Link to home pageLanguagesLink to all Bible versions on this site
33
ಐಗುಪ್ತದೇಶದಿಂದ ಮೋವಾಬಿನವರೆಗಿನ ಪ್ರಯಾಣ
1 ಮೋಶೆ ಮತ್ತು ಆರೋನರ ಕೈಕೆಳಗೆ ಐಗುಪ್ತ ದೇಶದೊಳಗಿಂದ ಸೈನ್ಯಸೈನ್ಯವಾಗಿ ಹೊರಟ ಇಸ್ರಾಯೇಲರ ಪ್ರಯಾಣಗಳ ವಿವರ: 2 ಮೋಶೆ ಯೆಹೋವನ ಅಪ್ಪಣೆಯ ಪ್ರಕಾರ ಇಸ್ರಾಯೇಲರ ಪ್ರಯಾಣಗಳ ವಿವರಗಳನ್ನು ಬರೆದನು.

3 ಮೊದಲನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಪಸ್ಕಹಬ್ಬದ ಮರುದಿನದಲ್ಲಿ ಇಸ್ರಾಯೇಲರು ಐಗುಪ್ತ್ಯರ ಎದುರಿನಲ್ಲೇ ರಮ್ಸೇಸಿನಿಂದ ಹೊರಟರು. 4 ಆ ಕಾಲದಲ್ಲಿ ಯೆಹೋವನು ಐಗುಪ್ತ್ಯರ ದೇವತೆಗಳನ್ನು [a]ಶಿಕ್ಷಿಸಿ, ಐಗುಪ್ತ್ಯರ ಚೊಚ್ಚಲಮಕ್ಕಳನ್ನು ಸಂಹರಿಸಿದ್ದರಿಂದ ಅವರು ಆ ಮಕ್ಕಳ ಶವಗಳನ್ನು ಸಮಾಧಿಮಾಡುತ್ತಿದ್ದರು.

5 ಇಸ್ರಾಯೇಲರು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದುಕೊಂಡರು. 6 ಸುಕ್ಕೋತಿನಿಂದ ಹೊರಟು ಅರಣ್ಯದ ಅಂಚಿನಲ್ಲಿರುವ ಏತಾಮಿನಲ್ಲಿ ಇಳಿದುಕೊಂಡರು. 7 ಏತಾಮಿನಿಂದ ಹೊರಟು ಬಾಳ್ಚೆಫೋನಿಗೆ ಎದುರಾಗಿರುವ ಪೀಹಹೀರೋತಿಗೆ ತಿರುಗಿಕೊಂಡು ಮಿಗ್ದೋಲಿನ ಪೂರ್ವದಲ್ಲಿ ಇಳಿದುಕೊಂಡರು.

8 ಪೀಹಹೀರೋತಿನಿಂದ ಹೊರಟು ಸಮುದ್ರದ ಮಧ್ಯದಲ್ಲೇ ನಡೆದು ಅರಣ್ಯಕ್ಕೆ ಬಂದರು. ಏತಾಮಿನ ಅರಣ್ಯದಲ್ಲಿ ಮೂರು ದಿನ ಪ್ರಯಾಣಮಾಡಿ ಮಾರಾ ಎಂಬ ಸ್ಥಳದಲ್ಲಿ ಇಳಿದುಕೊಂಡರು. 9 ಮಾರಾದಿಂದ ಹೊರಟು ಏಲೀಮಿಗೆ ಬಂದರು. ಅಲ್ಲಿ ಹನ್ನೆರಡು ನೀರಿನ ಒರತೆಗಳೂ, ಎಪ್ಪತ್ತು ಖರ್ಜೂರದ ಮರಗಳೂ ಇದ್ದುದರಿಂದ ಅಲ್ಲಿಯೇ ಇಳಿದುಕೊಂಡರು.

