Link to home pageLanguagesLink to all Bible versions on this site

ಫಿಲೆಮೋನನಿಗೆ
ಗ್ರಂಥಕರ್ತೃತ್ವ
ಫಿಲೆಮೋನನ ಪುಸ್ತಕದ ಗ್ರಂಥಕರ್ತನು ಅಪೊಸ್ತಲನಾದ ಪೌಲನಾಗಿದ್ದಾನೆ (1:1). ಫಿಲೆಮೋನನ ಪತ್ರಿಕೆಯಲ್ಲಿ, ಓನೇಸಿಮನನ್ನು ಫಿಲೆಮೋನನ ಬಳಿಗೆ ಕಳುಹಿಸುತ್ತಿದ್ದೇನೆ ಎಂದು ಪೌಲನು ಹೇಳುತ್ತಾನೆ ಮತ್ತು ಕೊಲೊ 4:9 ರಲ್ಲಿ ಓನೇಸಿಮನನ್ನು ತುಖಿಕನೊಂದಿಗೆ (ಕೊಲೊಸ್ಸೆಯವರಿಗೆ ಪತ್ರಿಕೆಯನ್ನು ತಂದುಕೊಡುವಂಥವನು) ಕೊಲೊಸ್ಸೆಗೆ ಬರುವಂಥವನು ಎಂದು ಗುರುತಿಸಲಾಗಿದೆ. ಪೌಲನು ಈ ಪತ್ರಿಕೆಯನ್ನು ತನ್ನ ಸ್ವಂತ ಕೈಯಿಂದ ಬರೆದಿರುವುದು ಆಸಕ್ತಿದಾಯಕವಾಗಿದೆ ಏಕೆಂದರೆ ಅವನಿಗೆ ಇದು ಎಷ್ಟು ಪ್ರಾಮುಖ್ಯವಾಗಿತ್ತು ಎಂಬುದನ್ನು ಇದು ತೋರಿಸುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 60 ರಲ್ಲಿ ಬರೆಯಲ್ಪಟ್ಟಿದೆ.
ಪೌಲನು ರೋಮಾಪುರದಿಂದ ಫಿಲೆಮೋನನಿಗೆ ಈ ಪತ್ರಿಕೆಯನ್ನು ಬರೆದನು, ಫಿಲೆಮೋನನಿಗೆ ಈ ಪತ್ರಿಕೆಯನ್ನು ಬರೆಯುವ ಸಮಯದಲ್ಲಿ ಪೌಲನು ಸೆರೆಯಾಳಾಗಿದ್ದನು.
ಸ್ವೀಕೃತದಾರರು
ಪೌಲನು ಈ ಪತ್ರಿಕೆಯನ್ನು ಫಿಲೆಮೋನನಿಗೆ, ಅಪ್ಫಿಯಳಿಗೆ, ಅರ್ಖಿಪ್ಪನಿಗೆ ಮತ್ತು ಅರ್ಖಿಪ್ಪನ ಮನೆಯಲ್ಲಿ ಸೇರಿಬರುತ್ತಿದ್ದ ಸಭೆಗೆ ಬರೆದನು. ಪತ್ರಿಕೆಯಲ್ಲಿರುವ ವಿಷಯಗಳಿಂದ, ಉದ್ದೇಶಿತ ಪ್ರಾಥಮಿಕ ಓದುಗಾರನು ಫಿಲೆಮೋನನಾಗಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ.
ಉದ್ದೇಶ
ಓನೇಸಿಮನನ್ನು (ದಾಸನಾದ ಓನೇಸಿಮನು ತನ್ನ ಯಜಮಾನನಾದ ಫಿಲೆಮೋನನ ಬಳಿಯಿಂದ ಕೆಲವೊಂದನ್ನು ದೋಚಿಕೊಂಡು ಓಡಿಹೋಗಿದ್ದನು) ದಂಡವಿಲ್ಲದೆ ಪುನಃ ಸೇರಿಸಿಕೊಳ್ಳಬೇಕೆಂದು ಫಿಲೆಮೋನನಿಗೆ ಮನವರಿಕೆ ಮಾಡಲು ಪೌಲನು ಬರೆದನು (10-12,17). ಇದಲ್ಲದೆ ಫಿಲೆಮೋನನು ಓನೇಸಿಮನನ್ನು ಕೇವಲ ದಾಸನಂತೆ ಪರಿಗಣಿಸದೇ, “ಪ್ರಿಯ ಸಹೋದರನು” (15-16) ಎಂದು ಪರಿಗಣಿಸಬೇಕೆಂದು ಪೌಲನು ಬಯಸಿದನು. ಓನೇಸಿಮನು ಇನ್ನೂ ಫಿಲೆಮೋನನ ಆಸ್ತಿಯಾಗಿದ್ದನು, ಮತ್ತು ಓನೇಸಿಮನು ತನ್ನ ಯಜಮಾನನ ಬಳಿಗೆ ಹಿಂದಿರುಗುವ ಮಾರ್ಗವನ್ನು ಸರಾಗಗೊಳಿಸಲು ಇದನ್ನು ಬರೆದನು. ಪೌಲನ ಸುವಾರ್ತಾಸೇವೆಯ ಮೂಲಕ ಓನೇಸಿಮನು ಕ್ರೈಸ್ತನಾದನು (1:10).
ಮುಖ್ಯಾಂಶ
ಕ್ಷಮಾಪಣೆ
ಪರಿವಿಡಿ
1. ವಂದನೆ — 1:1-3
2. ಕೃತಜ್ಞತಾಸುತ್ತಿ — 1:4-7
3. ಓನೇಸಿಮನಿಗಾಗಿ ಮಧ್ಯಸ್ಥಿಕೆ — 1:8-22
4. ಅಂತಿಮ ಮಾತುಗಳು — 1:23-25

