5 ತೆನೆ ಕೊಯ್ಯುವವರ ಜೊತೆಯಲ್ಲಿ ರೂತಳನ್ನು ನೋಡಿ ಬೋವಜನು ತೆನೆ ಕೊಯ್ಯುವವರನ್ನು ನಿರ್ವಹಿಸಲು ನೇಮಿಸಿದ್ದ ತನ್ನ ಸೇವಕನನ್ನು, “ಈ ಹೆಂಗಸು ಯಾರು?” ಎಂದು ಕೇಳಿದ್ದಕ್ಕೆ 6 ಅವನು “ಈಕೆಯು ಮೋವಾಬ್ ಸೀಮೆಯಿಂದ ನವೊಮಿಯ ಸಂಗಡ ಬಂದ ಮೋವಾಬ್ ಸ್ತ್ರೀ.” ಎಂದನು. 7 ಇವಳು ತೆನೆ “ಕೊಯ್ಯುವವರೊಂದಿಗೆ ಸಿವುಡುಗಳ ಮಧ್ಯದಲ್ಲಿ ಹಕ್ಕಲಾಯ್ದುಕೊಳ್ಳುವ ಹಾಗೆ ಅಪ್ಪಣೆ ನೀಡಬೇಕೆಂದು ಕೇಳಿಕೊಂಡಳು. ಬೆಳಿಗ್ಗೆ ಬಂದವಳು ಇನ್ನೂ ಇಲ್ಲಿಯೇ ಇದ್ದಾಳೆ. ಸದ್ಯಕ್ಕೆ ಮನೆಯಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾಳೆ” ಅಂದನು. 8 ಆಗ ಬೋವಜನು ರೂತಳಿಗೆ, “ನನ್ನ ಮಗಳೇ, ಕೇಳು; ನನ್ನ ಹೊಲವನ್ನು ಬಿಟ್ಟು ಬೇರೆಯವರ ಹೊಲಕ್ಕೆ ಹೋಗಬೇಡ; ನನ್ನ ಹೆಣ್ಣಾಳುಗಳ ಜೊತೆಯಲ್ಲೇ ಇರು. 9 ನನ್ನ ಆಳುಗಳು ತೆನೆ ಕೊಯ್ಯುವುದಕ್ಕೋಸ್ಕರ ಯಾವ ಹೊಲಕ್ಕೆ ಹೋಗುತ್ತಾರೋ ಆ ಹೊಲಕ್ಕೆ ನೀನೂ ಹೋಗು. ನಿನ್ನನ್ನು ಯಾರೂ ಮುಟ್ಟಬಾರದೆಂದು ನನ್ನ ಸೇವಕರಿಗೆ ಅಪ್ಪಣೆಕೊಟ್ಟಿದ್ದೇನೆ. ನಿನಗೆ ಬಾಯಾರಿಕೆಯಾದರೆ ಹೋಗಿ ನನ್ನ ಸೇವಕರೇ ತುಂಬಿಸಿದ ನೀರಿನ ಪಾತ್ರೆಗಳಿಂದ ನೀರು ಕುಡಿಯಬಹುದು” ಎಂದು ಹೇಳಿದನು. 10 ರೂತಳು ಅವನಿಗೆ ಸಾಷ್ಟಾಂಗನಮಸ್ಕಾರ ಮಾಡಿ “ಪರದೇಶಿಯಾದ ನನ್ನ ಮೇಲೆ ಇಷ್ಟು ಕಟಾಕ್ಷವಿಟ್ಟು ದಯೆ ತೋರಿಸಲು ಕಾರಣವೇನು?” ಎಂದು ಕೇಳಿದಳು. 11 ಅದಕ್ಕೆ ಬೋವಜನು, “ನಿನ್ನ ಗಂಡನು ಮರಣ ಹೊಂದಿದ ದಿನದಿಂದ ನಿನ್ನ ಅತ್ತೆಗಾಗಿ ನೀನು ಮಾಡಿದ್ದೆಲ್ಲವೂ, ನನಗೆ ತಿಳಿದಿದೆ. ಹಾಗೂ ನಿನ್ನ ತಂದೆತಾಯಿಗಳನ್ನೂ, ಸ್ವದೇಶವನ್ನೂ ಬಿಟ್ಟು, ನಿನಗೆ ಅರಿಯದ ಜನರ ಬಳಿಗೆ ಬಂದಿರುವಿಯೆಂಬುದು ನನಗೆ ಚೆನ್ನಾಗಿ ಗೊತ್ತಿದೆ. 