Link to home pageLanguagesLink to all Bible versions on this site

ರೂತಳು
ಗ್ರಂಥಕರ್ತೃತ್ವ
ರೂತಳ ಪುಸ್ತಕದ ಗ್ರಂಥಕರ್ತ ಯಾರೆಂದು ಈ ಪುಸ್ತಕವು ನಿರ್ದಿಷ್ಟವಾಗಿ ಹೆಸರಿಸುವುದಿಲ್ಲ. ಸಂಪ್ರದಾಯದ ಪ್ರಕಾರ ರೂತಳ ಪುಸ್ತಕವನ್ನು ಪ್ರವಾದಿಯಾದ ಸಮುವೇಲನು ಬರೆದನು. ಇದು ಹಿಂದೆಂದೂ ಬರೆಯಲ್ಪಟ್ಟಿರುವುದರಲ್ಲಿಯೇ ಅತ್ಯಂತ ಸುಂದರವಾದ ಸಣ್ಣ ಕಥೆಯೆಂದು ಕರೆಯಲ್ಪಡುತ್ತದೆ. ಈ ಪುಸ್ತಕದ ಅಂತಿಮ ವಾಕ್ಯಗಳು ರೂತಳನ್ನು ಆಕೆಯ ಮರಿಮಗನಾಗಿದ್ದ ದಾವೀದನೊಂದಿಗೆ ಜೊತೆಗೂಡಿಸುತ್ತವೆ (ರೂತಳು 4:17-22), ಆದ್ದರಿಂದ ಅವನ ಅಭಿಷೇಕದ ನಂತರ ಇದನ್ನು ಬರೆಯಲಾಗಿದೆ ಎಂದು ನಮಗೆ ತಿಳಿದುಬರುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 1,030 - 1,010 ನಡುವಿನ ಕಾಲದಲ್ಲಿ ಬರೆದಿರಬಹುದು.
ರೂತಳ ಪುಸ್ತಕದ ಘಟನೆಗಳು ನ್ಯಾಯಸ್ಥಾಪಕರ ಅವಧಿಗೆ ಸಂಬಂಧಿಸಿರುವುದರಿಂದ ರೂತಳ ಪುಸ್ತಕದ ಘಟನೆಗಳ ದಿನಾಂಕವು ಐಗುಪ್ತದಿಂದ ಬಿಡುಗಡೆಯಾಗಿ ಹೊರಟುಬಂದ ದಿನಾಂಕಕ್ಕೆ ಸಂಬಂಧಿಸಿರುತ್ತದೆ ಮತ್ತು ನ್ಯಾಯಸ್ಥಾಪಕರ ಅವಧಿಯು ವಿಜಯದೊಂದಿಗೆ (ವಶಪಡಿಸಿಕೊಳ್ಳುವಿಕೆ) ಸಂಬಂಧ ಹೊಂದಿದೆ.
ಸ್ವೀಕೃತದಾರರು
ರೂತಳ ಪುಸ್ತಕದ ಮೂಲ ಸ್ವೀಕೃತದಾರರನ್ನು ಸ್ಪಷ್ಟವಾಗಿ ಗುರುತಿಸಲಾಗಿಲ್ಲ. ದಾವೀದನನ್ನು 4:22 ರಲ್ಲಿ ಉಲ್ಲೇಖಿಸಿರುವ ಕಾರಣ ಇದನ್ನು ಮೂಲತಃ ಸಂಯುಕ್ತ ರಾಜಪ್ರಭುತ್ವದ ಅವಧಿಯಲ್ಲಿ ಬರೆದಿರಬಹುದೆಂದು ಭಾವಿಸಬಹುದು.
