4
ಅಬ್ರಹಾಮನು ನಂಬಿಕೆಯಿಂದಲೇ ನೀತಿವಂತನಾದನೆಂಬ ವಾದ
1 ಹಾಗಾದರೆ ವಂಶಾನುಕ್ರಮವಾಗಿ ನಮಗೆ [a]ಮೂಲಪಿತೃವಾಗಿರುವ ಅಬ್ರಹಾಮನು ಈ ವಿಷಯದಲ್ಲಿ ಏನು ಪಡೆದುಕೊಂಡನೆಂದು ಹೇಳಬೇಕು? 2 ಅಬ್ರಹಾಮನು ಪುಣ್ಯಕ್ರಿಯೆಯಿಂದಲೇ ನೀತಿವಂತನಾದ ಪಕ್ಷದಲ್ಲಿ ಹೊಗಳಿಕೊಳ್ಳುವುದಕ್ಕೆ ಅವನಿಗೆ ಆಸ್ಪದವಿರುವುದು; ಆದರೆ [b]ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಆಸ್ಪದವಿರುವುದಿಲ್ಲ. 3 ಇದರ ವಿಷಯದಲ್ಲಿ ಧರ್ಮಶಾಸ್ತ್ರವು ಹೇಳುವುದನ್ನು ಆಲೋಚಿಸಿರಿ, [c]“ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲ್ಪಟ್ಟಿತು” ಎಂದು ಹೇಳುತ್ತದೆ. 4 ಕೆಲಸ ಮಾಡಿದವನಿಗೆ ಬರುವ ಕೂಲಿಯು ಕೃಪೆಯಿಂದ ದೊರಕುವಂಥದೆಂದು ಎಣಿಕೆಯಾಗುವುದಿಲ್ಲ; ಅದು ಅವನಿಗೆ ಸಲ್ಲತಕ್ಕದ್ದೇ ಎಂದು ಎಣಿಕೆಯಾಗುವುದು. 5 ಆದರೆ ಯಾವನು ಪುಣ್ಯಕ್ರಿಯೆಗಳನ್ನು ಮಾಡಿದವನಾಗಿರದೆ [d]ಪಾಪಾತ್ಮರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆಯಿಡುತ್ತಾನೋ ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವುದು. 6 ದೇವರು ಯಾವನನ್ನು ಪುಣ್ಯಕ್ರಿಯೆಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ. ಹೇಗೆಂದರೆ, 7 [e]“ಯಾರ ಅಪರಾಧಗಳು ಪರಿಹಾರವಾಗಿದೆಯೋ, ಯಾರ ಪಾಪಗಳು ಕ್ಷಮಿಸಲ್ಪಟ್ಟಿವೆಯೋ ಅವರೇ ಧನ್ಯರು. 8 [f]ಕರ್ತನು ಯಾವನ ಪಾಪವನ್ನು ಲೆಕ್ಕಕ್ಕೆ ತರುವುದಿಲ್ಲವೋ ಆ ಮನುಷ್ಯನೇ ಧನ್ಯನು.” 9 [g]ಈ ಶುಭವು ಸುನ್ನತಿಯಾದವರಿಗೆ ಮಾತ್ರವೋ? ಅಥವಾ ಸುನ್ನತಿಯಿಲ್ಲದವರಿಗೆ ಸಹ ಉಂಟೋ? [h]“ಅಬ್ರಹಾಮನ ಲೆಕ್ಕಕ್ಕೆ ಅವನ ನಂಬಿಕೆಯೇ ನೀತಿಯೆಂದು ಎಣಿಸಲ್ಪಟ್ಟಿತು” ಎಂಬುದಾಗಿ ನಾವು ಹೇಳುತ್ತೇವೆ. 10 ಅದು ಯಾವಾಗ ಎಣಿಸಲ್ಪಟ್ಟಿತು? ಅವನಿಗೆ ಸುನ್ನತಿಯಾದ ಮೇಲೆಯೋ? ಸುನ್ನತಿಯಾಗುವುದಕ್ಕೆ ಮೊದಲೋ? ಸುನ್ನತಿಯಾದ ಮೇಲೆ ಅಲ್ಲ, ಸುನ್ನತಿಯಾಗುವುದಕ್ಕೆ ಮೊದಲೇ ಎಣಿಸಲ್ಪಟ್ಟಿತು. 11 ಅನಂತರ [i]ಸುನ್ನತಿಯನ್ನು, ಮೊದಲೇ ಅವನಿಗಿದ್ದ ನಂಬಿಕೆಯ ಗುರುತಾಗಿಯೂ, ಮುದ್ರೆಯಾಗಿಯೂ ಹೊಂದಿದನು. ಹೀಗಿರುವುದರಿಂದ ಅವನು ನಂಬುವವರೆಲ್ಲರಿಗೂ, ಅವರು ಸುನ್ನತಿಯಿಲ್ಲದವರಾಗಿದಾಗ್ಯೂ [j]ಮೂಲಪಿತೃವಾದನು; ಇದರಿಂದ ಅವರು ನೀತಿವಂತರೆಂದು ಎಣಿಸಲ್ಪಟ್ಟರು. 