12 ನೀನು ಮಾಡಿದ್ದ ಎಲ್ಲಾ ಒಳ್ಳೆಯಕಾರ್ಯದ ಪ್ರತಿಫಲವಾಗಿ ಯೆಹೋವನು ನಿನಗೆ ಒಳ್ಳೆಯ ಫಲವನ್ನು ಕೊಡಲಿ; ನೀನು ಯಾವ ದೇವರ ಕೃಪಾಶಿರ್ವಾದದ ಆಶ್ರಯ ಹೊಂದಲು ಬಂದಿರುವೆಯೋ ಆ ಇಸ್ರಾಯೇಲಿನ ದೇವರಾದ ಯೆಹೋವನು ನಿನಗೆ ಉತ್ತಮವಾದ ಆಶ್ರಯವನ್ನು ಪ್ರತಿಫಲವನ್ನು ಅನುಗ್ರಹಿಸಲಿ” ಎಂದು ಉತ್ತರ ಕೊಟ್ಟನು. 13 ಆಗ ಆಕೆಯು, “ಸ್ವಾಮೀ, ತಾವು ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದೀರಿ; ನಾನು ತಮ್ಮ ದಾಸಿಯೆನಿಸಿಕೊಳ್ಳುವುದಕ್ಕೆ ಯೋಗ್ಯಳಲ್ಲದಿದ್ದರೂ ನನ್ನನ್ನು ಕನಿಕರಿಸಿ ಪ್ರೀತಿಯಿಂದ ಮಾತನಾಡಿಸಿದಿರಿ” ಅಂದಳು. 14 ಊಟದ ವೇಳೆಯಲ್ಲಿ ಬೋವಜನು “ಇಲ್ಲಿ ಬಾ; ರೊಟ್ಟಿಯನ್ನು ತೆಗೆದುಕೊಂಡು ಮುರಿದು ಹುಳಿರಸದಲ್ಲಿ ಅದ್ದಿ ತಿನ್ನು” ಎಂದು ಕರೆಯಲು ಆಕೆಯು ಹೋಗಿ ತೆನೆ ಕೊಯ್ಯುವವರ ಬಳಿಯಲ್ಲಿ ಕುಳಿತುಕೊಂಡಳು. ಇದಲ್ಲದೆ ಅವನು ಆಕೆಗೆ ಸುಟ್ಟ ತೆನೆಗಳನ್ನು ಕೊಟ್ಟನು. ಆಕೆಯು ತಿಂದು ತೃಪ್ತಳಾಗಿ ಇನ್ನೂ ಉಳಿಸಿಕೊಂಡಳು. 15 ತರುವಾಯ ತಿರುಗಿ ಹಕ್ಕಲಾಯುವುದಕ್ಕೆ ಏಳಲು ಬೋವಜನು ತನ್ನ ಸೇವಕರಿಗೆ, “ಈಕೆಯು ಸಿವುಡುಗಳ ಮಧ್ಯದಲ್ಲಿ ಹಕ್ಕಲಾಯ್ದುಕೊಳ್ಳಲಿ, ಅಡ್ಡಿ ಮಾಡಬೇಡಿರಿ; 16 ಸಿವುಡುಗಳಿಂದ ತೆನೆಗಳನ್ನು ಕಿತ್ತುಹಾಕಿರಿ; ಈಕೆಯು ಕೂಡಿಸಿಕೊಳ್ಳಲಿ, ಗದರಿಸಬೇಡಿರಿ” ಎಂದು ಆಜ್ಞಾಪಿಸಿದನು. 17 ರೂತಳು ಸಾಯಂಕಾಲದ ವರೆಗೂ ಹಕ್ಕಲಾಯ್ದು ಕೂಡಿಸಿದ್ದನ್ನು ಬಡಿದಾಗ ಸುಮಾರು [a]ಮೂವತ್ತು ಸೇರು ಜವೆಗೋದಿ ಸಿಕ್ಕಿತು. 