ಉದ್ದೇಶ
ರೂತಳ ಪುಸ್ತಕವು ವಿಧೇಯತೆ ತರಬಲ್ಲಂತಹ ಆಶೀರ್ವಾದಗಳನ್ನು ಇಸ್ರಾಯೇಲ್ಯರಿಗೆ ತೋರಿಸಿದೆ. ಅದು ಅವರ ದೇವರ ಪ್ರೀತಿಯ, ನಂಬಿಗಸ್ತಿಕೆಯ ಸ್ವಭಾವವನ್ನು ತೋರಿಸಿದೆ. ದೇವರು ತನ್ನ ಜನರ ಮೊರೆಗೆ ಪ್ರತಿಕ್ರಿಯಿಸುತ್ತಾನೆಂದು ಈ ಪುಸ್ತಕವು ತೋರಿಸುತ್ತದೆ. ಅವನು ಬೋಧಿಸುವುದನ್ನು ಅವನು ಅಭ್ಯಸಿಸುತ್ತಾನೆ. ಭವಿಷ್ಯದ ಕುರಿತು ಕಿಂಚಿತ್ತು ನಿರೀಕ್ಷೆಯುಳ್ಳಂಥ ಇಬ್ಬರು ವಿಧವೆಯರಾದ ನವೊಮಿ ಮತ್ತು ರೂತಳಿಗೆ ಒದಗಿಸಿಕೊಟ್ಟ ಆತನ ಒದಗಿಸುವಿಕೆಯನ್ನು ಕಾಣುವಾಗ ಆತನು ಸಮಾಜದಿಂದ ತಳ್ಳಲ್ಪಟ್ಟಂಥವರನ್ನು ಆತನು ಆರೈಕೆ ಮಾಡುತ್ತಾನೆ ಎಂದು ತೋರಿಸುತ್ತದೆ, ನಾವು ಕೂಡ ಹಾಗೆಯೇ ಮಾಡಬೇಕೆಂದು ಆತನು ನಮಗೆ ಹೇಳುತ್ತಾನೆ (ಯೆರೆಮೀಯ 22:16; ಯಾಕೋಬನು 1:27).
ಮುಖ್ಯಾಂಶ
ವಿಮೋಚನೆ
ಪರಿವಿಡಿ
1. ನವೊಮಿ ಮತ್ತು ಆಕೆಯ ಕುಟುಂಬವು ದುರಂತವನ್ನು ಅನುಭವಿಸಿದ್ದರು — 1:1-22
2. ರೂತಳು ನವೊಮಿಯ ಸಂಬಂಧಿಕನಾದ ಬೋವಜನನ್ನು ಅವನ ಹೊಲದಲ್ಲಿ ಹಕ್ಕಲಾಯುವಾಗ ಭೇಟಿಯಾದಳು — 2:1-23
3. ಬೋವಜನ ಬಳಿಗೆ ಹೋಗಲು ರೂತಳಿಗೆ ನವೊಮಿಯು ಸೂಚಿಸಿದ್ದು — 3:1-18
4. ರೂತಳನ್ನು ವಿಮೋಚಿಸಿದ್ದು ಮತ್ತು ನವೊಮಿಯನ್ನು ಪುನಃಸ್ಥಾಪಿಸಿದ್ದು — 4:1-22

1
ರೂತಳು ಅತ್ತೆಯೊಡನೆ ಯೆಹೂದ ದೇಶಕ್ಕೆ ಬಂದದ್ದು