1 [a]ಕ್ರಿಸ್ತ ಯೇಸುವಿನ [b]ಸೆರೆಯಾಳಾಗಿರುವ ಪೌಲನೂ, ಸಹೋದರನಾದ ತಿಮೊಥೆಯನೂ, ನಮಗೆ ಪ್ರಿಯನೂ ಜೊತೆ ಸೇವಕನೂ ಆಗಿರುವ ಫಿಲೆಮೋನನೆಂಬ ನಿನಗೂ, 2 ಮತ್ತು ಸಹೋದರಿಯಾದ ಅಪ್ಫಿಯಳಿಗೂ, ನಮ್ಮ ಸಹ ಹೋರಾಟಗಾರನಾದ [c]ಅರ್ಖಿಪ್ಪನಿಗೂ [d]ನಿನ್ನ ಮನೆಯಲ್ಲಿ ಸೇರಿಬರುವ ಸಭೆಯವರಿಗೂ ಬರೆಯುವುದೇನಂದರೆ: 3 [e]ನಮ್ಮ ತಂದೆಯಾದ ದೇವರಿಂದಲೂ, ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಆಗಲಿ.

ಫಿಲೆಮೋನನ ಪ್ರೀತಿ ಮತ್ತು ನಂಬಿಕೆ

4 ಕರ್ತನಾದ ಯೇಸುವಿನ ಮೇಲೆ ನೀನು ಇಟ್ಟಿರುವ[f] ನಂಬಿಕೆ, ಪ್ರೀತಿ ಹಾಗೂ ದೇವಜನರ ಮೇಲಿರುವ [g]ನಿನ್ನ ಪ್ರೀತಿಯನ್ನು ಕುರಿತು ಕೇಳಿದ್ದರಿಂದ, 5 ನನ್ನ ಪ್ರಾರ್ಥನೆಗಳಲ್ಲಿ ಯಾವಾಗಲೂ ನಿನ್ನನ್ನು ನೆನಪು ಮಾಡಿಕೊಂಡು ನಾನು [h]ದೇವರಿಗೆ ಸ್ತೋತ್ರವನ್ನು ಸಲ್ಲಿಸುತ್ತೇನೆ, ನಿನಗಾಗಿ ವಿಜ್ಞಾಪನೆ ಮಾಡುತ್ತೇನೆ. 6 ಕ್ರಿಸ್ತನಲ್ಲಿ ನಮಗೆ ದೊರಕಿರುವ ಎಲ್ಲಾ ಸುವರಗಳನ್ನು ಕುರಿತು ನೀನು ತಿಳಿವಳಿಕೆಯನ್ನು ಹೊಂದುತ್ತಿರುವೆ. [i]ಕ್ರಿಸ್ತ ನಂಬಿಕೆಯಲ್ಲಿರುವ ನಿನ್ನ ಅನ್ಯೋನ್ಯತೆಯೂ ಕ್ರಿಸ್ತನಿಗೆ ಅತಿಯಾದ ಮಹಿಮೆಯನ್ನು ಉಂಟುಮಾಡಬೇಕೆಂದು ಪ್ರಾರ್ಥಿಸುತ್ತೇನೆ. 7 ಸಹೋದರನೇ, [j]ನಿನ್ನ ಮೂಲಕ ದೇವಜನರ ಹೃದಯಗಳಿಗೆ ಪ್ರೋತ್ಸಾಹವೂ, ಪ್ರೇರಣೆಯೂ ಉಂಟಾದುದರಿಂದ ಅವರ ಬಗ್ಗೆ ಇರುವ ಪ್ರೀತಿಯಿಂದ [k]ನನಗೆ ಬಹಳ ಆನಂದವೂ, ಸಮಾಧಾನವೂ ಉಂಟಾಯಿತು.

