ್ಲಿಯೂ ಅವನ ಸಂತಾನವು ಉಳಿಯುವಂತೆ ಅವನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ನನ್ನ ಹೆಂಡತಿಯನ್ನಾಗಿ ತೆಗೆದುಕೊಂಡಿದ್ದೇನೆ ಇದಕ್ಕೆ ನೀವೇ ಸಾಕ್ಷಿಗಳು” ಎಂದು ಹೇಳಿದನು. 11 ಅದಕ್ಕೆ ಊರ ಬಾಗಿಲಲ್ಲಿ ಕೂಡಿ ಬಂದಿದ್ದ ಹಿರಿಯರೂ, ಎಲ್ಲಾ ಜನರೂ “ಹೌದು, ನಾವೇ ಸಾಕ್ಷಿಗಳು; [a]ಯೆಹೋವನು ಇಸ್ರಾಯೇಲನ ಮನೆಯನ್ನು ಕಟ್ಟಿದ. ರಾಹೇಲ್, ಲೇಯಾ ಎಂಬ ಸ್ತ್ರೀಯರನ್ನು ಹೇಗೋ ಹಾಗೆಯೇ ನಿನ್ನ ಮನೆಗೆ ಬರುವ ಈ ಸ್ತ್ರೀಯನ್ನೂ ಅಭಿವೃದ್ಧಿಪಡಿಸಲಿ. ಎಫ್ರಾತದಲ್ಲಿ ಅಭಿವೃದ್ಧಿ ಹೊಂದು, ಬೇತ್ಲೆಹೇಮಿನಲ್ಲಿ ಪ್ರಸಿದ್ಧನಾಗು. 12 ಯೆಹೋವನು ಈ ಸ್ತ್ರೀಯ ಮೂಲಕ ನಿನಗೆ ಅನುಗ್ರಹಿಸುವ ಸಂತಾನದಿಂದ ನಿನ್ನ ಮನೆಯು ಯೆಹೂದನಿಗೆ ತಾಮಾರಳಿಂದ ಹುಟ್ಟಿದ [b]ಪೆರೆಚನ ಮನೆಗೆ ಸಮಾನವಾಗಲಿ” ಅಂದರು.
13 ಬೋವಜನು ರೂತಳನ್ನು ಹೆಂಡತಿಯನ್ನಾಗಿ ಪರಿಗ್ರಹಿಸಿದ್ದರಿಂದ ಆಕೆಯು ಯೆಹೋವನ ಅನುಗ್ರಹದಿಂದ ಗರ್ಭಿಣಿಯಾಗಿ ಮಗನನ್ನು ಹೆತ್ತಳು. 14 ಆಗ ಹೆಂಗಸರು ನವೊಮಿಗೆ “ಈ ಹೊತ್ತು ನಿನಗೆ ಬಾಧ್ಯಸ್ಥನನ್ನು ದಯಪಾಲಿಸಿದ ಯೆಹೋವನಿಗೆ ಸ್ತೋತ್ರವಾಗಲಿ. ಈ ಮಗನು ಇಸ್ರಾಯೇಲ್ಯರಲ್ಲಿ ಪ್ರಖಾತ್ಯನಾಗಲಿ. 15 ಇವನು ನಿನಗೆ ನವಚೈತನ್ಯ ನೀಡಿ ಪುನರ್ಜನ್ಮ ಹೊಂದುವಂತೆ ಮಾಡುವನು, ವೃದ್ಧಾಪ್ಯದಲ್ಲಿ ನಿನಗೆ ಸಂರಕ್ಷಕನಾಗಿರುವನು. ನಿನ್ನನ್ನು ಬಹಳವಾಗಿ ಪ್ರೀತಿಸುತ್ತಾ ಏಳು ಮಂದಿ ಮಕ್ಕಳಿಗಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸಿ ಗೌರವಿಸುವ ನಿನ್ನ ಸೊಸೆಯು ಇವನನ್ನು ಹೆತ್ತಳಲ್ಲಾ” ಎಂದು ಹೇಳಿದರು.
16 ನವೊಮಿಯೇ ಆ ಮಗುವನ್ನು ಮಡಿಲಲ್ಲಿಟ್ಟುಕೊಂಡು ಸಾಕುತ್ತಿದ್ದಳು. 17 ನೆರೆಹೊರೆಯ ಹೆಂಗಸರು ನವೊಮಿಗೆ “ಒಬ್ಬ ಮಗನು ಹುಟ್ಟಿದ್ದಾನೆಂದು” ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ಇಷಯನಿಗೆ ತಂದೆಯೂ, ದಾವೀದನಿಗೆ ಅಜ್ಜನೂ ಆದನು.