10 ಏಲೀಮಿನಿಂದ ಹೊರಟು ಕೆಂಪು ಸಮುದ್ರದ ದಡದಲ್ಲಿ ಇಳಿದುಕೊಂಡರು. 11 ಕೆಂಪು ಸಮುದ್ರದಿಂದ ಹೊರಟು ಸೀನ್ ಮರುಭೂಮಿಯಲ್ಲಿ ಇಳಿದುಕೊಂಡರು. 12 ಸೀನ್ ಮರುಭೂಮಿಯಿಂದ ಹೊರಟು ದೊಪ್ಕದಲ್ಲಿ ಇಳಿದುಕೊಂಡರು. 13 ದೊಪ್ಕದಿಂದ ಹೊರಟು ಆಲೂಷಿನಲ್ಲಿ ಇಳಿದುಕೊಂಡರು. 14 ಆಲೂಷಿನಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಅಲ್ಲಿ ಜನರಿಗೆ ಕುಡಿಯುವುದಕ್ಕೆ ನೀರು ಸಿಕ್ಕಲಿಲ್ಲ.

15 ರೆಫೀದೀಮಿನಿಂದ ಹೊರಟು ಸೀನಾಯಿ ಮರುಭೂಮಿಯಲ್ಲಿ ಇಳಿದುಕೊಂಡರು. 16 ಸೀನಾಯಿ ಮರುಭೂಮಿಯಿಂದ ಹೊರಟು ಕಿಬ್ರೋತ್ ಹತಾವದಲ್ಲಿ ಇಳಿದುಕೊಂಡರು. 17 ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿನಲ್ಲಿ ಇಳಿದುಕೊಂಡರು. 18 ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು.

19 ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚಿನಲ್ಲಿ ಇಳಿದುಕೊಂಡರು. 20 ರಿಮ್ಮೋನ್ ಪೆರೆಚಿನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು. 21 ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು. 22 ರಿಸ್ಸದಿಂದ ಹೊರಟು ಕೆಹೇಲಾತದಲ್ಲಿ ಇಳಿದುಕೊಂಡರು.

23 ಕೆಹೇಲಾತದಿಂದ ಹೊರಟು ಶೆಫೆರ್ ಬೆಟ್ಟದಲ್ಲಿ ಇಳಿದುಕೊಂಡರು. 24 ಶೆಫೆರ್ ಬೆಟ್ಟದಿಂದ ಹೊರಟು ಹರಾದದಲ್ಲಿ ಇಳಿದುಕೊಂಡರು. 25 ಹರಾದದಿಂದ ಹೊರಟು ಮಖೇಲೋತಿನಲ್ಲಿ ಇಳಿದುಕೊಂಡರು. 26 ಮಖೇಲೋತಿನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು.

27 ತಹತಿನಿಂದ ಹೊರಟು ತೆರಹದಲ್ಲಿ ಇಳಿದುಕೊಂಡರು. 28 ತೆರಹದಿಂದ ಹೊರಟು ಮಿತ್ಕದಲ್ಲಿ ಇಳಿದುಕೊಂಡರು. 29 ಮಿತ್ಕದಿಂದ ಹೊರಟು ಹಷ್ಮೋನದಲ್ಲಿ ಇಳಿದುಕೊಂಡರು. 30 ಹಷ್ಮೋನದಿಂದ ಹೊರಟು ಮೋಸೇರೋತಿನಲ್ಲಿ ಇಳಿದುಕೊಂಡರು.

31 ಮೋಸೇರೋತಿನಿಂದ ಹೊರಟು ಬೆನೇಯಾಕಾನಿನಲ್ಲಿ ಇಳಿದುಕೊಂಡರು. 32 ಬೆನೇಯಾಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲಿ ಇಳಿದುಕೊಂಡರು. 33 ಹೋರ್ಹಗಿದ್ಗಾದಿನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು. 34 ಯೊಟ್ಬಾತದಿಂದ ಹೊರಟು ಅಬ್ರೋನದಲ್ಲಿ ಇಳಿದುಕೊಂಡರು. 35 ಅಬ್ರೋನದಿಂದ ಹೊರಟು ಎಚ್ಯೋನ್ ಗೆಬೆರಿನಲ್ಲಿ ಇಳಿದುಕೊಂಡರು. 36 ಎಚ್ಯೋನ್ ಗೆಬೆರಿನಿಂದ ಹೊರಟು ಕಾದೇಶೆಂಬ ಚಿನ್ ಮರುಭೂಮಿಯಲ್ಲಿ ಇಳಿದುಕೊಂಡರು.