ಓಡಿಹೋದ ಓನೇಸಿಮನೆಂಬ ದಾಸನನ್ನು ಕ್ಷಮಿಸಿ ಸೇರಿಸಿಕೊಳ್ಳಬೇಕೆಂದು ವಿಜ್ಞಾಪನೆ

8 [l]ವೃದ್ಧನೂ, ಈಗ ಕ್ರಿಸ್ತಯೇಸುವಿನ ನಿಮಿತ್ತ [m]ಸೆರೆಯಾಳಾಗಿರುವ ಈ ಪೌಲನೆಂಬ ನಾನು ಪ್ರೀತಿಯ ನಿಮಿತ್ತ ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ. 9 ನೀನು ಯುಕ್ತವಾದದ್ದನ್ನು ಮಾಡಬೇಕೆಂದು ಆಜ್ಞಾಪಿಸುವುದಕ್ಕೆ ನನಗೆ ಕ್ರಿಸ್ತನಲ್ಲಿ [n]ಪೂರ್ಣ ಅಧಿಕಾರವಿದ್ದರೂ ಹಾಗೆ ಆಜ್ಞಾಪಿಸದೇ 10 ನಾನು ಸೆರೆಯಲ್ಲಿ ಬಂಧಿಯಾಗಿರುವಾಗ ನನ್ನ [o]ಮಗನಂತೆ [p]ಬಂದ [q]ಓನೇಸಿಮನ ವಿಷಯದಲ್ಲಿ ನಿನ್ನನ್ನು ಬೇಡಿಕೊಳ್ಳುತ್ತೇನೆ. 11 ಅವನು ಮೊದಲು ನಿನಗೆ ಅಪ್ರಯೋಜಕನಾಗಿದ್ದನು. ಈಗ ನಿನಗೂ ನನಗೂ ಪ್ರಯೋಜಕನಾಗಿದ್ದಾನೆ. 12 ನನಗೆ ಪ್ರಾಣ ಪ್ರಿಯನಂತಿರುವ ಅವನನ್ನು ನಿನ್ನ ಬಳಿಗೆ ಕಳುಹಿಸಿ ಕೊಡುತ್ತಿದ್ದೇನೆ. 13 [r]ನಾನು ಸುವಾರ್ತೆಯ ನಿಮಿತ್ತ ಸೆರೆಮನೆಯಲ್ಲಿರುವಾಗ ನನಗೆ ಉಪಚಾರಮಾಡುವಂತೆ ನಿನಗೆ ಬದಲಾಗಿ ಅವನನ್ನು ನನ್ನ ಬಳಿಯಲ್ಲೇ ಉಳಿಸಿಕೊಳ್ಳಬೇಕೆಂದು ಆಲೋಚಿಸಿದ್ದೆನು. 14 ಆದರೆ ನಿನ್ನ ಉಪಕಾರವು ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವುದಕ್ಕೂ ನನಗೆ ಇಷ್ಟವಿಲ್ಲ. 15 ಅವನು ಸ್ವಲ್ಪಕಾಲ ನಿನ್ನಿಂದ ದೂರವಾಗಿಹೋದದ್ದು ಬಹುಶಃ ನೀನು ಅವನನ್ನು ನಿರಂತರವಾಗಿ ಸೇರಿಸಿಕೊಳ್ಳುವುದಕ್ಕಾಗಿಯೇ ಇರಬಹುದು; 16 [s]ಇನ್ನು ಮೇಲೆ ಅವನು ದಾಸನಂತಾಗಿರದೆ ದಾಸನಿಗಿಂತ ಮಿಗಿಲಾಗಿ ಉತ್ತಮವಾದ ಪ್ರಿಯ ಸಹೋದರನಂತಾಗಬೇಕು. [t]ಅವನು ನನಗೆ ಬಹಳ ಪ್ರಿಯನಾಗಿರುವಲ್ಲಿ [u]ನಿನಗೆ ಲೋಕದ ಪ್ರಕಾರವಾಗಿಯೂ, ಕರ್ತನ ಸಂಬಂಧದಲ್ಲಿಯೂ ಇನ್ನೂ ಹೆಚ್ಚು ಪ್ರಿಯನಾಗಿರುವನಲ್ಲವೇ? 17 ನೀನು ನನ್ನನ್ನು [v]ಜೊತೆಗಾರನೆಂದು ಭಾವಿಸುವುದಾದರೆ ನನ್ನನ್ನು ಸೇರಿಸಿಕೊಳ್ಳುವ ಪ್ರಕಾರವೇ ಅವನನ್ನು ಸೇರಿಸಿಕೋ. 18 ಆದರೆ ಅವನಿಂದ ನಿನಗೆ ಏನಾದರೂ ನಷ್ಟವಾಗಿದ್ದರೆ ಅಥವಾ ಅವನು ನಿನಗೆ ಸಾಲವೇನಾದರೂ ತೀರಿಸಬೇಕಾಗಿದ್ದರೆ ಅದನ್ನು ನನ್ನ ಲೆಕ್ಕಕ್ಕೆ ಹಾಕು. 19 ನಾನೇ ಕೊಟ್ಟು ತೀರಿಸುತ್ತೇನೆಂದು [w]ಪೌಲನೆಂಬ ನಾನು ಸ್ವಂತ ಕೈಯಿಂದ ಬರೆದಿದ್ದೇನೆ. ನಿನ್ನ ಆತ್ಮದ ವಿಷಯದಲ್ಲಿ ನೀನೇ ನನಗೆ ಹೊಣೆಗಾರನಾಗಿದ್ದೀ ಎಂದು ನಾನು ಬೇರೆ ಹೇಳಬೇಕೇ? 20 ಹೌದು, ಸಹೋದರನೇ, ಕರ್ತನಲ್ಲಿ ನಿನ್ನಿಂದ ನನಗೆ ಪ್ರಯೋಜನವಾಗುವಂತೆ ಮಾಡು. [x]ಕ್ರಿಸ್ತನಲ್ಲಿ ನನ್ನ ಹೃದಯವನ್ನು ಉಲ್ಲಾಸಗೊಳಿಸು. 21 ನಿನ್ನ ವಿಧೇಯತೆಯಲ್ಲಿ ಭರವಸೆವುಳ್ಳವನಾಗಿ ಈ ಪತ್ರಿಕೆಯನ್ನು ನಿನಗೆ ಬರೆದಿದ್ದೇನೆ. ನಾನು ಹೇಳುವುದಕ್ಕಿಂತಲೂ ಹೆಚ್ಚಾಗಿಯೇ ನೀನು ಮಾಡುತ್ತಿ ಎಂದು ನನಗೆ ಗೊತ್ತಿದೆ.

