Link to home pageLanguagesLink to all Bible versions on this site
2
ಯೆಹೋವನಿಂದ ಅಭಿಷೇಕಿಸಲ್ಪಟ್ಟವನ ಸರ್ವಾಧಿಪತ್ಯ
1 ಅನ್ಯಜನಾಂಗಗಳು ದಂಗೆಗೆ ಏಳುವುದೂ,
ಜನಾಂಗಗಳು ವ್ಯರ್ಥಕಾರ್ಯಗಳನ್ನು ಯೋಚಿಸುವುದೂ ಏಕೆ?
2 ಅರಸರು ಒಟ್ಟಾಗಿ ಸೇರಿ ಆಲೋಚಿಸುತ್ತಿದ್ದಾರೆ.
ದೇಶಾಧಿಪತಿಗಳು ಯೆಹೋವನಿಗೂ ಮತ್ತು ಆತನಿಂದ ಅಭಿಷೇಕಿಸಲ್ಪಟ್ಟವನಿಗೂ ವಿರುದ್ಧವಾಗಿ ಸನ್ನದ್ಧರಾಗಿ ನಿಂತಿದ್ದಾರೆ,
3 “ನಮಗೆ ಅವರು ಹಾಕಿದ ಬಂಧನಗಳನ್ನು ಕಿತ್ತುಹಾಕಿ,
ಬೇಡಿಗಳನ್ನು ಮುರಿದು ಬಿಸಾಡೋಣ” ಎಂದು ಮಾತನಾಡಿಕೊಳ್ಳುತ್ತಾರಲ್ಲಾ.
4 ಪರಲೋಕದಲ್ಲಿ ಆಸೀನನಾಗಿರುವಾತನು ಅದಕ್ಕೆ ನಗುವನು;
ಕರ್ತನು ಅವರನ್ನು ಪರಿಹಾಸ್ಯಮಾಡುವನು.
5 ಅನಂತರ ಆತನು ಸಿಟ್ಟಾಗಿ, ಕೋಪಾವೇಶದಿಂದ ಅವರನ್ನು ಕಳವಳಗೊಳಿಸಿ,
6 “ನಾನು ನೇಮಿಸಿದ ಅರಸನನ್ನು
ಚೀಯೋನೆಂಬ*ಚೀಯೋನೆಂಬ ಸೊಲೊಮೋನನು ದೇವಾಲಯವನ್ನು ಕಟ್ಟಿದ ಬೆಟ್ಟಕ್ಕೆ (ಮೊರೀಯ ಬೆಟ್ಟ) ಚೀಯೋನ್ ಎಂಬ ಹೆಸರನ್ನು ಅನ್ವಯಿಸಲಾಗಿದೆ; ಕಾಲಾಂತರದಲ್ಲಿ ದೇವಾಲಯಕ್ಕೆ, ಯೆರೂಸಲೇಮ್ ಪಟ್ಟಣಕ್ಕೆ, ಮತ್ತು ಕೆಲವೊಮ್ಮೆ ಇಡೀ ಇಸ್ರಾಯೇಲ್ ದೇಶಕ್ಕೆ ಈ ಹೆಸರನ್ನು ಅನ್ವಯಿಸಲಾಗಿದೆ. ಬೆಟ್ಟವನ್ನು ಪವಿತ್ರ ಬೆಟ್ಟ ಎಂದು ಕರೆಯಲಾಗುತ್ತಿತ್ತು ಏಕೆಂದರೆ ಅದು ಪ್ರತ್ಯೇಕವಾಗಿ ದೇವರಿಗೆ ಸೇರಿದ್ದಾಗಿದೆ. ಯೆರೂಸಲೇಮ್ ಪಟ್ಟಣಕ್ಕೆ ಸಂಬಂಧಿಸಿದಂತೆ ಚೀಯೋನ್ ಮತ್ತು ಯೆರೂಸಲೇಮ್ ಎರಡನ್ನೂ ಕೀರ್ತನೆಗಳಲ್ಲಿ ಬಳಸಲಾಗಿರುವುದ್ದರಿಂದ, ಎರಡೂ ಪದಗಳನ್ನು “ಯೆರೂಸಲೇಮ್” ಎಂದು ಭಾಷಾಂತರಿಸುವಲ್ಲಿ ಕೆಲವು ಪ್ರಯೋಜನವಿದೆ. ನಿರ್ದಿಷ್ಟವಾಗಿ ಇಂದಿನ ಬಹುತೇಕ ಓದುಗರು ಆ ಹೆಸರುಳ್ಳ ಪಟ್ಟಣದ ಅಸ್ತಿತ್ವದ ಬಗ್ಗೆ ತಿಳಿದಿದ್ದಾರೆ. ಆದಾಗ್ಯೂ, ಚೀಯೋನ್ ಮತ್ತು ಯೆರೂಸಲೇಮ್ ವಿವಿಧ ಸಂದರ್ಭಗಳಲ್ಲಿ ಗೋಚರಿಸುತ್ತವೆ. ನನ್ನ ಪರಿಶುದ್ಧ ಪರ್ವತದಲ್ಲಿಯೇ ಸ್ಥಾಪಿಸಿದ್ದಾಯಿತು” ಎಂದು ಹೇಳುವನು.
7 ನಾನು ಯೆಹೋವನ ಆಜ್ಞೆಯನ್ನು ತಿಳಿಸುತ್ತೇನೆ, ಕೇಳಿರಿ;
ಆತನು ನನಗೆ, “ನನಗೆ ನೀನು ಮಗನು; ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.
8 ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನಮಾಡುವೆನು;
ಭೂಮಿಯ ಕಟ್ಟಕಡೆಯವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವತ್ತಾಗಿ ಕೊಡುವೆನು.
9 ನೀನು ಕಬ್ಬಿಣದ ಗದೆಯಿಂದ ಅವರನ್ನು ನಾಶಮಾಡುವಿ;
ಮಣ್ಣಿನ ಮಡಿಕೆಗಳನ್ನೋ ಎಂಬಂತೆ ಅವರನ್ನು ಒಡೆದುಹಾಕುವಿ” ಎಂದು ಹೇಳಿದನು.
10 ಆದುದರಿಂದ ಅರಸುಗಳಿರಾ, ವಿವೇಕಿಗಳಾಗಿರಿ;
ದೇಶಾಧಿಪತಿಗಳಿರಾ, ಬುದ್ಧಿವಾದಕ್ಕೆ ಕಿವಿಗೊಡಿರಿ.
11 ಯೆಹೋವನನ್ನು ಭಯಭಕ್ತಿಯಿಂದ ಸೇವಿಸಿರಿ;
ನಡುಗುತ್ತಾ ಉಲ್ಲಾಸಪಡಿರಿ.
12 ಆತನ ಮಗನಿಗೆ ಮುದ್ದಿಡಿರಿ;
ಇಲ್ಲವಾದರೆ ಯೆಹೋವನ ಕೋಪವು ಬೇಗನೆ ಪ್ರಜ್ವಲಿಸಲು ನೀವು ದಾರಿಯಲ್ಲೇ ನಾಶವಾದೀರಿ.
ಯೆಹೋವನನ್ನು ಆಶ್ರಯಿಸುವವರೆಲ್ಲರು ಧನ್ಯರು.

<- ಕೀರ್ತನೆಗಳು 1ಕೀರ್ತನೆಗಳು 3 ->