18 ಆಕೆಯು ಅದನ್ನು ಹೊತ್ತುಕೊಂಡು ಊರಿಗೆ ಬಂದು, ಆಕೆ ಹಕ್ಕಲಾಯ್ದದು ಸಂಗ್ರಹಿಸಿದ್ದನ್ನು ತನ್ನ ಅತ್ತೆಗೆ ತೋರಿಸಿದಳು. ತಾನು ಉಳಿಸಿಟ್ಟಿದ್ದ ಸುಟ್ಟ ತೆನೆಯನ್ನು ರೂತಳು ತನ್ನ ಅತ್ತೆಗೆ ಕೊಟ್ಟಳು. 19 ಅತ್ತೆಯು “ನೀನು ಈ ಹೊತ್ತು ಯಾರ ಹೊಲದಲ್ಲಿ ಹಕ್ಕಲಾಯ್ದಿ? ಎಲ್ಲಿ ಕೆಲಸಮಾಡಿದಿ? ನಿನ್ನನ್ನು ಕಟಾಕ್ಷಿಸಿದವನಿಗೆ ಶುಭವಾಗಲಿ” ಎನ್ನಲು ರೂತಳು ನಾನು ಹಕ್ಕಲಾಯ್ದ ಹೊಲದ ಯಜಮಾನನ ಹೆಸರು, ಬೋವಜನೆಂದು ತಿಳಿಸಿದಳು. 20 ಆಗ ನವೊಮಿಯು “ಸತ್ತವರಿಗೂ, ಬದುಕುವವರಿಗೂ ಮಾಡಿದ ವಾಗ್ದಾನಗಳನ್ನು ನೆರವೇರಿಸುವ ಯೆಹೋವನು ಆತನನ್ನು ಆಶೀರ್ವದಿಸಲಿ” ಎಂದು ಹರಸಿ, “ಆ ಮನುಷ್ಯನು ನಮಗೆ ಹತ್ತಿರದ ನೆಂಟ, ಪೋಷಿಸಬೇಕಾದವನು” ಎಂದು ರೂತಳಿಗೆ ತಿಳಿಸಿದಳು. 21 ಆಗ ಮೋವಾಬ್ಯಳಾದ ರೂತಳು “ಇದಲ್ಲದೆ ಆ ಮನುಷ್ಯನು ನನಗೆ, ‘ಸುಗ್ಗಿ ಮುಗಿಯುವವರೆಗೂ ನನ್ನ ಆಳುಗಳ ಜೊತೆಯಲ್ಲೇ ಇರು ಎಂದು ಹೇಳಿದ್ದಾನೆ’ ” ಎಂದಳು. 22 ನವೊಮಿಯು ತನ್ನ ಸೊಸೆಯಾದ ರೂತಳಿಗೆ “ನನ್ನ ಮಗಳೇ, ನೀನು ಅವನ ಹೆಣ್ಣಾಳುಗಳ ಸಂಗಡಲೇ ಹೊರಟುಹೋಗುವುದು ಒಳ್ಳೆಯದು; ಬೇರೆ ಹೊಲದಲ್ಲಿ ನಿನಗೆ ತೊಂದರೆಯಾದೀತು” ಎಂದು ಹೇಳಿದಳು. 23 ಅದರಂತೆಯೇ ರೂತಳು ಅತ್ತೆಯ ಜೊತೆಯಲ್ಲಿದ್ದುಕೊಂಡು ಜವೆಗೋದಿಯ ಮತ್ತು ಗೋದಿಯ ಸುಗ್ಗಿ ಮುಗಿಯುವ ವರೆಗೆ ಬೋವಜನ ಹೆಣ್ಣಾಳುಗಳ ಸಂಗಡಲೇ ಹೋಗಿ ಹಕ್ಕಲಾಯುತ್ತಿದ್ದಳು.
<- ರೂತಳು 1ರೂತಳು 3 ->- a ಮೂವತ್ತು ಸೇರು ಅಂದರೆ ಒಂದು ಏಫಾ ಅಥವಾ ಸುಮಾರು 12 ಕಿಲೋಗ್ರಾಂ.