Link to home pageLanguagesLink to all Bible versions on this site
21
1 ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ಇರುವ ನೀರಿನ ಕಾಲುವೆಗಳಂತೆ ಇವೆ,
ಆತನು ತನಗೆ ಬೇಕಾದ ಕಡೆಗೆ ಅದನ್ನು ತಿರುಗಿಸುತ್ತಾನೆ.
2 ನರನ ನಡತೆಯು ಸ್ವಂತ ದೃಷ್ಟಿಗೆ ಸರಿಯಾಗಿ ಕಾಣುತ್ತವೆ,
ಯೆಹೋವನು ಹೃದಯಗಳನ್ನೇ ಪರೀಕ್ಷಿಸುವನು.
3 ಯಜ್ಞಕ್ಕಿಂತಲೂ ನೀತಿನ್ಯಾಯಗಳು ಯೆಹೋವನಿಗೆ ಇಷ್ಟ.
4 ಗರ್ವದ ದೃಷ್ಟಿ, ಕೊಬ್ಬಿದ ಹೃದಯ, ದುಷ್ಟರ ಭಾಗ್ಯ,
ಇವು ಧರ್ಮವಿರುದ್ಧ.
5 ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ,
ಆತುರಪಡುವವರಿಗೆಲ್ಲಾ ಕೊರತೆಯೇ.
6 ಸುಳ್ಳಿನಿಂದ ಸಿಕ್ಕಿದ ಸಂಪತ್ತು ಹಬೆಯಂತೆ ಅಸ್ಥಿರ,
ಮೃತ್ಯುಪಾಶದಂತೆ ನಾಶಕರ.
7 ದುಷ್ಟರು ನ್ಯಾಯವನ್ನು ನಿರಾಕರಿಸುವ ಕಾರಣ,
ಅವರ ಬಲಾತ್ಕಾರವು ಅವರನ್ನೇ ಎಳೆದುಕೊಂಡು ಹೋಗುವುದು.
8 ದೋಷಿಯ ದಾರಿ ಡೊಂಕು;
ಶುದ್ಧನ ನಡತೆ ಸರಳ.
9 ಮನೆಯಲ್ಲಿ ಜಗಳಗಂಟಿಯ ಜೊತೆಯಲ್ಲಿರುವುದಕ್ಕಿಂತಲೂ,
ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಲೇಸು.
10 ದುರಾತ್ಮನು ಕೇಡಿನ ಮೇಲೇ ಮನಸ್ಸಿಡುವನು
ನೆರೆಯವನಿಗೂ ದಯೆತೋರಿಸನು.
11 ಧರ್ಮನಿಂದಕನಿಗೆ ದಂಡನೆಯಾದರೆ ನೋಡಿದ ಮೂಢನೂ ಜ್ಞಾನವನ್ನು ಪಡೆಯುವನು,
ಜ್ಞಾನಿಗೆ ಶಿಕ್ಷೆಯಾದರೆ ತಾನೇ ತಿಳಿವಳಿಕೆಯನ್ನು ಹೊಂದುವನು.
12 ನೀತಿಸ್ವರೂಪನು ಅಧರ್ಮಿಯ ಮನೆಯನ್ನು ಲಕ್ಷ್ಯಕ್ಕೆ ತಂದು,
ಅಧರ್ಮಿಗಳನ್ನು ಕೆಡವಿ ಅವರನ್ನು ಕೇಡಿಗೆ ತಳ್ಳುವನು.
13 ಬಡವನ ಕೂಗಿಗೆ ಕಿವಿಮುಚ್ಚಿಕೊಳ್ಳುವವನು,
ತಾನೇ ಮೊರೆಯಿಡುವಾಗ ಯಾರೂ ಉತ್ತರಕೊಡರು.
14 ಗುಪ್ತ ಬಹುಮಾನವು ಕೋಪವನ್ನಾರಿಸುವುದು,
ಮಡಲಲ್ಲಿಟ್ಟ ಲಂಚವು ಕ್ರೋಧವನ್ನು ಅಣಗಿಸುವುದು.
15 ನ್ಯಾಯಮಾರ್ಗವು ಶಿಷ್ಟರಿಗೆ ಸಂತೋಷ,
ಕೆಡುಕರಿಗೆ ಕೇಡು.
16 ಜ್ಞಾನಮಾರ್ಗದಿಂದ ತಪ್ಪಿದವನಿಗೆ,
ಪ್ರೇತಸಮೂಹವೇ ವಿಶ್ರಾಂತಿಸ್ಥಾನ.