1 ನ್ಯಾಯಸ್ಥಾಪಕರು ಆಳುತ್ತಿದ್ದ ಕಾಲದಲ್ಲಿ ಒಮ್ಮೆ ದೇಶದಲ್ಲಿ ಬರ ಬಂದಿದ್ದರಿಂದ ಯೆಹೂದ ಪ್ರಾಂತ್ಯದ ಬೇತ್ಲೆಹೇಮಿನವನೊಬ್ಬನು ತನ್ನ ಹೆಂಡತಿ, ಇಬ್ಬರು ಪುತ್ರರ ಸಹಿತವಾಗಿ ಮೋವಾಬ್‍ ದೇಶದಲ್ಲಿ ವಾಸಮಾಡುವುದಕ್ಕಾಗಿ ಹೊರಟುಹೋದನು. 2 ಆ ಮನುಷ್ಯನ ಹೆಸರು ಎಲೀಮೆಲೆಕ, ಅವನ ಹೆಂಡತಿ ನವೊಮಿ. ಅವನ ಇಬ್ಬರು ಮಕ್ಕಳ ಹೆಸರು ಮಹ್ಲೋನ್ ಮತ್ತು ಕಿಲ್ಯೋನ್. ಯೆಹೂದ ದೇಶಕ್ಕೆ ಸೇರಿದ ಎಫ್ರಾತದಲ್ಲಿರುವ ಬೇತ್ಲೆಹೇಮಿನವರಾದ ಇವರು ಮೋವಾಬ್ ದೇಶದಲ್ಲಿ ಬಂದು ವಾಸವಾಗಿದ್ದಾಗ 3 ನವೊಮಿಯ ಗಂಡನಾದ ಎಲೀಮೆಲೆಕನು ಮರಣ ಹೊಂದಿದನು. ಆಕೆಯು ಇಬ್ಬರು ಮಕ್ಕಳೊಡನೆ ಅಲ್ಲಿಯೇ ಉಳಿದಳು. 4 ಈ ಮಕ್ಕಳು ಒರ್ಫಾ, ರೂತ್ ಎಂಬ ಹೆಸರಿನ ಮೋವಾಬ್ ಸ್ತ್ರೀಯರನ್ನು ಮದುವೆಮಾಡಿಕೊಂಡು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ವಾಸವಾಗಿದ್ದರು. 5 ಅವರು ಅಲ್ಲಿದ್ದಾಗ ನವೊಮಿಯ ಮಕ್ಕಳಾದ ಮಹ್ಲೋನ್ ಮತ್ತು ಕಿಲ್ಯೋನ್ ಇಬ್ಬರೂ ತೀರಿಹೋದರು. ಹೀಗೆ ನವೊಮಿ ಗಂಡನನ್ನೂ, ಇಬ್ಬರು ಮಕ್ಕಳನ್ನೂ ಕಳೆದುಕೊಂಡು ಸೊಸೆಯರೊಂದಿಗೆ ಅಲ್ಲೇ ಉಳಿದಳು.

6 ಯೆಹೋವನು ತನ್ನ ಜನರನ್ನು ಸಂದರ್ಶಿಸಿ ಅವರಿಗೆ ಆಹಾರವನ್ನು ಅನುಗ್ರಹಿಸಿದ್ದಾನೆಂಬ ವರ್ತಮಾನವನ್ನು ಕೇಳಿದ ನವೊಮಿಯು ತನ್ನ ಸೊಸೆಯರೊಡನೆ ಮೋವಾಬ್ ದೇಶದಿಂದ ಯೆಹೂದ ದೇಶಕ್ಕೆ ಹೋಗಬೇಕೆಂದು ನಿರ್ಧರಿಸಿದಳು. 7 ಆಕೆಯು ಇಬ್ಬರು ಸೊಸೆಯರೊಡನೆ ತಾನಿದ್ದ ಸ್ಥಳದಿಂದ ಯೆಹೂದ ದೇಶಕ್ಕೆ ಹೋಗುವ ದಾರಿಯಲ್ಲಿ ಹೋಗುತ್ತಿರುವಾಗ 8 ಅವರಿಗೆ, “ನೀವು ತಿರುಗಿ ನಿಮ್ಮ ನಿಮ್ಮ ತವರುಮನೆಗಳಿಗೆ ಹೋಗಿರಿ, ನೀವು ನನ್ನನ್ನೂ, ಮರಣಹೊಂದಿದ ನನ್ನ ಮಕ್ಕಳನ್ನು ಪ್ರೀತಿಸಿದಂತೆ ಯೆಹೋವನು ನಿಮ್ಮನ್ನು ಪ್ರೀತಿಸಿ ನಿಮಗೆ ಕೃಪೆತೋರಿಸಲಿ. 