1 ಇದಾದ ಮೇಲೆ ಕರ್ತನು ಇನ್ನೂ ಎಪ್ಪತ್ತು[a] ಮಂದಿಯನ್ನು ತನ್ನ ಶಿಷ್ಯರನ್ನಾಗಿ ನೇಮಿಸಿ, ಅವರನ್ನು ಇಬ್ಬಿಬ್ಬರಾಗಿ ತಾನು ಹೋಗಬೇಕೆಂದಿದ್ದ ಪ್ರತಿಯೊಂದು ಊರಿಗೂ ಪ್ರತಿಯೊಂದು ಸ್ಥಳಕ್ಕೂ ಮುಂದಾಗಿ ಕಳುಹಿಸಿದನು. 2 ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ, “ಬೆಳೆಯು ಹೇರಳವಾಗಿದೆ, ಕೊಯ್ಲುಗಾರರು ಕೆಲವರೂ ಮಾತ್ರ ಇದ್ದಾರೆ; ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸಬೇಕೆಂದು ಬೆಳೆಯ ಯಜಮಾನನನ್ನು ಬೇಡಿಕೊಳ್ಳಿರಿ. 3 ಹೋಗಿರಿ, ತೋಳಗಳ ನಡುವೆ ಕುರಿಮರಿಗಳಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇನೆ. 4 ನೋಡಿರಿ, ನೀವು ಹೋಗುವಾಗ ಹಣದ ಚೀಲವನ್ನಾಗಲಿ, ಪ್ರವಾಸದ ಚೀಲವನ್ನಾಗಲಿ, ಕಾಲಿಗೆ ಕೆರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ದಾರಿಯಲ್ಲಿ ಯಾರಿಗೂ ವಂದಿಸಬೇಡಿರಿ. 5 ಇದಲ್ಲದೆ ನೀವು ಯಾವ ಮನೆಯೊಳಗೆ ಹೋದರೂ, ‘ಈ ಮನೆಗೆ ಸಮಾಧಾನವಾಗಲಿ’ ಎಂದು ಮೊದಲು ಹೇಳಿರಿ. 6 ಸಮಾಧಾನ ಹೊಂದಲು ಯೋಗ್ಯನು ಆ ಮನೆಯಲ್ಲಿ ಇದ್ದರೆ ನಿಮ್ಮ ಸಮಾಧಾನವು ಅವನ ಮೇಲೆ ನಿಲ್ಲುವುದು, ಇಲ್ಲದಿದ್ದರೆ ಅದು ನಿಮಗೆ ಹಿಂತಿರುಗುವುದು. 7 ಆ ಮನೆಯಲ್ಲಿಯೇ ಇದ್ದುಕೊಂಡು ಅವರು ಕೊಡುವಂಥದನ್ನು ಊಟಮಾಡಿರಿ, ಕುಡಿಯಿರಿ. ಆಳು ತನ್ನ ಕೂಲಿಗೆ ಯೋಗ್ಯನಷ್ಟೆ. ಒಂದು ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಹೋಗಿ ಇಳಿದುಕೊಳ್ಳಬೇಡಿರಿ. 8 ಮತ್ತು ನೀವು ಯಾವ ಊರಿಗಾದರೂ ಹೋದ ಮೇಲೆ ಆ ಊರಿನ ಜನರು ನಿಮ್ಮನ್ನು ಸೇರಿಸಿಕೊಂಡರೆ ಅವರು ನಿಮಗೆ ಬಡಿಸಿದ್ದನ್ನು ಊಟಮಾಡಿರಿ. 9 ಅಲ್ಲಿರುವ ರೋಗಿಗಳನ್ನು ವಾಸಿಮಾಡಿ ಅವರಿಗೆ, ‘ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ’ ಎಂದು ಹೇಳಿರಿ. 10 ಆದರೆ ನೀವು ಯಾವ ಊರಿಗಾದರೂ ಹೋದ ಮೇಲೆ ಆ ಜನರು ನಿಮ್ಮನ್ನು ಸ್ವೀಕರಿಸದ್ದಿದ್ದರೆ, ನೀವು ಆ ಊರ ಬೀದಿಗಳಿಗೆ ಬಂದು, 11 ‘ನಮ್ಮ ಪಾದಗಳಿಗೆ ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮ್ಮ ವಿರುದ್ಧವಾಗಿ ಝಾಡಿಸಿಬಿಡುತ್ತೇವೆ. ಆದಾಗ್ಯೂ ದೇವರ ರಾಜ್ಯವು ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ’ ಎಂಬುದಾಗಿ ಹೇಳಿರಿ. 12 ಆ ದಿನದಲ್ಲಿ ಅಂತಹ ಊರಿನ ಗತಿಯು ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದು ಎಂದು ನಿಮಗೆ ಹೇಳುತ್ತೇನೆ. 13 ಅಯ್ಯೋ ಖೊರಾಜಿನೇ, ಅಯ್ಯೋ ಬೇತ್ಸಾಯಿದವೇ, ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣಿತಟ್ಟು ಹೊದ್ದುಕೊಂಡು, ಬೂದಿಯಲ್ಲಿ ಕುಳಿತುಕೊಂಡು ಪಶ್ಚಾತ್ತಾಪಪಡುತ್ತಿದ್ದರು. 14 ಆದರೆ ನ್ಯಾಯವಿಚಾರಣೆಯಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು. 15 ಎಲೈ ಕಪೆರ್ನೌಮೇ, ನೀನು ಪರಲೋಕಕ್ಕೆ ಏರಿಸಲ್ಪಡುವಿಯಾ? ಇಲ್ಲ! ಪಾತಾಳಕ್ಕೇ ಇಳಿಯುವಿ. 16 ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುವವನಾಗಿದ್ದಾನೆ, ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುವವನಾಗಿದ್ದಾನೆ, ನನ್ನನ್ನು ತಿರಸ್ಕಾರ ಮಾಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ತಿರಸ್ಕಾರ ಮಾಡುವವನಾಗಿದ್ದಾನೆ” ಅಂದನು.