12 ಇದಲ್ಲದೆ ಸುನ್ನತಿಯವರಲ್ಲಿ ಸುನ್ನತಿಹೊಂದಿದ್ದವರಿಗೆ ಮಾತ್ರವಲ್ಲದೆ, ನಮ್ಮ ಪಿತೃವಾಗಿರುವ ಅಬ್ರಹಾಮನಿಗೆ ಸುನ್ನತಿಯಾಗುವುದಕ್ಕೂ ಮೊದಲೇ ಇದ್ದ ನಂಬಿಕೆಯ ಕ್ರಮವನ್ನು ಅನುಸರಿಸಿ ನಡೆಯುತ್ತಾರೋ ಅವರಿಗೆ ಸಹ ಮೂಲ ತಂದೆಯಾಗಿದ್ದಾನೆ.
ನಂಬಿಕೆಯಿಂದ ವಾಗ್ದಾನವನ್ನು ಹೊಂದಿದ್ದು
13 [k]ನೀನು ಲೋಕಕ್ಕೆ ಬಾಧ್ಯನಾಗುವಿ ಎಂಬ ವಾಗ್ದಾನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿಗಾಗಲಿ ಧರ್ಮಶಾಸ್ತ್ರದಿಂದ ಆದದ್ದಲ್ಲ; ನಂಬಿಕೆಯಿಂದ ಬರುವ ನೀತಿಯಾಗಿದೆ. 14 ಧರ್ಮಶಾಸ್ತ್ರವನ್ನು ಅನುಸರಿಸುವವರು ಲೋಕಕ್ಕೆ ಬಾಧ್ಯರಾಗಿದ್ದರೆ ನಂಬಿಕೆಯು ವ್ಯರ್ಥವಾಯಿತು, ವಾಗ್ದಾನವು ನಿರರ್ಥಕವಾಯಿತು. 15 ಯಾಕೆಂದರೆ [l]ಧರ್ಮಶಾಸ್ತ್ರವು ಜನರನ್ನು ದೇವರ ಕೋಪಕ್ಕೆ ಗುರಿಮಾಡುವಂಥದ್ದು, ಆದರೆ [m]ಧರ್ಮಶಾಸ್ತ್ರವಿಲ್ಲದ ಪಕ್ಷದಲ್ಲಿ ಅದರ ಉಲ್ಲಂಘನೆಯೂ ಇಲ್ಲ. 16 ಆದಕಾರಣ ಆ ಬಾಧ್ಯತೆಯು ಕೃಪೆಯಿಂದಲೇ ದೊರೆಯುವಂಥದ್ದಾಗಿದೆ, ಅದು ನಂಬಿಕೆಯ ಮೂಲಕವೇ ಸಿಕ್ಕುತ್ತದೆ, ಹೀಗೆ ಆ ವಾಗ್ದಾನವು ನಮ್ಮೆಲ್ಲರ ತಂದೆಯಾದ[n]ಅಬ್ರಹಾಮನ ಸಂತತಿಯವರೆಲ್ಲರಿಗೂ, ಅಂದರೆ ಧರ್ಮಶಾಸ್ತ್ರವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರವಲ್ಲದೆ, ಅಬ್ರಹಾಮನಂಥ ನಂಬಿಕೆ ಇರುವವರೆಲ್ಲರಿಗೂ ಸಹ ಸ್ಥಿರವಾಗಿದೆ. 17 [o]“ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಪಿತನಾಗಿ ನೇಮಿಸಿದ್ದೇನೆಂದು” ಶಾಸ್ತ್ರದಲ್ಲಿ ಬರೆದಿದೆಯಲ್ಲ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಮತ್ತು [p]ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವನೂ ಆದ ದೇವರಲ್ಲಿ ಅಬ್ರಹಾಮನು ನಂಬಿಕೆಯಿಟ್ಟನು. 18 [q]“ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವುದು” ಎಂಬುದಾಗಿ ತನಗೆ ಹೇಳಲ್ಪಟ್ಟ ಆ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ ಅಬ್ರಹಾಮನು ತಾನು ಬಹು ಜನಾಂಗಗಳಿಗೆ ಪಿತನಾಗುವೆನೆಂದು ನಿರೀಕ್ಷೆಗೆ ವಿರುದ್ಧವಾಗಿ ನಿರೀಕ್ಷಿಸಿ ನಂಬಿದನು. 