9 ನೀವಿಬ್ಬರೂ ಮದುವೆಯಾಗಿ ಗಂಡನ ಮನೆಯಲ್ಲಿ ಸುಖವಾಗಿರುವಂತೆ ಯೆಹೋವನು ಅನುಗ್ರಹಿಸಲಿ” ಎಂದು ಹೇಳಿ ಅವರಿಗೆ ಮುದ್ದಿಟ್ಟಳು. 10 ಆಗ ಅವರು ಬಹಳ ದುಃಖದಿಂದ ಗಟ್ಟಿಯಾಗಿ ಅತ್ತು ನಾವೂ ನಿನ್ನ ಜೊತೆಯಲ್ಲೇ ನಿನ್ನ ಸ್ವಜನರ ಬಳಿಗೆ ಬರುತ್ತೇವೆ ಅನ್ನಲು, 11 ಆಕೆಯು, “ನನ್ನ ಮಕ್ಕಳೇ, ನೀವು ನನ್ನೊಡನೆ ಬರುವುದೇಕೆ? ಹಿಂದಿರುಗಿ ಹೋಗಿರಿ. ನಿಮಗೆ ಗಂಡಂದಿರನ್ನು ಕೊಡುವುದಕ್ಕೆ ನನ್ನ ಗರ್ಭದಲ್ಲಿ ಬೇರೆ ಮಕ್ಕಳಿಲ್ಲವಲ್ಲಾ. 12 ನಾನು ಮತ್ತೊಬ್ಬನನ್ನು ಪುನಃ ಮದುವೆಮಾಡಿಕೊಳ್ಳುವ ಪ್ರಾಯವೂ ನನಗೆ ದಾಟಿಹೋಗಿದೆ. ಆದುದರಿಂದ ನನ್ನ ಮಕ್ಕಳೇ, ನೀವು ಹಿಂದಿರುಗಿ ಹೋಗಿರಿ. ಒಂದು ವೇಳೆ ಆ ನಿರೀಕ್ಷೆಯಿಂದ ಈ ಹೊತ್ತೇ ನಾನು ಪುನಃ ಮದುವೆಯಾಗಿ ಮಕ್ಕಳನ್ನು ಹೆತ್ತರೂ, 13 ಅವರು ದೊಡ್ಡವರಾಗುವ ತನಕ ನೀವು ಕಾದಿರುವಿರೋ? ಅಲ್ಲಿಯ ವರೆಗೂ ಗಂಡಂದಿರಿಲ್ಲದೆ ಇರುವಿರೋ? ನನ್ನ ಮಕ್ಕಳೇ, ಹಾಗೆ ಮಾಡಬೇಡಿರಿ; ಯೆಹೋವನ ಹಸ್ತವು ನನ್ನಿಂದ ದೂರವಾಗಿರುವುದರಿಂದ ನಾನು ನಿಮಗಿಂತ ಹೆಚ್ಚಾಗಿ ದುಃಖಪಡುತ್ತೇನೆ” ಅಂದಳು. 14 ಆಗ ಅವರು ಬಹಳವಾಗಿ ದುಃಖಿಸಿ ಗಟ್ಟಿಯಾಗಿ ಅತ್ತರು. ಒರ್ಫಳು ಅತ್ತೆಯನ್ನು ಮುದ್ದಿಟ್ಟು ಹೊರಟು ತನ್ನ ತವರಿಗೆ ಹೋದಳು; ರೂತಳಾದರೋ ಅತ್ತೆಯನ್ನು ತೊರೆದುಹೋಗದೆ ಅವಳೊಂದಿಗೆ ಇದ್ದಳು. 