ಅರಸನಾದ ಸೊಲೊಮೋನನು ಜ್ಞಾನೋಕ್ತಿಗಳ ಪ್ರಧಾನ ಗ್ರಂಥಕರ್ತನು. ಸೊಲೊಮೋನನ ಹೆಸರು 1:1, 10:1, ಮತ್ತು 25:1 ರಲ್ಲಿ ಕಾಣಿಸಿಕೊಳ್ಳುತ್ತದೆ. “ಜ್ಞಾನಿಗಳು” ಎಂದು ಕರೆಯಲ್ಪಡುವ ಪುರುಷರ ಗುಂಪು, ಆಗೂರನು ಮತ್ತು ಅರಸನಾದ ಲೆಮೂವೇಲನಂತಹ ಇತರ ಲೇಖನದಾತರು ಇದರಲ್ಲಿ ಒಳಗೊಂಡಿದ್ದಾರೆ. ಸತ್ಯವೇದದ ಉಳಿದ ಭಾಗದಂತೆಯೇ, ಜ್ಞಾನೋಕ್ತಿಗಳು ದೇವರ ರಕ್ಷಣೆಯ ಯೋಜನೆಯನ್ನು ಸೂಚಿಸುತ್ತದೆ, ಆದರೆ ಇದು ಬಹುಶಃ ಹೆಚ್ಚು ಸೂಕ್ಷ್ಮವಾಗಿ ಸೂಚಿಸುತ್ತದೆ. ಈ ಪುಸ್ತಕವು ಇಸ್ರಾಯೇಲ್ಯರಿಗೆ ಜೀವಿಸಲು ಸರಿಯಾದ ಮಾರ್ಗವಾದ ದೇವರ ಮಾರ್ಗವನ್ನು ತೋರಿಸಿತು. ತನ್ನ ಜೀವಿತಾವಧಿಯಲ್ಲಿ ಅವನು ಪ್ರಭಾವಕ್ಕೆ ಒಳಗಾಗಿರುವ ಜ್ಞಾನದ ನುಡಿಗಳ ಆಧಾರದ ಮೇಲೆ ಈ ಭಾಗವನ್ನು ಉಲ್ಲೇಖಿಸಲು ದೇವರು ಸೊಲೊಮೋನನನ್ನು ಪ್ರೇರೇಪಿಸಿರುವ ಸಾಧ್ಯತೆಯಿದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿಪೂ. 971-686 ರ ನಡುವಿನ ಸಮಯ.
ಜ್ಞಾನೋಕ್ತಿಗಳು ಸೊಲೊಮೋನನ ಆಳ್ವಿಕೆಯ ಕಾಲದಲ್ಲಿ, ಸಾವಿರಾರು ವರ್ಷಗಳ ಹಿಂದೆ ಇಸ್ರಾಯೇಲಿನಲ್ಲಿ ಬರೆಯಲ್ಪಟ್ಟವು, ಇದರ ಜ್ಞಾನವು ಪ್ರತಿಯೊಂದು ಸ್ಥಳದಲ್ಲಿ, ಪ್ರತಿಯೊಂದು ಸಂಸ್ಕೃತಿಗೂ ಅನ್ವಯಿಸಲ್ಪಡುತ್ತದೆ.
ಸ್ವೀಕೃತದಾರರು
ಜ್ಞಾನೋಕ್ತಿಗಳಿಗೆ ಹಲವಾರು ಪ್ರೇಕ್ಷಕರು ಇರುತ್ತಾರೆ. ಇದು ತಮ್ಮ ಮಕ್ಕಳಿಗೆ ಉಪದೇಶಿಸುವಂತೆ ಪೋಷಕರಿಗೆ ಸಂಬೋಧಿಸಲಾಗಿದೆ. ಜ್ಞಾನವನ್ನು ಅನ್ವೇಷಿಸುತ್ತಿರುವ ಯುವಕರಿಗೂ ಮತ್ತು ಯುವತಿಯರಿಗೂ ಈ ಪುಸ್ತಕವು ಅನ್ವಯಿಸಲ್ಪಡುತ್ತದೆ ಮತ್ತು ಇದು ಅಂತಿಮವಾಗಿ, ಭಕ್ತಿಪೂರ್ವಕವಾದ ಜೀವನವನ್ನು ಪಡೆಯಲು ಇಚ್ಛಿಸುವ ಇಂದಿನ ಸತ್ಯವೇದದ ಓದುಗಾರರಿಗೆ ಪ್ರಾಯೋಗಿಕವಾದ ಸಲಹೆ ನೀಡುತ್ತದೆ.
