9 “ಅನ್ಯಾಯದ ಧನದ ಮೂಲಕವಾಗಿ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ. ಹೀಗೆ ಮಾಡಿದರೆ ಅದು ನಿಮ್ಮ ಕೈಬಿಟ್ಟುಹೋದಾಗ ಅವರು ನಿಮ್ಮನ್ನು ಶಾಶ್ವತವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳುವರು ಎಂದು ನಾನು ನಿಮಗೆ ಹೇಳುತ್ತೇನೆ. 10 ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು. ಸಣ್ಣ ವಿಷಯಗಳಲ್ಲಿ ಅಪ್ರಾಮಾಣಿಕನಾಗಿರುವವನು ಬಹಳವಾದದ್ದರಲ್ಲಿಯೂ ಅಪ್ರಾಮಾಣಿಕನಾಗಿರುವನು. 11 ಹೀಗಿರುವುದರಿಂದ ಅನ್ಯಾಯದ ಧನದ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸಿಕೊಟ್ಟಾರು? 12 ಮತ್ತೊಬ್ಬನ ಸೊತ್ತಿನ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಮ್ಮದನ್ನು ನಿಮಗೆ ಯಾರು ಒಪ್ಪಿಸಿಕೊಟ್ಟಾರು? 13 ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು, ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು, ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಒಟ್ಟಿಗೆ ಸೇವಿಸಲಾರಿರಿ” ಅಂದನು.
14 ಫರಿಸಾಯರು ಹಣದಾಸೆಯುಳ್ಳವರಾಗಿದ್ದರಿಂದ ಈ ಮಾತುಗಳನ್ನೆಲ್ಲಾ ಕೇಳಿ ಆತನನ್ನು ಹಾಸ್ಯ ಮಾಡಿದರು. 15 ಆಗ ಆತನು ಅವರಿಗೆ ಹೇಳಿದ್ದೇನಂದರೆ, “ಮನುಷ್ಯರ ಮುಂದೆ ನೀತಿವಂತರೆಂದು ತೋರಿಸಿಕೊಳ್ಳುವವರು ನೀವು, ಆದರೆ ದೇವರು ನಿಮ್ಮ ಹೃದಯಗಳನ್ನು ಬಲ್ಲವನಾಗಿದ್ದಾನೆ. ಮನುಷ್ಯರ ದೃಷ್ಟಿಯಲ್ಲಿ ಶ್ರೇಷ್ಠವೆನಿಸಿಕೊಳ್ಳುವಂಥದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.
16 “ಧರ್ಮಶಾಸ್ತ್ರವೂ ಪ್ರವಾದನೆಗಳೂ ಯೋಹಾನನ ತನಕವೇ. ಆ ನಂತರದ ದಿನಗಳಿಂದ ದೇವರ ರಾಜ್ಯದ ಸುವಾರ್ತೆಯು ಸಾರಲ್ಪಡುತ್ತಲಿದೆ. ಅದರಲ್ಲಿ ಎಲ್ಲರೂ ಬಲವಂತವಾಗಿ ನುಗ್ಗಲು ಯತ್ನಿಸುತ್ತಿದ್ದಾರೆ. 17 ಧರ್ಮಶಾಸ್ತ್ರದೊಳಗಿನ ಒಂದು ಗುಡಸಾದರೂ ಬಿದ್ದು ಹೋಗುವುದಕ್ಕಿಂತಲೂ ಆಕಾಶವೂ ಭೂಮಿಯೂ ಅಳಿದುಹೋಗುವುದು ಸುಲಭ.
18 “ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಮಾಡಿಕೊಳ್ಳುವ ಪ್ರತಿಯೊಬ್ಬನು ವ್ಯಭಿಚಾರ ಮಾಡುವವನಾಗಿದ್ದಾನೆ. ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ.