29
ಮೇಘಮಂಡಲದಲ್ಲಿ ಕಾಣಿಸುವ ಯೆಹೋವನ ಮಹಿಮೆ
ದಾವೀದನ ಕೀರ್ತನೆ.
ಯೆರೆ 10:13; ಯೆಶಾ 30:30
1 ದೇವದೂತರುಗಳಿರಾ, ಪರಮಪ್ರಭಾವವು,
ಯೆಹೋವನದೇ, ಯೆಹೋವನದೇ ಎಂದು ಹೇಳಿ ಕೊಂಡಾಡಿರಿ.
2 ಯೆಹೋವನ ನಾಮಕ್ಕೆ ಯೋಗ್ಯವಾದ ಘನತೆಯನ್ನು ಸಲ್ಲಿಸಿರಿ;
ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ಅಡ್ಡಬೀಳಿರಿ.
3 ಯೆಹೋವನ ಮಹಾಧ್ವನಿಯು ಮೇಘಮಂಡಲದಲ್ಲಿ ಕೇಳಿಸುತ್ತದೆ;
ಪ್ರಭಾವಸ್ವರೂಪನಾದ ದೇವರು ಗುಡುಗುತ್ತಾನೆ;
ಯೆಹೋವನು ಆಕಾಶದ ಜಲರಾಶಿಗಳ ಮೇಲೆ ಇದ್ದಾನೆ.
4 ಯೆಹೋವನ ಧ್ವನಿಯು ಎಷ್ಟೋ ಬಲವುಳ್ಳದ್ದು,
ಎಷ್ಟೋ ಗಂಭೀರವಾದದ್ದು.
5 ಯೆಹೋವನ ಗರ್ಜನೆಗೆ ದೇವದಾರು ವೃಕ್ಷಗಳು ದಡಲ್ ಎಂದು ಮುರಿದು ಬೀಳುತ್ತವೆ;
ಯೆಹೋವನು ಲೆಬನೋನ್ ಪರ್ವತದಲ್ಲಿನ ಮಹಾದೇವದಾರುಗಳನ್ನೂ ಮುರಿದುಬಿಡುತ್ತಾನೆ.
6 ಲೆಬನೋನ್ ಪರ್ವತವು ಕರುವಿನೋಪಾದಿಯಲ್ಲಿಯೂ, ಸಿರ್ಯೋನ್ ಬೆಟ್ಟವು
ಕಾಡುಕೋಣದ ಮರಿಯಂತೆಯೂ ಹಾರಾಡುವ ಹಾಗೆ ಮಾಡುತ್ತಾನೆ.
7 ಯೆಹೋವನ ಗರ್ಜನೆಗೆ ಮಿಂಚುಗಳು
ಥಳಥಳನೆ ಹೊಳೆಯುತ್ತವೆ.
8 ಯೆಹೋವನ ಗರ್ಜನೆಗೆ ಕಾಡು ಹೊರಳಾಡುತ್ತದೆ;
ಕಾದೇಶ್ ಅರಣ್ಯವು ಕಂಪಿಸುತ್ತದೆ.
9 *ಅಥವಾ ಯೆಹೋವನ ಗರ್ಜನೆಯು ಗರ್ಭದ ಜಿಂಕೆಗಳು ಈಯುತ್ತವೆಯೆಹೋವನ ಗರ್ಜನೆಯು ದೇವದಾರು ಮರಗಳನ್ನು ಕದಲಿಸುತ್ತದೆ;
ಕಾಡಿನ ಮರಗಳು ಬರಿದಾಗುತ್ತವೆ.
ಆಗ ಆತನ ಮಂದಿರದಲ್ಲಿರುವವರೆಲ್ಲರು, “ಎಷ್ಟೋ ಪ್ರಭಾವ!” ಎನ್ನುತ್ತಾರೆ.
10 ಯೆಹೋವನು ಜಲಪ್ರಳಯದಲ್ಲಿ ಆಸೀನನಾಗಿರುವನು;
ಆತನು ಸದಾಕಾಲವೂ ಅರಸನಾಗಿ ಕುಳಿತಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ಅನುಗ್ರಹಿಸುವನು;
ಆತನು ತನ್ನ ಪ್ರಜೆಗೆ ಸುಕ್ಷೇಮವನ್ನು ದಯಪಾಲಿಸುವನು.
<- ಕೀರ್ತನೆಗಳು 28ಕೀರ್ತನೆಗಳು 30 ->
- a ಅಥವಾ ಯೆಹೋವನ ಗರ್ಜನೆಯು ಗರ್ಭದ ಜಿಂಕೆಗಳು ಈಯುತ್ತವೆ