Link to home pageLanguagesLink to all Bible versions on this site
34
ಕಾನಾನ್ ದೇಶದ ಮೇರೆಗಳು
1 ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 2 “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಸಮಸ್ತ ಕಾನಾನ್ ದೇಶವೇ ನಿಮಗೆ ಸ್ವದೇಶವಾಗಿ ದೊರಕುವುದು. 3 ನೀವು ಅಲ್ಲಿ ಸೇರಿದಾಗ ಎದೋಮ್ಯರ ಗಡಿಗಳ ಬಳಿಯಲ್ಲಿರುವ ಚಿನ್ ಅರಣ್ಯವು ನಿಮ್ಮ ದಕ್ಷಿಣದ ಮೇರೆಯಾಗಿರಬೇಕು. ಆ ಮೇರೆಯ ಪೂರ್ವದಿಕ್ಕಿನಲ್ಲಿರುವ ಲವಣಸಮುದ್ರದ ಕೊನೆಯಿಂದ ಪ್ರಾರಂಭಿಸಬೇಕು. 4 ದಕ್ಷಿಣಕ್ಕೆ ತಿರುಗಿಕೊಂಡು ಅಕ್ರಬ್ಬೀಮ್ ಎಂಬ ಕಣಿವೆಯ ಮಾರ್ಗವಾಗಿ ಚಿನಿಗೆ ಬರಬೇಕು. ಅದರ ಮೂಲೆ ಕಾದೇಶ್ ಬರ್ನೇಯದ ದಕ್ಷಿಣದ ಕಡೆಯಲ್ಲಿರುವುದು. ಅಲ್ಲಿಂದ ಅದು ಹಚರದ್ದಾರಿಗೆ ಹೊರಟು ಅಚ್ಮೋನಿಗೆ ಹಾದು ಹೋಗಬೇಕು. 5 ಅಚ್ಮೋನಿನಿಂದ ಐಗುಪ್ತ ದೇಶದ ಹಳ್ಳಕ್ಕೆ ಬಂದು ಸಮುದ್ರದ ದಡದಲ್ಲಿ ಮುಗಿಯಬೇಕು. 6 ಪಶ್ಚಿಮ ದಿಕ್ಕಿನಲ್ಲಿ ಮಹಾಸಮುದ್ರದ ದಡವೇ ನಿಮ್ಮ ದೇಶದ ಮೇರೆಯಾಗಿರುವುದು. 7 ಉತ್ತರ ದಿಕ್ಕಿನ ಮೇರೆಗಾಗಿ ನೀವು ಮಹಾಸಮುದ್ರದಿಂದ, 8 ಹೋರ್ ಪರ್ವತದಿಂದ ಹಮಾತಿನವರೆಗೂ ಮತ್ತು ಅಲ್ಲಿಂದ ಚೆದಾದಿನ ಹತ್ತಿರಕ್ಕೆ ಇರುವುದು. 9 ಆ ಮೇಲೆ ಅದು ಜಿಫ್ರೋನಿಗೆ ಹೋಗಿ ಹಚರೇನಾನಿನ ಬಳಿಯಲ್ಲಿ ಮುಗಿಯಬೇಕು. ಇದು ನಿಮ್ಮ ಉತ್ತರ ದಿಕ್ಕಿನ ಮೇರೆಯಾಗಿರುವುದು. 10 ಪೂರ್ವದಿಕ್ಕಿನ ಮೇರೆಗಾಗಿ ಹಚರೇನಾನಿನಿಂದ ಶೆಫಾಮಿಗೆ ಗುರುತು ಹಾಕಬೇಕು. 11 ಶೆಫಾಮಿನಿಂದ ಅಯಿನಿನ ಪೂರ್ವದಲ್ಲಿರುವ ರಿಬ್ಲಕ್ಕೆ ಬರಬೇಕು. ತರುವಾಯ ಅದು ಗಟ್ಟಾ ಇಳಿದು ಕಿನ್ನೆರೆತ್ ಸಮುದ್ರದ ಪೂರ್ವದಲ್ಲಿರುವ ಬೆಟ್ಟಗಳಿಗೆ ಹೋಗಬೇಕು. 12 ಅಲ್ಲಿಂದ ಅದು ಯೊರ್ದನ್ ನದಿಗೆ ಇಳಿದು ಅದನ್ನು ಅನುಸರಿಸಿ ಲವಣಸಮುದ್ರದ ಬಳಿಯಲ್ಲಿ ಮುಗಿಯಬೇಕು. ಇವೇ ನಿಮ್ಮ ದೇಶದ ಮೇರೆಗಳು’ ” ಎಂದನು. 13 ಅದಕ್ಕನುಸಾರವಾಗಿ ಮೋಶೆಯು ಇಸ್ರಾಯೇಲರಿಗೆ, “ನೀವು ಚೀಟುಹಾಕಿ ಹಂಚಿಕೊಳ್ಳಬೇಕೆಂದು ಯೆಹೋವನು ಆಜ್ಞಾಪಿಸಿದ ದೇಶವು ಇದೇ. ಒಂಭತ್ತುವರೆ ಕುಲದವರಿಗೆ ಇದನ್ನು ಹಂಚಿಕೊಡಬೇಕು. 14 ರೂಬೇನ್ಯರ ಮಕ್ಕಳ ಗೋತ್ರವೂ, ಗಾದ್ಯರ ಮಕ್ಕಳ ಗೋತ್ರವೂ, ಮನಸ್ಸೆ ಕುಲದವರಲ್ಲಿ ಅರ್ಧಗೋತ್ರವೂ ತಮ್ಮ ಪೂರ್ವಿಕರ ಗೋತ್ರಗಳ ಪ್ರಕಾರವಾಗಿ ತಮ್ಮ ಸ್ವತ್ತನ್ನು ಹೊಂದಿದ್ದಾರೆ. 15 ಎರಡುವರೆ ಗೋತ್ರಗಳು ತಮ್ಮ ಸ್ವತ್ತನ್ನು ಯೊರ್ದನ್ ನದಿಯ ಆಚೆ ಯೆರಿಕೋ ಪಟ್ಟಣದ ಪೂರ್ವದಿಕ್ಕಿನಲ್ಲಿ ಪಡೆದುಕೊಂಡಿದ್ದಾರೆ.”
