1 ಸಬ್ಬತ್ ದಿನ ಆದ ಮೇಲೆ ವಾರದ ಮೊದಲನೆಯ ದಿನ [a]ಬೆಳಗಾಗುತ್ತಿರುವಾಗಲೇ ಮಗ್ದಲದ ಮರಿಯಳೂ ಮತ್ತು ಆ ಬೇರೆ ಮರಿಯಳೂ ಸಮಾಧಿಯನ್ನು ನೋಡಲು ಬಂದರು. 2 ಇಗೋ, ಮಹಾ ಭೂಕಂಪವುಂಟಾಯಿತು, ಕರ್ತನ ದೂತನು ಆಕಾಶದಿಂದ ಇಳಿದು ಬಂದು ಆ ಕಲ್ಲನ್ನು ಬಾಗಿಲಿನಿಂದ ಉರುಳಿಸಿ ಅದರ ಮೇಲೆ ಕುಳಿತುಕೊಂಡಿದ್ದನು. 3 ಅವನ ಮುಖಭಾವವು ಮಿಂಚಿನಂತೆ ಇತ್ತು. ಅವನ ಉಡುಪು ಹಿಮದಂತೆ ಬೆಳ್ಳಗಿತ್ತು; 4 ಕಾವಲುಗಾರರು ಹೆದರಿ ನಡುಗಿ ಸತ್ತವರ ಹಾಗಾದರು. 5 ಆಗ ದೂತನು ಆ ಹೆಂಗಸರಿಗೆ, “ನೀವು ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು; 6 ಆತನು ಇಲ್ಲಿ ಇಲ್ಲ, ತಾನು ಹೇಳಿದಂತೆಯೇ ಎದ್ದಿದ್ದಾನೆ. ಬನ್ನಿ, ಕರ್ತನು ಮಲಗಿದ್ದ ಸ್ಥಳವನ್ನು ನೋಡಿರಿ; 7 ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ, ‘ಆತನು ಸತ್ತವರೊಳಗಿಂದ ಎದ್ದಿದ್ದಾನೆಂದು, [b]ಆತನು ನಿಮಗಿಂತಲೂ ಮೊದಲೇ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ’ ಎಂದು ತಿಳಿಸಿರಿ; ನೋಡಿರಿ, ನಾನು ನಿಮಗೆ ಹೇಳಿದ್ದೇನೆ,” ಎಂದು ಹೇಳಿದನು. 8 ಅವರು ಭಯದಿಂದಲೂ, ಮಹಾ ಸಂತೋಷದಿಂದಲೂ ಬೇಗ ಸಮಾಧಿಯ ಬಳಿಯಿಂದ ಹೊರಟು ಆತನ ಶಿಷ್ಯರಿಗೆ ಅದನ್ನು ತಿಳಿಸುವುದಕ್ಕೆ ಓಡಿಹೋದರು. 9 ಆಗ ಯೇಸು ಅವರನ್ನು ಭೇಟಿಯಾಗಿ, “ನಿಮಗೆ ಶುಭವಾಗಲಿ” ಅಂದನು. ಅವರು ಹತ್ತಿರಕ್ಕೆ ಬಂದು ಆತನ ಪಾದಗಳಿಗೆ ಅಡ್ಡಬಿದ್ದು ಆತನನ್ನು ಆರಾಧಿಸಿದರು. 10 ಆಗ ಯೇಸು ಅವರಿಗೆ, “ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ಅವರು ನನ್ನನ್ನು ನೋಡುವರು” ಎಂದು ಹೇಳಿದನು.