37 ಕಾದೇಶಿನಿಂದ ಹೊರಟು ಎದೋಮ್ಯರ ದೇಶದ ಅಂಚಿನಲ್ಲಿರುವ ಹೋರ್ ಬೆಟ್ಟದ ಬಳಿಯಲ್ಲಿ ಇಳಿದುಕೊಂಡರು. 38 ಮಹಾಯಾಜಕನಾದ ಆರೋನನು ಯೆಹೋವನಿಂದ ಅಪ್ಪಣೆಯನ್ನು ಹೊಂದಿ ಹೋರ್ ಬೆಟ್ಟವನ್ನು ಹತ್ತಿ, ಇಸ್ರಾಯೇಲರು ಐಗುಪ್ತ ದೇಶದಿಂದ ಹೊರಟ ನಲ್ವತ್ತನೆಯ ವರ್ಷದ ಐದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಅಲ್ಲೇ ಪ್ರಾಣಬಿಟ್ಟನು. 39 ಆರೋನನು ಹೋರ್ ಬೆಟ್ಟದಲ್ಲಿ ಸತ್ತಾಗ ಅವನು ನೂರ ಇಪ್ಪತ್ತಮೂರು ವರ್ಷದವನಾಗಿದ್ದನು.

40 ಇಸ್ರಾಯೇಲರು ಬರುತ್ತಾರೆಂಬ ವರ್ತಮಾನವನ್ನು ಕಾನಾನ್ ದೇಶದ ದಕ್ಷಿಣ ಪ್ರಾಂತ್ಯದಲ್ಲಿ ವಾಸವಾಗಿದ್ದ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು ಕೇಳಿದನು. 41 ಇಸ್ರಾಯೇಲರು ಹೋರ್ ಬೆಟ್ಟದಿಂದ ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು. 42 ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು. 43 ಪೂನೋನಿನಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು. 44 ಓಬೋತಿನಿಂದ ಹೊರಟು ಮೋವಾಬ್ಯರ ಗಡಿಯಲ್ಲಿರುವ ಯೊರ್ದನ್ ನದಿಯ ಆಚೆಯಿರುವ ಇಯ್ಯೀಮಿನಲ್ಲಿ ಇಳಿದುಕೊಂಡರು. 45 ಇಯ್ಯೀಮಿನಿಂದ ಹೊರಟು ದೀಬೋನ್ ಗಾದಿನಲ್ಲಿ ಇಳಿದುಕೊಂಡರು. 46 ದೀಬೋನ್ ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದುಕೊಂಡರು. 47 ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ಅಬಾರೀಮ್ ಬೆಟ್ಟಗಳಲ್ಲಿರುವ ನೇಬೋವಿನ ಪೂರ್ವದಲ್ಲಿ ಇಳಿದುಕೊಂಡರು. 48 ಅಬಾರೀಮ್ ಬೆಟ್ಟಗಳಿಂದ ಹೊರಟು ಯೆರಿಕೋ ಪಟ್ಟಣದ ಹತ್ತಿರ ಯೊರ್ದನ್ ನದಿಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿ ಇಳಿದುಕೊಂಡರು. 49 ಅವರು ಮೋವಾಬ್ಯರ ಮೈದಾನದಲ್ಲಿ ಬೇತ್ ಯೆಷೀಮೋತಿನಿಂದ ಆಬೇಲ್ ಶಿಟ್ಟೀಮಿನವರೆಗೂ ಯೊರ್ದನ್ ನದಿಯ ತೀರದಲ್ಲಿ ಇಳಿದುಕೊಂಡರು.

