Link to home pageLanguagesLink to all Bible versions on this site
31
ಕಷ್ಟದಲ್ಲಿರುವವರ ವಿಶ್ವಾಸದ ಪ್ರಾರ್ಥನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ.
1 ಯೆಹೋವನೇ, ನಿನ್ನ ಮೊರೆಹೊಕ್ಕಿದ್ದೇನೆ;
ನನ್ನನ್ನು ಎಂದಿಗೂ ಅವಮಾನಕ್ಕೆ ಗುರಿಪಡಿಸಬೇಡ.
ನಿನ್ನ ನೀತಿಗನುಸಾರವಾಗಿ ನನ್ನನ್ನು ರಕ್ಷಿಸು.
2 ಕಿವಿಗೊಟ್ಟು ಕೇಳಿ ಬೇಗನೆ ನನ್ನನ್ನು ಬಿಡಿಸು;
ನನ್ನನ್ನು ರಕ್ಷಿಸುವ ಆಶ್ರಯಗಿರಿಯೂ, ದುರ್ಗಸ್ಥಾನವೂ ಆಗಿರು.
3 ನೀನೇ ನನ್ನ ಬಂಡೆಯೂ, ಕೋಟೆಯೂ ಆಗಿದ್ದೀಯಲ್ಲಾ;
ಆದುದರಿಂದ ನಿನ್ನ ಹೆಸರಿನ ನಿಮಿತ್ತ ದಾರಿತೋರಿಸಿ ನನ್ನನ್ನು ನಡೆಸು.
4 ಶತ್ರುಗಳು ನನಗೆ ರಹಸ್ಯವಾಗಿ ಹಾಕಿದ ಬಲೆಯೊಳಗೆ
ಸಿಕ್ಕಿಬೀಳದಂತೆ ನನ್ನನ್ನು ಕಾಪಾಡು;
5 ನೀನೇ ನನಗೆ ಆಧಾರವಲ್ಲವೇ;
ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟಿದ್ದೇನೆ.
ಯೆಹೋವನೇ, ನಂಬಿಗಸ್ತನಾದ ದೇವರೇ, ನನ್ನನ್ನು ವಿಮೋಚಿಸಿದ್ದೀ.
6 ವ್ಯರ್ಥವಾದ ವಿಗ್ರಹಗಳನ್ನೂ ಅವಲಂಬಿಸಿದವರನ್ನು ನಾನು ದ್ವೇಷಿಸುತ್ತೇನೆ;
ನಾನಾದರೋ ಯೆಹೋವನಲ್ಲಿ ಭರವಸವಿಟ್ಟಿದ್ದೇನೆ.
7 ನಿನ್ನ ಕೃಪೆಯಲ್ಲಿ ಸಂತೋಷಿಸಿ ಉಲ್ಲಾಸದಿಂದಿರುವೆನು;
ನಾನು ಕುಗ್ಗಿಹೋಗಿರುವುದನ್ನು ನೋಡಿ,
ನನ್ನ ಬಾಧೆಗಳನ್ನು ನೀನು ಲಕ್ಷ್ಯಕ್ಕೆ ತೆಗೆದುಕೊಂಡಿಯಲ್ಲಾ.
8 ನೀನು ನನ್ನನ್ನು ಶತ್ರುಗಳ ಕೈಕೆಳಗೆ ಬೀಳಿಸಲಿಲ್ಲ;
ನಿರಾತಂಕ ಸ್ಥಾನದಲ್ಲಿ ನನ್ನನ್ನು ನಿಲ್ಲಿಸಿದಿ.
9 ಯೆಹೋವನೇ, ಕರುಣಿಸು; ಕಷ್ಟದಲ್ಲಿ ಬಿದ್ದಿದ್ದೇನೆ.
ನನಗುಂಟಾದ ಬಾಧೆಯ ದೆಸೆಯಿಂದ ನನ್ನ ಕಣ್ಣು ಗುಡ್ಡೆ ಸೇದಿಹೋಗಿದೆ; ದೇಹಾತ್ಮಗಳು ಕುಗ್ಗಿಹೋದವು.
10 ನನ್ನ ಜೀವಮಾನವೆಲ್ಲಾ ದುಃಖದಲ್ಲಿಯೂ, ನಿಟ್ಟುಸಿರಿನಲ್ಲಿಯೂ ಕಳೆದುಹೋಗುತ್ತಾ ಇದೆ;
ನನ್ನ *ಅಥವಾ ಅಪರಾಧದಿಂದ. ಸಂಕಟಗಳಿಂದ ನನ್ನ ಶಕ್ತಿಯು ಕುಂದಿಹೋಗಿದೆ;
ನನ್ನ ಎಲುಬುಗಳು ಸವೆದುಹೋಗಿವೆ.
11 ನನ್ನ ಎಲ್ಲಾ ಹಿಂಸಕರ ದೆಸೆಯಿಂದ ದೂಷಣೆಗೆ ಗುರಿಯಾದೆನು;
ವಿಶೇಷವಾಗಿ ನೆರೆಯವರು ನನ್ನನ್ನು ನಿಂದಿಸುತ್ತಾರೆ.
ನನ್ನ ಪರಿಚಿತರಿಗೆ ನನ್ನಲ್ಲಿ ಭೀತಿಯುಂಟಾಯಿತು;
ನನ್ನನ್ನು ದಾರಿಯಲ್ಲಿ ಕಂಡವರೆಲ್ಲರು ಓರೆಯಾಗಿ ಹೋಗುತ್ತಾರೆ.
12 ನಾನು ಸತ್ತವರಂತೆ ಯಾರ ಜ್ಞಾಪಕಕ್ಕೂ ಬಾರದವನಾದೆನು;
ಒಡೆದ ಬೋಕಿಯಂತಿದ್ದೇನೆ.