19 [r]ಅವನು ಹೆಚ್ಚು ಕಡಿಮೆ ನೂರು ವರ್ಷದವನಾಗಿದ್ದು [s]ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ [t]ಸಾರಳಿಗೆ ಗರ್ಭಕಾಲ ಕಳೆದು ಹೋಯಿತೆಂದು ಪರಿಗಣಿಸಿದ್ದಾಗ್ಯೂ ಅವನ ನಂಬಿಕೆಯು ಕುಂದಲಿಲ್ಲ. 20 ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ. 21 ದೇವರನ್ನು ಘನಪಡಿಸುವವನಾಗಿ [u]ಆತನು ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕೆ ಸಮರ್ಥನೆಂದು [v]ಪೂರ್ಣದೃಢತೆಯುಳ್ಳವನಾದನು. 22 ಆದ್ದರಿಂದ ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು. 23 ಆದರೆ ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತೆಂಬುದು ಅವನಿಗೋಸ್ಕರ ಮಾತ್ರವಲ್ಲದೆ [w]ನಮಗೋಸ್ಕರವೂ ಬರೆದಿರುವುದು. 24 ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ [x]ಎಬ್ಬಿಸಿದ ದೇವರನ್ನು [y]ನಂಬುವ ನಮಗೂ ಆ ನಂಬಿಕೆಯು ನೀತಿಯೆಂದು ಎಣಿಸಲ್ಪಡುವುದು. 25 [z]ದೇವರು ಯೇಸುವನ್ನು ನಮ್ಮ ಅಪರಾಧಗಳ ನಿಮಿತ್ತ ಮರಣಕ್ಕೆ ಒಪ್ಪಿಸಿಕೊಟ್ಟು [aa]ನಮಗೆ ನೀತಿವಂತರೆಂಬ ನಿರ್ಣಯವು ಉಂಟಾಗುವುದಕ್ಕಾಗಿಯೇ ಜೀವದಿಂದ ಎಬ್ಬಿಸಲ್ಪಟ್ಟನು.
<- ರೋಮಾಪುರದವರಿಗೆ 3ರೋಮಾಪುರದವರಿಗೆ 5 ->
- a ಯೆಶಾ 51:2; ರೋಮಾ. 4:16
- b 1 ಕೊರಿ 1:31
- c ಆದಿ 15:6; ರೋಮಾ. 4:9, 22; ಗಲಾ. 3:6; ಯಾಕೋಬ 2:23
- d ರೋಮಾ. 3:22
- e ಕೀರ್ತ 32:1
- f 2 ಕೊರಿ 5:19
- g ರೋಮಾ. 3:30
- h ರೋಮಾ. 4:3
- i ಆದಿ 17:10,16
- j ರೋಮಾ. 4:12,16
- k ಆದಿ 17:4-6; 22:17,18
- l ರೋಮಾ. 7:7; 10:25; 2 ಕೊರಿ 7:9; ಗಲಾ. 3:10
- m ರೋಮಾ. 3:20; ಗಲಾ. 3:19
- n ಗಲಾ. 3:22
- o ಆದಿ 17:5
- p 1 ಕೊರಿ 1:28
- q ಆದಿ 15:5
- r ಆದಿ 17:17
- s ಇಬ್ರಿ. 11:12
- t ಆದಿ 18:11
- u ಆದಿ 18:14
- v ನಂಬಿಕೆಯಿಂದಲೇ ಬಲಹೊಂದಿ
- w ರೋಮಾ. 15:4; 1 ಕೊರಿ 9:9,10; 6:11; 2 ತಿಮೊ. 3:16,17
- x ಅ. ಕೃ. 2:24
- y ರೋಮಾ. 10:9; 1 ಪೇತ್ರ 1:21
- z ರೋಮಾ. 5:6,8; 8:32; ಯೆಶಾ 53:5,6; ಮತ್ತಾ 20:28; ಗಲಾ. 1:4
- aa ರೋಮಾ. 5:18