ಉದ್ದೇಶ
ಜ್ಞಾನೋಕ್ತಿಗಳ ಪುಸ್ತಕದಲ್ಲಿ, ಸೊಲೊಮೋನನು ದೇವರ ಮನಸ್ಸನ್ನು ಉನ್ನತ ಮತ್ತು ಉದಾತ್ತವಾದ ಮತ್ತು ಹುದುವಾದ, ಸಾಧಾರಣವಾದ ವಿಷಯಗಳಲ್ಲಿ, ದಿನನಿತ್ಯದ ಸನ್ನಿವೇಶಗಳಲ್ಲಿಯೂ ಕೂಡಾ ತಿಳಿಸಿಕೊಡುತ್ತಾನೆ. ಅರಸನಾದ ಸೊಲೊಮೋನನ ಗಮನದಿಂದ ಯಾವ ವಿಚಾರವು ತಪ್ಪಿಹೋಗಿಲ್ಲ ಎಂದು ಕಂಡುಬರುತ್ತದೆ. ವೈಯುಕ್ತಿಕ ನಡವಳಿಕೆ, ಲೈಂಗಿಕ ಸಂಬಂಧಗಳು, ವ್ಯಾಪಾರ, ಸಂಪತ್ತು, ದಾನ, ಮಹತ್ವಾಕಾಂಕ್ಷೆ, ಶಿಸ್ತು, ಸಾಲ, ಮಗು-ಪಾಲನೆ, ಸ್ವಭಾವ, ಮದ್ಯಪಾನ, ರಾಜಕೀಯ, ಪ್ರತಿಕಾರ ಮತ್ತು ದೈವಭಕ್ತಿಗೆ ಸಂಬಂಧಿಸಿದ ವಿಷಯಗಳು ಜ್ಞಾನೋಕ್ತಿಗಳೆನ್ನುವ ಈ ಉತ್ತಮ ಸಂಕಲನದಲ್ಲಿ ಅನೇಕ ವಿಚಾರಗಳು ಒಳಗೊಂಡಿರುತ್ತವೆ.
ಮುಖ್ಯಾಂಶ
ಜ್ಞಾನ
ಪರಿವಿಡಿ
1. ಜ್ಞಾನದ ಸದ್ಗುಣಗಳು — 1:1-9:18
2. ಸೊಲೊಮೋನನ ಜ್ಞಾನೋಕ್ತಿಗಳು — 10:1-22:16
3. ಜ್ಞಾನಿಗಳ ನುಡಿಗಳು — 22:17-29:37
4. ಆಗೂರನ ಮಾತುಗಳು — 30:1-33
5. ಲೆಮೂವೇಲನ ಮಾತುಗಳು — 31:1-31
1
ಪೀಠಿಕೆ: ಜ್ಞಾನೋಕ್ತಿಗಳ ಉದ್ದೇಶ
1 ಇಸ್ರಾಯೇಲರ ಅರಸನಾಗಿದ್ದ ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು.
2 ಇವುಗಳಿಂದ ಜನರು ಜ್ಞಾನವನ್ನು ಮತ್ತು ಶಿಕ್ಷಣವನ್ನು ಪಡೆದು,
ಬುದ್ಧಿವಾದಗಳನ್ನು ಗ್ರಹಿಸಿಕೊಳ್ಳುವರು.
3 ಅವರು ವಿವೇಕಮಾರ್ಗದಲ್ಲಿ ಅಂದರೆ ನೀತಿ,
ನ್ಯಾಯ ಮತ್ತು ಧರ್ಮಮಾರ್ಗಗಳಲ್ಲಿ ಶಿಕ್ಷಿತರಾಗುವರು.
4 ಈ ನುಡಿಗಳು ಮೂಢರಿಗೆ ಜಾಣತನವನ್ನೂ,
ಯೌವನಸ್ಥರಿಗೆ ತಿಳಿವಳಿಕೆಯನ್ನು ಮತ್ತು ಬುದ್ಧಿಯನ್ನು ಉಂಟುಮಾಡುವವು.
5 ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಡಿಂತ್ಯವನ್ನು ಹೊಂದುವನು,
ವಿವೇಕಿಯು ಮತ್ತಷ್ಟು ಉಚಿತಾಲೋಚನೆಯನ್ನು ಹೊಂದುವನು.
6 ಇವು ಗಾದೆ, ಸಾಮ್ಯ, ಜ್ಞಾನಿಗಳ ನುಡಿ ಮತ್ತು ಒಗಟುಗಳನ್ನು ತಿಳಿಯಲು ಸಾಧನವಾಗಿವೆ.
7 ಯೆಹೋವನ ಭಯವೇ ತಿಳಿವಳಿಕೆಗೆ ಮೂಲವು,
ಮೂರ್ಖರಾದರೋ ಜ್ಞಾನವನ್ನು ಮತ್ತು ಶಿಕ್ಷಣವನ್ನು ತಿರಸ್ಕರಿಸುವರು.
ಪಾಪಿಗಳ ಕುರಿತು ಎಚ್ಚರಿಕೆಗಳು
8 ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು,
ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.
9 ಅವು ನಿನ್ನ ತಲೆಗೆ ಸುಂದರವಾದ ಪುಷ್ಪಕಿರೀಟ,
ಕೊರಳಿಗೆ ಹಾರದಂತಿರುವುದು.
10 ಮಗನೇ, ಪಾಪಿಗಳು ದುಷ್ಪ್ರೇರಣೆಯನ್ನು ಮಾಡಿದರೆ ನೀನು ಒಪ್ಪಲೇ ಬೇಡ.