13 ಅನೇಕರು ನನ್ನ ಪ್ರಾಣ ತೆಗೆಯಬೇಕೆಂದು ಒಳ ಸಂಚುಮಾಡುತ್ತಿದ್ದಾರೆ;
ಅವರು ಪಿಸುಗುಟ್ಟುವ ಮಾತುಗಳು ನನ್ನ ಕಿವಿಗೆ ಬಿದ್ದಿವೆ;
ಎಲ್ಲಾ ಕಡೆಯಲ್ಲಿಯೂ ನನಗೆ ಭೀತಿಯುಂಟಾಗಿದೆ.
14 ನಾನಾದರೋ ಯೆಹೋವನೇ, ನಿನ್ನಲ್ಲೇ ಭರವಸವಿಟ್ಟಿದ್ದೇನೆ;
ನೀನೇ ನನ್ನ ದೇವರೆಂದು ಹೇಳಿಕೊಂಡಿದ್ದೇನೆ.
15 ನನ್ನ ಆಯುಷ್ಕಾಲವು ನಿನ್ನ ಕೈಯಲ್ಲಿದೆ;
ಹಿಂದಟ್ಟುವ ಶತ್ರುಗಳಿಂದ ನನ್ನನ್ನು ತಪ್ಪಿಸಿ ಕಾಪಾಡು.
16 ನಿನ್ನ ಸೇವಕನನ್ನು ಪ್ರಸನ್ನಮುಖದಿಂದ ನೋಡು;
ಪ್ರೀತಿಯಿಂದ ನನ್ನನ್ನು ರಕ್ಷಿಸು.
17 ಯೆಹೋವನೇ, ಮೊರೆಯಿಟ್ಟಿದ್ದೇನೆ; ನನ್ನನ್ನು ನಿರಾಶೆಪಡಿಸಬೇಡ.
ದುಷ್ಟರಿಗೇ ಆಶಾಭಂಗವಾಗಲಿ; ಅವರು ಸ್ತಬ್ಧರಾಗಿ ಪಾತಾಳಕ್ಕೆ ಬೀಳಲಿ.
18 ಯಾರು ನೀತಿವಂತರನ್ನು ತಾತ್ಸಾರಮಾಡಿ ಗರ್ವದಿಂದಲೂ, ಕೊಬ್ಬಿನಿಂದಲೂ
ಅವರಿಗೆ ವಿರುದ್ಧವಾಗಿ ಸುಳ್ಳು ಹೇಳುತ್ತಾರೋ ಅವರ ತುಟಿಗಳು ಮುಚ್ಚಿಹೋಗಲಿ.
19 ಸದ್ಭಕ್ತರಿಗೋಸ್ಕರ ನೀನು ಇಟ್ಟುಕೊಂಡಿರುವ ಮೇಲೂ,
ಆಶ್ರಿತರಿಗೋಸ್ಕರ ನೀನು ಎಲ್ಲರ ಮುಂದೆ ಮಾಡಿದ ಉಪಕಾರಗಳೂ
ಎಷ್ಟೋ ವಿಶೇಷವಾಗಿವೆ.
20 ಮನುಷ್ಯರ ಒಳಸಂಚುಗಳಿಂದ ಹಾನಿ ಉಂಟಾಗದಂತೆ
ಅವರನ್ನು ನಿನ್ನ ಸಾನ್ನಿಧ್ಯದಲ್ಲಿಯೇ ಮರೆಮಾಡುತ್ತೀ;
ವಿವಾದಿಸುವ ನಾಲಿಗೆಗಳಿಂದ ಕೇಡಾಗದಂತೆ ಅವರನ್ನು ಗುಪ್ತಸ್ಥಳದಲ್ಲಿ ಅಡಗಿಸುತ್ತೀ.
21 ಮುತ್ತಿಗೆ ಹಾಕಲ್ಪಟ್ಟಿರುವ ನಗರದಲ್ಲಿದ್ದ ನನಗೆ,
ತನ್ನ ಕೃಪೆಯನ್ನು ಆಶ್ಚರ್ಯಕರವಾಗಿ ತೋರಿಸಿದ ಯೆಹೋವನಿಗೆ ಸ್ತೋತ್ರ.
22 ನಾನಂತೂ ಭಯಭ್ರಾಂತನಾಗಿ, “ನಿನ್ನ ಸಾನ್ನಿಧ್ಯದಿಂದ ತೆಗೆದುಹಾಕಲ್ಪಟ್ಟೆನು” ಎಂದು ಅಂದುಕೊಂಡೆನು;
ಆದರೂ ನಾನು ಮೊರೆಯಿಡಲು ನೀನು ಕೇಳಿದಿ.
23 ಭಕ್ತರೇ, ನೀವೆಲ್ಲರೂ ಯೆಹೋವನನ್ನು ಪ್ರೀತಿಸಿರಿ.
ಆತನು ನಂಬಿಗಸ್ತರನ್ನು ಕಾಪಾಡುತ್ತಾನೆ;
ಅಹಂಕಾರಿಗಳಿಗೆ ಚೆನ್ನಾಗಿ ಮುಯ್ಯಿತೀರಿಸುತ್ತಾನೆ.
24 ಯೆಹೋವನನ್ನು ನಿರೀಕ್ಷಿಸುವವರೇ, ದೃಢವಾಗಿರ್ರಿ;
ನಿಮ್ಮ ಹೃದಯವು ಧೈರ್ಯದಿಂದಿರಲಿ.

<- ಕೀರ್ತನೆಗಳು 30ಕೀರ್ತನೆಗಳು 32 ->