15 ನವೊಮಿಯು ರೂತಳಿಗೆ, ಇಗೋ, ನಿನ್ನ ಓರಗಿತ್ತಿಯು ತಿರುಗಿ ತನ್ನ ಜನರ ಬಳಿಗೂ, ತನ್ನ ಕುಲ ದೇವರುಗಳ ಬಳಿಗೂ ಹೋಗಿದ್ದಾಳೆ. ನೀನೂ ಆಕೆಯಂತೆ ನಿನ್ನ ಜನರ ಬಳಿಗೆ ಹೋಗು ಅಂದಾಗ, 16 ಆಕೆಯು, “ನಿನ್ನನ್ನು ಬಿಟ್ಟು ಹಿಂದಿರುಗಿ ಹೋಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. 17 ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲೇ ನನಗೆ ಸಮಾಧಿಯಾಗಬೇಕು. ಮರಣದಿಂದಲ್ಲದೆ ನಾನು ನಿನ್ನನ್ನು ಅಗಲಿದರೆ ಯೆಹೋವನು ನನ್ನನ್ನು ಹೆಚ್ಚಾಗಿ ಶಿಕ್ಷಿಸಲಿ” ಎಂದಳು. 18 ಆಕೆಯು ತನ್ನ ಜೊತೆಯಲ್ಲಿ ಬರುವುದಕ್ಕೆ ನಿರ್ಧರಿಸಿದ್ದಾಳೆಂದು ನವೊಮಿಯು ತಿಳಿದು ಸುಮ್ಮನಾದಳು. 19 ಹಾಗೆಯೇ ಪ್ರಯಾಣಮಾಡಿಕೊಂಡು ಅವರಿಬ್ಬರೂ ಬೇತ್ಲೆಹೇಮಿಗೆ ಬಂದು ಊರೊಳಕ್ಕೆ ಹೋದಾಗ ಅಲ್ಲಿಯ ಜನರಲ್ಲಿ ಕುತೂಹಲ ಮೂಡಿತು. ಸ್ತ್ರೀಯರು, “ಈಕೆಯು ನವೊಮಿಯಲ್ಲವೇ?” ಎಂದು ವಿಚಾರಿಸಲು 20 ಆಕೆಯು ಅವರಿಗೆ, “ನನ್ನನ್ನು ನವೊಮಿಯೆಂದು ಕರೆಯಬೇಡಿರಿ; ನನ್ನನ್ನು ‘ಮಾರಾ’ (ಕಹಿ) ಎಂದು ಕರೆಯಿರಿ. ಏಕೆಂದರೆ, ಸರ್ವಶಕ್ತನಾದ ದೇವರು ಬಹಳ ತೀಕ್ಷ್ಣವಾಗಿ ನನ್ನ ಜೀವಿತವನ್ನು ಮಾರ್ಪಡಿಸಿದ್ದಾನೆ. 21 ಸಿರಿವಂತಳಾಗಿ ಹೋದೆನು; ಯೆಹೋವನು ನನ್ನನ್ನು ಗತಿಹೀನಳನ್ನಾಗಿ ಹಿಂತಿರುಗುವಂತೆ ಮಾಡಿದನು. ಯೆಹೋವನು ನನಗೆ ವಿರೋಧವಾಗಿದ್ದಾನೆ, ಸರ್ವಶಕ್ತನು ನನ್ನನ್ನು ಬಾಧಿಸಿದ್ದಾನೆ. ಹೀಗಿರುವಾಗ ನೀವು ನನ್ನನ್ನು ನವೊಮಿಯೆಂದು ಕರೆಯುವುದು ಸರಿಯೇ” ಅಂದಳು.

22 ಹೀಗೆ, ನವೊಮಿಯು ಮೋವಾಬ್ಯಳಾದ ತನ್ನ ಸೊಸೆ ರೂತಳೊಡನೆ ಬೇತ್ಲೆಹೇಮಿಗೆ ಬಂದಳು. ಆಗ ಜವೆಗೋದಿಯ ಸುಗ್ಗಿಯು ಪ್ರಾರಂಭವಾಗಿತ್ತು.

ರೂತಳು 2 ->