66
ದೇವರ ಮಹತ್ಕಾರ್ಯಗಳಿಗಾಗಿ ಸ್ತುತಿಸುವುದು
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಹಾಡು; ಕೀರ್ತನೆ.
1 ಸರ್ವಭೂನಿವಾಸಿಗಳೇ, ದೇವರಿಗೆ ಜಯಧ್ವನಿ ಮಾಡಿರಿ.
2 ಆತನ ನಾಮದ ಮಹತ್ತನ್ನು ಕೀರ್ತಿಸಿರಿ;
ಆತನ ಪ್ರಭಾವವನ್ನು ವರ್ಣಿಸುತ್ತಾ ಕೊಂಡಾಡಿರಿ.
3 ನೀವು ದೇವರಿಗೆ, “ನಿನ್ನ ಕೃತ್ಯಗಳು ಎಷ್ಟೋ ಭಯಂಕರವಾಗಿವೆ;
ನಿನ್ನ ಪರಾಕ್ರಮದ ಮಹತ್ತಿನ ದೆಸೆಯಿಂದ ನಿನ್ನ ಶತ್ರುಗಳು ನಿನ್ನ ಮುಂದೆ ಮುದುರಿಕೊಳ್ಳುವರು;
4 ಸರ್ವಭೂನಿವಾಸಿಗಳು ನಿನಗೆ ಅಡ್ಡಬಿದ್ದು ಭಜಿಸುತ್ತಾ,
ನಿನ್ನ ನಾಮವನ್ನು ಕೀರ್ತಿಸುವರು” ಎಂದು ಹೇಳಿರಿ.
ಸೆಲಾ
5 ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ;
ಆತನ ಆಳ್ವಿಕೆ ನರರಲ್ಲಿ ಭಯ ಹುಟ್ಟಿಸತಕ್ಕದ್ದಾಗಿದೆ.
6 ಸಮುದ್ರವನ್ನು ಒಣನೆಲವಾಗುವಂತೆ ಮಾಡಿದನು;
ಜನರು ನದಿಯ ಮಧ್ಯದಲ್ಲಿ ಕಾಲಿನಿಂದ ದಾಟಿದರು;
ಅದಕ್ಕಾಗಿ ನಾವು ಆತನಲ್ಲಿ ಆನಂದಪಡೋಣ.
7 ಆತನು ಪರಾಕ್ರಮದಿಂದ ಸದಾಕಾಲವೂ ಆಳುತ್ತಾನೆ;
ಜನಾಂಗಗಳನ್ನು ನೋಡಿಕೊಳ್ಳುತ್ತಾನೆ. ದಂಗೆಕೋರರು ಏಳದಿರಲಿ.
ಸೆಲಾ
8 ಜನಾಂಗಗಳೇ, ನಮ್ಮ ದೇವರನ್ನು ವಂದಿಸಿರಿ;
ಆತನನ್ನು ಸ್ತುತಿಸುವ ಧ್ವನಿ ಕೇಳಿಸಲಿ.
9 ಆತನು ನಮ್ಮನ್ನು ಜೀವದಿಂದುಳಿಸಿ,
ನಮ್ಮ ಕಾಲುಗಳನ್ನು ಜಾರದಂತೆ ಕಾಪಾಡಿದನು.
10 ದೇವರೇ, ನಮ್ಮನ್ನು ಶೋಧಿಸಿದಿ;
ಬೆಳ್ಳಿಯನ್ನು ಪುಟಕ್ಕೆ ಹಾಕುವ ಮೇರೆಗೆ ಶುದ್ಧಿಮಾಡಿದಿ.
11 ನಮ್ಮನ್ನು ಬಲೆಯಲ್ಲಿ ಸಿಕ್ಕಿಸಿದಿ;
ನಮ್ಮ ಸೊಂಟಕ್ಕೆ ಭಾರವಾದ ಹೊರೆಯನ್ನು ಕಟ್ಟಿದಿ;
12 ಮನುಷ್ಯರು ನಮ್ಮ ತಲೆಗಳ ಮೇಲೆಯೇ,
ತಮ್ಮ ರಥಗಳನ್ನು ಹಾಯಿಸುವಂತೆ ಮಾಡಿದಿ.
ನಾವು ಬೆಂಕಿಯನ್ನೂ, ನೀರನ್ನೂ ದಾಟಬೇಕಾಯಿತು;
ಆದರೂ ಸುಸ್ಥಿತಿಗೆ ನಮ್ಮನ್ನು ನಡೆಸಿದಿ.
13 ನಾನು ನಿನ್ನ ಆಲಯಕ್ಕೆ ಬಂದು ಸರ್ವಾಂಗಹೋಮಗಳನ್ನು ಸಮರ್ಪಿಸುವೆನು.
14 ಇಕ್ಕಟ್ಟಿನ ವೇಳೆಯಲ್ಲಿ ನನ್ನ ತುಟಿಗಳು ಉಚ್ಚರಿಸಿದ
ಬಾಯಿಂದ ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆನು.
15 ನಿನಗೆ ಟಗರು ಮುಂತಾದ ಪುಷ್ಟಪಶುಗಳನ್ನು
ಯಜ್ಞರೂಪವಾಗಿ ಸಮರ್ಪಿಸಿ, ಸುವಾಸನೆಯನ್ನು ಉಂಟುಮಾಡುವೆನು;
ಯಜ್ಞಕ್ಕಾಗಿ ಹೋತ ಮತ್ತು ಹೋರಿಗಳನ್ನು ಅರ್ಪಿಸುವೆನು.
ಸೆಲಾ
16 ಎಲ್ಲಾ ದೇವಭಕ್ತರೇ, ಬಂದು ಕೇಳಿರಿ;
ಆತನು ನನಗಾಗಿ ಮಾಡಿದ್ದೆಲ್ಲವನ್ನು ನಿಮಗೆ ತಿಳಿಸುವೆನು.
17 ನನ್ನ ಮೊರೆಯೊಡನೆ ಕೃತಜ್ಞತಾಸ್ತುತಿಯೂ ನನ್ನ ನಾಲಿಗೆಯ ಮೇಲಿತ್ತು.
18 ನಾನು ಕೆಟ್ಟತನದ ಮೇಲೆ ಮನಸ್ಸಿಟ್ಟಿದ್ದರೆ,
ಸ್ವಾಮಿಯು ನನ್ನ ವಿಜ್ಞಾಪನೆಯನ್ನು ಕೇಳುತ್ತಿದ್ದಿಲ್ಲ.
19 ಆದರೆ ದೇವರು ನನ್ನ ಮೊರೆಯನ್ನು ಲಕ್ಷಿಸಿ ಕೇಳಿದ್ದಾನಲ್ಲಾ.
20 ಆತನು ನನ್ನ ಬಿನ್ನಹವನ್ನು ತಿರಸ್ಕರಿಸಲಿಲ್ಲ;
ನನ್ನ ಮೇಲಿನ ತನ್ನ ದಯೆಯನ್ನು ತಪ್ಪಿಸಿಬಿಡಲಿಲ್ಲ.