17 ಭೋಗಾಸಕ್ತನು ಕೊರತೆಪಡುವನು,
ದ್ರಾಕ್ಷಾರಸವನ್ನು ಮತ್ತು ಸುಗಂಧ ತೈಲವನ್ನು ಆಶಿಸುವವನು ನಿರ್ಭಾಗ್ಯನಾಗುವನು.
18 ಶಿಷ್ಟನಿಗೆ ಪ್ರತಿಯಾಗಿ ದುಷ್ಟನೂ,
ಸತ್ಯವಂತರಿಗೆ ಬದಲಾಗಿ ದ್ರೋಹಿಯೂ ದಂಡನೆಗೆ ಈಡಾಗುವರು.
19 ಕಾಡುವ ಜಗಳಗಂಟಿಯ ಸಹವಾಸಕ್ಕಿಂತಲೂ,
ಕಾಡಿನ ವಾಸವೇ ಲೇಸು.
20 ಜ್ಞಾನಿಯ ನಿವಾಸದಲ್ಲಿ ಎಣ್ಣೆಯು ಮತ್ತು ಶ್ರೇಷ್ಠ ಸಂಪತ್ತು ಇರುವವು,
ಜ್ಞಾನಹೀನನು ಇದ್ದದ್ದನ್ನೆಲ್ಲಾ ನುಂಗಿಬಿಡುವನು.
21 ನೀತಿ ಮತ್ತು ಕೃಪೆಗಳನ್ನು ಹುಡುಕುವವನು
ಜೀವ ಮತ್ತು ಕೀರ್ತಿಗಳನ್ನು ಪಡೆಯುವನು.
22 ಜ್ಞಾನಿಯು ಬಲಿಷ್ಠರ ಪಟ್ಟಣವನ್ನು ಮುತ್ತಿಗೆ ಹಾಕಿ,
ಅವರು ನಂಬಿದ್ದ ಬಲವಾದ ಕೋಟೆಯನ್ನು ಕೆಡವಿ ಹಾಕುವನು.
23 ತನ್ನ ಬಾಯನ್ನೂ, ನಾಲಿಗೆಯನ್ನೂ ಕಾಯುವವನು
ತೊಂದರೆಗಳಿಂದ ರಕ್ಷಿಸಿಕೊಳ್ಳುವನು.
24 “ಧರ್ಮನಿಂದಕ” ಎನ್ನಿಸಿಕೊಳ್ಳುವವನು ಸೊಕ್ಕೇರಿದ ಅಹಂಕಾರಿಯಾಗಿ,
ಗರ್ವ ಮತ್ತು ಮದದಿಂದ ಪ್ರವರ್ತಿಸುವನು.
25 ಸೋಮಾರಿಯ ಆಶೆಯು ಅವನನ್ನು ಕೊಲ್ಲುವುದು,
ಅವನ ಕೈಗಳು ದುಡಿಯಲಾರವು.
26 ಧರ್ಮಿಯು ಹಿಂತೆಗೆಯದೆ ಕೊಡುವನು,
ಲೋಭಿಯು ದಿನವೆಲ್ಲಾ ಆಶಿಸುತ್ತಲೇ ಇರುವನು.
27 ದುಷ್ಟರ ಯಜ್ಞವೇ ಅಸಹ್ಯ,
ಅದನ್ನು ದುರ್ಬುದ್ಧಿಯಿಂದ ಅರ್ಪಿಸುವುದು ಮತ್ತೂ ಅಸಹ್ಯ.
28 ಸುಳ್ಳು ಸಾಕ್ಷಿಯು ಅಳಿದುಹೋಗುವುದು,
ಕೇಳಿದ್ದನ್ನೇ ಹೇಳುವವನ ಸಾಕ್ಷಿಯು ಶಾಶ್ವತವಾಗಿರುವುದು.
29 ದುಷ್ಟನ ಮುಖದಲ್ಲಿ ಲಜ್ಜೆಯಿಲ್ಲ,
ಸತ್ಯವಂತನು ತನ್ನ ನಡತೆಯನ್ನು ಸರಿಪಡಿಸಿಕೊಳ್ಳುತ್ತಿರುವನು.
30 ಯಾವ ಜ್ಞಾನವೂ, ಯಾವ ವಿವೇಕವೂ,
ಯಾವ ಆಲೋಚನೆಯೂ ಯೆಹೋವನೆದುರಿಗೆ ನಿಲ್ಲುವುದಿಲ್ಲ.
31 ಅಶ್ವಬಲವು ಯುದ್ಧದಿನಕ್ಕಾಗಿ ಸನ್ನದ್ಧವಾಗಿದ್ದರೂ
ಜಯವು ಯೆಹೋವನಿಂದಲೇ.

<- ಜ್ಞಾನೋಕ್ತಿಗಳು 20ಜ್ಞಾನೋಕ್ತಿಗಳು 22 ->