ಕಾನಾನ್ ದೇಶವನ್ನು ಹಂಚಿಕೊಡುವುದಕ್ಕೆ ನೇಮಿಸಲ್ಪಟ್ಟವರ ಹೆಸರುಗಳು
16 ಯೆಹೋವನು ಮೋಶೆಯ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ, 17 “ದೇಶವನ್ನು ನಿಮಗೆ ಹಂಚಬೇಕಾದ ಜನರ ಹೆಸರುಗಳು ಯಾವುವೆಂದರೆ: ಮಹಾಯಾಜಕನಾದ ಎಲ್ಲಾಜಾರನು ಮತ್ತು ನೂನನ ಮಗನಾದ ಯೆಹೋಶುವನೂ. 18 ಒಂದೊಂದು ಕುಲದಿಂದ ನೇಮಿಸಲ್ಪಟ್ಟ ಒಬ್ಬ ಕುಲಾಧಿಪತಿಯೂ ಇವರೇ. ಇವರು ಕಾನಾನ್ ದೇಶದಲ್ಲಿ ತಮ್ಮ ತಮ್ಮ ಸ್ವತ್ತುಗಳನ್ನು ಹಂಚಿಕೊಡಬೇಕು. 19 ನೀವು ಆಯಾ ಕುಲಗಳಿಂದ ನೇಮಿಸಬೇಕಾದವರು ಯಾರೆಂದರೆ: ಯೆಹೂದ ಕುಲದಿಂದ ಯೆಫುನ್ನೆಯ ಮಗನಾದ ಕಾಲೇಬ್, 20 ಸಿಮೆಯೋನ್ ಕುಲದಿಂದ ಅಮ್ಮಿಹೂದನ ಮಗ ಶೆಮೂವೇಲ್, 21 ಬೆನ್ಯಾಮೀನ್ ಕುಲದಿಂದ ಕಿಸ್ಲೋನನ ಮಗ ಎಲೀದಾದ್, 22 ದಾನ್ ಕುಲದಿಂದ ಯೊಗ್ಲೀಯ ಮಗ ಬುಕ್ಕೀ ಕುಲಾಧಿಪತಿ, 23 ಯೋಸೇಫನ ವಂಶದವರಲ್ಲಿ: ಮನಸ್ಸೆ ಕುಲದಿಂದ ಏಫೋದನ ಮಗ ಹನ್ನೀಯೇಲ್ ಕುಲಾಧಿಪತಿ, 24 ಎಫ್ರಾಯೀಮ್ ಕುಲದಿಂದ ಶಿಫ್ಟಾನನ ಮಗ ಕೆಮೂವೇಲ್ ಕುಲಾಧಿಪತಿ, 25 ಜೆಬುಲೂನ್ ಕುಲದಿಂದ ಪರ್ನಾಕನ ಮಗ ಎಲೀಚಾಫಾನ್ ಕುಲಾಧಿಪತಿ, 26 ಇಸ್ಸಾಕಾರ್ ಕುಲದಿಂದ ಅಜ್ಜಾನನ ಮಗ ಪಲ್ಟೀಯೇಲ್ ಕುಲಾಧಿಪತಿ, 27 ಆಶೇರ್ ಕುಲದಿಂದ ಶೆಲೋಮಮೀಯ ಮಗ ಅಹೀಹೂದ್ ಕುಲಾಧಿಪತಿ, 28 ನಫ್ತಾಲಿ ಕುಲದಿಂದ ಅಮ್ಮಿಹೂದನ ಮಗ ಪೆದಹೇಲ್ ಕುಲಾಧಿಪತಿ ಇವರೇ.” 29 ಕಾನಾನ್ ದೇಶದಲ್ಲಿ ಇಸ್ರಾಯೇಲರಿಗೆ ಅವರವರ ಸ್ವತ್ತುಗಳನ್ನು ಹಂಚಿಕೊಡುವುದಕ್ಕೆ ಯೆಹೋವನು ಇವರನ್ನೆಲ್ಲಾ ನೇಮಿಸಿದನು.

<- ಅರಣ್ಯಕಾಂಡ 33ಅರಣ್ಯಕಾಂಡ 35 ->