ಕಾನಾನ್ ದೇಶವನ್ನು ಹಂಚಿಕೊಂಡುವ ಬಗ್ಗೆ ಆಜ್ಞೆ
50 ಯೊರ್ದನ್ ನದಿಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, 51 “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ನೀವು ಯೊರ್ದನ್ ನದಿಯನ್ನು ದಾಟಿ ಕಾನಾನ್ ದೇಶವನ್ನು ಸೇರಿದಾಗ, 52 ಆ ದೇಶದ ನಿವಾಸಿಗಳನ್ನೆಲ್ಲಾ ಹೊರಡಿಸಿಬಿಟ್ಟು ಅವರ ವಿಚಿತ್ರವಾದ ಕಲ್ಲುಗಳನ್ನೂ, ಲೋಹವಿಗ್ರಹಗಳನ್ನೂ ನಾಶಮಾಡಿ ಅವರ ಪೂಜಾಸ್ಥಳಗಳನ್ನು ಹಾಳುಮಾಡಬೇಕು. 53 ನಾನು ನಿಮಗೆ ಆ ದೇಶವನ್ನು ಸ್ವದೇಶವಾಗುವುದಕ್ಕೆ ಕೊಟ್ಟದರಿಂದ ನೀವು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸಬೇಕು. 54 ನೀವು ಚೀಟುಹಾಕಿ ಆ ದೇಶವನ್ನು ನಿಮ್ಮನಿಮ್ಮ ಕುಟುಂಬಗಳಿಗೆ ಹಂಚಿಕೊಳ್ಳಬೇಕು. ಹೆಚ್ಚು ಮಂದಿಯುಳ್ಳ ಕುಟುಂಬಕ್ಕೆ ಹೆಚ್ಚಾಗಿಯೂ, ಕಡಿಮೆಯಾದ ಕುಟುಂಬಕ್ಕೆ ಕಡಿಮೆಯಾಗಿಯೂ ಸ್ವತ್ತು ದೊರಕಬೇಕು. ಒಂದೊಂದು ಕುಟುಂಬದ ಚೀಟು ಯಾವ ಯಾವ ಸ್ಥಳವನ್ನು ಸೂಚಿಸುವುದೋ ಆ ಸ್ಥಳದಲ್ಲಿಯೇ ಆ ಕುಟುಂಬದ ಸ್ವಾಸ್ತ್ಯವಿರಬೇಕು. ಒಂದೊಂದು ಕುಲದ ಕುಟುಂಬಗಳು ಒಂದೇ ಪ್ರದೇಶದಲ್ಲಿರಬೇಕು. 55 ನೀವು ದೇಶದ ನಿವಾಸಿಗಳನ್ನು ಹೊರಡಿಸಿಬಿಡದೆ ಹೋದರೆ ಅವರಲ್ಲಿ ನೀವು ಉಳಿಸಿದವರು ನಿಮಗೆ ಕಣ್ಣುಚುಚ್ಚುವ ಮುಳ್ಳುಗಳಂತೆಯೂ, ಪಕ್ಕೆತಿವಿಯುವ ಶೂಲಗಳಂತೆಯೂ, ಆಗಿ ನೀವು ವಾಸಿಸುವ ದೇಶದಲ್ಲಿ ನಿಮಗೆ ಕಂಟಕರಾಗಿರುವರು. 56 ಅದಲ್ಲದೆ ನಾನು ಅವರಿಗೆ ಏನು ಮಾಡಬೇಕೆಂದು ಯೋಚಿಸಿದೇನೋ ಹಾಗೆ ನಿಮಗೂ ಮಾಡುವೆನು.’ ”

<- ಅರಣ್ಯಕಾಂಡ 32ಅರಣ್ಯಕಾಂಡ 34 ->