ಕಡೆ ಮಾತುಗಳೂ ಹಾಗೂ ವಂದನೆಗಳು

22 ಇದಲ್ಲದೆ [y]ದೇವರು ನಿಮ್ಮ ಪ್ರಾರ್ಥನೆಗಳನ್ನು ಕೇಳಿ ನಾನು ನಿಮ್ಮ ಬಳಿಗೆ ಬರುವುದಕ್ಕೆ ಕೃಪೆ ಮಾಡುವನೆಂಬ ನಿರೀಕ್ಷೆ ನನಗುಂಟು. ಆದಕಾರಣ ನಾನು ಉಳಿದುಕೊಳ್ಳಲು ಒಂದು ಕೊಠಡಿಯನ್ನು ಸಿದ್ಧಪಡಿಸು. 23 ಕ್ರಿಸ್ತಯೇಸುವಿನ ನಿಮಿತ್ತವಾಗಿ [z]ನನ್ನ ಜೊತೆ ಸೆರೆಯವನಾದ [aa]ಎಪಫ್ರನೂ ನಿನಗೆ ವಂದನೆ ತಿಳಿಸುತ್ತಾನೆ. 24 ನನ್ನ ಜೊತೆಗೆಲಸದವರಾದ [bb]ಮಾರ್ಕ, ಅರಿಸ್ತಾರ್ಕ, [cc]ದೇಮ, ಲೂಕ ಇವರೆಲ್ಲರೂ ನಿನಗೆ ವಂದನೆ ತಿಳಿಸಿದ್ದಾರೆ. 25 [dd]ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್.