17 ತರುವಾಯ ಆ ಎಪ್ಪತ್ತು ಮಂದಿಯು ಸಂತೋಷವುಳ್ಳವರಾಗಿ ಹಿಂತಿರುಗಿ ಬಂದು, “ಕರ್ತನೇ, ದೆವ್ವಗಳು ಕೂಡಾ ನಿನ್ನ ಹೆಸರಿನಲ್ಲಿ ನಮಗೆ ಅಧೀನವಾಗುತ್ತವೆ” ಅಂದರು. 18 ಯೇಸು ಅವರಿಗೆ, “ಸೈತಾನನು ಮಿಂಚಿನಂತೆ ಆಕಾಶದಿಂದ ಬೀಳುವುದನ್ನು ಕಂಡೆನು. 19 ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದೇ ಇಲ್ಲ. 20 ಆದರೂ ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿವೆ ಎಂದು ಸಂತೋಷಪಡಿರಿ” ಎಂದು ಹೇಳಿದನು.
21 ಅದೇ ಗಳಿಗೆಯಲ್ಲಿ ಆತನು ಪವಿತ್ರಾತ್ಮನನಿಂದ ಉಲ್ಲಾಸಗೊಂಡು ಹೇಳಿದ್ದೇನಂದರೆ, “ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಮತ್ತು ವಿವೇಕಿಗಳಿಗೂ ಈ ವಿಷಯಗಳನ್ನು ಮರೆಮಾಡಿ, ಮಕ್ಕಳಿಗೆ ಪ್ರಕಟಮಾಡಿರುವುದರಿಂದ ನಿನ್ನನ್ನು ಕೊಂಡಾಡುತ್ತೇನೆ. ಹೌದು, ತಂದೆಯೇ, ಹೀಗೆ ಮಾಡುವುದೇ ಒಳ್ಳೆಯದೆಂದು ನಿನ್ನ ದೃಷ್ಟಿಗೆ ತೋರಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. 22 ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ಮಗನು ಎಂಥವನೆಂದು ತಂದೆಯ ಹೊರತು ಮತ್ತಾರೂ ತಿಳಿದಿರುವುದಿಲ್ಲ, ತಂದೆ ಎಂಥವನೆಂದು ಮಗನ ಹೊರತು ಇನ್ನಾರು ತಿಳಿದಿರುವುದಿಲ್ಲ ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಪಡಿಸುವುದಕ್ಕೆ ಮನಸ್ಸುಳ್ಳವನಾಗಿದ್ದಾನೋ, ಅವನೂ ಆತನನ್ನು ತಿಳಿದವನಾಗಿದ್ದಾನೆ” ಅಂದನು. 23 ಆ ಮೇಲೆ ಆತನು ಶಿಷ್ಯರ ಕಡೆಗೆ ತಿರುಗಿಕೊಂಡು ಪ್ರತ್ಯೇಕವಾಗಿ ಹೇಳಿದ್ದೇನೆಂದರೆ, “ನೀವು ನೋಡುತ್ತಿರುವ ಸಂಗತಿಗಳನ್ನು ನೋಡುವವರು ಧನ್ಯರು. 24 ಬಹು ಮಂದಿ ಪ್ರವಾದಿಗಳೂ ಅರಸರೂ ನೀವು ನೋಡುತ್ತಿರುವ ಸಂಗತಿಗಳನ್ನು ನೋಡಬೇಕೆಂದು ಅಪೇಕ್ಷಿಸಿದರೂ ಸಾಧ್ಯವಾಗಲಿಲ್ಲ, ನೀವು ಕೇಳುತ್ತಿರುವ ಸಂಗತಿಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಾಗಲಿಲ್ಲ ಎಂಬುದಾಗಿ ನಿಮಗೆ ಹೇಳುತ್ತೇನೆ” ಅಂದನು.